ರಾಜರಥ ವಿವಾದ: ಚಿತ್ರತಂಡದಿಂದ ನಯಾಪೈಸೆ ತಗೊಂಡಿಲ್ಲ ಎಂದ ರ‍್ಯಾಪಿಡ್ ರಶ್ಮಿ

Rapid Rashmi Clarification to Rajaratha Controversy
Highlights

ರ‌್ಯಾಪಿಡ್ ರಶ್ಮಿ ಶೋದಲ್ಲಿ  ರಾಜರಥ ಚಿತ್ರದ ನಿರ್ದೇಶಕ, ನಾಯಕ, ನಾಯಕಿ ಭಾಗವಹಿಸಿದ್ದಾಗಿನ ವೀಡಿಯೋ ತುಣುಕೊಂದು  ಇತ್ತೀಚೆಗೆ ವಿವಾದ ಉಂಟು ಮಾಡಿತ್ತು. ಆ ವಿವಾದದಿಂದಾಗಿ ವಾಣಿಜ್ಯ ಮಂಡಳಿಯಲ್ಲಿ ಮಂಗಳವಾರ ಅನೂಪ  ಭಂಡಾರಿ ಮತ್ತು ನಿರೂಪ್ ಭಂಡಾರಿ ಸಹೋದರರು ಕ್ಷಮೆಯಾಚಿಸಿದ್ದರು. ಬುಧವಾರ ರ‌್ಯಾಪಿಡ್ ರಶ್ಮಿ ಕ್ಷಮೆಯಾಚಿಸಿದ್ದಾರೆ. 

ಬೆಂಗಳೂರು (ಏ. 06): ರ‌್ಯಾಪಿಡ್ ರಶ್ಮಿ ಶೋದಲ್ಲಿ  ರಾಜರಥ ಚಿತ್ರದ ನಿರ್ದೇಶಕ, ನಾಯಕ, ನಾಯಕಿ ಭಾಗವಹಿಸಿದ್ದಾಗಿನ ವೀಡಿಯೋ ತುಣುಕೊಂದು  ಇತ್ತೀಚೆಗೆ ವಿವಾದ ಉಂಟು ಮಾಡಿತ್ತು. ಆ ವಿವಾದದಿಂದಾಗಿ ವಾಣಿಜ್ಯ ಮಂಡಳಿಯಲ್ಲಿ ಮಂಗಳವಾರ ಅನೂಪ  ಭಂಡಾರಿ ಮತ್ತು ನಿರೂಪ್ ಭಂಡಾರಿ ಸಹೋದರರು ಕ್ಷಮೆಯಾಚಿಸಿದ್ದರು. ಬುಧವಾರ ರ‌್ಯಾಪಿಡ್ ರಶ್ಮಿ ಕ್ಷಮೆಯಾಚಿಸಿದ್ದಾರೆ. 

1. ‘ರಾಜರಥ’ ಚಿತ್ರತಂಡದ ಪ್ರಮೋಷನ್ ವೀಡಿಯೋದಿಂದ ವಿವಾದ  ಸೃಷ್ಟಿಯಾಗಿದೆ. ದುಡ್ಡು ತಗೊಂಡು ಚಿತ್ರತಂಡದ ಮರ್ಯಾದೆ ಕಳೆದ್ರಿ ಅನ್ನೋ ಮಾತು ಕೇಳಿ ಬಂತು. ಎಷ್ಟು ದುಡ್ಡು ತಗೊಂಡಿದ್ರಿ?

‘ರಾಜರಥ’ ಚಿತ್ರತಂಡದಿಂದ ಒಂದೇ ಒಂದು ಪೈಸೆ ದುಡ್ಡು  ತಗೊಂಡಿಲ್ಲ. ಯಾರಾದರೂ ನಾನು ಆ ತಂಡದಿಂದ ನಾನು ದುಡ್ಡು ತೆಗೆದುಕೊಂಡಿದ್ದೇನೆ ಅಂತ ಪ್ರೂವ್ ಮಾಡಿದರೆ ನಾಳೆಯಿಂದ ಮಾತನಾಡುವುದನ್ನೇ ಬಿಟ್ಟು ಬಿಡುತ್ತೇನೆ.

