ಕಿರುತೆರೆ ನಟ ಕಾರ್ತಿಕ್ ಅತ್ತಾವರ ಬೆಳ್ಳಿತೆರೆಗೆ!
ಒಂದೊಳ್ಳೆ ಸಿನಿಮಾ ಮಾಡುವ ಕನಸು ಕಟ್ಟಿಕೊಂಡು ಕತೆ ಬರೆದ. ಆ ಕತೆಯ ನಾಯಕನ ಪಾತ್ರಕ್ಕೆ ತಕ್ಕಂತಹ ನಟರನ್ನು ಹುಡುಕುವ ಸಾಹಸದಲ್ಲಿ, ಸುಸ್ತಾಗಿ ತಾನೇ ಹೀರೋ ಆದ. ಇದು ‘ಅನುಕ್ತ’ ಹೆಸರಿನ ಚಿತ್ರದ ನಾಯಕ ನಟನ ಸಿನಿ ಎಂಟ್ರಿಯ ವಿಶೇಷ.
ಹೆಸರು ಕಾರ್ತಿಕ್ ಅತ್ತಾವರ. ‘ರಿಕ್ಷಾ ಡ್ರೈವರ್’ ಹೆಸರಿನ ತುಳು ಚಿತ್ರದ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ಕರಾವಳಿಯ ಪ್ರತಿಭೆ. ಕಲರ್ಸ್ ಕನ್ನಡದ ‘ಯಶೋದೆ’ ಧಾರಾವಾಹಿಯ ನಾಯಕನ ಪಾತ್ರದಲ್ಲಿ ಮನೆ ಮಾತಾದ ಹೆಸರು.
ಕಿರುತೆರೆಯಿಂದ ಈಗ ಹಿರಿತೆರೆಗೆ ಕಾಲಿಟ್ಟಿದ್ದಾರೆ. ‘ಅನುಕ್ತ’ ಹೆಸರಲ್ಲಿ ತಾವೇ ಬರೆದ ಕತೆಯೀಗ ಸಿನಿಮಾ ರೂಪದಲ್ಲಿ ಬರುತ್ತಿದ್ದು, ಅದಕ್ಕೆ ಅವರೇ ನಾಯಕ ನಟ.
ದುಬೈನಲ್ಲಿ ನೆಲೆಸಿರುವ ಉಡುಪಿ ಮೂಲದ ಉದ್ಯಮಿ ಹರಿ ಬಂಗೇರ ನಿರ್ಮಾಣದಲ್ಲಿ ಅಶ್ವತ್ಥ್ ಸ್ಯಾಮುವೆಲ್ ನಿರ್ದೇಶಿಸಿರುವ ‘ಅನುಕ್ತ’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಫೆಬ್ರವರಿ ಮೊದಲ ವಾರವೇ ಈ ಚಿತ್ರ ತೆರೆಗೆ ಬರುವುದು ಖಾತರಿ ಆಗಿದೆ.
ಗ್ಯಾಪ್‌ನಲ್ಲೊಂದು ಕತೆ ರೆಡಿ ಆಯ್ತು...
