ಕನ್ನಡಿಗರು ನನ್ನ ಯಾಕೆ ಇಷ್ಟುಪ್ರೀತಿಸುತ್ತಾರೆ, ಅಭಿಮಾನಿಸುತ್ತಾರೆ ಎನ್ನುವುದು ಗೊತ್ತಿಲ್ಲ. ನಾನು ಗಾಯಕ ಅಷ್ಟೆ. ಕನ್ನಡಿಗರ ಪ್ರೀತಿ ನಾನು ಯಾವತ್ತೂ ಚಿರಋುಣಿ.

ಕನ್ನಡಿಗರು ನನ್ನ ಯಾಕೆ ಇಷ್ಟುಪ್ರೀತಿಸುತ್ತಾರೆ, ಅಭಿಮಾನಿಸುತ್ತಾರೆ ಎನ್ನುವುದು ಗೊತ್ತಿಲ್ಲ. ನಾನು ಗಾಯಕ ಅಷ್ಟೆ. ಕನ್ನಡಿಗರ ಪ್ರೀತಿ ನಾನು ಯಾವತ್ತೂ ಚಿರಋುಣಿ.

- ಇದು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಭಾವುಕರಾಗಿ ಹೇಳಿಕೊಳ್ಳುತ್ತಿದ್ದ ಮಾತುಗಳು.

ಯಾವುದೇ ಸಿನಿಮಾ ಕಾರ್ಯಕ್ರಮಗಳು, ಮನರಂಜನೆ ವೇದಿಕೆಗಳಲ್ಲಿ ಎಸ್‌ಪಿಬಿ ಮೈಕ್‌ ಹಿಡಿದು ನಿಂತರೆ ಮೊದಲು ಅವರ ಮಾತು ಶುರುವಾಗುತ್ತಿದ್ದಿದ್ದೇ ಕನ್ನಡದ ಹಾಡುಗಳ ಕುರಿತಾಗಿ. ಜತೆಗೆ ತಮ್ಮ ಕಂಠವನ್ನು ಈ ಮಟ್ಟಿಗೆ ಮೆಚ್ಚಿ ಪ್ರೀತಿಸಿದ ಕನ್ನಡಿಗರ ಬಗ್ಗೆ. ಅದರಲ್ಲೂ ಕನ್ನಡದ ಮೆಲೋಡಿ ಹಾಡುಗಳನ್ನು ಹಾಡಿನ ಮೂಲಕವೇ ತಮ್ಮ ಮಾತುಗಳನ್ನು ಆರಂಭಿಸುತ್ತಿದ್ದರು. ಅಷ್ಟರ ಮಟ್ಟಿಗೆ ಎಸ್‌ಪಿಬಿ ಎಂದರೆ ಕನ್ನಡದ ಚಿರ ಗಾಯಕ ಎನಿಸಿಕೊಂಡವರು. ಹೆಸರಿಗೆ ಮಾತ್ರ ಅವರು ಹೊರಗಿನವರು. ಆದರೆ, ಅವರು ಹಾಡಿದ ನೂರಾರು ಕನ್ನಡದ ಗೀತೆಗಳನ್ನು ಕೇಳಿದಾಗ ಅವರು ಅಪ್ಪಟ ಕನ್ನಡದ ಪ್ರತಿಭೆ, ಈ ನೆಲದ ಪುತ್ರ ಸ್ವರ ಪುತ್ರ ಎಂಬುದನ್ನು ಬಹುತೇಕರು ಒಪ್ಪುವ ಮಾತು.

