ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರಕ್ಕೆ ಇಲ್ಲಿಯವರೆಗೂ ನಾಯಕಿ ಸಿಕ್ಕಿರಲಿಲ್ಲ. ಈಗ ಬಂದಿರುವ ಮಾಹಿತಿ ಪ್ರಕಾರ ಚಿತ್ರತಂಡ ಕನ್ನಡದ ಹೊಸ ಹುಡುಗಿಗೆ ನಾಯಕಿಯಾಗುವ ಅವಕಾಶ ನೀಡಿದೆ. ಈ ಮೂಲಕ ಹೊಸಬರಿಗೆ ಅವಕಾಶ ನೀಡಿ ಕನ್ನಡದವರನ್ನು ಬೆಳೆಸುವ ಪ್ರಯತ್ನ ನಡೆಸಿದಂತಾಗಿದೆ. 

ಚಾಲೆಂಜಿಂಗ್ ಸ್ಟಾರ್ ಜತೆ ಹೆಜ್ಜೆ ಹಾಕಲಿರುವ ಹುಡುಗಿಯ ಹೆಸರು ರಾಘವಿ ತಿಮ್ಮಯ್ಯ. ಕೊಡಗು ಮೂಲದ ಈ ನಟಿಗೆ ‘ಒಡೆಯ’ ಮೊದಲ ಸಿನಿಮಾ. ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿರುವ ಹುಡುಗಿ. 

‘ಒಡೆಯ’ ಚಿತ್ರದ ಮೂಲಕ ಸ್ಯಾಂಡಲ್ವುಡ್‌ಗೆ ಆಗಮಿಸುತ್ತಿದ್ದಾರೆ. ಪ್ರೇಮಾ, ಡೈಸಿ ಬೋಪಣ್ಣ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ ಅವರ ನಂತರ ಮತ್ತೊಬ್ಬರು ಕೊಡಗಿನಿಂದ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಆ ಮೂಲಕ ಸ್ಯಾಂಡಲ್ವುಡ್‌ನಲ್ಲಿ ಕೊಡಗಿನ ಬೆಡಗಿಯರ ಸಂಖ್ಯೆ ಚಿತ್ರರಂಗದಲ್ಲಿ ಹೆಚ್ಚಾಗುತ್ತಿದೆ. 

ಜಾತ್ರೆ ದೃಶ್ಯಗಳಿಗೆ ಆ್ಯಕ್ಷನ್ ಕಟ್: ‘ಬುಲ್‌ಬುಲ್’ ನಂತರ ಮತ್ತೊಮ್ಮೆ ನಿರ್ದೇಶಕ ಎಂಡಿ ಶ್ರೀಧರ್ ಮತ್ತು ದರ್ಶನ್ ಅವರು ಜತೆಯಾಗುತ್ತಿದ್ದಾರೆ. ಇದು ತಮಿಳಿನ ‘ವೀರಂ’ ಚಿತ್ರದ ರೀಮೇಕ್ ಆಗಿದೆ. ಮೊದಲ ದಿನವೇ ಜಾತ್ರೆಯ ದೃಶ್ಯಗಳನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಿಕೊಳ್ಳುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಸದ್ಯಕ್ಕೆ ದರ್ಶನ್ ‘ಯಜಮಾನ’ ಚಿತ್ರದ ಬಾಕಿ ಇರುವ ಹಾಡಿನ ಚಿತ್ರೀಕರಣ ಮುಗಿಸಲಿದ್ದಾರೆ. ಡಿ.10 ರಿಂದಲೇ ‘ಒಡೆಯ’ನ ಜಾತ್ರೆ ಶುರುವಾಗಲಿದೆ. ಇನ್ನೂ ಸಂದೇಶ್ ನಾಗರಾಜ್ ಅವರು ‘ಪ್ರಿನ್ಸ್’ ಹಾಗೂ ‘ಐರಾವತ’ ಚಿತ್ರಗಳನ್ನು ದರ್ಶನ್ ಅವರ ಜತೆ ನಿರ್ಮಿಸಿದವರು. ಈಗ ‘ಒಡೆಯ’ನಿಗೆ ಜತೆಯಾಗಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಅದ್ದೂರಿಯಾಗಿ ಚಿತ್ರಕ್ಕೆ ಮುಹೂರ್ತ ಆಗಿದೆ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದರಿಂದ ನಿರ್ದೇಶಕ ಎಂ ಡಿ ಶ್ರೀಧರ್ ಶೂಟಿಂಗ್‌ಗೆ ಚಾಲನೆ ಕೊಟ್ಟಿದ್ದಾರೆ.