Asianet Suvarna News Asianet Suvarna News

ಜೀರ್ಜಿಂಬೆ ಬೆನ್ನಿಗೆ ನಿಂತ ಪುಷ್ಕರ್

ಕನ್ನಡದಲ್ಲಿ ಹೊಸ ಥರದ, ಬೇರೆ ಚಿತ್ರರಂಗದವರು ತಿರುಗಿ ನೋಡುವಂತಹ, ಮನಮುಟ್ಟುವ ವಿಷಯ ಹೊಂದಿರುವ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗುತ್ತಿದೆ. ಈ ಥರದ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ‘ಜೀರ್ಜಿಂಬೆ’. ಕಾರ್ತಿಕ್ ಸರಗೂರು ನಿರ್ದೇಶನದ, ಸಿರಿ ವಾನಳ್ಳಿ- ಸುಮನ್ ನಗರ್‌ಕರ್ ಅಭಿನಯದ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಪಾಲುದಾರರಾಗಿರುವ ಈ ಚಿತ್ರದ ಸಂಪೂರ್ಣ ಮಾಹಿತಿ ಇಲ್ಲಿದೆ. 

pushkar mallikarjun supports Jeerjimbe cinema
Author
Bengaluru, First Published Nov 12, 2018, 10:19 AM IST

ಕೇವಲ ಸಿನಿಮಾ ಪ್ರೀತಿಯಿಂದ ಸಿದ್ಧವಾದ ಚಿತ್ರ ‘ಜೀರ್ಜಿಂಬೆ’. ನಿರ್ದೇಶಕ ಕಾರ್ತಿಕ್ ಸರಗೂರು ಮತ್ತು ಅವರ 18 ಮಂದಿ ಸ್ನೇಹಿತರು ಸ್ವಲ್ಪ ಸ್ವಲ್ಪ ದುಡ್ಡು ಹಾಕಿದ ಕಾರಣದಿಂದ ಸಿನಿಮಾ ಶುರುವಾಯಿತು. ದುಡ್ಡು ಸಾಲದೇ ಒಂದು ಹಂತದಲ್ಲಿ ನಿಂತುಬಿಟ್ಟಿತು. ಮತ್ತೊಂದಷ್ಟು ಮಂದಿ ಸ್ನೇಹಿತರು ಜೊತೆಯಾದರು. ಸಿನಿಮಾ ಪೂರ್ತಿ ಮಾಡಲು ಮತ್ತೊಂದಷ್ಟು ದುಡ್ಡು ಕೂಡಿತು. ಈ ಸಿನಿಮಾದ ಕತೆ ಕೇಳಿದ ಒಬ್ಬ ವೃದ್ಧರು ತಾನು ಎಫ್‌ಡಿ ಇಟ್ಟಿದ್ದ ಒಂದು ಲಕ್ಷ ಹಣವನ್ನು ತಂಡಕ್ಕೆ ನೀಡಿದರು. ಈ ತಂಡವನ್ನು ಕೊನೆಯಲ್ಲಿ ಸೇರಿಕೊಂಡಿದ್ದು ಪುಷ್ಕರ್ ಮಲ್ಲಿಕಾರ್ಜುನಯ್ಯ. 

ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಹಾಗೂ ವಿವಿಧ ಮೂರು ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿಗಳನ್ನ ಪಡೆದಿರುವ, ಸಿರಿ ವಾನಳ್ಳಿ, ಸುಮನ್ ನಗರ್‌ಕರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ನೋಡಿ ಚಿತ್ರೋತ್ಸವದಲ್ಲಿ ಅದೆಷ್ಟೋ ಮಂದಿ ಕಣ್ಣೀರು ಹಾಕಿದ್ದಾರೆ. ಚಿತ್ರದ ಕೊನೆಯಲ್ಲಿ ನಗು ಬೀರಿದ್ದಾರೆ. ಚಿತ್ರದ ಕುರಿತು ಚರ್ಚೆ ಮಾಡಿದ್ದಾರೆ. ಈ ಸಿನಿಮಾ ನವೆಂಬರ್ 16 ರಂದು ಬಿಡುಗಡೆಯಾಗುತ್ತಿದೆ.

