Asianet Suvarna News Asianet Suvarna News

ಕಾಸು ಕಳ್ಕೋಬೇಕು ಎನಿಸಿದಾಗ ಸುದೀಪ್ ಸಿನಿಮಾ ಮಾಡ್ತಾರಂತೆ!

ತಮ್ಮ ಮನೆಯ ಟೆರೇಸಿನಲ್ಲಿರುವ ಅಡುಗೆ ಮನೆ ಕಮ್ ಡೈನಿಂಗ್ ಹಾಲ್‌ನಲ್ಲಿ ಟೀ ಹೀರುತ್ತಾ ಕೂತಿದ್ದರು ಸುದೀಪ್. ಅವರ ಅಭಿರುಚಿ ತಕ್ಕಂತೆ ಅಲಂಕೃತಗೊಂಡ ಪರಿಸರ. ಏಳೆಂಟು ಕೇಜಿ ತೂಕ ಇಳಿಸಿಕೊಂಡು ಆರಂಭದ ದಿನಗಳ ಉಲ್ಲಾಸ ಮತ್ತು ಹುಮ್ಮಸ್ಸಿನಲ್ಲಿದ್ದ ಸುದೀಪ್ ದಿ ವಿಲನ್ ಚಿತ್ರದ ಡಬ್ಬಿಂಗಿಗೋಸ್ಕರ ಹೊರಟು ನಿಂತಿದ್ದರು. ಸುಮಾರು ಒಂದೂವರೆ ವರ್ಷಗಳ ನಂತರ ಅವರ ಸಿನಿಮಾ ತೆರೆಕಾಣುತ್ತಿದೆ. 

Sudeep Interview With Kannada Prabha

ತಮ್ಮ ಮನೆಯ ಟೆರೇಸಿನಲ್ಲಿರುವ ಅಡುಗೆ ಮನೆ ಕಮ್ ಡೈನಿಂಗ್ ಹಾಲ್‌ನಲ್ಲಿ ಟೀ ಹೀರುತ್ತಾ ಕೂತಿದ್ದರು ಸುದೀಪ್. ಅವರ ಅಭಿರುಚಿ ತಕ್ಕಂತೆ ಅಲಂಕೃತಗೊಂಡ ಪರಿಸರ. ಏಳೆಂಟು ಕೇಜಿ ತೂಕ ಇಳಿಸಿಕೊಂಡು ಆರಂಭದ ದಿನಗಳ ಉಲ್ಲಾಸ ಮತ್ತು ಹುಮ್ಮಸ್ಸಿನಲ್ಲಿದ್ದ ಸುದೀಪ್ ದಿ ವಿಲನ್ ಚಿತ್ರದ ಡಬ್ಬಿಂಗಿಗೋಸ್ಕರ ಹೊರಟು ನಿಂತಿದ್ದರು. ಸುಮಾರು ಒಂದೂವರೆ ವರ್ಷಗಳ ನಂತರ ಅವರ ಸಿನಿಮಾ ತೆರೆಕಾಣುತ್ತಿದೆ. ತಡವಾಗಿದ್ದಕ್ಕೆ ಅಂಥ ಬೇಸರ ಏನಿಲ್ಲ. ಅದಕ್ಕೆ ಎಲ್ಲರೂ ಕಾರಣ, ಯಾರೂ ಕಾರಣ ಅಲ್ಲ ಅನ್ನುತ್ತಲೇ ಮಾತು ಆರಂಭಿಸಿದ ಸುದೀಪ್, ಚೈತನ್ಯದ ಚಿಲುಮೆಯಾಗಿ ಬದುಕಿನ ಪಾಸಿಟಿವ್ ಸಂಗತಿಗಳನ್ನೇ ಮುಂದಿಟ್ಟುಕೊಂಡು ಮಾತಾಡಿದರು. ಕ್ರಿಕೆಟ್ಟು, ಟ್ವಿಟ್ಟರ್, ರಾಜಕೀಯ, ಗೆಳೆತನ, ಸಿನಿಮಾ, ಜೀವನ, ಮಗಳು, ಮುಗುಳುನಗೆ- ಎಲ್ಲದರ ಕುರಿತೂ ಮುಕ್ತವಾಗಿ ಸಂಭಾಷಿಸಿದರು. ಅಭಿಮಾನ ಮತ್ತು ಕಾಯಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸುಮಾರು ಒಂದೂವರೆ ಗಂಟೆ ಅವರು ಆಡಿದ ಮಾತುಗಳಿಂದ ಹೆಕ್ಕಿದ ಭಾವಗಳು ಇಲ್ಲಿವೆ.

