ಲಕ್ನೋ (ಜ. 12):  ಪ್ರತಿ ಸಲ ಉತ್ತರ ಭಾರತವನ್ನು ಕಂಗೆಡಿಸುತ್ತಿದ್ದ ಚಳಿ ಈ ಬಾರಿ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ಬಹುತೇಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಳಿ ಅಬ್ಬರ ಜೋರಾಗಿದೆ.

ಕೇರಳದ ಪ್ರಸಿದ್ಧ ಪ್ರವಾಸಿ ತಾಣ ಮುನ್ನಾರ್‌ನಲ್ಲಿ ತಾಪಮಾನ -3 ಡಿಗ್ರಿ ಸೆಲ್ಷಿಯಸ್‌ ಮುಟ್ಟಿದೆ. ಕರ್ನಾಟಕದ ಮಲೆನಾಡು ಹಾಗೂ ಬಯಲು ಪ್ರದೇಶದಲ್ಲೂ ತಾಪಮಾನ ಒಂದಂಕಿ ತಲುಪಿದೆ. ಈ ವಿದ್ಯಮಾನಕ್ಕೆ ಏನು ಕಾರಣ? ದಕ್ಷಿಣ ಭಾರತ ಇದೇ ಮೊದಲ ಬಾರಿ ಇಷ್ಟೊಂದು ಚಳಿಯಿಂದ ನಡುಗುತ್ತಿರುವುದೇಕೆ ಎಂಬ ಕುತೂಹಲಕರ ಮಾಹಿತಿಗಳು ಇಲ್ಲಿವೆ.

ಈ ಬಾರಿ ಚಳಿಗಾಲ ಜನವರಿಗೆ ಶಿಫ್ಟ್‌!

ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಳಿಗಾಲ ಸಾಮಾನ್ಯವಾಗಿ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಚುರುಕುಕೊಂಡು ಬಳಿಕ ಜನವರಿಯಲ್ಲಿ ಕ್ಷೀಣಿಸಲು ಆರಂಭವಾಗುತ್ತದೆ. ಆದರೆ, ಈ ಬಾರಿ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಅಷ್ಟೇನೂ ಪ್ರಭಾವ ತೋರದ ಚಳಿಯ ಮಾರುತ ಹೊಸ ವರ್ಷದ ಆರಂಭದಿಂದ ಅಬ್ಬರಿಸಲು ಶುರುಮಾಡಿದೆ.

ಪ್ರವಾಸಿಗರ ಸ್ವರ್ಗ ಮುನ್ನಾರ್‌ ಹಾಗೂ ಟೀ ಎಸ್ಟೇಟ್‌ಗಳಲ್ಲಿ ಸಹಜವಾಗಿಯೇ ಉಷ್ಣಾಂಶ ಕಡಿಮೆ ಇರುತ್ತದೆಯಾದರೂ ಶೂನ್ಯಕ್ಕಿಂತ ಕೆಳಗೆ ಇಳಿದಿದ್ದು ತೀರಾ ಅಪರೂಪ. ಆದರೆ, ಮುನ್ನಾರ್‌ನಲ್ಲಿ ಈ ಋುತುವಿನಲ್ಲಿ ತಾಪಮಾನ -3 ಡಿಗ್ರಿಗೆ ಕುಸಿದಿದೆ. ಮುಂಜಾವಿನ ವೇಳೆಯಲ್ಲಿ ತಾಪಮಾನ ಏಕಾಏಕಿ ಕುಸಿತ ಕಾಣುತ್ತಿದೆ. ಹೀಗಾಗಿ ಮುನ್ನಾರಿಗೆ ಬರುವ ಪ್ರವಾಸಿಗರಿಗೆ ಹಿಮಪಾತದ ಅನುಭವ ಆಗುತ್ತಿದೆ. ಇನ್ನು ಕರ್ನಾಟಕದಲ್ಲೂ ಚಳಿಯ ಅಬ್ಬರ ಜೋರಾಗಿದೆ.

ದಕ್ಷಿಣ ಭಾರತಕ್ಕಿದು ಹೊಸತು

ಉತ್ತರ ಭಾರತದ ರಾಜ್ಯಗಳಲ್ಲಿ ಈ ರೀತಿಯ ತಾಪಮಾನ ಇಳಿಕೆ ಸಾಮಾನ್ಯವಾಗಿರುತ್ತದೆ. ಆದರೆ ದಕ್ಷಿಣ ಭಾರತಕ್ಕೆ ಹೊಸತು. ಇದಕ್ಕೆ ಕಾರಣ ದಕ್ಷಿಣ ಭಾರತದ ಭೂ ವಿನ್ಯಾಸ. ದಕ್ಷಿಣ ಭಾರತದ ಭೂಪ್ರದೇಶ ಭೂಮಧ್ಯ ರೇಖೆಗೆ ಸಮೀಪವಾಗಿರುವುದರಿಂದ ಸದಾಕಾಲ ಬಿಸಿಲಿನ ವಾತಾವರಣ ಇರುತ್ತದೆ.

