ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಭಾರೀ ಜನಪ್ರಿಯವಾಗಿರುವ ಬೆಂಗಳೂರಿನ ಪುಟ್ಟ ಹುಡುಗಿ ಶಾಲ್ಮಲಿ ಶ್ರೀನಿವಾಸ್‌ ಅವರ ಹಾಡಿಗೆ ಸ್ವತಃ ಸಂಗೀತ ದಿಗ್ಗಜ ಶಂಕರ್‌ ಮಹದೇವನ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

ಬೆಂಗಳೂರು (ಆ.1): ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ್, ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ ಅನ್ನೋ ಭಕ್ತಿಗಾನದ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ಜನರನ್ನು ಸೆಳೆದಿರುವ ಬೆಂಗಳೂರು ಮೂಲದ ಪುಟಾಣಿ ಶಾಲ್ಮಲಿ ಶ್ರೀನಿವಾಸ್‌ಗೆ ಈಗ ಸ್ವತಃ ಸಂಗೀತ ದಿಗ್ಗಜ ಶಂಕರ್‌ ಮಹದೇವನ್‌ ಮೆಚ್ಚುಗೆ ವ್ಯಕ್ತಪಡಿಸಿ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 'ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ' ಅನ್ನೋ ಹಾಡಿನ ಮೂಲಕ ವೈರಲ್ ಆಗಿದ್ದ ಪುಟಾಣಿ ಇತ್ತೀಚೆಗೆ ಡೀಡೀಯಾಡ್ಯಾನೇ ರಂಗ ಹಾಡಿನ ಮೂಲಕ ಮೋಡಿ ಮಾಡಿತ್ತು. ಇಷ್ಟು ಚಿಕ್ಕ ವಯಸ್ಸಿನ ಸಂಗೀತದ ನೋಟ್‌ಗಳ ಜ್ಞಾನವನ್ನೆಲ್ಲಾ ಹೊಂದಿರುವ ಆಕೆಯ ಸ್ವರ ಮಾಧುರ್ಯ ಈಗ ದೇಶದ ಸಂಗೀತ ಮಾಂತ್ರಿಕರನ್ನು ಸೆಳೆದಿದೆ ಅನ್ನೋದಕ್ಕೆ ಶಂಕರ್‌ ಮಹದೇವನ್‌ ಅವರ ಪೋಸ್ಟ್‌ ಸಾಕ್ಷಿಯಾಗಿದೆ.

'ಹುಟ್ಟುತ್ತಲೇ ಟೀಚರ್‌ ಆಗಿರುವ ಯಾರನ್ನಾದರೂ ನೀವು ನೋಡಬೇಕೆ? ಹಾಗಿದ್ದರೆ, ಆಕೆ ಇವಳೇ ನೋಡಿ..! ಇದನ್ನೇ ನಾನು ಪದೇ ಪದೇ ದೇವರ ಆಶೀರ್ವಾದ ಎನ್ನುವುದು..! ಅಂದ ಹಾಗೆ ಈಕೆ ಯಾರು? ಏನಿಲ್ಲ ನಾನು ಒಮ್ಮೆ ಈಕೆಯನ್ನು ಭೇಟಿಯಾಗಬೇಕು ಹಾಗೂ ಗಟ್ಟಿಯಾಗಿ ಅವಳನ್ನು ಅಪ್ಪಿಕೊಳ್ಳಬೇಕು ಹಾಗೂ ರಾಶಿ ರಾಶಿ ಆಶೀರ್ವಾದ ಮಾಡಬೇಕು ಎಂದು ಬಯಸಿದ್ದೇನೆ. ಎಷ್ಟೊಂದು ಸ್ಪಷ್ಟವಾಗಿ ಮಧುರವಾಗಿ ಸ್ವರಸಂಗತಿಗಳನ್ನು ಆಕೆ ಹೇಳುತ್ತಿದ್ದಾರೆ. ಈ ಮುದ್ದು ನನಗೆ ಬಹಳ ಇಷ್ಟವಾಗಿದ್ದಾಳೆ' ಎಂದು ಶಂಕರ್‌ ಮಹದೇವನ್‌ ಪೋಸ್ಟ್‌ ಮಾಡಿದ್ದಾರೆ. ವಿಡಿಯೋದಲ್ಲಿ ಶಾಲ್ಮಲಿ ತನ್ನ ತಾಯಿ ಹಾಡುತ್ತಿರುವ ಹಾಡನ್ನು ಯಾವ ರೀತಿ ಹಾಡಬೇಕು ಅನ್ನೋದರ ಬಗ್ಗೆ ಸ್ವರಸಂಗತಿಯನ್ನು ವಿವರಿಸಿದ ವಿಡಿಯೋ ಇದಾಗಿದೆ. 