2.  ಮತ್ತೆ ಯಾಕೆ ಈ ಮಾತು ಕೇಳಿ ಬರುತ್ತಿದೆ?
ನನಗೆ ಗೊತ್ತಿಲ್ಲ. ಕೆಲವರು ನಿನ್ನೆ ಪ್ರೆಸ್‌ಮೀಟಲ್ಲಿ ಲಕ್ಷ ರೂಪಾಯಿ ತಗೋತಾರೆ ಅಂತೆಲ್ಲಾ ಹೇಳಿದ್ದಾರಂತೆ. ಅವರು ಪ್ರೂಫ್ ತಗೊಂಡ್ ಬರ್ಲಿ. ಯಾಕೆ ಈ ಥರದ್ದೆಲ್ಲಾ ಸುಳ್ಳುಗಳನ್ನು ಹಬ್ಬಿಸುತ್ತಾರೆ. ನನ್ನ  ಕಾರ್ಯಕ್ರಮದ ವಿರುದ್ಧ ಮಾತನಾಡೋಕೆ ಅವರಿಗೆ ಏನ್ ಹಕ್ಕಿದೆ? ಅವರು ನನ್ನ ಟೀಂಗೆ ಸಂಬಳ ಕೊಡುತ್ತಾರಾ ಅಥವಾ ಶೂಟಿಂಗ್  ಮಾಡುವುದಕ್ಕೆ ನನಗೆ ಕ್ಯಾಮೆರಾ ಕೊಡುತ್ತಾರಾ? ಇಲ್ವಲ್ಲ. ಅನೇಕರು ಇಷ್ಟು ದಿನ ಕಾದು ನನ್ನನ್ನು ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ.

3.  ಚಿತ್ರ ನೋಡದವರು ಕಚಡಾ ನನ್ ಮಗಾ ಅಂತ ಅನೂಪ್ ಹೇಳುವಾಗ ನೀವು ಯಾಕೆ ತಡೆಯಲಿಲ್ಲ?
ಬಹಳ ಜನ ಎಡಿಟೆಡ್ ವೀಡಿಯೋ ನೋಡಿದ್ದಾರೆ. ನನ್ನ ಫೇಸ್‌ಬುಕ್  ಪೇಜ್‌ನಲ್ಲಿ ನಾನು ಎಡಿಟ್ ಆಗದ ಪೂರ್ತಿ ವೀಡಿಯೋ ಹಾಕಿದ್ದೇನೆ.  ಅದನ್ನು ಎಲ್ಲರೂ ನೋಡಬೇಕಾಗಿ ವಿನಂತಿ. ಡ್ಯಾಶಿಂಗ್ ಪ್ರಶ್ನೆ ಅನ್ನುವುದು ನನ್ನ ಶೋದ ಒಂದು ಭಾಗ. ಬಿಟ್ಟ ಪದ ತುಂಬಿ ಪ್ರಶ್ನೆಗಳು ಆ ಸುತ್ತಿನಲ್ಲಿ ಬರುತ್ತವೆ. ಅದರಲ್ಲಿ ರಾಜರಥ ಫಸ್ಟ್ ಡೇ ಫಸ್ಟ್ ಶೋ ನೋಡುವವರು  ಎಂಬ ಪ್ರಶ್ನೆ ಕೇಳಿದ್ದೆ. ಅದಕ್ಕೆ ಅವರು ದೇವರು, ದೇವತೆಗಳು ಎಂಬ ಉತ್ತರ ಕೊಟ್ಟಿದ್ದರು. ಅದೇ ಥರ ಕಡೆಯಲ್ಲಿ  ರಾಜರಥ ಚಿತ್ರವನ್ನು ನೋಡದವರು  ಎಂಬ ಪ್ರಶ್ನೆ ಕೇಳಿದಾಗ  ಅನೂಪ್ ಕಚಡಾ ನನ್ ಮಗ ಎಂದುತ್ತರಿಸಿದರು. ಆಗ ನನ್ನ ಮೊದಲ ರಿಯಾಕ್ಷನ್ ಇದ್ದಿದ್ದು ಫೈನಲೀ ಬಂತು ಅಂತ. ಅಂದ್ರೆ ಸೆಲ್‌ನಿಂದ ಆಚೆ ಬಂದ್ರು ಅನ್ನೋ ಥರ ಹೇಳಿದ್ದೆ. ರಾಜರಥ ಬೇರೆ ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುವ ಸಿನಿಮಾ. ಆ ಕ್ಷಣ ನನಗೆ ಇದು  ಈಗ ಸೋಷಲ್ ಮೀಡಿಯಾಗಳಲ್ಲಿ ಚರ್ಚೆ ಆಗುವ ಥರ ಕನ್ನಡಿಗರು  ಕಚಡಾ ಲೋಫರ್ ಅನ್ನೋ ಥರ ಆಗತ್ತೆ ಅಂತ ನಿಜಕ್ಕೂ ಹೊಳೆಯಲಿಲ್ಲ. ಈ ಥರ ತಿರುವು ತೆಗೆದುಕೊಳ್ಳುತ್ತದೆ ಅನ್ನುವುದೂ ಗೊತ್ತಾಗಲಿಲ್ಲ. ಇಲ್ಲದಿದ್ದರೆ ಆ ಕ್ಷಣವೇ ತಡೆಯುತ್ತಿದ್ದೆ. ನಾನು ಯಾವಾಗಲೂ ಶೋನಲ್ಲಿ  ಹುಷಾರಾಗಿರುತ್ತೇನೆ. ಆದರೆ ಮೊನ್ನೆ ಅವರು ಹಾಗೆ ಹೇಳಿದಾಗ ನಾನು  ಮುಂದಿನ ಪ್ರಶ್ನೆ ಬಗ್ಗೆ ಯೋಚಿಸುತ್ತಿದ್ದುದರಿಂದ ನಿಜಕ್ಕೂ ಏನೂ ಹೊಳೆಯಲಿಲ್ಲ. ಮುಂದಿನ ಸಲದಿಂದ ಬಹಳ ಎಚ್ಚರಿಕೆಯಿಂದ ಇರುತ್ತೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ.

