ವಿಮಾನದ ಕನಸು ಕಾಣುವುದು, ಮಗಳ ಜತೆಗೆ ಅಪ್ಪನ ಡ್ಯಾನ್ಸ್‌ , ಇನ್ನೇನು ಒಂದು ತುತ್ತು ಬಾಯಿಗಿಟ್ಟುಕೊಳ್ಳುವಾಗ ಸೈಕಲ್‌ ರಿಕ್ಷಾ ಹತ್ತಲು ಬಂದಾಗ ಕೈ ತೊಳೆದು ಸೈಕಲ್‌ ತುಳಿಯುವುದಕ್ಕೆ ಹೋಗುವ... ಜೈಲಿನ ಒಂದಿಷ್ಟುಅನಾವಶ್ಯಕ ಮತ್ತು ಅಸಭ್ಯಕರವಾದ ದೃಶ್ಯಗಳ ಹೊರತಾಗಿ ಇಡೀ ಚಿತ್ರ ಕಾಡುತ್ತದೆ.
ಚಿತ್ರ: ಪುಷ್ಪಕ ವಿಮಾನ
ಭಾಷೆ: ಕನ್ನಡ
ತಾರಾಗಣ: ರಮೇಶ್ ಅರವಿಂದ್, ಯುವಿನಾ, ರಚಿತಾ ರಾಮ್, ರವಿಕಾಳೆ, ಮನದೀಪ್ ರಾಯ್, ಸಿದ್ಲಿಂಗು ಶ್ರೀಧರ್, ಮಂಜುನಾಥ್, ರಾಕ್'ಲೈನ್ ಸುಧಾಕರ್
ನಿರ್ದೇಶನ: ರವೀಂದ್ರನಾಥ್
ನಿರ್ಮಾಣ: ವಿಖ್ಯಾತ್, ಸುಕೃತ್ ದೇವೇಂದ್ರ, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವದತ್ತ್
ಛಾಯಾಗ್ರಾಹಣ: ಭುವನ್ ಗೌಡ
ಸಂಗೀತ: ಚರಣ್ ರಾಜ್
ರೇಟಿಂಗ್: ****
ಅಲ್ಲಿ ‘ಇದು ನನ್ನ ಕಥೆ' ಎನ್ನುತ್ತ ನೆನಪಿನ ಪುಟಗಳನ್ನು ತೆರೆಯುವ ಮಗನ ಕಣ್ಣಲ್ಲಿ ಅಪ್ಪನ ದರ್ಶನವಾಗುತ್ತದೆ. ಇಲ್ಲಿ ‘ನನ್ನ ಅಪ್ಪ, ಆತನೇ ನನ್ನ ಪ್ರಪಂಚ. ಅವನ ಮುಗ್ಧತೆ ಅವನನ್ನು ಕೊಂದಿದೆ' ಅಂತ ಬಿಕ್ಕಿ ಬಿಕ್ಕಿ ಅಳುತ್ತಾಳೆ ಮಗಳು. ಆಕೆಯ ಕಣ್ಣೀರಲ್ಲಿ ಅಪ್ಪ-ಮಗಳ ಸುಂದರ ಜಗತ್ತು ತೆರೆದುಕೊಳ್ಳುತ್ತದೆ. ಮೊದಲನೆಯ ಅಪ್ಪ- ಮಗನ ಕತೆ ಇಟಲಿ ದೇಶದ್ದು. ಎರಡನೆಯ ಅಪ್ಪ-ಮಗಳಿನ ಕತೆ ನಮ್ಮದೇ ನೆಲದ್ದು. ಅಪ್ಪಟ ಕನ್ನಡದ್ದು. ಎರಡೂ ಕತೆಯಲ್ಲಿ ಸಾವಿದೆ. ಹಾಗೆ ಎರಡೂ ಕಥನಗಳಲ್ಲಿ ಸುಂದರವಾದ ಬದುಕಿದೆ. ಒಂದಕ್ಕೆ ಎರಡನೇ ಮಹಾಯುದ್ಧದ ಹಿನ್ನೆಲೆಯಾದರೆ, ಮತ್ತೊಂದಕ್ಕೆ ಸುಳ್ಳು ಅರೋಪದ ನೆರಳಿನ ಬೇಟೆ. ಆದರೂ ಇಬ್ಬರು ಅಪ್ಪಂದಿರು ಸಾವು ಮರೆತು ತಮ್ಮ ಮಕ್ಕಳಿಗೆ ಅದ್ಭುತವಾದ ಬದುಕಿನ ಗೂಡನ್ನು ಕಟ್ಟುತ್ತಾರೆ. ಅಂದಹಾಗೆ ಇಲ್ಲಿಯ ಅಪ್ಪ-ಮಗಳ ಕತೆಯ ಹೆಸರು ‘ಪುಷ್ಪಕ ವಿಮಾನ'. ಅಲ್ಲಿಯ ಅಪ್ಪ-ಮಗನ ಕತೆಯ ಹೆಸರು ‘ಲೈಫ್ ಈಸ್ ಬ್ಯೂಟಿಫುಲ್'. ದೇಶಗಳು ಬೇರೆ ಬೇರೆ. ಹೆಸರು ಬೇರೆ. ಆದರೆ, ಭಾವ ಒಂದೇ. ಸಾಯುವ ಕೊನೇ ಕ್ಷಣದಲ್ಲೂ ‘ಎಲ್ಲ ಒಳ್ಳೆಯದಾಗುತ್ತೆ' ಎನ್ನುವ ಅನಂತರಾಮಯ್ಯನ ತೊದಲು ಮಾತಿಗೆ ಪ್ರೇಕ್ಷಕ ತನಗರಿವಿಲ್ಲದಂತೆ ಕಣ್ಣು ಒರೆಸಿಕೊಳ್ಳುತ್ತಾನೆ. ಅಷ್ಟರ ಮಟ್ಟಿಗೆ ‘ಪುಷ್ಪಕ ವಿಮಾನ' ಎಂಬುದು ಭಾವುಕ ಕನಸಿನ ಪುಟ್ಟಹಕ್ಕಿ.
