Asianet Suvarna News Asianet Suvarna News

ಸುದೀಪ್ ಜೀವನದಲ್ಲಿ ಶರಣಾಗಿದ್ದು ಇಬ್ಬರಿಗಂತೆ, ಯಾರಿಗೆ?

'ನನ್ನ ನಟನಾ ಜೀವನದಲ್ಲಿ ನಾನು ಶರಣಾಗಿರುವುದು ಇಬ್ಬರಿಗೆ ಮಾತ್ರ. ಮೊದಲು 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರೀಕರಣದ ಸಂದರ್ಭದಲ್ಲಿ ವಿಷ್ಣುವರ್ಧನ್ ಸರ್‌ಗೆ. ಆಮೇಲೆ 'ರನ್ನ' ಚಿತ್ರೀಕರಣದ ಸಂದರ್ಭದಲ್ಲಿ ಪ್ರಕಾಶ್ ರೈ ಅವರಿಗೆ.' ಈ ಮಾತು ಹೇಳಿದ್ದು ಸುದೀಪ್.

Sudeep bow two actors in life know who are they

'ನನ್ನ ನಟನಾ ಜೀವನದಲ್ಲಿ ನಾನು ಶರಣಾಗಿರುವುದು ಇಬ್ಬರಿಗೆ ಮಾತ್ರ. ಮೊದಲು 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರೀಕರಣದ ಸಂದರ್ಭದಲ್ಲಿ ವಿಷ್ಣುವರ್ಧನ್ ಸರ್‌ಗೆ. ಆಮೇಲೆ 'ರನ್ನ' ಚಿತ್ರೀಕರಣದ ಸಂದರ್ಭದಲ್ಲಿ ಪ್ರಕಾಶ್ ರೈ ಅವರಿಗೆ.' ಈ ಮಾತು ಹೇಳಿದ್ದು ಸುದೀಪ್. ಸಂದರ್ಭ: ಪ್ರಕಾಶ್ ರೈ ಬರೆದ 'ಇರುವುದೆಲ್ಲವ ಬಿಟ್ಟು..' ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದೀಪ್  ತಮ್ಮ ಬಗ್ಗೆ, ಚಿತ್ರರಂಗದ ಪಯಣದ ಬಗ್ಗೆ, ಪ್ರಕಾಶ್ ರೈ ಅವರ ಬಗ್ಗೆ ಆಪ್ತವಾಗಿ ಮಾತನಾಡಿದರು. ಹಿರಿಯ ಸಾಹಿತಿ ಎಚ್‌ಎಸ್ ವೆಂಕಟೇಶಮೂರ್ತಿಯವರನ್ನು ಪ್ರೀತಿಯಿಂದ ಮೇಷ್ಟ್ರೇ ಎಂದು ಕರೆದರು. ಯಾವ ಹಮ್ಮೂ ಇಲ್ಲದೆ ತನ್ನನ್ನು ತಾನೇ ತಮಾಷೆ ಮಾಡಿಕೊಂಡು ನೆರೆದಿದ್ದವರ ಮನಸ್ಸು ಗೆದ್ದರು. ಒಬ್ಬ ಸೂಪರ್‌ಸ್ಟಾರ್ ಇಷ್ಟು ಸೆನ್ಸಿಬಲ್ ಆಗಿ ಮಾತನಾಡಿದ್ದು ಕೇಳಿ ಅಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರಿಗೆ ಅಚ್ಚರಿಯೋ ಅಚ್ಚರಿ.  ಕುತೂಹಲಕರ ವಿಷಯ ಎಂದರೆ ಅವತ್ತು ಅವರನ್ನು ಈ ಕಾರ್ಯಕ್ರಮಕ್ಕೆ ಎಳೆದುಕೊಂಡು ಬಂದಿದ್ದು ಟ್ವೀಟರ್. ಸುದೀಪ್ ಅವರಿಗೆ ಪ್ರಕಾಶ್ ರೈ ಅವರು ಫೋನ್ ಮಾಡಿ, ಕಾರ್ಯಕ್ರಮಕ್ಕೆ ಬರುವಂತೆ ಕರೆದಿದ್ದು ನಾಲ್ಕೈದು ದಿನಗಳ ಹಿಂದೆ. ಆದರೆ ಬ್ಯುಸಿ ಶೆಡ್ಯೂಲ್ ನಡುವೆ ಸುದೀಪ್ ಅವರಿಗೆ ಕಾರ್ಯಕ್ರಮದ ವಿಷಯ ಮರೆತು ಹೋಗಿತ್ತು. ಪೂರ್ವ ನಿಗದಿತ  ಕಾರ್ಯಕ್ರಮದ ನಿಮಿತ್ತ ಇನ್ನೆಲ್ಲಿಗೋ ಹೊರಡುವುದಕ್ಕಾಗಿ ಅವರು ಮುಂಜಾನೆಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದರು. ಆಕಸ್ಮಿಕವಾಗಿ ತಮ್ಮ ಟ್ವಿಟರ್ ಅಕೌಂಟ್ ತೆರೆದಾಗ ಗೊತ್ತಾಗಿದ್ದು ಪ್ರಕಾಶ್ ರೈ ಬರೆದ ಪುಸ್ತಕ ಬಿಡುಗಡೆ ಸಮಾರಂಭ. 

