ಶೈಲಜಾ ನಾಗ್ ಹೇಳಿದ್ದು

ನಾವು ಒಟ್ಟು 40 ಮಂದಿ ಎರಡು ಹಾಡಿನ ಚಿತ್ರೀಕರಣಕ್ಕೆ ಸ್ವೀಡನ್‌ಗೆ ಹೋಗಿದ್ವಿ. ಎರಡು ಹಾಡುಗಳ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಬೇರೆ ಬೇರೆ ಜಾಗಗಳಲ್ಲಿ ಶೂಟಿಂಗ್ ಮಾಡುವ ಯೋಜನೆ ನಮ್ಮದು. ಅಂಬರೀಷ್ ಅವರ ನಿಧನ ವಾರ್ತೆ ನಮಗೆ ಸಿಕ್ಕಾಗ ನಾವು ಡೆನ್‌ಮಾರ್ಕ್‌ನ  ಕೋಪನ್ ಹೇಗನ್ ಎನ್ನುವ ಏರ್‌ಪೋರ್ಟಿನಿಂದ ಕೆಲವು ಕಿಲೋಮೀಟಗಳ ದೂರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ವಿ. ಡ್ಯಾನ್ಸ್, ತಂತ್ರಜ್ಞರು ಸೇರಿ ಒಟ್ಟು 40 ಮಂದಿ ಇದ್ವಿ. ಮೈ ಕೊರೆಯುವ ಚಳಿ. ಆಗ ನಮಗೆ ಬರಸಿಡಿಲಿನಂತೆ ಬಂದು ಅಪ್ಪಳಿಸಿದ್ದು ಅಂಬರೀಷ್ ಅವರ ನಿಧನದ ಸುದ್ದಿ.

ಈ ಸುದ್ದಿ ಬರುವ ಹೊತ್ತಿಗೆ ಅಲ್ಲಿ ಸಂಜೆ ಆಗಿತ್ತು. ‘ಅಮ್ಮ... ಅಪ್ಪಾಜಿ ಹೋಗಿಬಿಟ್ರಂತೆ’ ಎಂದು ದರ್ಶನ್ ಗದ್ಗದಿತರಾಗಿ ಹೇಳಿದಾಗ ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ವಿಷಯ ಗೊತ್ತಾದ ಕೂಡಲೇ ದರ್ಶನ್ ಅವರು ಎಷ್ಟು ಒದ್ದಾಡಿದರೆಂದರೆ ಅವರನ್ನು ಸಮಾಧಾನ ಮಾಡುವುದು ಹೇಗೆ ಎನ್ನುವುದೇ ನಮಗೆ ತಿಳಿಯಲಿಲ್ಲ. ಯಾಕೆಂದರೆ ಅಂಬರೀಷ್ ಹಾಗೂ ದರ್ಶನ್ ಅವರ ಬಾಂಧವ್ಯ ಅಂಥದ್ದು. ನನ್ನ ಸಮಾಧಾನದ ಮಾತುಗಳ ನಡುವೆ ದರ್ಶನ್ ಅವರು ಸುಮಲತಾ ಅಭಿಷೇಕ್ ಅವರಿಗೆ ಪದೇ ಪದೇ ಫೋನ್ ಮಾಡಿ ಮಾತನಾಡುತ್ತಲೇ ಇದ್ದರು. ನಡುವೆ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೂಡಲೇ ಸುಮಲತಾ ಜೊತೆಗೆ ಇರುವಂತೆ ಸೂಚಿಸುತ್ತಿದ್ದರು.