ಪಶ್ವಿಮ ಘಟ್ಟ, ಊಟಿ, ಕೊಡೈಕೆನಾಲ್‌, ಮಲೆನಾಡು ಹಾಗೂ ಗುಡ್ಡ ಪ್ರದೇಶಗಳು ತಾಪಮಾನವನ್ನು ತಕ್ಕ ಮಟ್ಟಿಗೆ ತಣ್ಣಗೆ ಇಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಅದೇ ಉತ್ತರ ಭಾರತದಲ್ಲಿ ಜಮ್ಮು ಕಾಶ್ಮೀರದಿಂದ ಆರಂಭಗೊಂಡು ಅರುಣಾಚಲ ಪ್ರದೇಶದವರೆಗೆ ಹಿಮಾಲಯ ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ಪ್ರತಿ ವರ್ಷ ಉತ್ತರ ಭಾರತದಿಂದ ಬೀಸುವ ಚಳಿಗಾಳಿ ದಕ್ಷಿಣದ ರಾಜ್ಯಗಳಲ್ಲೂ ಚಳಿಯನ್ನುಂಟು ಮಾಡುತ್ತದೆ.

ಈಗ ಮೈ ನಡುಗುವ ಚಳಿಗೆ ಏನು ಕಾರಣ?

ಧ್ರುವ ಪ್ರದೇಶಗಳಲ್ಲಿ ಗಾಳಿ ದುರ್ಬಲಗೊಂಡಿದ್ದು, ಭಾರತದ ಮೇಲೆ ಸಾಕಷ್ಟುಪರಿಣಾಮ ಬೀರುತ್ತಿದೆ. ವಾಯವ್ಯ ದಿಕ್ಕಿನಲ್ಲಿ ಉಂಟಾಗುವ ಪಾಶ್ಚಾತ್ಯ ಹವಾಮಾನ ವೈಪರೀತ್ಯ ಭಾರತದೆಡೆಗೆ ಬೀಸುತ್ತಿರುವುದು ತಾಪಮಾನದ ಇಳಿಕೆಗೆ ಕಾರಣವಾಗಿದೆ ಎಂದು ವಾಯುಮಂಡಲ ವಿಜ್ಞಾನದ ಪ್ರೊಫೆಸರ್‌ ಅಭಿಲಾಷ್‌ ಅಭಿಪ್ರಾಯಪಟ್ಟಿದ್ದಾರೆ.

ಜನವರಿಯಲ್ಲಿ ವಾತಾವರಣ ಹೇಗಿರುತ್ತದೆ?

ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಪ್ರಸ್ಥಭೂಮಿಯಲ್ಲಿ ವಾಯುಭಾರ ಒತ್ತಡ ಅಧಿಕವಾಗಿರುತ್ತದೆ. ಈ ಅವಧಿಯಲ್ಲಿ ಈಶಾನ್ಯ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಕಾರಣ ಜನವರಿ ವೇಳೆಗೆ ವಾತಾವರಣದಲ್ಲಿ ತೇವಾಂಶವೂ ಇರುವುದಿಲ್ಲ.

ವಾತಾವರಣದಲ್ಲಿ ತೇವಾಂಶ, ಆದ್ರ್ರತೆ ಮತ್ತು ಮೋಡಗಳು ಇಲ್ಲದೇ ಇರುವ ಕಾರಣ ಬಿಸಿಯ ಹವೆ ವಾತಾವರಣದಲ್ಲಿ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವುದಿಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಒಣ ಹವೆ ನೆಲೆಸಲಿದ್ದು, ಅಷ್ಟೇನೂ ಚಳಿ ಇರುವುದಿಲ್ಲ. ಆದರೆ ಹವಾಮಾನ ವೈಪರೀತ್ಯದಿಂದ ಈ ಬಾರಿ ಪರಿಸ್ಥಿತಿ ಬದಲಾಗಿದೆ.

ಕೇರಳದಲ್ಲಿ ಹಿಮಪಾತದ ಅನುಭವ ಆಗುತ್ತಿರೋದೇಕೆ?

