Asianet Suvarna News Asianet Suvarna News

ಅನಂತ್‌ನಾಗ್ ಹೇಳಿದ ‘ಕಾಸರಗೋಡು ಡೇಸ್’ ಕತೆ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು! ಚಿತ್ರೀಕರಣ ಅನುಭವ ಬಿಚ್ಚಿಟ್ಟ ಹಿರಿಯ ನಟ ಅನಂತ್‌ನಾಗ್! ಜನರ ಪ್ರತಿಕ್ರಿಯೆ ಕಂಡು ಮೂಕವಿಸ್ಮಿತರಾದ ಅನಂತ್‌ನಾಗ್! ಕಾಸರಗೋಡು ಹೋರಾಟ ನೆನಪಿಸಿಕೊಂಡ ಹಿರಿಯ ನಟ! ತಮ್ಮ ಜೀವಮಾನದ ಸಾರ್ಥಕ ಸಿನಿಮಾ ಎಂದ ಅನಂತ್‌ನಾಗ್ 
 

Special interview with renowned Sandalwood actor Anathnag
Author
Bengaluru, First Published Aug 31, 2018, 1:29 PM IST

ಜೋಗಿ
ಬೆಂಗಳೂರು(ಆ.31): ಸೆಪ್ಟೆಂಬರ್ 4ಕ್ಕೆ ಅನಂತ್‌ನಾಗ್ ಹುಟ್ಟುಹಬ್ಬ. 70ಕ್ಕೆ ಕಾಲಿಡಲಿದ್ದಾರೆ ಅವರು. ಆ ಹುಟ್ಟುಹಬ್ಬಕ್ಕೆ ರಿಷಬ್ ಕೊಟ್ಟ ಕೊಡುಗೆ ಇದು ಅಂತಾರೆ ಅವರು. ‘ರಿಷಭ್ ಮತ್ತು ಪ್ರಗತಿ ಈ ಚಿತ್ರಕ್ಕಾಗಿ ಪಟ್ಟ ಕಷ್ಟವನ್ನು ಮರೆಯಲಾರೆ. ಅವರ ಓಡಾಟ, ಉತ್ಸಾಹ, ಶ್ರಮ ಎಲ್ಲವೂ ನನಗೆ ನೆನಪಿದೆ. ಅದಕ್ಕೆ ತಕ್ಕ ಪ್ರತಿಫಲ ಚಿತ್ರಮಂದಿರದಲ್ಲಿ ಸಿಕ್ಕಾಗ ಮತ್ತಷ್ಟು ಸಂತೋಷವಾಯಿತು. ಕ್ಲೈಮ್ಯಾಕ್ಸ್ ಮುಗಿಯುತ್ತಿದ್ದಂತೆ ಜನರ ಹರ್ಷೋದ್ಗಾರ, ಸಂತೋಷ, ಕಿಚ್ಚು, ಹೆಮ್ಮೆ ಎಲ್ಲವೂ ನನಗೆ ಸಾರ್ಥಕತೆಯ ಭಾವನೆಯನ್ನು ತಂದಿದೆ. 

ಇದು ಅಭೂತಪೂರ್ವ ರಿಯಾಕ್ಷನ್. ನನಗೀಗ 70. ಚಿತ್ರರಂಗಕ್ಕೆ ಬಂದು 45 ವರ್ಷವಾಯಿತು. ಎಂದೂ ಇಂಥ ಅದ್ಭುತ ಪ್ರತಿಕ್ರಿಯೆಯನ್ನು ಕಂಡಿರಲೇ ಇಲ್ಲ.  ರಿಷಭ್‌ಗೆ ಜನರ ನಾಡಿಮಿಡಿತ ಗೊತ್ತಿದೆ. ಮಕ್ಕಳನ್ನು ಇಟ್ಟುಕೊಂಡು ಇಡೀ ಥೇಟರ್ ನಗುವಂತೆ ಮಾಡೋದು ಕಷ್ಟ. ಅವರ ಜಾಣ್ಮೆಗೆ ನನ್ನ ಮೆಚ್ಚುಗೆ. ಮಕ್ಕಳು ಒಂದು ದಿನ ನನ್ನನ್ನು ನೋಡಿ ಸ್ವಲ್ಪ ಟೆನ್ಸ್ ಆಗಿದ್ರು. ನಾನು ಅವರನ್ನು ಗೆಳೆಯರನ್ನಾಗಿ ಮಾಡಿಕೊಂಡೆ. ಅಲ್ಲಿಂದ ಅವರಿಗೂ ಸುಲಭವಾಯಿತು.

