ಕೈಯಲ್ಲೊಂದು ಸಿನಿಮಾ ಇಲ್ಲದಿದ್ದರೂ ಈಗಾಗಲೇ ಮೂರು ಕತೆ ಕೇಳಿದ್ದು, ಸದ್ಯದಲ್ಲೇ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ, ಬೇರೆ ಭಾಷೆಯಲ್ಲಿ ತುಂಬಾ ಅವಕಾಶಗಳು ಬರುತ್ತಿವೆ. ಹೀಗಾಗಿ ಕನ್ನಡದಲ್ಲಿ ಒಪ್ಪಿಕೊಳ್ಳುವುದಕ್ಕೆ ಆಗುತ್ತಿಲ್ಲ, ತುಂಬಾ ಅವಕಾಶಗಳಿವೆ. ಆದರೆ, ತಮಗೆ ಸೂಕ್ತ ಎನಿಸುವ ಕತೆಗಾಗಿ ಕಾಯುತ್ತಿದ್ದೇವೆ... ಹೀಗೆ ಹೇಳಿಕೊಳ್ಳುತ್ತ ತಾವು ಸಿಕ್ಕಪಟ್ಟೆ ಬ್ಯುಸಿ ಅಥವಾ ಬೇಡಿಕೆಯಲ್ಲಿದ್ದೀವಿ ಎಂದು ತೋರಿಸಿಕೊಳ್ಳುವವರೇ ಹೆಚ್ಚು. ಆದರೆ, ವಾಸ್ತವ ಏನೆಂದು
ಹೇಳಿಕೊಳ್ಳುವವರು ತೀರಾ ಅಪರೂಪ. ಇಂಥವರ ಸಾಲಿಗೆ ಸೋನು ಗೌಡ ಸೇರಿಕೊಳ್ಳುತ್ತಾರೆ.

ಮೊನ್ನೆ ಮಾಧ್ಯಮಗಳ ಮುಂದೆ ಬಂದೆ ಸೋನು ಗೌಡ ಅವರು, ‘ನಾನು ಈ ಸಿನಿಮಾ ಒಪ್ಪಿಕೊಳ್ಳುತ್ತಿರುವ ಮುಂಚೆ ನನಗೆ ಯಾವ ಚಿತ್ರವೂ ಇರಲಿಲ್ಲ. ಇನ್ನೇನು ಸಿನಿಮಾ ಅವಕಾಶಗಳು ಬರಲ್ಲ ಎಂದುಕೊಳ್ಳುತ್ತಿರುವಾಗಲೇ ನನ್ನ ಮುಂದೆ ಬಂದ ಚಿತ್ರವಿದು’ ಎಂದು ತೀರಾ ಸಹಜವಾಗಿಯೇ ವಾಸ್ತವವನ್ನು ತೆರೆದಿಟ್ಟರು. ಅವರು ನಿಜ ಸ್ಥಿತಿಯನ್ನು ಹೇಳಿಕೊಂಡಿದ್ದು ‘ಚಂಬಲ್’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ. 

ಸೋನು ಹೇಳಿದ್ದು..

‘ಒಂದು ಸಿನಿಮಾ ಅವಕಾಶ ನಮಗೆ ಅದೃಷ್ಟವೂ ಹೌದು ಎನ್ನುವುದಕ್ಕೆ ನಾನೇ ಸಾಕ್ಷಿ. ಯಾಕೆಂದರೆ ಮೊದಲೇ ಹೇಳಿದಂತೆ ಅವಕಾಶಗಳೇ ಇಲ್ಲದೆ ಖಾಲಿ ಕೂತಿದ್ದಾಗ ನನ್ನ ಕರೆದು ನಾಯಕಿಯಾಗಿಸಿದ್ದು ಚಂಬಲ್ ಸಿನಿಮಾ. ಈ ಚಿತ್ರದ ನಂತರವೇ ನನಗೆ ಶಾಲಿನಿ ಐಎಎಸ್ ಹಾಗೂ ರೆಡ್ ಹೆಸರಿನ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಕಾರಣಕ್ಕೆ ನನಗೆ ಚಂಬಲ್ ವಿಶೇಷವಾದ ಸಿನಿಮಾ’ ಎನ್ನುತ್ತಾರೆ ಸೋನು ಗೌಡ. ಸೋನು ಗೌಡ ಅವರಿಗೆ ಧೈರ್ಯ ತುಂಬುವಂತಹ ಅವಕಾಶ ಕೊಟ್ಟಿದ್ದು ನಿರ್ದೇಶಕ ಜೇಕಬ್ ವರ್ಗಿಸ್. ಜೇಕಬ್ ಸೂಕ್ಷ್ಮ ಸಂವೇದನೆಯ ಕತೆಗಳನ್ನು ತೆರೆ ಮೇಲಿಡುವ ನಿರ್ದೇಶಕ. ಸವಾರಿ, ಸವಾರಿ-2 ಹಾಗೂ ಪೃಥ್ವಿ ಚಿತ್ರಗಳೇ ಇದಕ್ಕೆ ಉತ್ತಮ ಉದಾಹರಣೆ. ಈ ಚಿತ್ರಕ್ಕೆ ನಾಯಕಿ ಆಯ್ಕೆ ಆದ ಮೇಲೆ ಸೋನುಗೆ ಬೇರೆ ಬೇರೆ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು. 

ಪುನೀತ್ ಧ್ವನಿಯಲ್ಲಿ ಚಂಬಲ್ ಟೀಸರ್

ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ‘ಚಂಬಲ್’ ಚಿತ್ರದ ಟೀಸರ್ ಸದ್ಯದಲ್ಲೇ ಬರಲಿದೆ. ವಿಶೇಷ ಅಂದರೆ ಈ ಟೀಸರ್ ನಟ ಪುನೀತ್‌ರಾಜ್‌ಕುಮಾರ್ ಅವರ ಧ್ವನಿಯಲ್ಲಿ ಮೂಡಿ ಬರಲಿದೆ. ‘ಪೃಥ್ವಿ’ ಚಿತ್ರದಲ್ಲಿ ಜತೆಯಾಗಿ ಜೇಕಬ್ ಹಾಗೂ ಅಪ್ಪು ಈಗ ‘ಚಂಬಲ್’ ಚಿತ್ರದ ಟೀಸರ್‌ನಲ್ಲಿ ಜೊತೆಗೂಡುತ್ತಿದ್ದಾರೆ.