ನಿರ್ದೇಶಕ ರವೀಂದ್ರನಾಥ್, ಮೊದಲ ಪ್ರಯತ್ನದಲ್ಲೇ ಅಪರೂಪವಾದ ಚಿತ್ರವನ್ನು ಕೊಟ್ಟಿದ್ದಾರೆ. ಆದರೆ, ಜೈಲಿನ ಕೈದಿಗಳ ನಡುವೆ ನಡೆಯುವ ಕೆಲ ಕೆಟ್ಟಸಂಭಾಷೆಗಳು, ದೃಶ್ಯಗಳ ಅಗತ್ಯವಿತ್ತೇ? ಎನ್ನುವುದಕ್ಕೆ ನಿರ್ದೇಶಕರೇ ಉತ್ತರಿಸಬೇಕು. ಅಪ್ಪನಿಗೆ ಮಗಳೇ ಜಗತ್ತು. ಮಗಳಿಗೂ ಅಪ್ಪನೇ ಪ್ರಪಂಚ. ಆದರೆ, ಅಪ್ಪನಾದವನು ಇಲ್ಲಿ ಬುದ್ಧಿಮಾಂದ್ಯ. ಇನ್ನು ಮಗಳು ಲೋಕ ಜ್ಞಾನವಿಲ್ಲದ ಮಗು. ಮುಂಜಾನೆಯ ಬೆಳಕಿನಲ್ಲಿ ಕಾಣುವ ಮಂಜಿನಷ್ಟೆಸುಂದರವಾದ ಲೋಕದಲ್ಲಿ ಬದುಕುತ್ತಿರುವ ಇಬ್ಬರನ್ನು ವಿಧಿ ದೂರ ಮಾಡುತ್ತದೆ. ಅದು ಮತ್ತೊಂದು ಪುಟ್ಟಕಂದನ ಸಾವು ಮತ್ತು ವಿಮಾನ ಕೊಳ್ಳುವ ಆಸೆಯಿಂದ ಸಂಭವಿಸುವ ದುರಂತ.
ಅಪ್ಪ ಜೈಲು ಸೇರುತ್ತಾನೆ. ಮಗಳು ಅನಾಥಾಶ್ರಮದ ಮುಂದೆ ನಿಲ್ಲುತ್ತಾಳೆ. ಮುಂದೆ ತಮ್ಮ ತಂದೆಯನ್ನು ನೋಡಲು ಜೈಲಿಗೆ ಬರುವ ಮಗಳು, ಜೈಲಿನ ಕಂಬಿಗಳನ್ನು ಮರೆತು ಮಗಳ ಮುಖ ಕಂಡು ಕುಣಿಯುವ ಅಪ್ಪ, ಇವರ ಸಂತೋಷ ನೋಡಿ ಮಾಡದ ತಪ್ಪಿಗೆ ಜೈಲು ಸೇರಿದವನನ್ನು ಬಿಡಿಸುವ ಸಾಹಸ ಮಾಡುವ ಸಹ ಕೈದಿಗಳ ಮಾನವೀಯತೆ, ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುವ ಜೈಲರ್... ಹೀಗೆ ಚಿತ್ರದ ಪ್ರತಿ ದೃಶ್ಯವೂ ಆಪ್ತವಾಗಿಯೇ ಸಾಗುತ್ತದೆ. ಇದೆಲ್ಲವೂ ಫ್ಲ್ಯಾಷ್ ಬ್ಯಾಕ್ ರೂಪದಲ್ಲಿ ದೊಡ್ಡವಳಾದ ಮೇಲೆ ಕೋರ್ಟ್ನಲ್ಲಿ ನಿಂತು ಅನಂತರಾಮಯ್ಯ ಮಗಳು ಹೇಳುತ್ತಾಳೆ. ಕಾನೂನೇ ಸಾಯಿಸಿದ ವ್ಯಕ್ತಿಯನ್ನು ಅದೇ ಕಾನೂನು ಆರೋಪಮುಕ್ತವಾಗಿಸುತ್ತದೆ. ಆದರೆ, ಅಷ್ಟೊತ್ತಿಗೆ ಆಕೆಯ ಅಪ್ಪ ಮಾಡದ ತಪ್ಪಿಗೆ ನೇಣಿಗೆ ಕೊರಳೊಡ್ಡಿರುತ್ತಾನೆ. ‘ನಿನ್ನ ಮಗ ಕೆಟ್ಟವನು' ಅಂದಾಗ ತಾಯಿ ಹೇಗೆ ಸಹಿಸಿಕೊಳ್ಳುವುದಿಲ್ಲವೋ, ಹಾಗೆ ತನ್ನ ಅಪ್ಪ ಅತ್ಯಾಚಾರ ಅರೋಪಕ್ಕೆ ಬಲಿಯಾದರೂ ‘ನನ್ನ ತಂದೆ ತಪ್ಪು ಮಾಡಿಲ್ಲ' ವೆಂದು ವಾದಿಸಿ ಗೆಲ್ಲುವ ಮೂಲಕ ದೇವರಂಥ ಅಪ್ಪನಿಗೆ ಮಗಳೇ ತಾಯಿಯಾಗುತ್ತಾಳೆ.
