ಅವತ್ತು ಬೆಂಗಳೂರಿನ ಶ್ರೀನಗರದ ಬಂಡಿ ಮಾಂಕಾಳಮ್ಮ ದೇಗುಲದ ಸುತ್ತ ಜನವೋ ಜನ. ಅದಕ್ಕೆ ಕಾರಣ ಸೃಜನ್ ಲೋಕೇಶ್. ಲೋಕೇಶ್ ಪ್ರೊಡಕ್ಷನ್ ನಿರ್ಮಾಣದ ಮೊದಲ ಚಿತ್ರ ‘ಎಲ್ಲಿದ್ದೆ ಇಲ್ಲಿ ತನಕ’ ಮುಹೂರ್ತ ಅಂದು.

ಆ ಸಂಭ್ರಮದಲ್ಲಿ ದರ್ಶನ್, ರವಿಚಂದ್ರನ್, ಜಯಂತಿ, ವಿನೋದ್ ಪ್ರಭಾಕರ್, ಅವಿನಾಶ್, ಪ್ರಿಯಾಂಕ ಉಪೇಂದ್ರ, ಧರ್ಮ, ಯಶಸ್ ಭಾಗಿಯಾಗಿದ್ದರು. ಅವರನ್ನು ನೋಡಲೆಂದೇ ಸಾವಿರಾರು ಜನ ಸೇರಿದ್ದರು. ಆರಂಭದಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿ ದೊಡ್ಡ ದೊಡ್ಡವರೆಲ್ಲಾ ತೆರಳಿದ ಮೇಲೆ ಜನರೂ ಹೊರಟುಹೋದರು. ಕಡೆಗೆ ಉಳಿದಿದ್ದು ಚಿತ್ರತಂಡ. ಅವತ್ತೆಲ್ಲಾ ಮಾತೂ ಅವರದೇ, ಸಂಭ್ರಮವೂ ಅವರದೇ.

ಹೆಚ್ಚು ಖುಷಿ ಮತ್ತು ಸಣ್ಣ ಆತಂಕ ಇದ್ದಿದ್ದು ಸೃಜನ್‌ಗೆ. ಯಾಕೆಂದರೆ ಲೋಕೇಶ್ ಪ್ರೊಡಕ್ಷನ್ನಿನ ಮೊದಲ ಸಿನಿಮಾ. ತನ್ನ ಏಳಿಗೆಯಲ್ಲಿ ಕಾರಣರಾದವನ್ನು ನೆನೆಯಬೇಕು ಮತ್ತು ಸಂಭ್ರಮ ಹಂಚಿಕೊಳ್ಳುವ ಆಸೆ ಅವರದು. ಹಾಗಾಗಿ ಈ ಪ್ರೊಡಕ್ಷನ್ ಸಂಸ್ಥೆ ಆರಂಭವಾದ ಕತೆ ನೆನೆದರು.

‘ಅಮ್ಮನ ಒಡವೆ ಅಡವಿಟ್ಟು ಆರಂಭಿಸಿದ ಸಂಸ್ಥೆ ಇದು. ಇವತ್ತು ಈ ಸಂಸ್ಥೆಯಡಿಯಲ್ಲಿ ಸುಮಾರು 300 ಜನ ಕೆಲಸ ಮಾಡುತ್ತಿರುವ ಹೆಮ್ಮೆ ನಮ್ಮದು. ನಾನು ಈ ಹಂತಕ್ಕೆ ಬರಬೇಕಾದರೆ ಅದಕ್ಕೆ ಕಾರಣ ದರ್ಶನ್. ಅವನು ಬೈದ ಕಾರಣವೇ ನಾನು ಬೇರೆ ಥರ ಯೋಚನೆ ಮಾಡಲು ಕಾರಣವಾಯಿತು. ನಮ್ಮ ಪ್ರೊಡಕ್ಷನ್ನಿನಲ್ಲಿ ಸಿನಿಮಾ ಮಾಡುವುದು ನನ್ನ ಕನಸಾಗಿತ್ತು. ಅದು ಈಗ ನೆರವೇರುತ್ತಿದೆ. ನನ್ನ ತಂದೆ ಭುಜಂಗಯ್ಯನ ದಶಾವತಾರ ಚಿತ್ರ ನಿರ್ಮಿಸಿದಾಗ ಅವರಿಗೆ ಬ್ಯುಸಿನೆಸ್ ಗೊತ್ತಿರಲಿಲ್ಲ. ಅವರು ಕಣ್ಣೀರು ಹಾಕಿದ್ದನ್ನು ನಾನು ನೋಡಿದ್ದೇನೆ. ಅವರಿಗಾಗಿ ನಾನು ಈ ಸಿನಿಮಾ ಮಾಡುತ್ತಿದ್ದೇನೆ. ಇದೊಂದು ಕಾಮಿಡಿ ಸಿನಿಮಾ. ತುಂಬಾ ಪ್ರಾಮಾಣಿಕವಾಗಿ ಸಿನಿಮಾ ಮಾಡುತ್ತೇವೆ’ ಎಂದು ಸೃಜನ್ ಹೇಳಿದಾಗ ಸಭೆ ಪೂರ್ತಿ ಮೌನ.