4. ಕಚಡಾ ನನ್ ಮಗಾ ಅಂದಾಗ ನೀವು ಚಪ್ಪಾಳೆ ಹೊಡೆದು ಕೇಕೆ ಹಾಕಿದ್ರಿ ಅಂತ ಜನ ರೋಷಗೊಂಡಿದ್ದಾರೆ. ಅಲ್ಲಿ ನಿಜಕ್ಕೂ ಏನಾಗಿತ್ತು?
ನೀವು ಸರಿಯಾಗಿ ವೀಡಿಯೋ ನೋಡಿದ್ರೆ ಗೊತ್ತಾಗತ್ತೆ, ನಾನು ಚಪ್ಪಾಳೆ  ಹೊಡೆದಿಲ್ಲ. ಆ ಸಂದರ್ಶನ ಆರಂಭದಲ್ಲಿ ಫನ್ನಿ ಫನ್ನಿಯಾಗಿ ಹೋಗ್ತಾ  ಇತ್ತು. ಆಗೆಲ್ಲಾ ಚಪ್ಪಾಳೆ ಹೊಡೆದಿದ್ದಿದೆ. ಆದರೆ ಅನೂಪ್ ರಾಜರಥ ಚಿತ್ರ  ನೋಡದವರು ಕಚಡಾ ನನ್ ಮಗ ಎಂದಾಗ ನಾನು ಚಪ್ಪಾಳೆ, ಕೇಕೆ  ಯಾವುದೂ ಹೊಡೆದಿಲ್ಲ. ಆ ಶೋ ನಡೆದಿದ್ದು ಒಂದು ಫರ್ನಿಚರ್ ಶೋ  ರೂಮ್‌ನಲ್ಲಿ. ಅಲ್ಲಿ ಆಕಡೆ ಹೋಗ್ತಾ ಇದ್ದ ಜನ, ರಾಜರಥ ಚಿತ್ರತಂಡದವರು  ಇದ್ದರು. ಅವರು ಚಪ್ಪಾಳೆ ಹೊಡೆದಿದ್ದರೇ ಹೊರತು ನಾನಲ್ಲ.