ಕಳೆದ ಮುಂಗಾರು ಋುತುವಿನ (ಜುಲೈ-ಆಗಸ್ಟ್‌) ಅವಧಿಯಲ್ಲಿ ಕೇರಳ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಇದು ಹವಾಮಾನ ಬದಲಾವಣೆಯ ಮೇಲೆ ಪರಿಣಾಮ ಬೀರಿದ್ದು, ವಿಪರೀತ ಚಳಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನವೆಂಬರ್‌, ಡಿಸೆಂಬರ್‌ನಲ್ಲಿ ಕಂಡುಬರುತ್ತಿದ್ದ ಚಳಿ ಇದೀಗ ಜನವರಿಗೆ ಮುಂದೂಡಿಕೆಯಾಗಿದೆ. ಡಿಸೆಂಬರ್‌ ಆರಂಭದಲ್ಲಿ ಮುನ್ನಾರ್‌ನಲ್ಲಿ ತಾಪಮಾನ ಕೆಲವೊಮ್ಮೆ ಶೂನ್ಯಕ್ಕಿಂತ ಕೆಳಗಿಳಿಯುತ್ತಿತ್ತು. ಆದರೆ, ಜನವರಿಯ ವೇಳೆಗೆ ಬೆಚ್ಚನೆಯ ವಾತಾವರಣ ನೆಲೆಸುತ್ತಿತ್ತು.

ಪ್ರವಾಸಿ ತಾಣ ಮುನ್ನಾರ್‌ ಹಾಗೂ ಟೀ ಎಸ್ಟೇಟ್‌ಗಳು ಚಳಿಯಿಂದ ಅತಿ ಹೆಚ್ಚು ಬಾಧಿತವಾಗಿದ್ದು, ತಾಪಮಾನ ಶೂನ್ಯಕ್ಕಿಂತಲೂ ಕೆಳಗಿಳಿದಿದೆ. ಕೆಲವೆಡೆ ಹಿಮಪಾತದ ಅನುಭವ ಆಗುತ್ತಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮುನ್ನಾರ್‌ನಲ್ಲಿ ತಾಪಮಾನ 7 ಡಿಗ್ರಿ ಸೆಲ್ಷಿಯಸ್‌ನ ಸಮೀಪದಲ್ಲಿತ್ತು. ಆದರೆ, ಈ ಬಾರಿ ತಾಪಮಾನ -3 ಡಿಗ್ರಿ ಸೆಲ್ಷಿಯಸ್‌ಗೆ ಕುಸಿದಿದೆ.

ಅದೇ ರೀತಿ ಊಟಿ, ಕೊಡೈಕೆನಾಲ್‌ಗಳಲ್ಲೂ ತಾಪಮಾನ 5 ಡಿಗ್ರಿಯಷ್ಟಿದೆ. ಕೇರಳದಲ್ಲಿ ಈ ಋುತುವಿನಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನ ಕಳೆದ 3 ದಶಕಗಳಲ್ಲೇ ಕನಿಷ್ಠ ಎನಿಸಿಕೊಂಡಿದೆ. ಹೀಗೆ ಏಕಾಏಕಿ ತಾಪಮಾನ ಕುಸಿತ ಕಾಣಲು ಜಾಗತಿಕ ತಾಪಮಾನ ಏರಿಕೆಯೂ ಒಂದು ಕಾರಣ ಇದ್ದಿರಬಹುದು. ಒಂದು ವೇಳೆ ಅನಿರೀಕ್ಷಿತ ವಾತಾವರಣ ಮುಂದುವರಿದರೆ ಬೇಸಿಗೆಯಲ್ಲಿ ಅತಿಯಾದ ಬಿಸಿಲನ್ನೂ ಎದುರಿಸಬೇಕಾಗಿ ಬರಬಹುದು ಎಂದು ಕೇರಳದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲೂ ಚಳಿಗೆ ಜನರು ಗಡಗಡ!

ಕೇವಲ ಕೇರಳ ಅಷ್ಟೇ ಅಲ್ಲ ಕರ್ನಾಟಕದಲ್ಲೂ ಚಳಿ ಜೋರಾಗಿ ಅಬ್ಬರಿಸುತ್ತಿದೆ. ಉತ್ತರ ಕರ್ನಾಟಕದ ಬೀದರ್‌ನಲ್ಲಿ ಜ.1ರಂದು 6 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದೆ. ಇದು ಜನವರಿ ತಿಂಗಳಿನಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 1967ರ ಜ.6ರಂದು 6.2 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದ್ದು ಜನವರಿಯಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನ ಎನಿಸಿಕೊಂಡಿತ್ತು.