ಶಂಕರ್‌ ಮಹದೇವ್‌ ಅವರ ಪೋಸ್ಟ್‌ಗೆ ಶಾಲ್ಮಲಿ ಶ್ರೀನಿವಾಸ್‌ ಅವರ ಇನ್ಸ್‌ಟಾಗ್ರಾಮ್‌ ಪುಟದಿಂದಲೂ ಪ್ರತಿಕ್ರಿಯೆ ಬಂದಿದೆ. 'ಇದನ್ನು ನೋಟಿಸ್‌ ಮಾಡಿದ್ದಕ್ಕೆ ಬಹಳ ಥ್ಯಾಂಕ್ಸ್‌ ಸರ್‌. ನಿಮ್ಮ ಮೆಚ್ಚುಗೆ ಮತ್ತು ರೀತಿಯ ಮಾತುಗಳಿಗೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ನಿಮ್ಮನ್ನು ಭೇಟಿ ಮಾಡಲು ಮತ್ತು ಆಶೀರ್ವಾದ ಪಡೆಯಲು ನಾವು ಎದುರುನೋಡುತ್ತೇವೆ' ಎಂದು ಪೋಸ್ಟ್‌ ಮಾಡಲಾಗಿದೆ. ಕೆಲದಿನಗಳ ಹಿಂದೆ ಕರ್ನಾಟಕ ಸಂಗೀತ ಕಲಾವಿದೆಯರಾದ ರಂಜಿನಿ ಮತ್ತು ಗಾಯತ್ರಿ ಕೂಡ ಈಕೆಯ ಬಗ್ಗೆ ಟ್ವೀಟ್​ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಕೆಯ ಬಗ್ಗೆ ಎಚ್ಚರಿಕೆಯಲ್ಲಿರಬೇಕು. ನಾಳೆ ನಮ್ಮ ಕಚೇರಿ ನಡೆದಾಗ ಸಂಗೀತ ವಿಶ್ಲೇಷಣೆಗೆ ತೊಡಗಿಬಿಟ್ಟರೆ ಕಷ್ಟ ಎಂದು ಬರೆದುಕೊಂಡಿದ್ದರು.

ವಿಡಿಯೋದಲ್ಲಿ ಅಮ್ಮನಿಗೆ ಸಂಗೀತ ಹೇಳಿಕೊಡುತ್ತಿರುವ ಶಾಲ್ಮಲಿ ವಿಡಿಯೋ ಸಹ ವೈರೆಲ್ ಆಗಿದ್ದು ಆಕೆಯ ಸಂಗೀತ ಜ್ಞಾನಕ್ಕೆ ಜನ ಭೇಷ್ ಅಂದಿದ್ದಾರೆ. ವೀಡಿಯೋದಲ್ಲಿ ಪುಟಾಣಿ ಅಮ್ಮನಿಗೇ ಸಂಗೀತ ಹೇಳಿ ಕೊಡುತ್ತಿರುವುದನ್ನು ನೋಡಬಹುದು. ನೀರು ಕುಡಿಯುತ್ತಾ ಇರುವ ಬಾಲಕಿ ಮೊದಲು ಹಾಡುತ್ತಾ, ತಾಯಿ ಅದನ್ನು ಅನುಸರಿಸಿದಾಗ ಹಾಗಲ್ಲ, ಇಲ್ಲಿ ಹಮ್ಮಿಂಗ್ ಕೊಡಬೇಕು ಎಂದು ಸ್ವರ ವ್ಯತ್ಯಾಸವನ್ನು ಹೇಳುತ್ತಾ ಬರುತ್ತಾಳೆ. ಎಲ್ಲಿ ವಾಯ್ಸ್‌ ಡೌನ್ ಆಗಬೇಕು ಎಂದು ವಿವರಿಸುತ್ತಾಳೆ. ಈಗಾಗಲೇ ಈ ವಿಡಿಯೋ ವನ್ನು ಸಾವಿರಾರು ಜನರು ವೀಕ್ಷಣೆ ಮಾಡಿದ್ದು, ನೂರಾರು ಮಂದಿ ಕಾಮೆಂಟ್ ಸಹ ಮಾಡಿದ್ದಾರೆ. 

ಓಡಿ ಓಡಿ ಬಂದು..ಡಿಡಿಕ್ಕ, ಡಿಡಿಕ್ಕ ಡಿಡಿಕ್ಕ; ಮುದ್ದು ಶಾಲ್ಮಲಿಯ ಹಾಡು ವೈರಲ್

“ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ…ʼ ಎನ್ನುವ ಹಾಡನ್ನೂ ಶಾಲ್ಮಲಿ ಹಾಡಿದ್ದರು. ಅದರ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಸ್ವತಃ ಪ್ರಧಾನಿ ಮೋದಿ ಕೂಡ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದರು.

Viral Video: ಪ್ರಧಾನಿಯಿಂದಲೂ ಶೇರ್‌ ಆಯ್ತು ಪುಟ್ಟ ಬಾಲಕಿ ಶಾಲ್ಮಲಿಯ 'ಪಲ್ಲವಗಳ ಪಲ್ಲವಿಯಲಿ'

View post on Instagram