5.  ಯಾಕೆ ನಿಮ್ಮ ಮೇಲೆ ಜನ ಅಷ್ಟೊಂದು ಸಿಟ್ಟಿಗೆದ್ದಿದ್ದಾರೆ?
ಜನ ಸಿಟ್ಟಿಗೆದ್ದಿಲ್ಲ. ಸೋಷಲ್ ಮೀಡಿಯಾದಲ್ಲಿ ಕೆಲವರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನಾನು ಎಂದಿನಂತೆ ಪ್ರಶ್ನೆ  ಕೇಳಿದೆ. ಎಲ್ಲಾ ಚಿತ್ರತಂಡದವರಿಗೂ ಅದೇ ಪ್ರಶ್ನೆ ಕೇಳುತ್ತೇನೆ. ಅನೂಪ್ ಆ ಥರ ಉತ್ತರ ಕೊಟ್ಟರು. ನಿನ್ನೆ ಆರಂಭದಲ್ಲಿ ಸಿಟ್ಟು ಭಂಡಾರಿ ಸಹೋದರರ ವಿರುದ್ಧ ಇತ್ತು. ಕಡೆಗೆ ಅದು ನಿರೂಪಕಿ ಸರಿ ಇಲ್ಲ ಅನ್ನೋ ಥರ ಬಂತು. ಜನ ಕೆಟ್ಟದಾಗಿ ಕಮೆಂಟ್ ಕೂಡ ಹಾಕಿದರು. ಸೋಷಲ್ ಮೀಡಿಯಾಗಳಲ್ಲಿ ಏನೇನೋ ಮಾತಾಡುತ್ತಿದ್ದಾರೆ. ಆದರೆ ನಾನು ಏನು
ತಪ್ಪು ಮಾಡಿದ್ದೇನೆ? ನಾನು ಪ್ರಶ್ನೆ ಕೇಳಿದೆ, ಅವರು ಉತ್ತರಿಸಿದರು. ಹಾಗೆ  ಉತ್ತರ ಕೊಟ್ಟಿದ್ದು ಅವರ ತಪ್ಪೇ ಹೊರತು ನನ್ನ ತಪ್ಪು ಹೇಗಾಗುತ್ತದೆ? ನನ್ನ ಕಾರ್ಯಕ್ರಮವನ್ನೇ ಬಹಿಷ್ಕರಿಸಬೇಕು ಅನ್ನುವಷ್ಟರ ಮಟ್ಟಿಗೆ ಮಾತುಕತೆಯಾಗುತ್ತದೆ ಅಂದರೆ ನಾನು ಏನು ಅಪರಾಧ ಮಾಡಿದ್ದೇನೆ?  ನನ್ನನ್ನು ಯಾಕೆ ಇಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ? ಬಲಿಪಶು ಮಾಡಲಾಗುತ್ತಿದೆ? 11 ವರ್ಷದಿಂದ ನಾನು ಕನ್ನಡ ಮಾತನಾಡುತ್ತಿದ್ದೇನೆ. ಸಿನಿಮಾ ಪ್ರಮೋಷನ್ ಮಾಡಿದ್ದೇನೆ. ನನ್ನ ಸ್ವಂತ ಪರಿಶ್ರಮದಿಂದ  ಇಲ್ಲಿಯವರೆಗೂ ಬಂದಿದ್ದೇನೆ. ಈಗ ನನ್ನ ಕನ್ನಡ ಸರಿ ಇಲ್ಲ ಅಂತ ಮಾತನಾಡುತ್ತಾರೆ. ನನ್ನ ಕನ್ನಡ ಸರಿ ಇಲ್ಲ ಎಂದಾದರೆ ಅಷ್ಟು ವರ್ಷ ಜನ ಯಾಕೆ ನನ್ನ ಮಾತು ಕೇಳುತ್ತಾರೆ? ಜನ ನನ್ನ ಮೇಲೆ ಎಷ್ಟು ಪ್ರೀತಿ
ತೋರಿಸಿದ್ದಾರೆ ಅನ್ನುವುದಕ್ಕೆ ನನ್ನ ಶೋಗೆ ಇಲ್ಲಿಯವರೆಗೆ 80 ಚಿತ್ರತಂಡ ಬಂದಿರುವುದೇ ಸಾಕ್ಷಿ.