ಕನ್ನಡದ ಮೊದಲ ಹಾಡು ಕನಸಿದೋ ನನಸಿದೋ

‘ಕನಸಿದೋ ನನಸಿದೋ’ ಕನ್ನಡದಲ್ಲಿ ಎಸ್‌ಪಿಬಿ ಹಾಡಿದ ಮೊದಲ ಹಾಡು. ಹಾಸ್ಯ ಚಕ್ರವರ್ತಿ ನರಸಿಂಹರಾಜು ನಟನೆಯ ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಗೀತೆ ಇದು. ಇಲ್ಲಿಂದ ನಂತರದ ದಿನಗಳಲ್ಲಿ ಬಾಲಸುಬ್ರಮಣ್ಯಂ ಅವರು ಕನ್ನಡ ಗಾಯಕರೇ ಆಗಿದ್ದು ಇತಿಹಾಸ.

ಹೊಸ ಕಾಲಕ್ಕೆ ಬಂದವರು ಎಸ್‌ಪಿಬಿ

ತಮ್ಮ ಮಧುರವಾದ ಕಂಠದ ಮೂಲಕ ಗಾಯನ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದೇ ಒಂದು ಹೊಸ ಸಂಕ್ರಮಣದ ಕಾಲಘಟ್ಟದಲ್ಲಿ. ಪಿಬಿ ಶ್ರೀನಿವಾಸ್‌ ಕನ್ನಡದ ಗಾಯನ ಕ್ಷೇತ್ರವನ್ನು ಆಳುತ್ತಿದ್ದಾಗ 70ರ ದಶಕದ ನಂತರ ಹುಟ್ಟಿಕೊಂಡ ಹೊಸ ತಲೆಮಾರಿನ ನಾಯಕ ನಟರಿಗೆ ಹೊಸದೊಂದು ಧ್ವನಿ ಬೇಕಿತ್ತು. ಈ ಧ್ವನಿ ಇಂಥವರಿಗೆ ಮಾತ್ರ ಹೊಂದಾಣಿಕೆ ಆಗುತ್ತದೆಂಬ ಇಮೇಜ್‌ ಮಾತುಗಳು ಇರಬಾರದು ಎಂದು ಎದುರು ನೋಡುತ್ತಿದ್ದ ಕನ್ನಡ ಹಾಡುಗಳಿಗೆ ಕಂಡ ಪ್ರತಿಭೆಯೇ ಎಸ್‌ಪಿ ಬಾಲಸುಬ್ರಹ್ಮಣ್ಯಂ. ಆ ಹೊತ್ತಿಗೆ ತೆಲುಗಿನಲ್ಲಿ ಸಾಕಷ್ಟುಪ್ರಸಿದ್ಧಿ ಆದ ಎಸ್‌ಪಿಬಿ ಧ್ವನಿ ಹೊಸದಾಗಿ ಕೇಳಿಸಿತು. ಯಾರೋ ಒಬ್ಬ ಹೀರೋಗೆ ಮಾತ್ರ ಸೀಮಿತ ಆಗದ ಕಂಠವಿದು ಎಂದು ಅನಿಸಿದಾಗ ಎಸ್‌ಪಿಬಿ ಆಗಮನಕ್ಕೆ ಕನ್ನಡದ ಗಾಯನ ಲೋಕ ಹೊಸ ಪಲ್ಲವಿ ಹಾಡಿತು. ಎಂಆರ್‌ ವಿಠಲ್‌ ನಿರ್ದೇಶನದ, 1967ರಲ್ಲಿ ಬಂದ ‘ನಕ್ಕರೆ ಅದೇ ಸ್ವರ್ಗ’ ಚಿತ್ರದಲ್ಲಿ ‘ಕನಸಿದೋ ನನಸಿದೋ’ ಎನ್ನುವ ಹಾಡಿನ ಸಾಲುಗಳು ಎಸ್‌ಪಿಬಿ ಅವರ ಕಂಠದಿಂದ ಮೂಡಿ ಬಂತು.