ದರ್ಶನ್ ಅವರ ಈ ಒದ್ದಾಟಗಳ ನಡುವೆ ಹೇಗಪ್ಪ ಅವರನ್ನು ಇಲ್ಲಿಂದ ಕಳುಹಿಸಿಕೊಡುವುದು ಎನ್ನುವ ಯೋಚನೆ ನನ್ನದು.ಏಕೆಂದರೆ ಕೂಡಲೇ ಟಿಕೆಟ್ ಸಿಗುವುದು ಕಷ್ಟವಾಗಿತ್ತು. ಬಿ.ಸುರೇಶ್ ಅವರೆಲ್ಲ ಫ್ಲೈಟ್ ಟಿಕೆಟ್ ವ್ಯವಸ್ಥೆಗೆ ಒದ್ದಾಡುತ್ತಿದ್ದರೆ, ನಾನು ದರ್ಶನ್ ಅವರನ್ನು ಸಮಾಧಾನ ಮಾಡುತ್ತಿದ್ದೆ. ಟಿಕೆಟ್ ಸಿಗೋದೇ ಇಲ್ಲ ಎಂದಾಗ ನಾವು ಚಿತ್ರೀಕರಣ ಮಾಡುತ್ತಿದ್ದ ಜಾಗದಿಂದ ಸ್ವೀಡನ್‌ಗೆ ಬಂದು ಅಲ್ಲಿಂದ ದುಬೈಗೆ ಟಿಕೆಟ್ ಬುಕ್ ಮಾಡಿ, ದುಬೈನಿಂದ ಬೆಂಗಳೂರಿಗೆ ಬರುವ ಫ್ಲೈಟ್ ಟಿಕೆಟ್ ಮಾಡಿಸಿದ್ದಾಯಿತ್ತು. 4 ಲಕ್ಷ ವೆಚ್ಚ ಮಾಡಿದ್ದಕ್ಕೆ ದರ್ಶನ್ ಅವರಿಗೆ ಟಿಕೆಟ್ ಸಿಕ್ಕಿತ್ತು. ನಮಗೆ ದುಡ್ಡು ಮುಖ್ಯವಾಗಿರಲಿಲ್ಲ. ನಾವೆಲ್ಲ ಇವತ್ತು ಬೆಳಗ್ಗೆ (ನ.28) ಬಂದ್ವಿ.

ಜನವರಿಯಲ್ಲಿ ಯಜಮಾನ

ಸದ್ಯ ಸ್ವೀಡನ್‌ನಲ್ಲಿ ಒಂದು ಹಾಡಿನ ಚಿತ್ರೀಕರಣ ಮುಗಿಸಿದ್ದೇವೆ. ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಈ ಹಾಡಿಗಾಗಿ ನಾವು ಮೆತ್ತೆ ಸ್ವೀಡನ್‌ಗೆ ಹೋಗಲ್ಲ. ಆದರೆ, ಬೆಂಗಳೂರಿನಲ್ಲೇ ಹಾಡಿನ ಚಿತ್ರೀಕರಣ ಮಾಡಲಿದ್ದೇವೆ. 5 ರಿಂದ 6 ದಿನ ಹಾಡಿನ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದ್ದೇವೆ. ಅಲ್ಲಿಗೆ ಒಂದು ಹಾಡಿನ ಶೂಟಿಂಗ್ ಮುಗಿದರೆ ‘ಯಜಮಾನ’ ಚಿತ್ರೀಕರಣ ಮುಕ್ತಾಯವಾಗಲಿದೆ. ಇಲ್ಲೀವರೆಗೂ ಒಟ್ಟು 100 ದಿನ ಚಿತ್ರೀಕರಣ ಮಾಡಲಾಗಿದೆ. 6 ಫೈಟ್‌ಗಳು, 5 ಹಾಡುಗಳಿವೆ. ದೊಡ್ಡ ತಾರಾ ಬಳಗ ಇರುವ ಸಿನಿಮಾ. ಈ ಕಾರಣಕ್ಕೆ ಚಿತ್ರೀಕರಣಕ್ಕೆ ಹೆಚ್ಚು ದಿನ ತೆಗೆದುಕೊಂಡಿದ್ದೇವೆ. ಇದು ‘ಯಜಮಾನ’ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್. ಅವರ ವಿವರಣೆಗಳು. ಇನ್ನೊಂದು ವಾರದಲ್ಲಿ ‘ಯಜಮಾನ’ ಹಾಡಿನ ಚಿತ್ರೀಕರಣ ನಡೆಯುವ ಸಾಥ್ಯತಳಿದ್ದು, ಎಲ್ಲವೂ ಅಂದುಕೊಂಡತ್ತೆ ಆದರೆ ಜನವರಿ ತಿಂಗಳಲ್ಲಿ ಬಹು ಕೋಟಿ ವೆಚ್ಚ ಹಾಗೂ ಬಹು ತಾರಾಗಣದ ‘ಯಜಮಾನ’ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದ್ದಾನೆ.