 

 

ಸೀದಾ ಅಲ್ಲಿಂದಲೇ ಕಾರ್ಯಕ್ರಮಕ್ಕೆ ಬಂದಿದ್ದ ಸುದೀಪ್ ಸೊಗಸಾಗಿ ಪ್ರಕಾಶ್ ರೈ ಅವರ ಒಟ್ಟು ವ್ಯಕ್ತಿತ್ವವನ್ನು ಕೆಲವೇ ಮಾತುಗಳಲ್ಲಿ ಕಟ್ಟಿಕೊಟ್ಟರು. ಅವರು ಹೇಳಿದ ಮಾತುಗಳು ಇಲ್ಲಿವೆ:

ನಾನು ಪ್ರಕಾಶ್ ರೈ ಅವರ ಜೊತೆ ನಟಿಸಲು ಬಹಳ ಸಮಯದಿಂದ ಕಾದಿದ್ದೆ. ಆ ಅವಕಾಶ ಒದಗಿ ಬಂದಿದ್ದು 'ರನ್ನ' ಚಿತ್ರದಲ್ಲಿ. ಅವರು ಎದುರಿಗಿದ್ದರೆ ನಟಿಸುವುದು ಬಹಳ ಕಷ್ಟ. ಅವರು ಮಾತನಾಡುತ್ತಿದ್ದರೆ 'ಎಕೋ'  ಹೊಡೆಯುತ್ತದೆ. 'ರನ್ನ' ಚಿತ್ರದಲ್ಲಿ ಅವರು ನಟಿಸುವಾಗ ನಾನು ಮಾತಾಡಲೇ ಇಲ್ಲ. ಅವರು ಮಾತಾಡುವ ತನಕ ಸುಮ್ಮನಿದ್ದು ನಂತರ ಅವರ ಕೈಯನ್ನು ಮೆಲ್ಲನೆ ಒತ್ತಿದ್ದೆ. 

ಹಾಗಾಗಿ ನಾನೂ ಗೆದ್ದೆ. ? ಪ್ರಕಾಶ್ ರೈ ಹಾರ್ಡ್ ಡಿಸ್ಕ್ ಇದ್ದ ಹಾಗೆ. ಅವರೊಳಗೆ ತುಂಬಾ ವಿಷಯಗಳಿವೆ. ನಾನು ಅವರನ್ನು ಭೇಟಿ ಮಾಡಿದ ಪ್ರತೀ ಸಲವೂ ನಾನು ಸ್ಫೂರ್ತಿಗೊಳ್ಳುತ್ತೇನೆ. ? 'ರನ್ನ' ಚಿತ್ರೀಕರಣದ ಸಂದರ್ಭ. ನಾನು ಮತ್ತು ಪ್ರಕಾಶ್ ರೈ ಅವರು ಒಟ್ಟಿಗೆ ನಟಿಸಬೇಕಿದ್ದ ಮೊದಲ ದಿನ ನಮ್ಮ ತಂಡದಲ್ಲಿ ಮೌನ ಆವರಿಸಿತ್ತು. ನಾನು ಆ ಮೌನ ನನಗೆ  ಮತ್ತು ಪ್ರಕಾಶ್ ರೈ ಅವರಿಗೆ ನೀಡುತ್ತಿರುವ ಗೌರವ ಎಂದು ಕೊಂಡಿದ್ದೆ. ಸಂಜೆ ವಿಷಯ ಗೊತ್ತಾಯಿತು. ಅವರೆಲ್ಲಾ ಇಬ್ಬರು ಹೆಡ್ ವೇಟ್ ಇರುವವರು ಸೆಟ್ ನಲ್ಲಿದ್ದಾರೆ, ಎಲ್ಲಿ ಶೂಟಿಂಗ್ ನಿಂತು ಹೋಗುತ್ತದೋ ಎಂದು ಹೆದರಿದ್ದರು. ಅವರ ಮೌನಕ್ಕೆ ಕಾರಣ ಭಯ ಅನ್ನುವುದು ನಂಗೆ ಆಮೇಲೆ ಗೊತ್ತಾಯಿತು.  ಅನಂತರ ನಾನು ಮತ್ತು ಅವರು ಮನಬಿಚ್ಚಿ ಮಾತನಾಡಿದೆವು.

Follow Us:
Download App:
  • android
  • ios