ಹೆಚ್ಚು ಕಮ್ಮಿ ಎರಡೂವರೆ ದಶಕಗಳ ಕಾಲ ಕನ್ನಡದ ಹಾಡುಗಳಿಗೆ ಎಸ್‌ಪಿಬಿ ಉಸಿರಾದರು. ಆರಂಭದಲ್ಲೇ ತಿಂಗಳಿಗೆ 6 ರಿಂದ 10 ಹಾಡುಗಳನ್ನು ಹಾಡುವ ಮಟ್ಟಿಗೆ ಕನ್ನಡಿಗರಿಗೆ ಆಪ್ತರಾದರು. ಅಂದರೆ ತಮಿಳುನಾಡಿನಿಂದ ಕರ್ನಾಟಕಕ್ಕೆ ಚಿತ್ರರಂಗ ವರ್ಗಾವಣೆ ಆಗಿ, ರಾಜೇಶ್‌ ಕೃಷ್ಣನ್‌, ಮಂಜುಳಾ ಗುರುರಾಜ್‌, ಬಿಆರ್‌ ಛಾಯಾ, ಎಲ್‌ಎನ್‌ ಶಾಸ್ತ್ರಿ, ನಂದಿತಾ ಮುಂತಾದ ಕನ್ನಡದ ಮೂಲಕ ಗಾಯಕ, ಗಾಯಕಿಯರು ಹುಟ್ಟಿಕೊಳ್ಳುವವರೆಗೂ ಎಸ್‌ಪಿಬಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಬಿಟ್ಟು ಕೊಡಲಿಲ್ಲ. ಎಸ್‌ಪಿಬಿ ಕೂಡ ಕನ್ನಡವನ್ನು ಗಟ್ಟಿಯಾಗಿ ಅಪ್ಪಿಕೊಂಡರು.

ಸಾಹಸಸಿಂಹನ ತೆರೆ ಹಿಂದಿನ ಧ್ವನಿ

ಡಾ ರಾಜ್‌ಕುಮಾರ್‌ ಸಿನಿಮಾಗಳು ಎಂದರೆ ಪಿಬಿಎಸ್‌ ಧ್ವನಿ ಹೇಗೆ ಖಾಯಂ ಆಯಿತೋ, ಹಾಗೆ ಸಾಹಸಸಿಂಹ ವಿಷ್ಣುವರ್ಧನ್‌ ಸಿನಿಮಾಗಳೆಂದರೆ ಎಸ್‌ಪಿಬಿ ಗಾಯನ ಇರಲೇಬೇಕು. ‘ನಾಗರಹಾವು’ ಚಿತ್ರದಿಂದ ಆರಂಭಗೊಂಡು ‘ಆಪ್ತರಕ್ಷಕ’ ಚಿತ್ರದವರೆಗೂ ಶೇ.99ರಷ್ಟುವಿಷ್ಣುವರ್ಧನ್‌ ಸಿನಿಮಾಗಳ ಗೀತೆಗಳಿಗೆ ಧ್ವನಿ ಆದವರು ಎಸ್‌ಪಿಬಿ. ‘ನನ್ನ ಚಿತ್ರಗಳಿಗೆ ಎಸ್‌ಪಿಬಿ ಹಾಡಿದರೆ ನಾನು ಗೆಲ್ಲುತ್ತೇನೆ’ ಎಂದು ಸ್ವತಃ ವಿಷ್ಣುವರ್ಧನ್‌ ಹೇಳುತ್ತಿದ್ದ ಮಾತುಗಳನ್ನು ಎಸ್‌ಪಿಬಿ ನೆನಪಿಸಿಕೊಳ್ಳುತ್ತಿರುತ್ತಾರೆ.