Special interview with renowned Sandalwood actor Anathnag

ಅನಂತ್‌ನಾಗ್ ಖುಷಿಯಾಗಿದ್ದಾರೆ:

ಕಾರಣಗಳಿವೆ. ಅವರು ನಟಿಸಿದ ಸಹಿಪ್ರಾಶಾ ಕಾಸರಗೋಡು ಗೆದ್ದಿದೆ. ಅದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರು ಅನಂತ್‌ನಾಗ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಒಂದು ಸಾರ್ಥಕ ಪಾತ್ರ ಮಾಡಿದ್ದೇನೆ ಅನ್ನುವ ಸಂತೋಷ ಅವರದ್ದಾಗಿದೆ. ತಾವು ನಟಿಸಿರುವುದು ಕೇವಲ ಮನರಂಜನೆ ನೀಡುವ ಸಿನಿಮಾದಲ್ಲಷ್ಟೇ ಅಲ್ಲ, ಕಣ್ತೆರೆಸುವ ಸಿನಿಮಾವೂ ಹೌದು ಅನ್ನುವುದು ಗೊತ್ತಾಗುತ್ತಿದ್ದಂತೆ ಅವರ ಉತ್ಸಾಹ ಇಮ್ಮಡಿಸಿದೆ. ‘ಇದೇ ಮೊದಲ ಸಲ ಇಂಥ ಪ್ರತಿಕ್ರಿಯೆ ನೋಡಿದೆ. ನಾನು ಸಾಮಾನ್ಯವಾಗಿ ಚಿತ್ರಮಂದಿರಕ್ಕೆ ಬರೋದಿಲ್ಲ. ರಿಷಭ್ ಒಂದು ವಿಡಿಯೋ ಕಳಿಸಿ, ಈ ಸಂಭ್ರಮ ನೋಡಲಿಕ್ಕಾದರೂ ನೀವು ಬರಬೇಕು ಅಂದರು. ಗಾಯತ್ರಿ ಕೂಡ ಹೋಗೋಣ ಅಂತ ಒತ್ತಾಯಿಸಿದ ಮೇಲೆ ಸಂತೋಷ್ ಚಿತ್ರಮಂದಿರಕ್ಕೆ ಹೋದೆ. ಒಳಗೆ ಸಾವಿರ ಮಂದಿ, ಹೊರಗೂ ಸಾವಿರ ಮಂದಿ. ಎಲ್ಲರೂ ಮಾತಾಡಿಸುವವರೇ. ಮೆಚ್ಚಿಕೊಳ್ಳುವವರೇ. ಧನ್ಯತೆಯ ಭಾವ ಅನುಭವಿಸಿದೆ.’ ಅಷ್ಟು ಹೇಳಿ ಅನಂತ್‌ನಾಗ್ ಅರೆಕ್ಷಣ ಸುಮ್ಮನಾದರು. ಅವರ ನೆನಪುಗಳು 1956ಕ್ಕೆ ಜಿಗಿದವು.