6.  ಯಾರು ನಿಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ? ಯಾಕೆ?
ಯಾರು, ಯಾಕೆ ಅಂತಲೇ ಗೊತ್ತಾಗುತ್ತಿಲ್ಲ. ಇದೆಲ್ಲಾ ಶುರು ಆಗಿದ್ದು  ಒಂದು ಎಡಿಟ್ ಮಾಡಿದ ವೀಡಿಯೋದಿಂದ. ಆ ವೀಡಿಯೋ ಮಾಡಿ  ಸೋಷಿಷಲ್ ಮೀಡಿಯಾಗಳಲ್ಲಿ ಬಿಟ್ಟವರು ಯಾರು ಅಂತಲೂ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡುತ್ತಾರೆ. ಅಣ್ಣಾವ್ರ ಅಭಿಮಾನಿಗಳನ್ನೆಲ್ಲಾ ದೇವರು ಅಂತ ಹೇಳಿದವರು ಈಗ ಪ್ರೇಕ್ಷಕರನ್ನ  ಕಚಡಾಗಳು ಎನ್ನುತ್ತಿದ್ದಾರೆ ಅಂತ ಬರೆಯುವವರಿಗೆ ಅಣ್ಣಾವ್ರ ಹೆಣ್ಣು  ಮಕ್ಕಳಿಗೆ ಕೆಟ್ಟದಾಗಿ ಮಾತನಾಡಿಲ್ಲ ಅಂತ ಗೊತ್ತಿಲ್ವಾ. ಮೆಜೆಸ್ಟಿಕ್‌ನಲ್ಲಿ ಮೈ
ಮಾರಿಕೊಂಡು ಬಂದವಳು ಅಂತೆಲ್ಲಾ ಕಮೆಂಟ್ ಹಾಕುತ್ತಾರೆ. ತಪ್ಪಲ್ವಾ?  ಈ ಥರ ಕೆಟ್ಟದಾಗಿ ಮಾತನಾಡಿ ಏನು ಸಾಧಿಸುತ್ತಾರೆ.

7.  ಕೆಟ್ಟ ಉತ್ತರ ನೀಡೋ ಥರ ಪ್ರಚೋದನೆ ನೀಡುತ್ತೀರಂತೆ.. ಹೌದಾ? ಪ್ರಚೋದನೆ ಅಂದರೆ ಏನು?

ನಾನು ಅವರಿಗೆ ಇದೇ ಥರ ಮಾತನಾಡಿ ಅಂತ ಹೇಳಿದ್ದೇನಾ? ಇಲ್ವಲ್ಲ. ಬೇರೆ ಚಿತ್ರತಂಡದವರಿಗೂ ಇದೇ ಪ್ರಶ್ನೆ ಕೇಳಿದ್ದೆ, ಅವರು ಯಾಕೆ ಉತ್ತರಿಸಲಿಲ್ಲ. ಇದೆಲ್ಲಾ ನನ್ನ ಗೂಬೆ ಕೂರಿಸುವುದಕ್ಕೆ ಕೊಡುವ ಕಾರಣಗಳು. ನಾನು ಯಾರಿಗೂ ಪ್ರೆಷರ್
ಹಾಕಿಲ್ಲ. ಪ್ರಮೋಷನ್‌ಗೆ ಅಂತ ಸಂದರ್ಶನಕ್ಕೆ ಬರುವವರಿಗೆ ಉತ್ತರ  ನೀಡುವಾಗ ಜವಾಬ್ದಾರಿಯಿಂದ ಇರಬೇಕು ಅಂತ ಗೊತ್ತಾಗಲ್ವಾ. ನನ್ನ ಶೋ ಇರುವುದೇ ಫಿಲ್ಟರ್‌ಲೆಸ್ ಅಂತ. ಎಲ್ಲರಿಗೂ ಅದು ಗೊತ್ತಿದೆ.

8. ನಿಮಗೆ ವರವಾಗಿದ್ದ ಸೋಷಲ್ ಮೀಡಿಯಾ ಈಗ ಶಾಪವಾಗಿಬಿಟ್ಟಿದೆ.  ಕೆಟ್ಟಕೆಟ್ಟದಾಗಿ ಕಮೆಂಟ್ ಹಾಕುತ್ತಿದ್ದಾರೆ. ಸಿಟ್ಟು ಬರ್ತಿಲ್ವಾ?
ಸಿಟ್ಟು ಬರ್ತಿಲ್ಲ, ಬೇಜಾರಾಗ್ತಿದೆ. ಆಮೇಲೆ ಎಲ್ಲರೂ ನನ್ನ ಮೇಲೆ ಸಿಟ್ಟುಗೊಂಡಿಲ್ಲ. ಕೆಲವೇ ಕೆಲವು ಜನ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.  ಅವರ ಬಗ್ಗೆ ನಾನೇನು ಹೇಳಲಿ. ಕೆಳಗಿದ್ದವರು ಕೆಳಗೇ ಇರುತ್ತಾರೆ. ಅವರನ್ನು  ಮೇಲೆ ಎತ್ತಲು ಸಾಧ್ಯವಿಲ್ಲ. ಇನ್ನುಳಿದವರು ನನ್ನನ್ನು ಎಂದಿನಂತೆ  ಪ್ರೀತಿಸುತ್ತಾರೆ. ಅದಕ್ಕೆ ನನ್ನ ಫೇಸ್‌ಬುಕ್ ಪೇಜ್‌ಗೆ ಲೈಕ್  ಜಾಸ್ತಿಯಾಗಿರುವುದೇ ಸಾಕ್ಷಿ. ಜನ ದಡ್ಡರಲ್ಲ ಸುಮ್ನೆ ನಂಬೋಕೆ. ಅನೇಕ ಜನರಿಗೆ ಬರೆಯಲು, ಮಾತನಾಡಲು ಮಾಧ್ಯಮಗಳಿಲ್ಲದೇ ಇರಬಹುದು.
ಆದರೆ ಪ್ರೀತಿ ತೋರಿಸೋದು, ಬೆಂಬಲ ತೋರಿಸೋದು ಗೊತ್ತಿದೆ. ಅವರು ನನ್ನ ಮೇಲೆ ಇಷ್ಟು ದಿನ ಪ್ರೀತಿ ತೋರಿಸಿದ್ದಾರೆ. ಇನ್ನೂ ತೋರಿಸುತ್ತಾರೆ.