ತಾಯಿ ಗಿರಿಜಾ ಲೋಕೇಶ್ ‘ನನ್ನ ಮಗನಿಗೆ ನಾವೇನೂ ಸಹಾಯ ಮಾಡೋಕೆ ಆಗಲಿಲ್ಲ. ಅವನ ಸ್ವಂತ ಪ್ರತಿಭೆ, ಪರಿಶ್ರಮದಿಂದ ಮೇಲೆ ಬಂದಿದ್ದಾನೆ. ಅವನಿಗೆ ಒಳ್ಳೆಯದಾಗಬೇಕು’ ಎಂದು ಹರಸಿದರು.

ಸೃಜನ್ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿರುವ ತಾರಾ ಒಳ್ಳೆಯ ಮೂಡಲ್ಲಿದ್ದರು. ಸಿನಿಮಾ ಹಂಡ್ರೆಡ್ ಡೇಸ್ ಗ್ಯಾರಂಟಿ, ಆದರೆ ದುಡ್ಡು ನಂಗೆ ಕೊಡಬೇಕು ಎಂದು ಸೃಜನ್ ಕಾಲೆಳೆದರು. ಸೃಜನ್ ಬಿಡ್ತಾರಾ. ತಾರಮ್ಮ ಎಲೆಕ್ಷನ್ ಭಾಷಣಕ್ಕೆ ಪ್ರಾಕ್ಟಿಸ್ ಮಾಡ್ತಿದಾರೆ ಎಂದು ರೇಗಿಸಿದರು.

ನನ್ನ ಮಗನಿಗೆ ನಾವೇನೂ ಸಹಾಯ ಮಾಡೋಕೆ ಆಗಲಿಲ್ಲ. ಅವನ ಸ್ವಂತ ಪ್ರತಿಭೆ, ಪರಿಶ್ರಮದಿಂದ ಮೇಲೆ ಬಂದಿದ್ದಾನೆ. ಅವನಿಗೆ ಒಳ್ಳೆಯದಾಗಬೇಕು.- ಗಿರಿಜಾ ಲೋಕೇಶ್

ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ‘ಮಜಾ ಟಾಕೀಸ್’ ಕ್ರಿಯೇಟಿವ್ ಡೈರೆಕ್ಟರ್ ತೇಜಸ್ವಿ. ‘ಇದು ನನ್ನ ಎಂಟು ವರ್ಷಗಳ ಕನಸು’ ಎಂದರು. ಚಿತ್ರದ ನಾಯಕಿ ಹರಿಪ್ರಿಯಾ, ‘ಸೃಜನ್ ಮತ್ತು ನನ್ನದು ಹತ್ತು ವರ್ಷಗಳ ಸ್ನೇಹ. ಈಗ ಒಟ್ಟಿಗೆ ಕೆಲಸ ಮಾಡುವ ಅವಕಾಶ ಬಂದಿದೆ’ ಎಂದು ನಕ್ಕರು.

ಕತೆ ಬರೆದ ಅರುಣ್, ಸಂಭಾಷಣಾಕಾರ ರಾಕೇಶ್, ಗೀತ ರಚನಕಾರ ಕವಿರಾಜ್, ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಪವಿತ್ರಾ ಲೋಕೇಶ್, ಸಹ ನಿರ್ಮಾಪಕ ಧ್ರುವ, ನಟರಾದ ಗಿರಿ, ಸಿಹಿಕಹಿ ಚಂದ್ರು, ವಿಶ್ವ ಸಂಭ್ರಮ ಹಂಚಿಕೊಂಡರು.

ಅಮ್ಮನ ಒಡವೆ ಅಡವಿಟ್ಟು ಆರಂಭಿಸಿದ ಸಂಸ್ಥೆ ಇದು. ಇವತ್ತು ಈ ಸಂಸ್ಥೆಯಡಿಯಲ್ಲಿ ಸುಮಾರು ೩೦೦ ಜನ ಕೆಲಸ ಮಾಡುತ್ತಿರುವ ಹೆಮ್ಮೆ ನಮ್ಮದು. ನಾನು ಈ ಹಂತಕ್ಕೆ ಬರಬೇಕಾದರೆ ಅದಕ್ಕೆ ಕಾರಣ ದರ್ಶನ್. - ಸೃಜನ್ ಲೋಕೇಶ್