Special interview with renowned Sandalwood actor Anathnag

ಅನಂತ್‌ನಾಗ್ ಸಿಟ್ಟಾಗಿದ್ದರು:
ಕರ್ನಾಟಕ ಏಕೀಕರಣ ಆದಾಗ ಅನಂತ್‌ನಾಗ್ ಅವರಿಗೆ ಎಂಟು ವರ್ಷ. ಅವರು ಓದಿದ್ದು ಉಡುಪಿ. ವಾಸಿಸುತ್ತಿದ್ದದ್ದು ಕಾಂಚನಗಡದ ಸಮೀಪದಲ್ಲಿದ್ದ ಆನಂದಾಶ್ರಮದಲ್ಲಿ. ಇದ್ದಕ್ಕಿದ್ದ ಹಾಗೆ ಅಲ್ಲೆಲ್ಲ ಬೇರೆ ಭಾಷೆಯ ಬೋರ್ಡುಗಳು ಬಂದಾಗ ಅನಂತ್, ತಮ್ಮ ತಂದೆಯವರನ್ನು ಕೇಳುತ್ತಾರೆ; ಯಾಕಿದೆಲ್ಲ ಹೀಗಿದೆ. ಕನ್ನಡ ಎಲ್ಲಿಗೆ ಹೋಯ್ತು? ಅದಕ್ಕೆ ತಂದೆಯವರು ಕೊಟ್ಟ ಉತ್ತರ; ನಿನಗೀಗ ಅರ್ಥ ಆಗೋಲ್ಲ. ದೊಡ್ಡವನಾದ ಮೇಲೆ ಎಲ್ಲವೂ ಗೊತ್ತಾಗುತ್ತೆ. ‘ಒಂದು ದಿನ ರಿಷಬ್ ಬಂದು ಕತೆ ಹೇಳಿದ್ರು. ತಕ್ಕಮಟ್ಟಿಗೆ ಅರ್ಥವಾಯ್ತು. ನನ್ನ ಬಾಲ್ಯವನ್ನು ನೆನಪಿಸಿಕೊಂಡು ಗೂಗಲ್ ಮಾಡಿದರೆ ಕಾಸರಗೋಡಿನ ಇತಿಹಾಸ ಕಣ್ಣೆದುರು ಬಂತು. ಅದಕ್ಕೂ ನನಗೂ ಇದ್ದ ಭಾವನಾತ್ಮಕ ಸಂಬಂಧ ನೆನಪಾಯಿತು.

ಆದರೆ ಸಿನಿಮಾ ನನ್ನ ಮೇಲೆ ಇಷ್ಟೆಲ್ಲಾ ಪ್ರಭಾವ ಬೀರುತ್ತೆ ಅಂದುಕೊಂಡಿರಲಿಲ್ಲ. ಸಿನಿಮಾ ಮಾಡೋ ಗಡಿಬಿಡಿಯಲ್ಲಿ ನಾನು ಭಾಪರವಶವಾಲಿಲ್ಲ. ಡಬ್ಬಿಂಗ್ ಹೋದಾಗ ನನಗೆ ಸಿನಿಮಾ ಕಡಲು ಶುರುಮಾಡಿತು. ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ದಕ್ಷಿಣ ಕನ್ನಡ  ಮುಂದೆ ಮದ್ರಾಸ್ ಪ್ರೆಸಿಡೆನ್ಸಿಗೆ ಹೋಗಿದ್ದು, ಕನ್ನಡ, ತುಳು, ಕೊಂಕೊಣಿ ಭಾಷೆಗಳಿದ್ದ ನಾಡು ಅದು. ಕಛ್ ನಿಂದ ಕೊಚ್ಚಿ ತನಕದ ಪ್ರದೇಶವನ್ನು ಕೊಂಕಣಿ ಪ್ರದೇಶ ಎಂದು ಕರೆಯುತ್ತಿದುದು 1980 ರಿಂದಲೇ ಹೋರಾಟ ಆರಂಭವಾಗಿದ್ದು, ಏಕೀಕರಣ ಆದಾಗ ಕಾಸರಗೋಡು ಕೇರಳಕ್ಕೆ ಸೇರಿದ್ದು, ಇವೆಲ್ಲವೂ ನನ್ನ ಕಣ್ಣ ಮುಂದೆ ಹಾದು ಹೋದವು.

