ಪುನೀತ್ ರಾಜ್‌'ಕುಮಾರ್ ದನಿಯಲ್ಲಿ ಈ ಡೈಲಾಗ್ ಕೇಳುತ್ತಿದ್ದರೆ ಇಡೀ ಸಭಾಂಗಣದಲ್ಲಿ ಸಂಭ್ರಮ. ಆ ಸಂತೋಷದಲ್ಲೇ ಟ್ರೇಲರ್ ಬಿಡುಗಡೆಯಾಗಿತ್ತು. ಮೈಕು ಪುನೀತ್ ಕೈಗೆ ಬಂದಿತ್ತು. ಅಲ್ಲಿ ನೆರೆದಿದ್ದವರೆಲ್ಲಾ ಆ ಕ್ಷಣಕ್ಕಾಗಿ ಕಾಯುತ್ತಿದ್ದರು.
ಬೆಂಗಳೂರು (ಡಿ.29): ನಮ್ಮದು ರಾಜವಂಶ, ನಾವು ನಡೆಯೋ ದಾರಿ ರಾಜಪಥ, ನನ್ನ ಹೆಸರು ರಾಜರಥ! ಪುನೀತ್ ರಾಜ್'ಕುಮಾರ್ ದನಿಯಲ್ಲಿ ಈ ಡೈಲಾಗ್ ಕೇಳುತ್ತಿದ್ದರೆ ಇಡೀ ಸಭಾಂಗಣದಲ್ಲಿ ಸಂಭ್ರಮ. ಆ ಸಂತೋಷದಲ್ಲೇ ಟ್ರೇಲರ್ ಬಿಡುಗಡೆಯಾಗಿತ್ತು. ಮೈಕು ಪುನೀತ್ ಕೈಗೆ ಬಂದಿತ್ತು. ಅಲ್ಲಿ ನೆರೆದಿದ್ದವರೆಲ್ಲಾ ಆ ಕ್ಷಣಕ್ಕಾಗಿ ಕಾಯುತ್ತಿದ್ದರು. ಸ್ವತಃ ಚಿತ್ರತಂಡದವರಿಗೂ ಪುನೀತ್ ಏನು ಹೇಳುತ್ತಾರೆ ಅನ್ನುವ ಕುತೂಹಲ. ಹೀಗಾಗಿ ವೇದಿಕೆ ಮೇಲಿದ್ದ ಅತಿಥಿಗಳು ಟ್ರೇಲರ್ ರಿಲೀಸ್'ಗೆ ಮೊದಲೇ ಒಂದೆರಡು ಬಾರಿ ಪುನೀತ್ರನ್ನು ವೇದಿಕೆಗೆ ಕರೆದರು. ಆದರೆ ಪುನೀತ್ ಪಕ್ಕದಲ್ಲೇ ಕೂತಿದ್ದ ಅನುಪ್ ಭಂಡಾರಿ ಮಾತ್ರ ಪುನೀತ್ರನ್ನು ಈಗ ಬೇಡ, ಆಮೇಲೆ ಎಂದು ಹೇಳಿ ಕೂರಿಸಿದ್ದರು.
ಎಲ್ಲರ ಮಾತಾದ ಮೇಲೆಯೇ ಪುನೀತ್ ವೇದಿಕೆಗೆ ಬಂದು ಟ್ರೇಲರ್ ಬಿಡುಗಡೆ ಮಾಡಿ ಮಾತಿಗೆ ನಿಂತಿದ್ದರು. ಇವೆಲ್ಲಾ ಕಾರಣಗಳಿಂದ ಆ ಕ್ಷಣಕ್ಕೆ ದೈವತ್ವ ಪ್ರಾಪ್ತಿಯಾಗಿತ್ತು. ಅಚ್ಚರಿಗೊಳಿಸಿದ್ದು ಪುನೀತ್ ಮಾತಲ್ಲಿದ್ದ ಖುಷಿ. ‘ಅನುಪ್ ಕೆಲಸದ ಮೇಲೆ ನಂಬಿಕೆ ಇತ್ತು. ಇಡೀ ತಂಡದ ಒಳ್ಳೆಯ ಕೆಲಸವನ್ನು ನೋಡಿ ನಾನು ಚಿತ್ರಕ್ಕೆ ಧ್ವನಿ ನೀಡಿದ್ದೇನೆ. ಹೇಳಬಹುದೋ ಬೇಡವೋ ಗೊತ್ತಿಲ್ಲ. ಡಬ್ಬಿಂಗ್ ಮಾಡುವಾಗ ಒಂದಷ್ಟು ದೃಶ್ಯಗಳನ್ನು ನೋಡಿದೆ. ಬಹಳ ಖುಷಿಯಾಯಿತು. ಅದ್ಭುತವಾಗಿ ಮಾಡಿದ್ದಾರೆ. ಆರ್ಯ ನನ್ನ ಗೆಳೆಯ. ಅವರ ಎಂಟ್ರಿ ಕೂಡ ಬಹಳ ಚೆನ್ನಾಗಿದೆ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ’ ಎಂದರು ಪುನೀತ್