‘ಅನುಕ್ತ ಒಂದು ವಿಶೇಷ ಕತೆ. ಇದನ್ನು ನಾನು ಹೀರೋ ಆಗಬೇಕೆನ್ನುವ ಕಾರಣಕ್ಕೆ ಬರೆದಿದ್ದಲ್ಲ. ‘ಯಶೋದೆ’ ಧಾರಾವಾಹಿಯಿಂದ ಹೊರ ಬಂದ ನಂತರದ ದಿನಗಳಲ್ಲಿ ಏನಾದ್ರೂ ಮಾಡ್ಬೇಕೆನ್ನುವ ತುಡಿತವಿತ್ತು. ಸಿನಿಮಾಗಳಲ್ಲಿ ತಂತ್ರಜ್ಞರಾಗಿ ಕೆಲಸ ಗೆಳೆಯರದ್ದೇ ಒಂದು ತಂಡ ನಮ್ಮದು. ನನ್ನೊಂದಿಗೆ ಸಂತೋಷ ಕೊಂಚಾಡಿ ಕೂಡ ಇದ್ದರು. ನಾವಿಬ್ಬರು ಸೇರಿ ಕರಾವಳಿ ದೈವಾರಾಧನೆ ಮೇಲೆಯೇ ಒಂದು ಕತೆ ರೆಡಿ ಮಾಡೋಣ ಅಂತ ವರ್ಕ್ ಶುರು ಮಾಡಿದೆವು. ಆ ಕತೆ ಬರೆದು ಸಿನಿಮಾ ಮಾಡ್ಬೇಕು ಅಂತ ಹೊರಟಾಗ ನಮಗೆ ಅಶ್ವತ್ಥ್ ಸ್ಯಾಮುವೆಲ್ ಸಿಕ್ಕರು. ಅವರೇ ಆ ಕತೆಯನ್ನು ನಿರ್ದೇಶಿಸುವುದಾಗಿ ಹೇಳಿದರು. ತಮಗೆ ಪರಿಚಯವಿದ್ದ ದುಬೈನ ಗೆಳೆಯರ ಹರಿ ಬಂಗೇರ ಅವರಿಗೆ ಕತೆ ಹೇಳಿದರು. ಅವರೇ ಬಂಡವಾಳ ಹಾಕಲು ಮುಂದೆ ಬಂದರು. ಹಾಗೆ ನಾನು ಬರೆದ ಕತೆ ಸಿನಿಮಾಕ್ಕೆ ಬರಲು ಶುರುವಾಯಿತು’ ಎನ್ನುತ್ತಾ ಯುವ ನಟನೊಬ್ಬ ಕತೆಗಾರನಾದ ಬಗೆ ವಿವರಿಸುತ್ತಾರೆ ಕಾರ್ತಿಕ್ ಅತ್ತಾವರ.
ಯಾರು ಸಿಗಲಿಲ್ಲ ಅಂತ ಹೀರೋ ಆದ್ರು..
ನಾಯಕಿಯಾಗಿ ಸಂಗೀತಾ ಭಟ್ ಆಯ್ಕೆಯಾದರು. ಇನ್ನೇನು ಕಥಾ ನಾಯಕ ಯಾರು ಎನ್ನುವುದು ಬಾಕಿ ಉಳಿಯಿತು. ಕರಾವಳಿಯ ಹಿನ್ನೆಲೆ ಗೊತ್ತಿದ್ದವರು, ದೈವಾರಾಧನೆ ಬಗ್ಗೆ ತಿಳಿದವರು ಇರಬೇಕು ಅಂತೆಲ್ಲ ಯೋಚಿಸುತ್ತಿದ್ದಾಗ ಕಾರ್ತಿಕ್ ಅತ್ತಾವರ ಹೀರೋ ಆದ್ರು. ‘ಈ ಚಿತ್ರಕ್ಕೆ ನಾನು ಹೀರೋ ಆಗ್ತೀನಿ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ನಮಗಿದಿದ್ದು ಒಂದೊಳ್ಳೆ ಕತೆ ರೆಡಿ ಮಾಡ್ಬೇಕು ಅಂತಷ್ಟೇ. ಅದನ್ನು ನಿರ್ದೇಶಕರಿಗೆ ಕೊಟ್ಟೆವು. ಆಮೇಲೆ ಅವರೇ ಕಲಾವಿದರನ್ನು ಹುಡುಕ ಹೊರಟರು. ಕೊನೆಗೆ ಹತ್ತಿಪ್ಪತ್ತು ದಿನ ಕಳೆದ ಮೇಲೆ ಚಿತ್ರಕ್ಕೆ ನೀವೇ ಹೀರೋ ಅಂದ್ರು’ ಅಂತಾರೆ ಕಾರ್ತಿಕ್.