Asianet Suvarna News Asianet Suvarna News

ಸಿನಿಮಾ ಕಥೆ ಬರೆಯಿರಿ, ಒಂದು ಲಕ್ಷ ಬಹುಮಾನ ಗೆಲ್ಲಿ!

ಗಾಂಧಿನಗರದ ಜನ ಕನ್ನಡದಲ್ಲಿ ಸಿನಿಮಾ ಆಗುವಂತಹ ಕತೆಗಳ ಕೊರತೆ ಇದೆ ಅಂತಾರೆ. ಮತ್ತೊಂದೆಡೆ ನಮ್‌ ಕತೆ ಸಿನಿಮಾ ಆಗ್ಬೇಕಿತ್ತು ಅಂತ ಕನಸು ಕಾಣುವ ಲೇಖಕರಿದ್ದಾರೆ. ಅವರಿಬ್ಬರಿಗೂ ಸುವರ್ಣಾವಕಾಶವೊಂದು ಈಗ ಬಂದಿದೆ. ಕತೆ ಇಲ್ಲ ಎನ್ನುವವರಿಗೆ ಸಿನಿಮಾ ಆಗುವಂತಹ ಕತೆ ಕೊಡಲು, ನಮ್‌ ಕತೆ ಸಿನಿಮಾ ಆಗ್ಬೇಕು ಎನ್ನುವವರಿಂದ ಕತೆ ಕೇಳಲು ನಿರ್ದೇಶಕ ಶ್ರೀನಿ ಹೊಸ ಯೋಜನೆ ತಂದಿದ್ದಾರೆ

Script writing competition organized by film directors prize worth 1 lakhs
Author
Bengaluru, First Published Mar 29, 2019, 11:50 AM IST

ಪತ್ರಿಕೆಗಳು ದೀಪಾವಳಿಗೆ, ಯುಗಾದಿ ಹಬ್ಬಕ್ಕೆ ಕಥಾ ಸ್ಪರ್ಧೆ ಏರ್ಪಡಿಸುವ ಹಾಗೆ ಶ್ರೀನಿ, ಸಿನಿಮಾ ಕಥಾ ಸ್ಪರ್ಧೆ ಏರ್ಪಡಿಸಲು ಮುಂದಾಗಿದ್ದಾರೆ. ಅವರ ಕನಸಿನ ಈ ಯೋಜನೆಗೆ ‘ರೈಟ್‌ ಕರ್ನಾಟಕ’ ಅಂತ ಹೆಸರಿಟ್ಟಿದ್ದಾರೆ. ಅಲ್ಲಿ ಸಾಹಿತಿಗಳಿದ್ದಾರೆ. ಚಿತ್ರ ನಿರ್ದೇಶಕರಿದ್ದಾರೆ. ಹಾಗೆಯೇ ಪ್ರಕಾಶಕರೂ ಇದ್ದಾರೆ. ಅವರದೊಂದು ತಂಡ ನಿಮ್‌ ಕತೆ ಕೇಳುತ್ತೆ, ಸೂಕ್ತ ಎನಿಸುವ ಕತೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತೆ. ಜತೆಗೆ 1 ಲಕ್ಷ ಬಹುಮಾನ ನೀಡುತ್ತೆ.