9.  ಪೋರ್ನ್‌ಸ್ಟಾರ್, ಕಾಂಡೋಂ ಇತ್ಯಾದಿ ಬಗ್ಗೆ ಕೇಳ್ತೀರಿ. ಬಂದವರಿಗೆ ಮುಜುಗರ  ಮಾಡ್ತೀರಿ ಅನ್ನೋ ಆರೋಪವೂ ಉಂಟು. ಹೌದಾ? ಈ ಪ್ರಶ್ನೆಗಳೆಲ್ಲಾ ಈಗ ಯಾಕೆ ಬರ್ತಿವೆ? ಇಷ್ಟು ದಿನ ಯಾಕೆ ಬಂದಿಲ್ಲ?
ಪೂಜಾ ಗಾಂಧಿ ಬಂದಾಗ ಕಾಂಡೋಂ ಬಗ್ಗೆ ಒಂದು ನಿಮಿಷ ಮಾತನಾಡಿ  ಎಂದಿದ್ದೆ. ಅವರು ಎಜುಕೇಟ್ ಮಾಡೋ ಥರ ಮಾತನಾಡಿದ್ರು. ಅದು ತಪ್ಪಾ? ಇನ್ನು ಸಂಜಿತ್ ಹೆಗ್ಡೆ ಶೋದಲ್ಲಿ ಭಾಗವಹಿಸಿದಾಗ ನಿಮಗೆ ಇಷ್ಟದ
ಪೋರ್ನ್ ಸ್ಟಾರ್ ಯಾರು ಎಂದು ಕೇಳಿದ್ದೆ. ನನಗೆ ಕೇಳಿದರೆ ನನಗೆ  ಗೊತ್ತಿರುವ ಸನ್ನಿ ಲಿಯೋನ್ ಹೆಸರನ್ನು ಹೇಳುತ್ತೇನೆ. ಅಷ್ಟಕ್ಕೂ  ಆ ಪ್ರಶ್ನೆ ವಿಭಾಗದ ಹೆಸರಿದ್ದಿದ್ದೇ ಯಾರೂ ಕೇಳಿರದ ಪ್ರಶ್ನೆ ಅಂತ. ನಾನು ಹೊಸತಾಗಿ ಏನೋ ಮಾಡಿದ್ದೇನೆ. ಜನ ಅದನ್ನು ನೋಡಿ ಸಂತೋಷಪಟ್ಟಿದ್ದಾರೆ. ಕೆಲವರಿಗೆ ಇಷ್ಟ ಆಗದೇ ಇರಬಹುದು. ಎಲ್ಲರನ್ನು ಸಂತೋಷಪಡಿಸುವುದು ಹೇಗೆ? ನನ್ನ ಕೆಟ್ಟ ಟೈಮ್ ಇದು. ಅವಕಾಶ ಸಿಕ್ಕಿದ್ದೇ ಸಿಕ್ಕಿದ್ದು  ಅಂತ ಯಾರಾರೋ ಏನೇನೋ ಮಾತನಾಡುತ್ತಿದ್ದಾರೆ.

ರಶ್ಮಿ ಕ್ಷಮೆಯಾಚಿಸಿರುವುದು 

 

 

loader