ಕಾಸರಗೋಡು ಹೋರಾಟಕ್ಕೆ ಕರ್ನಾಟಕದ ಇತರ ಭಾಗಗಳು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅಂತಲೂ ಅನಿಸುತ್ತದೆ. ಎಷ್ಟೋ ಮಂದಿಗೆ ಕಾಸರಗೋಡು ಹೋರಾಟದ ಇತಿಹಾಸವೇ ಗೊತ್ತಿಲ್ಲ. ಅದು ನಡೆದು 62 ವರ್ಷಗಳೇ ಆಗಿವೆ. ಕುಂದಾಪುರದಿಂದ ಬಂದ ರಿಷಬ್ ಶೆಟ್ಟಿ ಅದನ್ನೀಗ ಕನ್ನಡಿಗರಿಗೆ ನೆನಪಿಸುವಂಥ ಕತೆ ಮಾಡಿದ್ದಾರೆ. ಅದನ್ನು ನೋಡಿದ ಜನರ ಪ್ರತಿಕ್ರಿಯೆ ನನಗೆ ಇನ್ನಿಲ್ಲದ ಸಂತೋಷ ಕೊಟ್ಟಿದೆ.

Special interview with renowned Sandalwood actor Anathnag 

ಅನಂತ್‌ನಾಗ್ ನೆನಪಿಸಿಕೊಂಡರು:
‘62 ವರ್ಷದಿಂದ ಯಾರೂ ಎತ್ತಿಕೊಳ್ಳದ ವಿಷಯವೊಂದನ್ನು ರಿಷಬ್ ಎತ್ತಿಕೊಂಡದ್ದೂ ಸಾರ್ಥಕವಾಯಿತು. ಈ ಸಿನಿಮಾ ಮಾಡುವುದಕ್ಕೆ ರಿಷಭ್ ಪಟ್ಟ ಕಷ್ಟವನ್ನು ನಾನು ಕಣ್ಣಾರೆ ನೋಡಿದ್ದೇನೆ. ಇದಕ್ಕೆ ನಿರ್ಮಾಪಕರೇ ಸಿಕ್ಕಿರಲಿಲ್ಲ. ಕೊನೆಗೇ ತಾನೇ ಹಣ ಹಾಕಿ, ಒದ್ದಾಟ ಮಾಡಿ, ಈ ಸಿನಿಮಾ ಮಾಡಲೇಬೇಕು ಅಂತ ಹಠ ಹಿಡಿದು ಮಾಡಿದ್ದಾರೆ ಅವರು. ಆ ಹುಡುಗರನ್ನು ನಿಭಾಯಿಸಿದ್ದು. ಹಗಲಿರುಳು ಅಂತಿಲ್ಲದೇ ಶೂಟಿಂಗ್ ಮಾಡಿದ್ದು. ಅವರ ಪತ್ನಿ ಪ್ರಗತಿ ಚಿತ್ರಕ್ಕೋಸ್ಕರ ಓಡಾಡುತ್ತಿದ್ದದ್ದು. ಕಾಸರಗೋಡು, ಮಂಗಳೂರು- ಹೀಗೆ ಬೆಳಗ್ಗೆ ಹೋದರೆ ಸಂಜೆ ತನಕ ಕಾಸ್ಟ್ಯೂಮ್ ಸೆಲೆಕ್ಷನ್ ಮಾಡುತ್ತಾ ಪಾಡುಪಟ್ಟದ್ದು- ಎಲ್ಲವನ್ನೂ ನೋಡಿದ್ದೇನೆ. ಆ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ ಅಂತ ಗೊತ್ತಾಗಿ ಕಣ್ತುಂಬಿಬಂದಿದೆ.