ಈ ಸಿನಿಮಾ ಯಾಕೆ ನೋಡಬೇಕು?

  • ಹೈಸ್ಕೂಲು ಓದುತ್ತಿರುವ ಅದೆಷ್ಟೋ ಹಳ್ಳಿಯ ಹೆಣ್ಣು ಮಕ್ಕಳ ಕನಸು ಬಾಲ್ಯವಿವಾಹದಲ್ಲಿ ಮುಕ್ತಾಯವಾಗುತ್ತಿದೆ. ಅಂಥಾ ಹೆಣ್ಣು ಮಕ್ಕಳು ಆ ಸಮಸ್ಯೆಯಿಂದ ಆಚೆ ಬರುವಂತೆ ಈಚಿತ್ರ ಸ್ಫೂರ್ತಿ ತುಂಬುತ್ತದೆ. ನಗರ ಪ್ರದೇಶದ ಮಕ್ಕಳಿಗೆ ಆ ಮಕ್ಕಳ ಮೇಲೆ ಪ್ರೀತಿಯುಂಟಾಗಿ ಬಾಂಧವ್ಯ ಬೆಳೆಯುತ್ತದೆ.
  • ಮಕ್ಕಳ ಕತೆಯನ್ನು ಹೇಳುವ ಮೂಲಕ ಪೋಷಕರಲ್ಲಿ ಬದಲಾವಣೆ ತರಲು ಹೊರಟಿದ್ದೇವೆ. ಪೋಷಕರು ಮಕ್ಕಳನ್ನು ಜೊತೆಗೆ ಕರೆದೊಯ್ದು ಈ ಚಿತ್ರ ನೋಡಬೇಕು. ಈ ಚಿತ್ರ ನೋಡಿ ವಾಪಸ್ ಬಂದ ಮೇಲೆ ಖಂಡಿತಾ ಪೋಷಕರು ಮತ್ತು ಮಕ್ಕಳು ಜತೆಯಲ್ಲಿ ಕುಳಿತು ಮಾತನಾಡುವ ವಿಷಯ ತುಂಬಾ ಇದೆ.
  • ಸರ್ಕಾರದ ಒಂದು ಒಳ್ಳೆಯ ಯೋಜನೆ ಹೇಗೆ ಜೀವನ ಬದಲಿಸಬಹುದು ಅನ್ನುವುದೂ ಚಿತ್ರದ ಒಂದು ಅಂಶ. ಅಭಿವೃದ್ಧಿಪರ ಅಂಶವನ್ನು ಎಲ್ಲಾ ಜನಪ್ರತಿನಿಧಿಗಳು ನೋಡಬೇಕು ಅನ್ನೋ ಆಸೆ ನಮ್ಮದು.
  • ಒಂದು ಸೈಕಲ್ ಹೇಗೆ ಬದುಕು ಬದಲಿಸಬಹುದು ಅನ್ನುವ ಕತೆ, ಗುಡ್ ಟಚ್ ಬ್ಯಾಡ್ ಟಚ್ ಯಾವುದು ಅನ್ನುವುದನ್ನು ಸೂಕ್ಷ್ಮವಾಗಿ ಸೂಚಿಸುವ ಕತೆ ಇಲ್ಲಿದೆ.