ಇನ್ನು ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿ ಭಾಗದ ಕಲಬುರಗಿ ಮುಂತಾದ ಜಿಲ್ಲೆಗಳಲ್ಲೂ 10 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗುತ್ತಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲೂ ತಾಪಮಾನ ಗಣನೀಯ ಇಳಿಕೆ ಕಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜ.4ರಂದು 5.8 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿತ್ತು.

ಮಂಜುಕವಿದ ವಾತಾವರಣದಿಂದಾಗಿ ಮುಂಜಾನೆಯ ವೇಳೆ ವಿಮಾನ ಹಾರಾಟಕ್ಕೆ ಅಡ್ಡಿ ಉಂಟಾಗುತ್ತಿದೆ. ಇನ್ನು ಮಡಿಕೇರಿಯಲ್ಲಿ ಅತಿ ಕಡಿಮೆ 7.5 ಡಿಗ್ರಿ, ಹಾಸನದಲ್ಲಿ 8.6 ಹಾಗೂ ಮೈಸೂರಿನಲ್ಲಿ 9.3 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದ್ದು, ಜನರು ಬೆಚ್ಚನೆಯ ಹೊದಿಕೆಯ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ದಶಕದ ಚಳಿ

ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಚಳಿಯ ವಾತಾವರಣ ನೆಲೆಸಿದ್ದು, ರಾಜಧಾನಿಯನ್ನು ತಂಪಾಗಿಸಿದೆ. ಬೆಂಗಳೂರಿನಲ್ಲಿ ಕಳೆದ ವಾರ ಕನಿಷ್ಠ ತಾಪಮಾನ 11.1 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದ್ದು, ಕಳೆದ 10 ವರ್ಷದಲ್ಲೇ ಕನಿಷ್ಠ ಎನಿಸಿಕೊಂಡಿದೆ. 2012ರಲ್ಲಿ ಬೆಂಗಳೂರಿನ ತಾಪಮಾನ 12 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿದ್ದು, ದಶಕದಲ್ಲೇ ಕನಿಷ್ಠ ಎನಿಸಿಕೊಂಡಿತ್ತು.

ಸಂಕ್ರಾಂತಿವರೆಗೂ ಚಳಿ ಮುಂದುವರಿಕೆ

ಉತ್ತರ ಭಾಗದಿಂದ ಶೀತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಕಾಲ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶೀತಗಾಳಿಯ ಪರಿಣಾಮವಾಗಿ ತಾಪಮಾನ ವಾಡಿಕೆಗಿಂತ 3ರಿಂದ 6 ಡಿಗ್ರಿ ಸೆಲ್ಷಿಯಸ್‌ನಷ್ಟುಇಳಿಕೆಯಾಗಿದ್ದು, ಸಂಕ್ರಾಂತಿ ಹಬ್ಬದವರೆಗೂ ಇದೇ ರೀತಿಯ ವಾತಾವರಣ ಇರಲಿದೆ.

ಚಳಿಯಿಂದ ಪಾರಾಗೋದು ಹೇಗೆ?

ಚಳಿಗಾಲದ ವೇಳೆ ನಮ್ಮನ್ನು ಅನಾರೋಗ್ಯದಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅತಿಯಾದ ಚಳಿ ಕೆಲವೊಮ್ಮೆ ಹೃದಯಾಘಾತ, ಅಸ್ತಮಾ, ಹೈಪೋಥರ್ಮಿಯಾ, ಶ್ವಾಸಕೋಶದ ಸೋಂಕಿನಂತಹ ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಹೀಗಾಗಿ ಚಳಿಗಾಲದ ವೇಳೆ ವ್ಯಾಯಾಮ, ಲಘು ಆಹಾರ ಸೇವನೆ ರೂಢಿಸಿಕೊಳ್ಳಿ. ಕೊಬ್ಬಿನ ಪದಾರ್ಥ, ಮದ್ಯ ಹಾಗೂ ಧೂಮಪಾನ ಸೇವನೆಯಿಂದ ದೂರವಿದ್ದಷ್ಟುಒಳಿತು. ವಾತಾವರಣದಲ್ಲಿ ತೇವಾಂಶ ಕಡಿಮೆ ಇರುವ ಕಾರಣ ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು ದೇಹಕ್ಕೆ ಉತ್ತಮ.

- ಜೀವರಾಜ್ ಭಟ್