ಪೇಶಾವರ[ಡಿ.30]: ಬಾಲಿವುಡ್‌ ನಟರಾದ ಶಾರುಖ್‌ ಖಾನ್‌ ಹಾಗೂ ಕಾಜೋಲ್‌ ಅವರನ್ನು ಭೇಟಿ ಮಾಡುವ ಹೆಬ್ಬಯಕೆಯೊಂದಿಗೆ ಗಡಿ ದಾಟಿ ಬಂದಿದ್ದ ಪಾಕಿಸ್ತಾನದ 22 ವರ್ಷದ ಯುವಕನೊಬ್ಬ 22 ತಿಂಗಳ ಸೆರೆಮನೆವಾಸದ ಬಳಿಕ ತನ್ನ ತವರಿಗೆ ಮರಳಿದ್ದಾನೆ.

ಅದ್ಭುತ ಪರಿಸರ ಹೊಂದಿರುವ ಪಾಕಿಸ್ತಾನದ ಸ್ವಾತ್‌ ಜಿಲ್ಲೆಯ ಮಿಂಗೋರಾ ನಿವಾಸಿ ಅಬ್ದುಲ್ಲಾ ಎಂಬಾತನೇ ತವರಿಗೆ ಮರಳಿದಾತ. ಪ್ರತಿದಿನ ಸಂಜೆ ವಾಘಾ ಗಡಿಯಲ್ಲಿ ಕಾರ್ಯಕ್ರಮವಿರುತ್ತದೆ. 2017ರ ಮೇ 25ರಂದು ಕಾರ್ಯಕ್ರಮ ನೋಡಲು ಬಂದಿದ್ದ ಅಬ್ದುಲ್ಲಾ, ಬಳಿಕ ಗಡಿ ದಾಟಿ ಭಾರತದೊಳಕ್ಕೆ ಕಾಲಿಟ್ಟಿದ್ದ. ಬಿಎಸ್‌ಎಫ್‌ ಯೋಧರು ಪ್ರಶ್ನಿಸಿದಾಗ, ಶಾರುಖ್‌ ಹಾಗೂ ಕಾಜೋಲ್‌ರನ್ನು ಭೇಟಿ ಮಾಡಬೇಕು ಎಂದು ತಿಳಿಸಿದ್ದ. ಆತನನ್ನು ವಶಕ್ಕೆ ಪಡೆದಿದ್ದ ಯೋಧರು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಅಮೃತಸರ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿ ತುರ್ತು ಪ್ರಯಾಣ ದಾಖಲೆಗಳನ್ನು ನೀಡಿದ ಹಿನ್ನೆಲೆಯಲ್ಲಿ ವಾಘಾ ಗಡಿ ಮೂಲಕ ಈತನನ್ನು ಕಳುಹಿಸಿಕೊಡಲಾಗಿದೆ. ತಾನು ಶಾರುಖ್‌, ಕಾಜೋಲ್‌ ಅವರ ಅಭಿಮಾನಿ. ಭಾರತಕ್ಕೆ ಭೇಟಿ ನೀಡಲು 2 ಬಾರಿ ವೀಸಾ ಕೋರಿ ಅರ್ಜಿ ಸಲ್ಲಿಸಿದ್ದೆ. ತಿರಸ್ಕರಿಸಲಾಗಿತ್ತು. ಅವರ ಭೇಟಿಗೆ ಅವಕಾಶ ಕಲ್ಪಿಸಿ ಎಂದು ಜೈಲಿನಲ್ಲಿದ್ದಾಗಲೂ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಪ್ರಯೋಜನವಾಗಲಿಲ್ಲ. ಪಾಕಿಸ್ತಾನ ಪ್ರಜೆಗಳು ಅಕ್ರಮವಾಗಿ ಭಾರತ ಪ್ರವೇಶಿಸಬೇಡಿ. ನಾನು ಕೂಡ ಹೋಗುವುದಿಲ್ಲ ಎಂದು ತಿಳಿಸಿದ್ದಾನೆ.

ಇತ್ತೀಚೆಗಷ್ಟೇ ಪಾಕಿಸ್ತಾನವು ಇದೇ ರೀತಿ ಪಾಕ್‌ಗೆ ಹೋಗಿ ಸಿಲುಕಿದ್ದ ಭಾರತೀಯ ಹಮೀದ್‌ ಅನ್ಸಾರಿ ಎಂಬುವರನ್ನು 6 ವರ್ಷದ ಬಂಧನದಿಂದ ಬಿಡುಗಡೆ ಮಾಡಿತ್ತು.