ಕೊನೆಯ ಹದಿನೈದು ನಿಮಿಷದ ದೃಶ್ಯವನ್ನು ಸಿಂಗಲ್‌ಶಾಟ್‌ನಲ್ಲಿ ನಿಭಾಯಿಸಿದ್ದನ್ನು ಅನಂತ್ ನೆನಪಿಸಿಕೊಳ್ಳುತ್ತಾರೆ. ‘ಚಿತ್ರದ ಕೊನೆಯ ದೃಶ್ಯ ನನ್ನ ಹೃದಯಕ್ಕೆ ಹತ್ತಿರವಾದದ್ದು. ಒಂದು ವಾಕ್ಯಕ್ಕೋಸ್ಕರ ನಾವಿಬ್ಬರೂ ತುಂಬಾ ಹುಡುಕಾಡಿದೆವು. ಆದರೆ ಆ ದಿನ ಅದು ಹೊಳೆಯಲೇ ಇಲ್ಲ. ಅವರು ಮತ್ತು ರಾಜ್ ಶೆಟ್ಟಿ ಬರೆದಿದ್ದನ್ನೇ ಆವತ್ತು ಹೇಳಿದೆ. ನನಗೆ ಬೇಕಾದ ವಾಕ್ಯ ಮಾರನೇ ದಿನ ಹೊಳೆಯಿತು. ಅದು ಹೀಗಿತ್ತು ಯಾರೀ ದುಷ್ಟಶಕ್ತಿಗಳು ರಾತ್ರೋರಾತ್ರಿ ದೇಶ ರಾಜ್ಯಗಳ ಗಡಿಗೆರೆಯನ್ನು ಬದಲಾಯಿಸಿ ಕೋಟ್ಯಂತರ ಜನರಿಗೆ ಅನ್ಯಾಯ ಮಾಡುವವರು. ನನ್ನ ಮನಸ್ಸಿನಲ್ಲಿ ಹಿಂದುಸ್ತಾನದ ವಿಭಜನೆ, ಎರಡನೇ ಮಹಾಯುದ್ಧದ ನಂತರ ಫ್ರಾನ್ಸ್ ಮತ್ತು ಇಂಗ್ಲೆಂಡಿನ ಗಡಿಗೆರೆ ಬದಲಾದದ್ದು, ಇರಾಕ್, ಲಿಬಿಯಾ ಮತ್ತು ಸಿರಿಯಾದ ಗಡಿಗಳು ಮರು ರಚನೆಯಾದದ್ದು, ಸೂಡಾನ್ ಎರಡಾಗಿ ಒಡೆದದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆ ನೆನಪಿನೊಂದಿಗೇ ಕೊನೆ ದೃಶ್ಯ ಮಾಡಿದೆ.

Special interview with renowned Sandalwood actor Anathnag

ಆದರೆ ಆ ಆವೇಶವನ್ನು ಹತೋಟಿಯಲ್ಲಿ ಇಟ್ಟುಕೊಂಡೇ ನಿಭಾಯಿಸಬೇಕಾಗಿತ್ತು. ನನಗೆ ಕಣ್ಮೀರು ಬಂದುಬಿಡುತ್ತದೋ ಅನ್ನುವ ಭಯವಿತ್ತು. ಕಂಟ್ರೋಲ್ ಮಾಡಿಕೊಂಡೆ. ಕಣ್ಣೀರು ಬರಬಾರದು, ಧ್ವನಿ ಒಡೆದರೆ ಪರವಾಗಿಲ್ಲ ಅಂದಿದ್ದರು.  ಇದಕ್ಕೆ ನ್ಯಾಯಾಧೀಶರ ಪಾತ್ರ ಮಾಡಿದ ಚಂದ್ರಹಾಸ್ ಉಲ್ಲಾಳ್ ಕೂಡ ಕಾರಣ. ಅವರು ನನಗೆ ೪೦ ವರ್ಷಗಳಿಂದಲೂ ಪರಿಚಯ. ಅವರು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕೊಟ್ಟಿದ್ದರು. ಅವರು ಹಿಂದಿದ್ದವರು ಮುಂದೆ ಬಂದು ಕನ್ನಡಕ ತೆಗೆದು ಕಣ್ಮನ್ನು ಎರಡು ಬೆರಳುಗಳಲ್ಲಿ ಒತ್ತಿಕೊಂಡು  ಕನ್ನಡಕ ಹಾಕಿ ದಟ್ಸಾಲ್ ಯುವರ್ ಆನರ್ ಅಂತಾರೆ. ಅವರ ರಿಯಾಕ್ಷನ್‌ಗೆ ನಾನು ಮತ್ತಷ್ಟು ಕರಗಿದೆ. ಅಲ್ಲದೇ ಇಡೀ ಸಿನಿಮಾವನ್ನು ಮಧ್ಯಂತರದ ತನಕ ಮಕ್ಕಳೇ ಎತ್ತಿಕೊಂಡು ಹೋಗಿದ್ದಾರೆ. ಅದು ಇನ್ನೂ ಸಂತೋಷ ಕೊಟ್ಟ ಸಂಗತಿ.

Follow Us:
Download App:
  • android
  • ios