ಈಗ ಬಂದಿರುವ ಮಾಹಿತಿಯಂತೆ ಈ ಇಬ್ಬರನ್ನೂ ಜತೆಯಾಗಿಸಿ ಸಿನಿಮಾ ಮಾಡುವುದಕ್ಕೆ ಹೊರಟಿರುವುದು ನಿರ್ದೇಶಕ ಅರಸು ಮಹೇಶ್ ಬಾಬು. ಕನ್ನಡದ ಯಶಸ್ವಿ ನಿರ್ದೇಶಕರಲ್ಲೊಬ್ಬರಾದ ಮಹೇಶ್ ಬಾಬು ಇಂಥದ್ದೊಂದು ಸೆನ್ಸೇಷನಲ್ ಕಾಂಬಿನೇಷನ್‌ಗೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಮತ್ತೊಂದು ವಿಶೇಷ ಅಂದರೆ ಈ ಚಿತ್ರಕ್ಕೆ ಹಾಗೂ ಈ ಕಾಂಬಿನೇಷನ್‌ಗೆ ಮೊದಲು ಗ್ರೀನ್ ಸಿಗ್ನಲ್ ಸಿಕ್ಕಿರುವುದೇ ದರ್ಶನ್ ಅವರಿಂದ. ಮಹೇಶ್ ಬಾಬು ಅವರ ನಿರ್ದೇಶನದ ಮೇಲೆ ಶಿವಣ್ಣ ಅವರಿಗೆ ಬಲವಾದ ನಂಬಿಕೆ ಇದೆ. ಇಂಥದ್ದೊಂದು ಪ್ರಾಜೆಕ್ಟ್ ಬಗ್ಗೆ ಹೇಳಿದರೆ ಶಿವಣ್ಣ ಯಾವ ಕಾರಣಕ್ಕೂ ಇಲ್ಲ ಅನ್ನಲ್ಲ. ಆ ಮಟ್ಟಿಗೆ ನಿರ್ದೇಶಕರ ಮೇಲೆ ಅವರಿಗೆ ಭರವಸೆ. ಆದರೆ, ಈ ಇಬ್ಬರಿಗೂ ಸೂಕ್ತವಾದ ಕತೆ ಬೇಕಿದೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ಇಬ್ಬರ ಪಾತ್ರಗಳ ಬಗ್ಗೆಯೂ ಸ್ಪಷ್ಟವಾಗಿ ತಿಳಿದಿರಬೇಕಿದೆ. ಇಬ್ಬರಿಗೂ ಮಹತ್ವ ಇರುವ, ಇಬ್ಬರಲ್ಲಿ ಯಾರ ಇಮೇಜ್ ಅನ್ನೂ ಕಡಿಮೆಯಾಗದಂತಹ ಚಿತ್ರಕತೆ ಬೇಕಿದೆ. ಸ್ವಮೇಕ್ ಕತೆ ಆದರೆ ಕತೆ, ಚಿತ್ರಕತೆ, ಸಂಭಾಷಣೆ ಜತೆಗೆ ಬೌಂಡೆಡ್ ಸ್ಕ್ರಿಪ್ಟ್ ಬೇಕು, ಒಂದು ವೇಳೆ ಇಬ್ಬರಿಗೂ ಸೂಕ್ತವಾಗದ ಕತೆ ಸಿಗದೆ ಹೋದರೆ ರೀಮೇಕ್ ಕತೆ ಮಾಡುವುದಕ್ಕೂ ಸಿದ್ಧ ಇಲ್ಲಿ ಯಾರ ಪಾತ್ರ ಹೇಗಿರುತ್ತದೆಂಬ ಕ್ಲ್ಯಾರಿಟಿ ಕೂಡ ಇರುತ್ತದೆ. ಇವಿಷ್ಟು ಇಬ್ಬರೂ ನಟರಿಂದ ನಿರ್ದೇಶಕರಿಗೆ ಬಂದಿರುವ ಸೂಚನೆಗಳು ಎನ್ನಲಾಗುತ್ತಿದೆ. ಅಲ್ಲಿಗೆ ಇಬ್ಬರಿಗೂ ಜತೆಯಾಗಿ ಸಿನಿಮಾ ಮಾಡುವ ಆಸೆ ಮತ್ತು ಆಸಕ್ತಿ ಇದೆ. ಒಂದು ಕತೆ ತಮ್ಮನ್ನು ಜತೆಯಾಗಿ ಬಯಸಿದರೆ ಅಂಥ ಸಿನಿಮಾ ಮಾಡಕ್ಕೆ ಹಿಂದೆ ಮುಂದೆ ನೋಡಲ್ಲ ಎಂಬುದನ್ನು ಹೇಳಿದ್ದು, ‘ಒಳ್ಳೆಯ ಕತೆ ಇದ್ದರೆ ತನ್ನಿ ಮಾಡೋಣ ನಿರ್ದೇಶಕರೇ’ ಎಂದು ದರ್ಶನ್ ಅವರೇ ಹೇಳಿದ್ದಾರೆ ಎನ್ನಲಾಗಿದೆ.

ಈ ಕ್ರೇಜಿ ಕಾಂಬಿನೇಷನ್‌ಗೆ ನಿರ್ಮಾಪಕರು ಕೂಡ ರೆಡಿಯಾಗಿದ್ದಾರೆ. ದೊಡ್ಡ ಮಟ್ಟದಲ್ಲೇ ಚಿತ್ರವನ್ನು ನಿರ್ಮಾಣ ಮಾಡುವ ಯೋಚನೆ ಅವರದ್ದು. ಯಾರು ಈ ನಿರ್ಮಾಪಕರು ಎಂಬುದು ಸಿನಿಮಾ ಸೆಟ್ಟೇರಿದ ಮೇಲೆ ಗೊತ್ತಾಗಲಿದೆ. ಆದರೆ, ಈ ಇಬ್ಬರಿಗೂ ಸೂಕ್ತವಾದ ಕತೆ ಹುಡುಕುವುದೇ ನಿರ್ದೇಶಕರಿಗೆ ದೊಡ್ಡ ಸವಾಲು. ಕಳೆದ ಒಂದು ತಿಂಗಳಿನಿಂದ ಕತೆ ತಲಾಶ್‌ನಲ್ಲಿದ್ದಾರೆಂಬುದು ಈಗಿರುವ ಮಾಹಿತಿ. ಹೀಗಾಗಿ ಇದರ ನಡುವೆ ಹೊಸರ ಚಿತ್ರವೊಂದರಲ್ಲಿ ತೊಡಗಿಸಿಕೊಂಡಿರುವ ಮಹೇಶ್ ಬಾಬು ಅವರು, ಯಾವಾಗ ಬೇಕಾದರೂ ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ಚಿತ್ರವನ್ನು ಆರಂಭಿಸಬಹುದು.