ರಾಜನ್‌ ನಾಗೇಂದ್ರ ಮತ್ತು ಎಸ್‌ಪಿಬಿ ಬ್ಯಾಂಕ್‌ ಬ್ಯಾಲೆನ್ಸ್‌

ಎಸ್‌ಪಿಬಿಯನ್ನು ಗಾಯನ ಕ್ಷೇತ್ರಕ್ಕೆ ಕರೆದುಕೊಂಡು ಬಂದು ಮೊದಲು ಹಾಡಿಸಿದ್ದು ತೆಲುಗಿನ ಕೋದಂಡಪಾಣಿ. ಹೀಗಾಗಿ ಅವರ ಹೆಸರಿನಲ್ಲಿ ಸ್ಟುಡಿಯೋ ಮಾಡುವ ಮೂಲಕ ಪ್ರೀತಿ ತೋರಿಸಿದವರು ಬಾಲು. ಕನ್ನಡದಲ್ಲೂ ಅಷ್ಟೆತಾವು ಕೆಲಸ ಮಾಡುವ ಸಂಗೀತ ನಿರ್ದೇಶಕರ ಜತೆಗೆ ಅತ್ಯುತ್ತಮವಾದ ಸ್ನೇಹ ಸಂಬಂಧ ಇಟ್ಟುಕೊಂಡಿದ್ದವರು. ರಾಜನ್‌ ನಾಗೇಂದ್ರ ಅವರ ಜೋಡಿಯನ್ನು ‘ನನ್ನ ತಮ್ಮ’ ಅಂತಲೇ ಕರೆಯುತ್ತಿದ್ದರು.

‘ನನ್ನ ಎಲ್ಲರೂ ಪ್ರೀತಿಸುತ್ತಾರೆ. ಪ್ರೀತಿಯಿಂದ ಬಾಲು ಅಂತ ಕರೆಯುತ್ತಾರೆ. ಆದರೆ, ಕನ್ನಡಿಗರು ಮಾತ್ರ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಕಾಣುತ್ತಾರೆ. ಅಭಿಮಾನಿಸುತ್ತಾರೆ, ಪ್ರೀತಿಸುತ್ತಾರೆ. ನನಗೆ ಕನ್ನಡ ಒಂದು ಭಾಷೆ ಇದೆ ಅಂತ ಮಾತ್ರ ಗೊತ್ತಿತ್ತು. ಅವರ ಪ್ರೀತಿ ಇಷ್ಟುದೊಡ್ಡ ಮಟ್ಟಕ್ಕೆ ಇರುತ್ತದೆ ಅಂತ ಗೊತ್ತಾಗಿದ್ದು ಇಲ್ಲಿಗೆ ಬಂದು ಹಾಡಿದಾಗಲೇ. ಎಲ್ಲಿಂದ ಬಂದವನು, ಯಾವ ಭಾಷೆ, ಯಾವ ಊರು ಏನೆಂದೂ ನೋಡದೆ ನನ್ನ ಕಂಠವನ್ನು ಪ್ರೀತಿಸಿದವರು ಕನ್ನಡಿಗರು. ಇನ್ನೂ ನನ್ನ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಿಸಿದ ರಾಜನ್‌ ನಾಗೇಂದ್ರ ನನ್ನ ತಮ್ಮನಿಗಿಂತಲೂ ಹೆಚ್ಚು’ ಎಂದು ಹೇಳಿಕೊಂಡಿದ್ದರು ಎಸ್‌ಪಿಬಿ. ತೆಲುಗಿನ ಕೋದಂಡಪಾಣಿ, ಕನ್ನಡದ ರಾಜನ್‌ ನಾಗೇಂದ್ರ, ನಾದಬ್ರಹ್ಮ ಹಂಸಲೇಖ ಅವರಿಗೆಲ್ಲಾ ಎಸ್‌ಪಿಬಿ ಅಚ್ಚುಮೆಚ್ಚು. ಹಂಸಲೇಖ ಅವರು ಎಸ್‌ಪಿಬಿ ಅವರನ್ನು ಏನ್‌ ಗುರೂ ಎಂದರೆ, ಇತ್ತ ಎಸ್‌ಪಿಬಿ ನೀವು ಸಂಗೀತ ಸರಸ್ವತಿಯನ್ನು ಜತೆಯಲ್ಲೇ ಇಟ್ಟುಕೊಂಡು ಓಡಾಡುತ್ತೀರಿ ಎಂದು ತಮಾಷೆ ಮಾಡುತ್ತಿದ್ದರು.