ದಿ ವಿಲನ್ ತಡವಾಗಿದೆ
ಹೌದು. ತಡವಾಗಿದೆ. ಯಾವ್ಯಾವುದೋ ಕಾರಣಗಳಿಂದ ಹಾಗಾಗಿದೆ. ಅದಕ್ಕೆ ಯಾರು ಕಾರಣ ಅಂತ ಹುಡುಕುತ್ತಾ ಹೋದರೆ ಎಲ್ಲರೂ ಕಾರಣ. ಯಾರೂ ಕಾರಣ ಅಲ್ಲ ಅನ್ನಬೇಕಾಗುತ್ತದೆ. ಯಾರೊಬ್ಬನ ಕಡೆಗೂ ಬೆರಳು ತೋರಿಸುವುದಕ್ಕೆ ನನಗಿಷ್ಟವಿಲ್ಲ. ಪ್ರೇಮ್ ಅಪ್ಪಟ ಪ್ಯಾಶನ್ ಇರುವ ನಿರ್ದೇಶಕ. ಅವರ ಜೊತೆ ಮತ್ತೊಂದು ಸಿನಿಮಾ ಮಾಡುವ ಯೋಚನೆಯೂ ನನಗಿದೆ. ರಾತ್ರಿಹಗಲೆನ್ನದೇ ಕೆಲಸ ಮಾಡುತ್ತಾರೆ. ತಡವಾದರೂ ಪ್ರಾಡಕ್ಟ್ ಚೆನ್ನಾಗಿ ಬಂದಿದೆ. ಅದರ ಗ್ರಾಫಿಕ್ ಪೋರ್ಷನ್ ನೋಡುತ್ತಿದ್ದಾಗ ಖುಷಿಯಾಯಿತು. ಈ ಸಿನಿಮಾ ತಡವಾಗುತ್ತಿದ್ದಾಗ ಮತ್ತೊಂದು ಸಿನಿಮಾ ನಾನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ಎಥಿಕಲೀ ಅದು ಸರಿಯಲ್ಲ ಅಂತ ಸುಮ್ಮನಾದೆ. ಅದರ ಮಧ್ಯೆ ಮತ್ತೊಂದು ಸಿನಿಮಾ ಮಾಡೋಣ ಅಂತ  ನಾನೂ ಪ್ರೇಮ್ ಮಾತಾಡಿಕೊಂಡೆವು. ಆದರೆ ಗಮನ ಬೇರೆ ಕಡೆ ಹರಿಯುತ್ತದೆ ಅನ್ನುವ ಕಾರಣಕ್ಕೆ ಮಾಡಲಿಲ್ಲ. ನಾನು ಇಲ್ಲೀ ತನಕ ಒಮ್ಮೆಗೆ ಒಂದು ಸಿನಿಮಾ ಅಂತಲೇ ಇದ್ದವನು. ಹಾಗಿರುವುದೇ ನನಗೆ ಇಷ್ಟ ಕೂಡ.

