ದರ್ಶನ್‌ ಅಭಿನಯದ ‘ರಾಬರ್ಟ್‌’ ಈಗಾಗಲೇ ಸಾಕಷ್ಟುಸುದ್ದಿ ಆಗಿರುವ ಚಿತ್ರ. ತರುಣ್‌ ಸುಧೀರ್‌ ನಿರ್ದೇಶನದ ಈ ಚಿತ್ರ ಕೇವಲ ಪೋಸ್ಟರ್‌ ಮೂಲಕವೇ ಸಾಕಷ್ಟುಕಿಚ್ಚು ಹಚ್ಚಿತ್ತು. ಅಂದಿನಿಂದಲೇ ಈ ಚಿತ್ರದ ಮುಹೂರ್ತ ಯಾವಾಗ, ಚಿತ್ರೀಕರಣದ ಕತೆಯೇನು ಎಂಬಂತಹ ಕುತೂಹಲ ತಾರಕಕ್ಕೇರಿತ್ತು. ಈಗ ಚಿತ್ರ ಶುರುವಾಗುತ್ತಿದೆ. ಮೇ 6ಕ್ಕೆ ಈ ಚಿತ್ರ ಅಧಿಕೃತವಾಗಿ ಚಿತ್ರೀಕರಣ ಶುರು ಮಾಡುತ್ತಿದೆ. ಚಿತ್ರತಂಡದ ಪ್ರಕಾರ ಫಸ್ಟ್‌ ಶೆಡ್ಯೂಲ್‌ ಐದು ದಿನಗಳಿಗೆ ಫಿಕ್ಸ್‌ ಆಗಿದೆ. ಅದು ಬೆಂಗಳೂರಿನಲ್ಲಿ ಚಿತ್ರೀಕರಣ. ಅನಂತರ ಚೆನ್ನೈ, ಹೈದರಾಬಾದ್‌ ಮತ್ತು ವಿಶಾಖಪಟ್ಟಣಂನಲ್ಲಿಯೂ ಚಿತ್ರೀಕರಣ ನಡೆಯಲಿದೆ.

ಚಿತ್ರ ತಂಡ ಚಿತ್ರೀಕರಣಕ್ಕೆ ಹೊರಟು ನಿಂತರೂ ಈಗ ನಾಯಕಿ ಆಯ್ಕೆ ಫೈನಲ್‌ ಆಗಿಲ್ಲ. ಒಟ್ಟು 45 ದಿನಗಳ ಕಾಲ ನಾಯಕಿ ಇಲ್ಲದೆಯೇ ಚಿತ್ರೀಕರಣ ನಡೆಸಲಾಗುತ್ತದೆ. ಅದಾದ ಮೇಲೆಯೇ ಚಿತ್ರಕ್ಕೆ ನಾಯಕಿ ಬೇಕು. ಅಷ್ಟರೊಳಗೆ ಸೂಕ್ತ ನಟಿಯನ್ನು ಚಿತ್ರದ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಎನ್ನುವುದು ಚಿತ್ರತಂಡದ ಮಾತು.

ರಾಬರ್ಟ್ ಚಿತ್ರದಲ್ಲಿ ದರ್ಶನ್ ಹಿಂದೂನಾ? ಕ್ರಿಶ್ಚಿಯನ್ನಾ?

ನಾಯಕಿ ವಿಚಾರಕ್ಕೆ ಚಿತ್ರತಂಡ ಈ ತನಕ ತಲೆಕೆಡಿಸಿಕೊಂಡಿಲ್ಲ ಅಂತಲ್ಲ. ಕನ್ನಡದಲ್ಲೇ ಇರುವ ಕೆಲವು ಜನಪ್ರಿಯ ನಟಿಯರ ಜತೆಗೆ ಪರಭಾಷೆ ನಟಿಯರ ಕಡೆಗೂ ಚಿತ್ರ ತಂಡ ಒಂದು ಕಣ್ಣಿಟ್ಟಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ನಟಿ ತಾನ್ಯಾ ಹೋಪ್‌ ಫೈನಲ್‌ ಆಗುವ ಸಾಧ್ಯತೆಗಳು ಇವೆ. ಈಗಾಗಲೇ ಮಾಡೆಲಿಂಗ್‌ ಬೆಡಗಿ ತಾನ್ಯಾ ಹೋಪ್‌, ದರ್ಶನ್‌ ಅಭಿನಯದ ‘ಯಜಮಾನ’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇಬ್ಬರ ಜೋಡಿ ಚೆನ್ನಾಗಿದೆ ಎನ್ನುವ ಮಾತುಗಳ ನಡುವೆ ‘ರಾಬರ್ಟ್‌’ಗೆ ಅವರನ್ನೇ ಯಾಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಾರದು ಎನ್ನುವ ಆಲೋಚನೆ ಚಿತ್ರತಂಡಕ್ಕೂ ಇದೆಯಂತೆ. ಆದರೆ ಇನ್ನೂ ಫೈನಲ್‌ ಆಗಿಲ್ಲ.