ಕಿರುತೆರೆಯಲ್ಲೂ ಎದೆ ತುಂಬಿ ಹಾಡಿದ ಎಸ್‌ಪಿಬಿ

ಕಿರುತೆರೆ ಲೋಕದ ಹೊಸ ಅಧ್ಯಾಯ ‘ಎದೆ ತುಂಬಿ ಹಾಡುವೆನು’ ಎನ್ನುವ ಕಾರ್ಯಕ್ರಮ. ಆ ಕಾಲಕ್ಕೆ ಕನ್ನಡದ ಯಾವ ವಾಹಿನಿಗಳಲ್ಲೂ ಇಂಥದ್ದೊಂದು ಹಾಡಿನ ಕಾರ್ಯಕ್ರಮ ಇಲ್ಲದಿದ್ದಾಗ ಹುಟ್ಟಿಕೊಂಡ ಈ ಶೋ ಅತಿಹೆಚ್ಚು ಪ್ರಸಿದ್ಧಿಗೆ ಬರಲು ಕಾರಣ ಎಸ್‌ಪಿಬಿ ತೀರ್ಪುಗಾರರು ಆಗಿದ್ದು. ವಿನಯಾ ಪ್ರಸಾದ್‌ ನಿರೂಪಣೆ ಮಾಡುತ್ತಿದ್ದರು. ಒಂದು ಹಾಡು, ಅದರ ಇತಿಹಾಸ ಹೇಳಿದ ನಂತರ ಅದೇ ಹಾಡನ್ನು ವೇದಿಕೆ ಮೇಲೆ ಪ್ರಸ್ತುತ ಪಡಿಸುತ್ತಿದ್ದರು. ಹೀಗಾಗಿ ಹಾಡಿನ ಇತಿಹಾಸದ ಜತೆಗೆ ಆ ಹಾಡಿಗೆ ಮರು ಜೀವ ತುಂಬುತ್ತಿದ್ದರು. ಆಗ ಈ ಶೋ ಹಾಡು ಕಲಿಯುವವರ ಪಾಲಿಗೆ ವಿಶ್ವವಿದ್ಯಾಲಯವೇ ಆಗಿತ್ತು. ಈ ಟಿವಿಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಇದೇ ಎದೆ ತುಂಬಿ ಹಾಡುವನು ಶೋ.

ಹೆಸರಿಗೆ ಮಾತ್ರ ಹೊರಗಿನವರು

ಸಂಗೀತ ಕ್ಷೇತ್ರದಲ್ಲಿ ಅದೊಂದು ಯುಗ. ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿಎಂ ಸೌಂದರ್‌ ರಾಜನ್‌, ಕನ್ನಡದಲ್ಲಿ ಪಿಬಿ ಶ್ರೀನಿವಾಸ್‌ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರಾಗಿದ್ದ ಕಾಲ. ಆದರೆ, ಈ ಎಲ್ಲಾ ಭಾಷೆಗಳಲ್ಲೂ ಸಾರ್ವಭೌಮತ್ವ ಸ್ಥಾಪಿಸಿದ್ದು ಮಾತ್ರ ಎಸ್‌ಪಿಬಿ. ಹೆಸರಿಗೆ ಮಾತ್ರ ಹೊರಗಿನವರು ಎನಿಸಿಕೊಂಡಿದ್ದ ಎಸ್‌ಪಿಬಿ, ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಹಿನ್ನೆಲೆ ಗಾಯನ ಆ ಚಿತ್ರದ ಆತ್ಮ ಇದ್ದಂತೆ ಎನ್ನುವ ಮಾತು ನಿಜ ಮಾಡಿದವರು.

