ವೇದಿಕೆಯಲ್ಲಿ ಡಾನ್ಸ್ ಮಾಡುವುದು ಸೋನುಗೆ ಆಸೆಯಷ್ಟೇ ಅಲ್ಲ, ಕನಸು. ಆದರೆ ಅವರಿಗೆ ವೇದಿಕೆಯಲ್ಲಿ ಡಾನ್ಸ್ ಮಾಡಲು ಕರೆ ಬಂದಾಗಲೆಲ್ಲಾ ಅದನ್ನು ತಿರಸ್ಕರಿಸುತ್ತಿದ್ದರು. ಯಾಕೆಂದರೆ ವೇದಿಕೆಯಲ್ಲಿ ಡಾನ್ಸ್ ಮಾಡುವುದನ್ನು ನೆನೆಸಿಕೊಂಡಾಗೆಲ್ಲಾ ಸೋನು ಕಣ್ಣಲ್ಲಿ ಭಯ. ಅದಕ್ಕೆ ಕಾರಣಲಿದೆ. ಅದು ಸೋನು ಕಾಲೇಜು ಹೋಗುತ್ತಿದ್ದ ದಿನಗಳು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಕಾಲೇಜು ತಂಡದ ಡಾನ್ಸ್ ಪ್ರದರ್ಶನ ಇತ್ತು. ಸಭಾಂಗಣದ ತುಂಬಾ ಪ್ರೇಕ್ಷಕರು. ದುರದೃಷ್ಟವಶಾತ್ ಸೋನು ಡಾನ್ಸ್ ಮಾಡುತ್ತಾ ಮಾಡುತ್ತಾ ಬಿದ್ದು ಬಿಟ್ಟರು.

ಅವರಿಗೆ ಮೊಣಕಾಲಿನ ಸಮಸ್ಯೆ. ಮಂಡಿಚಿಪ್ಪು ಜಾರುವುದರಿಂದ ಡಾನ್ಸ್ ಮಾಡಲು ಕಷ್ಟ. ಪಾರ್ಟಿಗಳಲ್ಲೆಲ್ಲಾ ಡಾನ್ಸ್ ಮಾಡಬೇಕು ಅನ್ನುವ ಆಸೆ ಇದ್ದರೂ ಅವರಿಗೆ ಡಾನ್ಸ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾ ನೂರಾರು ಡಾಕ್ಟರ್ಗಳನ್ನು ಭೇಟಿ ಮಾಡಿದ್ದಾಯಿತು. ಆದರೆ ಫಲ ಸಿಗಲಿಲ್ಲ. ಅವರು ಡಾನ್ಸ್ ಮಾಡಬಾರದು, ಬೆಡ್ ರೆಸ್ಟ್ ತಗೊಳಿ ಅನ್ನುತ್ತಿದ್ದರೇ ಹೊರತು ಯಾರೂ ಡಾನ್ಸ್ ಮಾಡಿ ಅಂತ ಹೇಳಲೇ ಇಲ್ಲ. ಆ ಸಂದರ್ಭದಲ್ಲಿ ಸೋನುಗೆ ಪರಿಚಯ ಆಗಿದ್ದು ಜಿಮ್ ಇನ್ಸ್ಟ್ರಕ್ಟರ್ ಶ್ರೀನಿವಾಸ ಗೌಡ. ಅವರ ಜೊತೆ ಸೋನು ತನ್ನ ಸಮಸ್ಯೆ ಹಂಚಿಕೊಂಡಾಗ ಶ್ರೀನಿವಾಸ ಗೌಡ ಅವರು ತನ್ನ ಮೊಣಕಾಲ ಸಮಸ್ಯೆ ಪರಿಹಾರ ಆಗುವಂತಹ ಕೆಲವು ಎಕ್ಸರ್ಸೈಜ್ಗಳನ್ನು ಹೇಳಿಕೊಟ್ಟರು. ವ್ಯಾಯಾಮ ಮಾಡಿ ಮಾಡಿ ಒನ್ ಫೈನ್ ಡೇ ಶ್ರೀನಿವಾಸ್ ನೀವಿನ್ನು ಡಾನ್ಸ್ ಮಾಡಬಹುದು ಎಂದರು. ಸೋನುಗೆ ಖುಷಿಯೋ ಖುಷಿ.

ಸೋನು ಈಗ ತಮ್ಮ ಕನಸನ್ನು ನನಸಾಗಿಸಲು ಸಿದ್ಧರಾಗಿದ್ದಾರೆ. ಈವೆಂಟೊಂದರಲ್ಲಿ ಡಾನ್ಸ್ ಮಾಡುವ ಧೈರ್ಯ ತೋರಿದ್ದಾರೆ.

ನೀನು ಯಾವತ್ತೂ ಡಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಡಾಕ್ಟರ್ಗಳ ಮಾತನ್ನು ಸುಳ್ಳು ಮಾಡಿ, ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ಸಾಧಿಸಿ ತೋರಿಸಿದ ಸೋನು ಗೌಡರಿಗೆ ಅಭಿನಂದನೆ. ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದ್ದಕ್ಕೆ ಥ್ಯಾಂಕ್ಸು.