ನಾಯಕ, ಮೂವರು ನಾಯಕಿಯರು, ಪೊಲೀಸ್ ಅಧಿಕಾರಿ, ಟಿಂಬರ್ ಮಾಫಿಯಾ, ಚಿಕ್ಕಮಗಳೂರಿನ ಸುಂದರ ಲೊಕೇಷನ್‌ಗಳ ಜೊತೆಗೆ ಒಂದಷ್ಟು ಅಸಂಬದ್ಧ ಹಾರರ್‌ನ ಮಿಕ್ಸ್ ವರ್ಣಮಯ.
ಟಿಂಬರ್ ಮಾಫಿಯಾ ತನ್ನ ಕಳ್ಳ ಚಟುವಟಿಕೆಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ರಾತ್ರಿ ವೇಳೆ ಒಂದಷ್ಟು ಮಂದಿಯನ್ನು ಕೊಲೆ ಮಾಡಿ ದೆವ್ವ, ಪಿಶಾಚಿ ಎಂದೆಲ್ಲಾ ಜನರಲ್ಲಿ ಭಯ ಹುಟ್ಟುವಂತೆ ಮಾಡಿರುತ್ತದೆ. ಇದೇ ಮಾಫಿಯಾದ ಸುಳಿಗೆ ಸಿಲುಕುವ ಮೂವರು ನಾಯಕಿಯರಲ್ಲಿ ಒಬ್ಬಳು ಸಾಯುತ್ತಾಳೆ. ಮತ್ತೊಬ್ಬಳು ಕೋಮಾಗೆ ಹೋಗಿ ಬದುಕಿದ್ದೂ ಸತ್ತಂತಾಗಿರುತ್ತಾಳೆ. ಮಗದೊಬ್ಬಳು ದೆವ್ವವಾಗಿ ತಮ್ಮ ಸಾವಿಗೆ ಕಾರಣವಾದ ಎಲ್ಲರನ್ನೂ ಬಲಿ ಪಡೆಯುತ್ತಾಳೆ.
ಇದು ಚಿತ್ರದ ಒಂದು ಸಾಲಿನ ಕತೆ ಎಂದು ಸುಲಭಕ್ಕೆ ಹೇಳಿಬಿಡಬಹುದು. ಆದರೆ ಇದರಲ್ಲಿ ಕೆಲವು ಘಟ್ಟಗಳಲ್ಲಿ ರೋಚಕ ತಿರುವು ನೀಡುವಲ್ಲಿ ನಿರ್ದೇಶಕ ರವೀಂದ್ರ ವಂಶಿ ಯಶ ಕಂಡಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ನಟನೆ, ಸಂಗೀತ, ಸಂಭಾಷಣೆ, ರೋಚಕವಾದ ಸಸ್ಪೆನ್ಸ್ ಇಲ್ಲದೇ ಇರುವುದು ಚಿತ್ರವನ್ನು ನೀರಸ ಮಾಡಿಸಿದೆ. ಹಾರರ್ ಅಂಶ ಇದೆ ಎನ್ನುವ ಏಕೈಕ ಕಾರಣಕ್ಕಾಗಿ ಪ್ರತಿ ಹಂತದಲ್ಲೂ ಹಿನ್ನೆಲೆಯಲ್ಲಿ ಕಿವಿ ಚುಚ್ಚುವ ಹಾಗೆ ಹಾರರ್ ಶಬ್ದ ಮಾಡುವುದು ತೀರ ಅತಿಯಾಯಿತು ಎಂದುಕೊಳ್ಳದೇ ಮುಂದೆ ಸಾಗುವಂತೆಯೇ ಇಲ್ಲ. ನಾಯಕ ರಾಜ್ ಕಷ್ಟಪಟ್ಟು ನಟನೆ ಮಾಡಿರುವುದು ಚಿತ್ರವನ್ನು ಇಷ್ಟಪಟ್ಟು ನೋಡದಂತೆ ಮಾಡಿಬಿಡುವ ಸಾಧ್ಯತೆಗಳು ಹೆಚ್ಚಿವೆ. ಒಂದು ದೃಶ್ಯದಲ್ಲಿ ಹೀರೋ ಹಾಕಿದ್ದ ಡ್ರೆಸ್ ಅದೇ ದೃಶ್ಯದ ಮುಂದುವರೆದ ಭಾಗದಲ್ಲಿ ಆಗಲೇ ಮತ್ತೊಂದು ಡ್ರೆಸ್ ಹಾಕಿಬಿಟ್ಟಿರುತ್ತಾನೆ. ಸಣ್ಣ ಸಣ್ಣ ತಪ್ಪುಗಳು ಕಚ್ಛಾ ರಸ್ತೆಯಲ್ಲಿ ಸಿಗುವ ಗುಂಡಿಗಳಂತೆ ಸಿಗುತ್ತಲೇ ಇರುತ್ತವೆ.
ನಿರ್ದೇಶಕ ರವೀಂದ್ರ ವೆಂಶಿ ಮೂರ‌್ನಾಲ್ಕು ದಿಕ್ಕುಗಳಲ್ಲಿ ಕತೆಯನ್ನು ಪೋಣಿಸಿ ಅದಕ್ಕೊಂದಷ್ಟು ತಿರುವುಗಳನ್ನು ನೀಡಿರುವುದು ಚೆನ್ನಾಗಿದೆಯಾದರೂ ಅದಕ್ಕೆ ತಕ್ಕಂತೆ ಇಡೀ ಚಿತ್ರತಂಡ ಕೆಲಸ ಮಾಡಿಲ್ಲ ಎನ್ನುವುದು ಎದ್ದು ಕಾಣುತ್ತದೆ. ಜೀವನ್ ಗೌಡ ಚಿಕ್ಕಮಗಳೂರಿನಂತಹ ಸುಂದರ ಲೊಕೇಷನ್ನಲ್ಲಿ ಕಣ್ಣಿಗೆ ಇಷ್ಟವಾಗುವಂತೆ ಕ್ಯಾಮರಾ ತಿರುಗಿಸಿದ್ದಾರೆ. ಅಲ್ಲಲ್ಲೇ ಸುತ್ತುವ ಕತೆ ಮುಗಿದರೆ ಸಾಕು ಎನ್ನಿಸುವಷ್ಟರಲ್ಲಿ ನಿರೀಕ್ಷೆ ಮಾಡಲಾಗದ ತಿರುವು ಬಂದೆರಗುತ್ತದೆ. ಆ ತಿರುವು ದಾಟಿ ಹಿಂದಿರುಗಿ ಚಿತ್ರ ನೋಡಿದರೆ ಚಿತ್ರ ಒಂದಷ್ಟು ಇಷ್ಟವಾದರೂ ಆಗಬಹುದು. ಆ ರೋಚಕತೆಗಳೇನು, ತಿರುವುಗಳೇನು ಎನ್ನುವ ಕುತೂಹಲವಿದ್ದರೆ ವರ್ಣಮಯವನ್ನು ನೋಡಿ ಬರಬಹುದು.
ಚಿತ್ರ: ವರ್ಣಮಯ
ತಾರಾಗಣ: ರಾಜ್, ಅತ್ತಾವರ ಆರಾಧ್ಯ, ಸುನಿತಾ ಮರಿಯಾ ಪಿಂಟೋ, ಶೆಟ್ಟಿ ಶಕ್ತಿ, ಜಗದೀಶ್
ನಿರ್ದೇಶನ: ರವೀಂದ್ರ ವೆಂಶಿ
ರೇಟಿಂಗ್: **