‘ಹಾವಿನ ದ್ವೇಷ ಹನ್ನೆರಡು ವರುಷ’ ಎಂದು ಎಸ್‌ಪಿಬಿ ಹಾಡಿದಾಗ ವಿಷ್ಣುವರ್ಧನ್‌ ರಾಮಾಚಾರಿ ಆಗಿಬಿಟ್ಟರು, ‘ಸ್ನೇಹದ ಕಡಲಲ್ಲಿ’ ಎಂದಾಗ ಪ್ರಣಯರಾಜ ಶ್ರೀನಾಥ್‌ ಎದ್ದು ನಿಂತರು. ‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’ ಎಂದು ಹಾಡಿದಾಗ ಕನ್ನಡದ ಸುರಸುಂದರ ನಟ ಅನಂತ್‌ನಾಗ್‌ ನಮ್ಮ ಕಣ್ಣಲ್ಲಿ ಮಿಂಚಿದರು. ‘ನಲಿವಾ ಗುಲಾಬಿ ಹೂವೇ’ ಎಂದಾಗ ಶಂಕರ್‌ ನಾಗ್‌ ಪ್ರತ್ಯಕ್ಷರಾಗುತ್ತಿದ್ದರು. ಈ ಯಾವ ಹಾಡುಗಳನ್ನು ಕೇಳಿದಾಗಲೂ ನಮಗೆ ಎಸ್‌ಪಿಬಿ ಹೊರಗಿನವರು ಅಂತ ಅನಿಸಲೇ ಇಲ್ಲ. ಎಸ್‌ಪಿಬಿ ಎಂದರೆ ಕನ್ನಡದ ಭಾವನೆ, ಕನ್ನಡದ ಉಸಿರು, ಕನ್ನಡದ ನಾಯಕ ನಟರ ಅಂತಧ್ರ್ವನಿಯೇ ಆದವರು. ಹೀಗಾಗಿ ಎಸ್‌ಪಿಬಿ ಹೆಸರಿಗೆ ಮಾತ್ರ ಹೊರಗಿನ ಭಾಷೆಯವರು, ಅವರ ಪ್ರತಿ ಹಾಡು ಕೂಡ ‘ನಾನು ನಿಮ್ಮವನೇ’ ಎನ್ನುವ ಭಾವನೆ ಗಟ್ಟಿಯಾಗಿ ಸ್ಥಾಪಿಸಿತ್ತು.

ಎಸ್‌.ಜಾನಕಿ ಗುರುತಿಸಿದ ಪ್ರತಿಭೆ

ಗಾಯಕರಾಗಿ ಭಾರತೀಯ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಸಾಧನೆ ಮಾಡಿದ ಎಸ್‌ಪಿಬಿ ಅವರಲ್ಲಿನ ಹಾಡುಹಕ್ಕಿಯನ್ನು ಮೊದಲು ಗುರುತಿಸಿದ್ದು ಗಾಯಕಿ ಎಸ್‌ ಜಾನಕಿ. ಇದನ್ನು ಎಸ್‌ಪಿಬಿ ಅವರ ಮಾತುಗಳಲ್ಲೇ ಕೇಳಿ.

‘ಸಂಗೀತ ಕಾರ್ಯಕ್ರಮವೊಂದರಲ್ಲಿ ನನ್ನ ಧ್ವನಿಯನ್ನು ಕೇಳಿದ ಎಸ್‌ ಜಾನಕಿ ಅಮ್ಮ ಅದೇ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಿನ್ನ ಧ್ವನಿ ಕೇಳಕ್ಕೆ ತುಂಬಾ ಚೆನ್ನಾಗಿದೆ. ಯಾಕೆ ನೀನು ಸಿನಿಮಾಗಳಲ್ಲಿ ಹಾಡುವ ಪ್ರಯತ್ನ ಮಾಡಬಾರದು ಎಂದು ಕೇಳುವ ಮೂಲಕ ನನ್ನೊಳಗಿನ ಗಾಯನ ಪ್ರತಿಭೆ ಮೊದಲು ನೀರು ಹಾಕಿದರು. ಅಂದು ಅವರು ಹೇಳಿದ ನೀನು ಯಾಕೆ ಸಿನಿಮಾಗಳಲ್ಲಿ ಹಾಡಬಾರದು ಎನ್ನುವ ಒಂದು ಮಾತು ನನ್ನ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ’ ಎಂದು ಆಗಾಗ ಎಸ್‌ಪಿಬಿ ನೆನಪಿಸಿಕೊಳ್ಳುತ್ತಾರೆ.

ಹೀಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಗಾಯನ ಕ್ಷೇತ್ರದಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳು ಯಾರಿಂದಲೂ ಅಳಿಸಲಾಗದು. 80ನೇ ದಶಕದಿಂದ ಶುರುವಾಗಿ ಎರಡೂವರೆ ದಶಕದವರೆಗೂ ಅವರು ಹಾಡಿದ ಹಾಡುಗಳದ್ದೇ ಮತ್ತೊಂದು ಆಪ್ತಗೀತೆ. ಕನ್ನಡ ಚಿತ್ರರಂಗದ ಕೆಲಸಗಳು ಮದ್ರಾಸಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು, ಇಲ್ಲಿನ ಸ್ಥಳೀಯ ಹೊಸ ಗಾಯಕರು ಹುಟ್ಟಿಕೊಂಡು, ಹೊರಗಿನಿಂದ ಹೊಸ ಧ್ವನಿಗಳಾಗಿ ಸೋನು ನಿಗಮ್‌, ಕುನಾಲ್‌ ಗಾಂಜಾವಾಲಾ, ಶ್ರೇಯಾ ಘೋಷಾಲ್‌, ಶಂಕರ್‌ ಮಹದೇವನ್‌, ಕೈಲಾಶ್‌ ಖೇರ್‌ ಅವರಂತಹ ಹಾಡುಗಾರರ ಪ್ರವೇಶವಾದರೂ ಎಸ್‌ಪಿಬಿ ಅವರು ಕನ್ನಡ ಚಿತ್ರರಂಗದ ಪಾಲಿಗೆ ಗಾನ ಗಂಧರ್ವ. ಎಂದೂ ಮರೆಯಾಗದ ಹಾಡಿನ ಕಂಠ ಅದು.

ಪ್ರಮುಖ ಕನ್ನಡ ಹಾಡುಗಳು

ಹಾವಿನ ದ್ವೇಷ ಹನ್ನೆರಡು ವರುಷ (ನಾಗರಹಾವು)

ಸ್ನೇಹದ ಕಡಲಲ್ಲಿ (ಶುಭ ಮಂಗಳ)

ನಲಿವಾ ಗುಲಾಬಿ ಹೂವೇ (ಆಟೋ ರಾಜ)

ಎಲ್ಲಿರುವೆ ಮನವ ಕಾಡುವ ರೂಪಸಿಯೇ (ಬಯಲು ದಾರಿ)

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು (ನಾಗರಹೊಳೆ)

ಕನಸಲೂ ನೀನೇ ಮನಸಲೂ ನೀನೇ (ಬಯಲುದಾರಿ)

ಮಾಮರವೆಲ್ಲೋ ಕೋಗಿಲೆ ಎಲ್ಲೋ (ದೇವರಗುಡಿ)

ಈ ಭೂಮಿ ಬಣ್ಣದ ಬುಗುರಿ (ಮಹಾಕ್ಷತ್ರಿಯ)

ಜೊತೆಯಲಿ ಜೊತೆ ಜೊತೆಯಲಿ (ಗೀತಾ)

ಮಾರಿಕಣ್ಣು ಹೋರಿಮ್ಯಾಗೆ (ಎ)

ಯಾವ ಹೂವು, ಯಾರ ಮುಡಿಗೆ (ಬೆಸುಗೆ)

ಶಿವ ಶಿವ ಎಂದರೆ ಭಯವಿಲ್ಲ (ಭಕ್ತ ಸಿರಿಯಾಳ)

ನೂರೊಂದು ನೆನಪು ಎದೆಯಾಳದಿಂದ (ಬಂಧನ)

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುತಾ (ಆನಂದ್‌)