ಸಿನಿಮಾಗಳಿಗೆ ಕತೆ ಬರೆಯಬೇಕೆನ್ನುವ ಲೇಖಕರಿಗೆ ಇದೊಂದು ಸೂಪರ್‌ ಅವಕಾಶ. ಸಿನಿಮಾ ಮಾಡುವುದಕ್ಕೆ ನಮ್ಮದೇ ಸೊಗಡಿನ ಕತೆಗಳು ಬೇಕು, ಅವು ಹೊಸತನದಿಂದ ಕೂಡಿರಬೇಕು ಅಂತ ಹೊರಟಾಗ ಶ್ರೀನಿ ಅವರಿಗೆ ಹೊಳೆದಿದ್ದು ಈ ಯೋಜನೆ. ಇದು ಅವರದೇ ಕನಸಿನ ಕೂಸು. ಶ್ರೀನಿ ಅವರ ಈ ಯೋಜನೆಗೆ ಸಾವಣ್ಣ ಪ್ರಕಾಶನ ಸಂಸ್ಥೆಯ ಜಮ್ಮಿಲ್‌ ಸಾವಣ್ಣ ಕೈ ಜೋಡಿಸಿದ್ದಾರೆ. ಅವರಿಗೆ ಬೆಂಬಲವಾಗಿ ಸಾಹಿತಿ ಜೋಗಿ, ‘ರಾಮಾ ರಾಮಾ ರೇ’ ಚಿತ್ರ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್‌, ಹರೀಶ್‌ ಮಲ್ಯ ಹಾಗೂ ಪತ್ರಕರ್ತೆ ಶ್ರುತಿ ಇದ್ದಾರೆ. ಶ್ರೀನಿ ಇಡೀ ಯೋಜನೆಯ ಜವಾಬ್ದಾರಿ ತೆಗೆದುಕೊಂಡರೆ, ಸಾಹಿತಿ ಜೋಗಿ, ಸತ್ಯಪ್ರಕಾಶ್‌, ಹರೀಶ್‌ ಮಲ್ಯ ಹಾಗೂ ವಿಮರ್ಶಕಿ ಶ್ರುತಿ, ಅವರ ತಂಡ ಕಥಾ ಸ್ಪರ್ಧೆಗೆ ತೀರ್ಪುಗಾರರಾಗಿ ಕೆಲಸ ಮಾಡಲಿದೆ. ಉಳಿದಂತೆ ಜಮೀಲ್‌ ಸಾವಣ್ಣ, ಈ ಸ್ಪರ್ಧೆಯಲ್ಲಿ ಆಯ್ಕೆಯಾದ 20 ಕತೆಗಳನ್ನು ಪುಸ್ತಕ ರೂಪದಲ್ಲಿ ತರುತ್ತಾರೆ.

ನೀವು ಮಾಡಬೇಕಾದ್ದು ಇಷ್ಟು

ಮೊದಲು ನಿಂಬಂಧನೆಗಳನ್ನು ಪಾಲಿಸಿ. ಒಬ್ಬ ಲೇಖಕ ಒಂದು ಕತೆ ಬರೆದು ಕಳುಹಿಸಬೇಕು. ಸಿನಿಮಾಕ್ಕೆ ಆಗುವಂತಹ ಕತೆ ಬರೆದು ಕಳುಹಿಸಬೇಕು. ಕತೆಯು ಸಂಭಾಷಣೆ ರೂಪದಲ್ಲಿ ಇರಬಾರದು. ಈಗಾಗಲೇ ಪ್ರಕಟವಾದ ಕತೆ ಕಳುಹಿಸಬಾರದು, ಕತೆ ಕಳುಹಿಸುವವರು ಡಿಟಿಪಿ ಮಾಡಿಯೇ ಕಳುಹಿಸಬೇಕು. ನೀವು ಬರೆಯುವ ಕತೆಗಳು ಹೊಸತನದಲ್ಲಿ ಕೂಡಿರಬೇಕು, ಎಲ್ಲಿಂದಲೂ ಭಾಷಾಂತರಿಸಿ ಕಳುಹಿಸಬಾರದು, ಕನ್ನಡ ಗೊತ್ತಿಲ್ಲದಿದ್ದರೆ ಇಂಗ್ಲಿಷ್‌ನಲ್ಲೇ ಬರೆದು ಕಳುಹಿಸಬಹುದು. ಯಾರಾದರೂ ಕತೆಗಳನ್ನು ಕಳುಹಿಸಬಹುದು. ಕತೆ 2000 ಪದಗಳನ್ನು ಮೀರಬಾರದು. ಇವಿಷ್ಟುನಿಬಂಧನೆಗಳ ಜತೆಗೆ ಏಪ್ರಿಲ್‌ 31ರೊಳಗೆ ನಿಮ್ಮ ಕತೆಗಳನ್ನು ರೈಟ್‌ ಕರ್ನಾಟಕ ದ ಅಧಿಕೃತ ಇಮೇಲ್‌ ಐಡಿ writerkarnataka@gmail.com ಗೆ ಕಳುಹಿಸಬೇಕು.

ತೀರ್ಪುಗಾರರು ಒಟ್ಟು 20 ಕತೆಗಳನ್ನು ಆಯ್ಕೆ ಮಾಡಲಿದ್ದಾರೆ. ಅಷ್ಟುಲೇಖಕರಿಗೆ ಒಂದು ದಿನ ಚಿತ್ರಕಥಾ ಶಿಬಿರ ಆಯೋಜಿಸಲು ನಿರ್ಧರಿಸಿದೆ. ಅದನ್ನು ‘ಲೂಸಿಯಾ’ ಚಿತ್ರದ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ನಡೆಸಿಕೊಡಲಿದ್ದಾರೆ.