ಕಾರ್ತಿಕ್ ಸರಗೂರು ಹೇಳಿದ್ದು

  • ರಾಮಕೃಷ್ಣ ಮಿಷನ್ ಕಡೆಯಿಂದ ಬಂದವನು. ವಿವೇಕಾನಂದ ಸರ್ವಿಸ್ ಸೊಸೈಟಿಯಿಂದ ಮಕ್ಕಳಿಗೆ ಸಹಾಯವಾಗುವ ಕೆಲಸ ಮಾಡುತ್ತಿದ್ದೆವು. ನಮ್ಮಲ್ಲಿ ಸುಮಾರು ಶೇ.40ರಷ್ಟು ಜನಸಂಖ್ಯೆ 15 ವಯಸ್ಸಿಗಿಂತ ಕಡಿಮೆಯವರು ಅವರಿಗಾಗಿ ಸಿನಿಮಾ ಮಾಡಬೇಕು ಅಂತ ಆಸೆಯಿತ್ತು.
  • ಬಾಲ್ಯವಿವಾಹ ವಿಷಯ ಬೆನ್ನು ಹತ್ತಿ ಹೋದಾಗ ನಮಗೆ ಆಶ್ಚರ್ಯ ಕಾದಿತ್ತು. ಯುನೆಸ್ಕೋ ವರದಿ ಪ್ರಕಾರ ವರ್ಷಕ್ಕೆ ಪ್ರಪಂಚದಲ್ಲಿ 12 ದಶಲಕ್ಷ ಮಕ್ಕಳು ಬಾಲ್ಯ ವಿವಾಹ ಆಗುತ್ತಾರೆ. ಅದರಲ್ಲಿ ಮೂರರಲ್ಲಿ ಒಂದು ಮಗು ನಮ್ಮ ದೇಶದವಳು. ನಾವು ಎಷ್ಟೇ ಮುಂದುವರಿದರೂ ಈಗಲೂ ಆ ಸಮಸ್ಯೆ ಇದೆ.
  • ಚಿತ್ರರಂಗದ ನಾವು ನಮ್ಮ ಸಾಮಾಜಿಕ ಬದ್ಧತೆ ತೋರಿಸಿದ್ದೇವೆ. ಪ್ರೇಕ್ಷಕರೂ ಆ ಬದ್ಧತೆ ತೋರಿಸುತ್ತಾರೆ ಅನ್ನುವ ನಂಬಿಕೆ ನನಗಿದೆ.
  • ನಾವು ರಥ ಕೆತ್ತಿಕೊಂಡು ಕುಳಿತಿದ್ದೆವು. ಆ ರಥ ಎಳೆಯುವವರಿರಲಿಲ್ಲ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಮ್ಮ ಜತೆಯಾಗಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಅವರಿಗೆ ಆಭಾರಿ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಿಂದಲೂ ನಾನು ಒಂದೊಳ್ಳೆಯ ಕತೆ ಹೇಳುವ ಸಿನಿಮಾ ಮಾಡಬೇಕು ಎನ್ನುವ ಆಸೆ ಹೊಂದಿದ್ದೆ. ಒಂದು ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಚರಣ್‌ರಾಜ್ ಈ ಚಿತ್ರದ ಕುರಿತು ಹೇಳಿದರು. ಆಗ ಈ ಚಿತ್ರದ ಕೆಲವು ಭಾಗಗಳನ್ನು ನೋಡಿ, ಈ ಕತೆ ಜನರಿಗೆ ತಲುಪಬೇಕು ಎಂಬು ಆಸೆಯಿಂದ ನಾನು ನಿರ್ಮಾಣಕ್ಕೆ ಜೊತೆಯಾದೆ. ನಾನು ಹಳ್ಳಿಯಿಂದ ಬಂದವನು. ಹಳ್ಳಿಯ ಹೆಣ್ಣು ಮಕ್ಕಳ ಕಷ್ಟ ದೂರಾಗಬೇಕು ಎಂಬ ಉದ್ದೇಶ ಇರುವ ಚಿತ್ರವಿದು. ಜಾಸ್ತಿ ಜನರಿಗೆ ತಲುಪಿ ಸ್ವಲ್ಪ ಬದಲಾವಣೆ ಸಾಧ್ಯವಾದರೂ ನಮ್ಮ ಉದ್ದೇಶ ಸಾರ್ಥಕ - ಪುಷ್ಕರ್ ಮಲ್ಲಿಕಾರ್ಜುನಯ್ಯ

 

 

Follow Us:
Download App:
  • android
  • ios