ನ್ಯೂ ಜನರೇಷನ್‌ನ ನ್ಯೂ ಅಡ್ವೆಂಚರ್‌ ಬದುಕಿನ ಶೈಲಿಯೇ ಈ ಚಿತ್ರದ ಬುನಾದಿ ಎಂಬುದು ನಿರ್ದೇಶಕರು ಮೊದಲೇ ಹೇಳಿಕೊಂಡರು. ಮೊನ್ನೆ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದು ‘ಮನರೂಪ’ ಕುರಿತು ಹೇಳಿಕೊಂಡಿತು.

ದಶಕದ ನಂತರ ಭೇಟಿ ಮಾಡುವ ಐದು ಜನ ಗೆಳೆಯರು. ಪಶ್ಚಿಮ ಘಟ್ಟದ ಕತ್ತಲೆಯ ರಾತ್ರಿಯಲ್ಲಿ ನಿಗೂಢವಾಗಿರುವ ಕರಡಿಗುಹೆಯ ಅನ್ವೇಷಣೆಗೆ ಹೊರಟಿದ್ದಾರೆ. ಪ್ರಯಾಣದಲ್ಲಿ ಅವರು ತಮ್ಮ ಗುರಿಯತ್ತ ಸಾಗಿದಂತೆಲ್ಲ ಹಲವು ಅಡೆತಡೆಗಳು ಆಶ್ಚರ್ಯದ ರೂಪದಲ್ಲಿ ಎದುರಾಗುತ್ತವೆ. ಸೈಕಲಾಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಹಿನ್ನೆಲೆಯ ಸಿನಿಮಾ. ಕಾಡಿನಲ್ಲಿ ನಡೆಯುವ ಕತೆ. 1981 ಹಾಗೂ 1996 ನಡುವೆ ಜನಿಸಿದ, 2019ರ ವೇಳೆಗೆ 23 ಹಾಗೂ 38 ವರ್ಷ ವಯೋಮಾನದ ಮಿಲೆನಿಯಲ್ಸ್‌ ಜನಾಂಗದ ವ್ಯಕ್ತಿತ್ವವನ್ನು ಹೇಳುವ ಚಿತ್ರವಿದು. ಇದು ಚಿತ್ರರಂಗಕ್ಕೆ ಹೊಸ ರೀತಿಯ ಕತೆ. ಈ ಅವದಿಯಲ್ಲಿ ಹುಟ್ಟಿದವರು ಸ್ವಾರ್ಥ, ಅತಿಯಾಗಿ ತಮ್ಮನ್ನು ತಾವೇ ಪ್ರೀತಿಸುವುದು, ತನ್ನನ್ನೇ ಗಮನಿಸಬೇಕು ಎಂಬ ಅಭಿಲಾಷೆ ಹಾಗೂ ಎಲ್ಲೂ ನಿಲ್ಲದೆ ಯಾವುದೋ ಒಂದು ಅಪರೂಪದ ಸಂಗತಿಯನ್ನು ಅರಸಿಕೊಂಡು ತಿರುಗಾಡುವುದು... ಚಿತ್ರದ ಕತೆಯ ಬಗ್ಗೆ ತಮ್ಮದೇ ಆದ ಥಿಯರಿಯನ್ನು ಹೇಳುವ ಮೂಲಕ ಚಿತ್ರದ ಕತೆಯ ಗುಟ್ಟು ಬಿಟ್ಟುಕೊಟ್ಟರು ನಿರ್ದೇಶಕ ಕಿರಣ್‌ ಹೆಗಡೆ.

ದಿಲೀಪ್‌ ಕುಮಾರ್‌, ಅನುಷಾ ರಾವ್‌, ನಿಶಾ ಬಿ. ಆರ್‌, ಆರ್ಯನ್‌, ಶಿವ ಪ್ರಸಾದ್‌, ಅಮೋಘ್‌ ಸಿದ್ದಾಥ್‌ರ್‍, ಗಜ ನೀನಾಸಂ, ಹಾಗೂ ಪ್ರಜ್ವಲ್‌ ಗೌಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಪತ್ರಕರ್ತ, ಸಾಹಿತಿ ಮಹಾಬಲ ಸೀತಾಳಭಾವಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಪತ್ರಿಕೋದ್ಯಮದ ಜತೆಗೆ ಸಾಹಿತ್ಯ ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ಸೀತಾಳಬಾವಿ ಸಿನಿಮಾಗೆ ಸಂಭಾಷಣೆ ಬರೆದಿರುವುದು ಎರಡನೇ ಬಾರಿ. ‘ನನಗೆ ಇದು ಹೊಸ ರೀತಿಯ ಕೆಲಸ. ನಿರ್ದೇಶಕರ ಜತೆ ಸೇರಿ ಅವರ ಕತೆಗೆ ತಕ್ಕಂತೆ ಸಂಭಾಷಣೆಗಳನ್ನು ಬರೆದಿದ್ದೇನೆ. ಈಗಿನ ಜನರೇಷನ್‌ಗೆ ಈ ಸಿನಿಮಾ ತುಂಬಾ ಚೆನ್ನಾಗಿ ಹಿಡಿಸುತ್ತದೆ’ ಎಂದರು ಮಹಾಬಲ ಸೀತಾಳಭಾವಿ. ‘ಒಂದು ಹೊಸ ರೀತಿಯ ಚಿತ್ರದಲ್ಲಿ ನಟಿಸಿದ ಅನುಭವ ನಮ್ಮದು’ ಎಂದು ಚಿತ್ರದ ಕಲಾವಿದರು ಹೇಳಿಕೊಳ್ಳುತ್ತಾರೆ. ಇನ್ನೂ ವಿಶೇಷ ಅಂದರೆ ಚಿತ್ರದಲ್ಲಿ ನಟಿಸಿರುವ ಎಲ್ಲರು ರಂಗಭೂಮಿಯಿಂದ ಬಂದವರೇ. ಜತೆಗೆ ಎಲ್ಲರಿಗೂ ಮೊದಲ ಸಿನಿಮಾ. ಸೂರಿ ಹಾಗೂ ಲೋಕಿ ಅವರ ಸಂಕಲನ, ಛಾಯಾಗ್ರಾಹಣ ಗೋವಿಂದರಾಜ್‌, ಸರವಣ ಸಂಗೀತ, ನಾಗರಾಜ್‌ ಹುಲಿವಾನ್‌ ಸೌಂಡ್‌ ಡಿಸೈನಿಂಗ್‌ ಚಿತ್ರದ ತಾಂತ್ರಿಕ ಹೈಲೈಟಂತೆ.