'ಒಂದು ದಿನ ಪುನೀತ್ ಅವರಿಗೆ ಫೋನ್ ಮಾಡಿ ನೀವು ನನ್ನ ಚಿತ್ರಕ್ಕೆ ಧ್ವನಿ ನೀಡಬೇಕು ಎಂದು ಹೇಳಿದೆ. ಅವರಿಗೆ ನಾನು ಪೂರ್ತಿಯಾಗಿ ಹೇಳುವ ಮೊದಲೇ ಓಕೆ ಲೆಟ್ಸ್ ಡು ಇಟ್ ಎಂದರು. ಎರಡು ದಿನದಲ್ಲಿ ಡಬ್ಬಿಂಗ್ ಮುಗಿಸಬೇಕು ಎಂದುಕೊಂಡಿದ್ವಿ. ಆದರೆ ಪುನೀತ್ ಚೆನ್ನಾಗಿ ಮಾಡೋಣ ಅಂತ ಹೇಳಿ ಜಾಸ್ತಿ ದಿನ ನಮ್ಮ ಜೊತೆ ಇದ್ದರು. ಅವರಿಗೆ ಥ್ಯಾಂಕ್ಸ್. ಈ ಟ್ರೇಲರ್ ನಮ್ಮ ತಂಡದ ಶ್ರಮದ ಪ್ರತಿಫಲದ ತುಣುಕು. ಅದು ಎಲ್ಲರಿಗೂ ಇಷ್ಟವಾದರೆ ಸಾರ್ಥಕ' ಎಂದರು ಅನೂಪ್.
ಅದಕ್ಕೂ ಮೊದಲೇ ನಾಯಕ ನಿರುಪ್ ಭಂಡಾರಿ ಮಾತನಾಡಿದ್ದರು. ‘ನಾವು 'ರಾಜರಥ' ಚಿತ್ರದ ಕತೆಯನ್ನು 'ರಂಗಿತರಂಗ' ಚಿತ್ರಕ್ಕಿಂತಲೂ ಮೊದಲೇ ಮಾಡಿದ್ವಿ. ಆದರೆ ಬಜೆಟ್ ಜಾಸ್ತಿ ಅನ್ನುವ ಕಾರಣಕ್ಕೆ ತಡವಾಯಿತು' ಎಂದರು.
ಅವಂತಿಕಾ ಮಾತನಾಡುವ ಹೊತ್ತಿಗೆ ಸರಿಯಾಗಿ ಪುನೀತ್ ಎಂಟ್ರಿ ಕೊಟ್ಟಿದ್ದರಿಂದ ಅಲ್ಲಿದ್ದವರ ಗಮನವೆಲ್ಲಾ ಪುನೀತ್ ಕಡೆ ಹೋಗಿ ಅವಂತಿಕಾ ಗೊಂದಲದ ಗೂಡಾಗಿದ್ದರು. ಅವಕಾಶಕ್ಕೆ ಥ್ಯಾಂಕ್ಸ್ ಅಂದಿದ್ದೇ ಅವರ ಒಂದೊಳ್ಳೆ ಮಾತು. ಸುಧಾಕರ ಭಂಡಾರಿಯವರದು ಸ್ವಾಗತ ಭಾಷಣ. ಉಳಿದಂತೆ ಜಾಲಿ ಹಿಟ್ಸ್ ಸಂಸ್ಥೆಯ ನಾಲ್ಕು ನಿರ್ಮಾಪಕರಲ್ಲಿ ಅಜಯ್ ರೆಡ್ಡಿ, ಅಂಜು ವಲ್ಲಭನೇನಿ ಮತ್ತು ವಿಶು ದಾಕಪ್ಪಗಾರಿ ವೀಡಿಯೋ ಮೆಸೇಜ್ ಕಳಿಸಿ ಶುಭ ಕೋರಿದ್ದರು. ಯುರೋಪ್ನಿಂದ ಬಂದಿದ್ದ ಸತೀಶ್ ಶಾಸ್ತ್ರಿ, ರಂಗಿತರಂಗದ ಸಾಹಸ ಮತ್ತು ಅದರಿಂದಾಗಿ ತಾವು ಸಿನಿಮಾ ಮಾಡಲು ಮುಂದೆ ಬಂದ ಕತೆ ಹೇಳಿಕೊಂಡರು. ರಾಜರಥ ಟ್ರೇಲರ್ ಬಿಡುಗಡೆಯಾಗಿದೆ. ಜನರವರಿ ಕಡೆಯ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ.