ನಿರ್ದೇಶನ ಮಾಡುವ ಆಸೆಯಿದೆ
ದಿ ವಿಲನ್ ನಿರ್ದೇಶಕರಿಂದಾಗಿ ತಡವಾಗಿದ್ದಿದ್ದರೆ ನಾನು ನಿರ್ದೇಶನಕ್ಕೆ  ಇಳಿಯುತ್ತಿದ್ದೆನೋ ಏನೋ? ನಿರ್ದೇಶನ ಮಾಡೋ ಆಸೆ ನನಗೆ ಇದೆ. ನಿರ್ದೇಶಕನಾಗೋದು ಅಂದರೆ ನಾನು ನನ್ನ ಕಥೇನ ಹೇಳೋದು. ಆದರೆ ನಾನು ನಿಂತಿರೋ ಜಾಗ ತುಂಬ ಚೆನ್ನಾಗಿದೆ. ಎಷ್ಟೊಂದು ಮಂದಿ  ನಂಗೋಸ್ಕರ ಕತೆ ಬರೀತಿದ್ದಾರೆ ಗೊತ್ತಾ? ಅವರು ನನ್ನ ಮೊದಲ ಫ್ಯಾನ್ಸ್. ಯಾರು ಒಬ್ಬ ನಟನಿಗೋಸ್ಕರ ಕತೆ ಬರೀತಾನೋ ಅವನೇ ಆ ನಟನ ನಿಜವಾದ ಅಭಿಮಾನಿ. ನನ್ನಲ್ಲಿ ಉತ್ಸಾಹ, ಜೀವಂತಿಕೆ ತುಂಬೋದು ಅವರೇ. ಆ ಕತೆ ಸಿನಿಮಾ ಆದಾಗ, ಥೇಟರಿಗೆ ಬಂದಾಗ ಅದನ್ನು ನೋಡೋ ಅಭಿಮಾನಿಗಳನ್ನು  ನಮ್ಮನ್ನು ಜೀವಂತವಾಗಿಡ್ತಾರೆ. ನಾನು ಆಗಾಗ ಹೇಳ್ತಾ ಇರ್ತೀನಿ, ಹತ್ತೋ ಹದಿನೈದು ಫ್ಲಾಪ್ ಕೊಡೋದರಿಂದ ಏನೂ ಆಗಲ್ಲ. ಆದರೆ ನಿಮಗೋಸ್ಕರ ಯಾರಾದರೂ ಕತೆ ಬರಿಯೋದು ನಿಲ್ಲಿಸಿದಾಗ ನಿಮ್ಮ ಕತೆ ಮುಗೀತು ಅಂತ ಅರ್ಥ. ಈಗ ನಂಗೋಸ್ಕರ ಅನೇಕರು ಕತೆ  ಬರೆಯುವ ಮೂಲಕ ಪ್ರೀತಿ ತೋರಿಸ್ತಿದ್ದಾರೆ. ನಾನು ಅಂಥವರ ಪೈಕಿ ಎಷ್ಟು ಸಾಧ್ಯವೋ ಅಷ್ಟು ಮಂದಿಗೆ ಸ್ಪಂದಿಸಲಿಕ್ಕೆ ಪ್ರಯತ್ನಪಡ್ತೀನಿ. 

ನೋಡುವ ದೃಷ್ಟಿ ಬದಲಾಗಿದೆ
ಮೊನ್ನೆ ಕನ್ನಡ ಚಲನಚಿತ್ರ ಕಪ್ ಮ್ಯಾಚ್ ನಡೀತಿದ್ದಾಗ ನಾಲ್ಕೈದು ಮಂದಿ ನನ್ನ ಬಳಿ ಬಂದರು. ನಿಮ್ಮ ಜೊತೆ ಮಾತಾಡಬೇಕಾಗಿತ್ತು ಅಂದರು. ಮಾತಾಡಿ ಅಂದೆ. ನಿಮ್ಮ ಬಗ್ಗೆ ನಮಗೆ ಬೇರೆಯೇ ಅಭಿಪ್ರಾಯ ಇತ್ತು.ಆದರೆ ನೀವು ನಾವಂದುಕೊಂಡ ಥರ ಇಲ್ಲ. ನೀವು ಇನ್ನೇನೋ ಅಂದುಕೊಂಡು ನಿಮ್ಮ ಹತ್ರ ಸಿನಿಮಾ ಮಾಡೋದಕ್ಕೆ ಬರ್ಲಿಲ್ಲ ನಾವು. ನಾವು ಅಂದ್ಕೊಂಡಿದ್ದಕ್ಕೆ  ನೀವು ತದ್ವಿರುದ್ದ ಇದ್ದೀರಿ. ನಾವು ನಿಮ್ಮನ್ನು ಭೇಟಿ ಮಾಡದೇ ಹೋಗಿದ್ರೆ ಅದೇ ಅಭಿಪ್ರಾಯ ಇಟ್ಕೋತಿದ್ವಿ. ನೀವು ಎಷ್ಟು ಸೆಲ್ಫ್‌ಲೆಸ್ ಆಗಿದ್ದೀರಲ್ಲ. ನಾವು ಕತೆ ತಂದ್ರೆ ಸಿನಿಮಾ ಮಾಡ್ತೀರಲ್ಲ ಅಂತ ಕೇಳಿದರು. ಹಾಗೆಲ್ಲ ಯಾಕೆ ಅಂದ್ಕೋತೀರಿ. ಐಯಾಮ್ ಎ ಪ್ರಾಡಕ್ಟ್ ಇನ್ ದಿ ಮಾರ್ಕೆಟ್. ಒಂದೇ  ವ್ಯತ್ಯಾಸ ಅಂದ್ರೆ ನಾನು ಗ್ರಾಹಕರನ್ನು ಹುಡುಕ್ತಿಲ್ಲ, ಎಕ್ಸೈಟ್‌ಮೆಂಟ್'ಗೋಸ್ಕರ ಎದುರುನೋಡ್ತಿದ್ದೀನಿ. ಹೀಗಾಗಿ ನನ್ನ ಜೊತೆಗಿನ ಸಂಬಂಧ ಚೆನ್ನಾಗಿದ್ದರೆ ಸಿನಿಮಾ ಆಗೋಲ್ಲ. ಚೆನ್ನಾಗಿರೋ ಗೆಳೆತನ ಸಿನಿಮಾ ಆಗಬೇಕಾಗೂ ಇಲ್ಲ. ಒಳ್ಳೇ ಸ್ಕ್ರಿಪ್ಟ್ ತಗೊಂಡು ಬನ್ನಿ. ಮಾತಾಡೋಣ. ಅದಿಲ್ಲದೇ ಹೋದ್ರೂ ಬನ್ನಿ, ಕೂತೊಳ್ಳಿ ಹರಟೆ ಹೊಡೆಯೋಣ ಅಂದೆ. ಇಲ್ಲ ಸಾರ್, ಕತೆ ಬರೀತೀವಿ ಅಂದರು. ಹೀಗೆ ಏನೇನೋ ಒಳ್ಳೇದು ಆಗ್ತಿದೆ.