ವಿಮಾನದ ಕನಸು ಕಾಣುವುದು, ಮಗಳ ಜತೆಗೆ ಅಪ್ಪನ ಡ್ಯಾನ್ಸ್ , ಇನ್ನೇನು ಒಂದು ತುತ್ತು ಬಾಯಿಗಿಟ್ಟುಕೊಳ್ಳುವಾಗ ಸೈಕಲ್ ರಿಕ್ಷಾ ಹತ್ತಲು ಬಂದಾಗ ಕೈ ತೊಳೆದು ಸೈಕಲ್ ತುಳಿಯುವುದಕ್ಕೆ ಹೋಗುವ... ಜೈಲಿನ ಒಂದಿಷ್ಟುಅನಾವಶ್ಯಕ ಮತ್ತು ಅಸಭ್ಯಕರವಾದ ದೃಶ್ಯಗಳ ಹೊರತಾಗಿ ಇಡೀ ಚಿತ್ರ ಕಾಡುತ್ತದೆ. ಹೀಗೆ ಕಾಡುವ ಚಿತ್ರಕ್ಕೆ ನೋಡಿಸಿಕೊಳ್ಳುವ ಗುಣವೂ ಇದೆ ಎನ್ನುವ ‘ಪುಷ್ಪಕ ವಿಮಾನ'ಕ್ಕೆ ಮತ್ತಷ್ಟು ಶಕ್ತಿ ತುಂಬಿರುವುದು ಚರಣ್ ರಾಜ್'ರ ಸಂಗೀತ, ಭುವನ್ ಗೌಡರ ಕ್ಯಾಮೆರಾ ಕಣ್ಣು. ಅಚ್ಚರಿಯಾಗುವಂತೆ ನಿರೀಕ್ಷೆಗೂ ಮೀರಿ ಭುವನ್ ಗೌಡ, ಸ್ಥಿರ ಚಿತ್ರಗಳನ್ನು ಮಾತ್ರವಲ್ಲ, ಚಲಿಸುವ ದೃಶ್ಯಗಳನ್ನೂ ಹಿಡಿಯಬಲ್ಲೆ ಎಂಬುದನ್ನು ತೋರಿದ್ದಾರೆ. ಚಿತ್ರಕ್ಕೆ ಬಳಸಿರುವ ಹಿನ್ನೆಲೆ ಕೂಡ ಕ್ಯಾಮೆರಾಗೆ ಸಹಕಾರಿಯಾಗಿದೆ. ಅನಂತರಾಯ್ಯನ ಪಾತ್ರಧಾರಿ ರಮೇಶ್ ಅರವಿಂದ್ರ ಪ್ರಭಾವ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂಬುದೇ ರಮೇಶ್ರ ಪ್ರತಿಭೆಗೆ ಹಿಡಿದ ಕನ್ನಡಿ. ತೊದಲು ಮಾತುಗಳನ್ನಾಡುವಾಗ ಕೊಂಚ ಕಷ್ಟಪಟ್ಟಿದ್ದಾರೆ ಅನ್ನುವುದು ಬಿಟ್ಟರೆ ರಮೇಶ್, ಇಡೀ ಚಿತ್ರದಲ್ಲಿ ಅನಂತರಾಯ್ಯನೇ. ಪುಟ್ಟಪಾತ್ರದಲ್ಲಿ ಯುವಿನಾಳದ್ದು ಮುಗ್ಧ ನಟನೆ. ರಚಿತಾ ರಾಮ್, ರವಿಕಾಳೆ ನೆನಪಿನಲ್ಲಿ ಉಳಿಯುತ್ತಾರೆ.
- ಆರ್ ಕೇಶವಮೂರ್ತಿ, ಕನ್ನಡಪ್ರಭ
(epaper.kannadaprabha.in)
