ಸೋಷಲ್ ಮೀಡಿಯಾದಲ್ಲಿ ‘ಉಪ್ಪಿ ಡೈರೆಕ್ಷನ್ ಮಾಡಿ’ ಎಂಬುದಾಗಿ ಅಭಿಮಾನಿಗಳು ಶುರು ಮಾಡಿದ್ದ ಅಭಿಯಾನಕ್ಕೆ ಕೊನೆಗೆ ಪ್ರತಿಕ್ರಿಯಿಸಿರುವ ಉಪೇಂದ್ರ, ‘ದಯವಿಟ್ಟು ಯಾರೂ ನಿರಾಸೆಯಾಗಬೇಡಿ. ನಾನು ಡೈರೆಕ್ಷನ್ ಮಾಡ್ತೀನಿ. ನಿಮ್ಮ ನಿರೀಕ್ಷೆ, ನಂಬಿಕೆಗೆ ತಕ್ಕನಾದ ಸಿನಿಮಾ ಮಾಡಬೇಕು ಎನ್ನುವುದು ನನ್ನ ಜವಾಬ್ದಾರಿ’ ಎಂದು ಭರವಸೆ ಕೊಟ್ಟಿದ್ದಾರೆ. ಆ ಮೂಲಕ ತಾವು ನಿರ್ದೇಶನದಿಂದ ನಿವೃತ್ತಿ ಆಗಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ.

ನಟನೆಯ ನಡುವೆಯೇ ಪ್ರಜಾಕೀಯದೊಂದಿಗೆ ರಾಜಕೀಯ ಶುರು ಮಾಡಿದ ನಂತರ ಉಪೇಂದ್ರ ಮತ್ತೆ ಡೈರೆಕ್ಷನ್ ಮಾಡುತ್ತಾರೆಯೋ ಇಲ್ಲವೋ ಎನ್ನುವ ಅನುಮಾನ ಅವರ ಅಭಿಮಾನಿಗಳಲ್ಲಿತ್ತು. ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯ ಅಂತ ಬ್ಯುಸಿಯಾದ್ರೆ ಅವರ ನಿರ್ದೇಶನದಲ್ಲಿ ಸಿನಿಮಾಗಳು ಬರುವುದು ಡೌಟು ಎಂದೇ ಮಾತುಗಳು ಶುರುವಾಗಿದ್ದವು. ಆದರೆ ಬದಲಾದ ಬೆಳವಣಿಗೆಯಲ್ಲಿ ಪ್ರಜಾಕೀಯದಲ್ಲಿ ಉಪ್ಪಿ ಒಂದಷ್ಟು ಬೇಸರ ಅನುಭವಿಸಿದರು. ನಟನೆಯ ಕಡೆ ಮುಖ ಮಾಡಿದರು. ಈ ನಡುವೆಯೇ ಅಭಿಮಾನಿಗಳ ಒತ್ತಾಯ ಹೆಚ್ಚಾಗುತ್ತಿದ್ದಂತೆ ನಿರ್ದೇಶನದತ್ತಲೂ ಮುಖ ಮಾಡಿದ್ದಾರೆ

‘ಒಳ್ಳೆಯ ವಿಷಯ ಹೊಳೆದಾಗ ಅದನ್ನು ಕತೆ ಮತ್ತು ಚಿತ್ರಕತೆ ರೂಪಕ್ಕೆ ತಂದು ನಿರ್ದೇಶನ ಮಾಡುವುದು ನನ್ನ ಅಭ್ಯಾಸ. ಅದಕ್ಕೆ ಒಂದಷ್ಟು ಸಮಯವೂ ಬೇಕಾಗುತ್ತೆ. ಸದ್ಯಕ್ಕೆ ಅದರಲ್ಲೇ ಬ್ಯುಸಿ ಇದ್ದೇನೆ. ಸ್ಕ್ರಿಪ್ಟ್ ವರ್ಕ್ ಶುರು ಮಾಡಿದ್ದೇನೆ. ಇಷ್ಟರಲ್ಲಿ ನಿರ್ದೇಶನಕ್ಕೆ ಇಳಿಯುತ್ತೇನೆ. ನನ್ನ ನಿರ್ದೇಶನದ ಸಿನಿಮಾಗಳ ಮೇಲೆ ಅಭಿಮಾನಿಗಳು ಇಷ್ಟೊಂದು ನಂಬಿಕೆ ಇಟ್ಟುಕೊಂಡಿದ್ದೀರಾ ಅಂದರೆ, ನಾನು ಅದನ್ನ ಕಳೆದುಕೊಳ್ಳಲು ರೆಡಿಯಿಲ್ಲ’ ಎಂದು ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. 

‘ನನ್ನ ಸಿನಿಮಾಗಳನ್ನ ನೋಡಿದಾಗ, ಮನರಂಜನೆ ಜತೆಗೆ ವಿಚಾರಗಳೂ ಮನಮುಟ್ಟಬೇಕು. ನೋಡುಗರಲ್ಲಿ ಏನಾದರೂ ಬದಲಾವಣೆ ತರಬಲ್ಲದಾದ ವಿಷಯಗಳನ್ನೇ ಕೈಗೆತ್ತಿಕೊಂಡು ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದೇನೆ. ಅಂಥದ್ದೇ ಸಿನಿಮಾ ಮಾಡುತ್ತೇನೆ. ಶೀಘ್ರವೇ ಅದನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಉಪೇಂದ್ರ.

ನಟನೆ, ನಿರ್ದೇಶನ ಅಂತ ಉಪೇಂದ್ರ ಬ್ಯುಸಿಯಾದ್ರೆ ಪ್ರಜಾಕೀಯದ ಕತೆ ಏನು ಎನ್ನುವುದಕ್ಕೂ ಸ್ಪಷ್ಟನೆ ನೀಡಿದ್ದಾರೆ. ‘ಪ್ರಜಾಕೀಯ ಎನ್ನುವುದು ಒಂದು ಕೆಲಸ. ಅದರ ಜತೆಗೆ ನಮ್ಮ ಕೆಲಸವೂ ಮಾಡಬೇಕು. ನಾನೊಬ್ಬ ಪ್ರಜೆಯಾಗಿ ನನ್ನ ಕೆಲಸದ ಜತೆ ಪ್ರಜಾಕೀಯವನ್ನ ಕೂಡ ಮಾಡುತ್ತಿದ್ದೇನೆ. ಬಿಡುವು ಸಿಕ್ಕಾಗ ಸ್ಕ್ರಿಪ್ಟ್ ಮಾಡುತ್ತಿದ್ದೇನೆ ಎಂದಿದ್ದಾರೆ.