ಸ್ವತಃ ಡ್ಯಾನ್ಸ್'ರ್ ಆಗಿ ಗುರುತಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ಪ್ರಾರಂಭವಾಗಲಿರುವ 'ಡ್ಯಾನ್ಸ್ ಡ್ಯಾನ್ಸ್' ಮಕ್ಕಳ ನೃತ್ಯ ರಿಯಾಲಿಟಿ ಶೋ'ಗೆ ಜಡ್ಜ್ ಆಗಿದ್ದಾರೆ. ಈ ಕುರಿತು ರಾಧಿಕಾ ಅವರು ಆಡಿದ ಮಾತುಗಳು ಇಲ್ಲಿವೆ.
1) ಮಕ್ಕಳ ನೃತ್ಯಕ್ಕೆ ತೀರ್ಪುಗಾರರಾಗಿದ್ದೀರಿ, ಏನನಿಸುತ್ತಿದೆ?
ರಾ: ತುಂಬಾ ಖುಷಿಯಾಗುತ್ತಿದೆ. ಯಾಕೆಂದರೆ ನಾನು ಇಲ್ಲಿ ಜಡ್ಜ್ ಎನ್ನುವುದಕ್ಕಿಂತ ಮಕ್ಕಳ ಪ್ರತಿಭೆಯನ್ನು ನೋಡುವ ಸಂಭ್ರಮವೇ ದೊಡ್ಡದು. ತಮ್ಮಲ್ಲಿ ಪ್ರತಿಭೆ ಇದ್ದರೂ ಅದನ್ನು ಯಾರೂ ಗುರುತಿಸುತ್ತಿಲ್ಲ ಎನ್ನುವ ಹೊತ್ತಿಲ್ಲ ಸ್ಟಾರ್ ಸುವರ್ಣ ವಾಹಿನಿಯವರು ಮಕ್ಕಳಿಗಾಗಿ ‘ಡ್ಯಾನ್ಸ್ ಡ್ಯಾನ್ಸ್' ಶೋ ಆಯೋಜಿಸಿದ್ದಾರೆ. ಇದೊಂದು ಒಳ್ಳೆಯ ಕೆಲಸ. ಈಗಾಗಲೇ ಒಂದಿಷ್ಟುಎಪಿಸೋಡ್‌ಗಳು ಚಿತ್ರೀಕರಣ ಆಗಿವೆ. ಆಗ ಮಕ್ಕಳ ಪ್ರತಿಭೆಯನ್ನು ನೋಡಿದಾಗ ನಿಜಕ್ಕೂ ನನಗೇ ಅಚ್ಚರಿ ಆಯಿತು. ಏನ್ ಚೆಂದ ಕುಣಿತಾವೆ, ಮಾತಾಡ್ತಾವೆ, ಅವರು ನಗು, ಅಳು, ಮಾತು, ಡ್ಯಾನ್ಸ್... ವಾವ್ ಅಮೇಜಿಂಗ್.
2) ಈ ಶೋ ಒಪ್ಪಿಕೊಳ್ಳಲು ಕಾರಣ?
ರಾ: ನನ್ನ ಬಾಲ್ಯದ ದಿನಗಳು ಮತ್ತು ಡ್ಯಾನ್ಸ್. ನನಗೆ ಡ್ಯಾನ್ಸ್ ಅಂದರೆ ಹುಚ್ಚು. ಮೂರು ವರ್ಷದವಳಿದ್ದಾಗಲೇ ಡ್ಯಾನ್ಸ್ ಶುರು ಮಾಡಿದೆ. ಗುರು ಅಂತ ಯಾರೂ ಇಲ್ಲ. ಒಬ್ಬಳೇ ಮನೆಯಲ್ಲಿದ್ದರೆ, ಟೀವಿನಲ್ಲಿ ಹಾಡು ಬಂದರೆ, ಎಲ್ಲಾದರೂ ಮ್ಯೂಸಿಕ್ ಕೇಳಿಸಿದರೆ ಸಾಕು, ಕುಣಿಯೋಕ್ಕೆ ಶುರು ಮಾಡುತ್ತಿದ್ದೆ. ಮನೆಯಲ್ಲಿ ಇಷ್ಟಇಲ್ಲದಿದ್ದರೂ ನಾನು ಕುಣಿತದ ಮೋಹಕ್ಕೆ ಒಳಗಾಗಿದ್ದೆ. ಸಿನಿಮಾಗಳಿಗೆ ಬಂದ ಮೇಲೆ ನನಗೆ ಡ್ಯಾನ್ಸ್ ಕೈ ಹಿಡಿಯಿತು. ನಾನು ಚಿಕ್ಕವಳಿದ್ದಾಗ ಮಾಡಿದ್ದನ್ನೇ ಈಗಿನ ಮಕ್ಕಳು ವೇದಿಕೆ ಮೇಲೆ ಮಾಡುತ್ತಿದ್ದಾರೆ. ನನಗಂತೂ ನನ್ನ ಬಾಲ್ಯವೇ ನೆನಪಾಯ್ತು.