ಕಾಸು ಕಳ್ಕೋಬೇಕು ಅನ್ನಿಸಿದಾಗ ಸಿನಿಮಾ ಮಾಡ್ತೀನಿ!
ಸಿನಿಮಾ ಮಾಡೋ ಆಸೆ ಇದ್ದೇ ಇದೆ. ಈ ಸಲ ಸಿನಿಮಾ ಮಾಡಿದರೆ ನನ್ನ ಬ್ಯಾನರಲ್ಲೇ ಮಾಡ್ತೀನಿ. ಪ್ರಿಯಾ ಸಿನಿಮಾ ಮಾಡಬೇಕೂಂತಿದ್ದಾರೆ. ಅವರ ಬ್ಯಾನರ್‌ಗೂ ಮಾಡಬಹುದು. ಬೇರೆಯವರಿಗೆ ಸಿನಿಮಾ ಮಾಡಿದಾಗ ಅವರಿಗೆ ಉತ್ತರಿಸಬೇಕಾದ ಒತ್ತಡ ಇರುತ್ತಲ್ಲ, ಅದರಿಂದಾಗಿ ಕಷ್ಟ ಆಗುತ್ತೆ. ಜೊತೆಗೂಡಿ ಸಿನಿಮಾ ಮಾಡೋದು ಸಮಸ್ಯೆ ಅಲ್ಲ. ಆದರೆ, ನಷ್ಟ ಆದ್ರೆ  ನನಗೇ ಆಗ್ಲಿ. ಬೇರೆಯವರಿಗೆ ಯಾಕಾಗಬೇಕು? ಇಲ್ಲೀತನಕ ನಾನು ಯಾರಿಗೆಲ್ಲ ಸಿನಿಮಾ ಮಾಡಿದ್ದೀನೋ ಅವರಿಗೆಲ್ಲ ನಷ್ಟವಾಗಿದೆ. ಪಾಪ, ಅವರಿಗೆಲ್ಲ ಯಾಕೆ ನಷ್ಟ ಮಾಡಬೇಕು, ಅಲ್ವಾ? ನನ್ನಿಂದ ಯಾರಿಗೂ ತೊಂದರೆ ಆಗೋದು ಬೇಡ. ನಿರ್ದೇಶನ ಮಾಡೋ ಹುಚ್ಚಿನಿಂದ ಯಾರಿಗಾದರೂ ಯಾಕೆ ತೊಂದರೆ ಆಗಬೇಕು. ಯಾವಾಗ ನಿರ್ದೇಶನ  ಮಾಡ್ತೀರಿ ಅಂತ ಕೇಳಿದರೆ ಯಾವಾಗ ಕೈಲೊಂದಷ್ಟು ದುಡ್ಡಿದ್ದು ಕಳಕೊಳ್ಳಬೇಕು ಅನ್ನಿಸುತ್ತೋ ಆವಾಗ ಮಾಡ್ತೀನಿ.  

-ಸಂದರ್ಶನ: ಜೋಗಿ 
 

Follow Us:
Download App:
  • android
  • ios