ಚಿತ್ರರಂಗಕ್ಕೆ ಇದು ನಿಜಕ್ಕೂ ಹೊಸ ತರದ ಯೋಜನೆ ಎಂದು ಬಣ್ಣಿಸುವ ಸಾಹಿತಿ ಜೋಗಿ, ಇದೊಂಥರ ಮ್ಯಾಟ್ರಿಮೊನಿ ಇದ್ದ ಹಾಗೆ. ಸಿನಿಮಾ ಮಂದಿಗೆ ಕತೆ ಬೇಕು. ಲೇಖಕರಿಗೆ ತಾವು ಬರೆದ ಕತೆ ಸಿನಿಮಾ ಆಗಬೇಕು. ಇದಕ್ಕೆ ಸುವರ್ಣಾವಕಾಶ ಇಲ್ಲಿದೆ. ಹಾಗಂತ ಕನ್ನಡಕ್ಕೆ ಕತೆ ಬರೆಯುವವರ ಕೊರತೆ ಇಲ್ಲ. ಒಳ್ಳೆಯ ಕತೆಗಳೂ ಬರುತ್ತಿವೆ. ಆದರೆ ಸಿನಿಮಾಕ್ಕೆ ಆಗುವಂತಹ ಕತೆಗಳನ್ನು ಬರೆಯುವವರಿಲ್ಲ. ಸಾಮಾನ್ಯವಾಗಿ ಕತೆ ಬರೆಯುವ ಶೈಲಿಯೇ ಬೇರೆ. ಸಿನಿಮಾಕ್ಕೆ ಆಗುವಂತಹ ಕತೆ ಬರೆಯುವ ಶೈಲಿಯೇ ಬೇರೆ. ಇವೆರಡರ ವ್ಯತ್ಯಾಸದಲ್ಲಿ ಇಂತಹ ಯೋಜನೆ ಸೃಷ್ಟಿಯಾಗಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯೂ ಇದೆ. ಜತೆಗೆ ನಮ್‌ ಕತೆ ಸಿನಿಮಾ ಆಗ್ಬೇಕು ಎನ್ನುವವರಿಗೆ ಇದೊಂದು ಒಳ್ಳೆಯ ವೇದಿಕೆಯೂ ಹೌದು. ಆಸಕ್ತರು ಇದನ್ನು ಬಳಸಿಕೊಳ್ಳಬೇಕಿದೆ’ ಎನ್ನುತ್ತಾರೆ. ಹಾಗೆಯೇ ಪ್ರಕಾಶಕ ಜಮೀಲ್‌ ಸಾವಣ್ಣ, ಈ ಸ್ಪರ್ಧೆಯಲ್ಲಿ ಆಯ್ಕೆ ಆಗುವ ಕತೆಗಳನ್ನು ಪುಸ್ತಕ ರೂಪದಲ್ಲಿ ತರಲು ಉತ್ಸುಕರಾಗಿದ್ದಾರೆ. ವಿಶೇಷ ಅಂದ್ರೆ ಈ ಕಥಾ ಸ್ಪರ್ಧೆಯಲ್ಲಿ ಆಯ್ಕೆ ಆಗುವ ಮೊದಲ ಅತ್ಯುತ್ತಮ ಕತೆಯನ್ನು ನಿರ್ದೇಶಕ ಶ್ರೀನಿ ಅವರೇ ಸಿನಿಮಾ ಮಾಡುತ್ತಾರೆ. ಅವರದೇ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅದು ಸಿನಿಮಾ ರೂಪ ಪಡೆಯುತ್ತದೆ. ಉಳಿದ 19 ಕತೆಗಳನ್ನು ಸಿನಿಮಾ ಮಾಡಲು ಇಚ್ಚಿಸುವವರು ಆ ಕತೆಗಳ ಲೇಖಕರ ಅನುಮತಿ ಪಡೆದು ಸಿನಿಮಾ ಮಾಡುವ ಸದಾವಕಾಶವೂ ಇದೆ. ಯಾವುದೇ ಕತೆಯ ಹಕ್ಕು ಆಯಾ ಕತೆಗಳ ಲೇಖಕರದ್ದೇ ಆಗಿರುತ್ತದೆ. ನೆನಪಿರಲಿ ನೀವು ಕತೆ ಕಳುಹಿಸುವುದಕ್ಕೆ ಏಪ್ರಿಲ್‌ 31 ಕಡೆ ದಿನ.

Follow Us:
Download App:
  • android
  • ios