3) ಈ ಶೋಗೆ ನೀವು ಮಾಡಿಕೊಂಡ ತಯಾರಿಗಳೇನು?
ರಾ: ಎರಡು ವಾರ ಬೇರೆ ಬೇರೆ ಹಾಡುಗಳಿಗೆ ಡ್ಯಾನ್ಸ್ ಮಾಡಿ ರಿಹರ್ಸಲ್ ಮಾಡಿದೆ. ಮತ್ತಷ್ಟುತೂಕ ಇಳಿಸಿಕೊಂಡೆ. ಈಗಾಗಲೇ ಬಂದಿರುವ ಒಂದಿಷ್ಟುಡ್ಯಾನ್ಸ್ ಶೋಗಳನ್ನು ನೋಡಿದೆ.
4) ಮಕ್ಕಳ ನೃತ್ಯಕ್ಕೆ ತೀರ್ಪುಗಾರರಾಗೋದು ಸುಲಭನಾ?
ರಾ: ಖಂಡಿತ ಇಲ್ಲ. ಯಾಕೆಂದರೆ ಮಕ್ಕಳು ತುಂಬಾ ಸೂಕ್ಷ್ಮ, ಒಂದು ಸಣ್ಣ ತಪ್ಪು ಎತ್ತಿ ಹೇಳಿದರೂ ಅಳೋಕ್ಕೆ ಶುರು ಮಾಡುತ್ತವೆ. ಅವು ನಮ್ಮ ಮುಖವನ್ನೇ ನೋಡುತ್ತಿರುವಾಗ, ಏನಪ್ಪಾ ಹೇಳೋದು ಅಂತ ಭಾವುಕರಾಗುತ್ತೇವೆ. ಹೀಗಾಗಿ ಜಡ್ಜ್ ಆಗೋದು ಸುಲಭ ಅಲ್ಲ ಅನ್ನೋದನ್ನ ‘ಡ್ಯಾನ್ಸ್ ಡ್ಯಾನ್ಸ್' ತೋರಿಸಿ ಕೊಟ್ಟಿತು. ಎಲಿಮಿನೇಷನ್ ಹಂತದಲ್ಲಂತೂ ಇನ್ನೂ ಕಷ್ಟ.
5) ಈ ಶೋ ವೇದಿಕೆ ಆಚೆ ಆದ ಅನುಭವ?
ರಾ: ಗುಲ್ಬರ್ಗದಿಂದ ಬಂದ ಹುಡುಗ ಅನಿಸುತ್ತದೆ. ಡ್ಯಾನ್ಸ್ ಮಾಡಿಯಾದ ಮೇಲೆ ನಿನ್ನ ಜತೆ ಯಾರಿದ್ದಾರೆ ಅಂತ ಕೇಳಿದೆ. ಮಾಸ್ಟರ್ ಬಂದಿದ್ದಾರೆ ಅಂದ. ಅಪ್ಪ- ಅಮ್ಮ ಬಂದಿಲ್ವಾ ಅಂತ ಕೇಳಿದೆ, ಬರೋದಕ್ಕೆ ಬಸ್ ಜಾರ್ಜ್ ಇಲ್ಲ ಅಂತಂದ! ಆಗ ನನಗಾದ ನೋವು ಅಷ್ಟಿಷ್ಟಲ್ಲ. ಮತ್ತೊಬ್ಬ ಹುಡುಗ ವೇದಿಕೆಗೆ ಬರುವಾಗೆಲ್ಲ ಕೈ ಕಟ್ಟಿಕೊಂಡೇ ಬರುತ್ತಿದ್ದ. ಕೈ ಇಳಿಸೋ ಅಂದರೂ ಇಳಿಸಲಿಲ್ಲ. ಆಮೇಲೆ ಗೊತ್ತಾಯ್ತು, ಅವನ ಶರ್ಟ್ ಹರಿದಿತ್ತು. ಎಷ್ಟೇ ಬಡತನ ಇದ್ದರೂ ಈ ಮಕ್ಕಳಲ್ಲಿ ಪ್ರತಿಭೆಗೆ ಮಾತ್ರ ಯಾವ ಬಡತನವೂ ಇಲ್ಲವಲ್ಲ ಅಂತ ಅನಿಸಿತು.
6) ರಿಯಾಲಿಟಿ ಶೋಗಳು ಅಂದರೆ ಗಿಮಿಕ್ ಅಂತಾರೆ. ಈ ಶೋನಲ್ಲೂ ಗಿಮಿಕ್ ಇದೆಯಾ?
ರಾ: ಒಂದು ಶೋ ನಡೆಸಬೇಕು ಅಂದರೆ ಟಿಆರ್‌ಪಿ ಕೂಡ ಮುಖ್ಯ. ಹಾಗಂತ ಮಕ್ಕಳ ಮೇಲೆ ತೀರ್ಪುಗಾರರಾಗಿ ನಾವು ಅವರ ಮೇಲೆ ಯಾವ ಒತ್ತಡ ಹಾಕುತ್ತಿಲ್ಲ, ಗಿಮಿಕ್ ಮಾಡುತ್ತಿಲ್ಲ.
7) ಈ ಥರದ ಟಿವಿ ಶೋ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ರಾ: ಇವು ನಮ್ಮ ಬದುಕಿನ ಟರ್ನಿಂಗ್ ಪಾಯಿಂಟ್‌ಗಳು. ಈ ‘ಡ್ಯಾನ್ಸ್ ಡ್ಯಾನ್ಸ್' ಶೋ ತೆಗೆದುಕೊಳ್ಳಿ. ಇಲ್ಲಿ ಕುಣಿಯುವ ಮಕ್ಕಳಿಗೆ ಮುಂದೆ ದೊಡ್ಡ ಮಟ್ಟದಲ್ಲಿ ವೇದಿಕೆ ಸಿಗುತ್ತದೆ. ಸಿನಿಮಾಗಳಿಗೆ ಹೋಗಬಹುದು. ದೊಡ್ಡ ಡ್ಯಾನ್ಸರ್ ಆಗಬಹುದು. ಏನೇನೂ ಆಗದಿದ್ದವರು ಇಂಥ ಶೋಗಳಿಂದ ಹೆಸರು ಸಂಪಾದಿಸಿಕೊಳ್ಳಬಹುದು. ನನ್ನ ಜೀವನವನ್ನೇ ತೆಗೆದುಕೊಳ್ಳಿ ಡ್ಯಾನ್ಸ್ ಮಾಡಿಕೊಂಡಿದ್ದ ನನಗೆ ‘ನೀಲ ಮೇಘ ಶ್ಯಾಮ' ಸಿನಿಮಾದಲ್ಲಿ ನಟಿಸಿದ ಮೇಲೆ ತಾನೇ ನಾನು ನಟಿ ಆಗಿದ್ದು. ಇಂಥ ಶೋಗಳು ಪ್ರತಿಭಾವಂತರನ್ನು ಗುರುತಿಸಿ, ಅವರ ಬದುಕು ಕಟ್ಟಿಕೊಳ್ಳುವುದಕ್ಕೆ ನೆರವಾಗುತ್ತವೆ.
- ಆರ್. ಕೇಶವ ಮೂರ್ತಿ (ಕನ್ನಡ ಪ್ರಭ)
