ಬೆಂಗಳೂರು (ಮೇ. 19): ಪುನೀತ್ ರಾಜ್‌ಕುಮಾರ್ ‘ನಟ ಸಾರ್ವಭೌಮ’ ಚಿತ್ರದಲ್ಲಿ ದಿಢೀರ್ ಎಂದು ಬಿ ಸರೋಜದೇವಿ ಕಾಣಿಸಿಕೊಂಡಿದ್ದು ಯಾಕೆ? ಚಿತ್ರೀಕರಣ ಎಲ್ಲಿಯವರೆಗೆ ಬಂತು? - ಈ ಎಲ್ಲಾ ಪ್ರಶ್ನೆಗಳಿಗೆ ಪವನ್ ಒಡೆಯರ್  ಉತ್ತರಿಸಿದ್ದಾರೆ. 

ಬಿ ಸರೋಜದೇವಿ ಕಾಣಿಸಿಕೊಂಡಿದ್ದಾರಲ್ಲ...

‘ನಟ ಸಾರ್ವಭೌಮ’ ಚಿತ್ರದಲ್ಲಿ ಹಿರಿಯ ನಟಿ ಬಿ ಸರೋಜದೇವಿ ಅವರದ್ದು ಮುಖ್ಯವಾದ ಪಾತ್ರ. ಮೂರು ದಿನಗಳಿಂದ ನೆಲಮಂಗಲದ ಕಣ್ವ ರೆಸಾರ್ಟ್‌ನಲ್ಲಿ ಚಿತ್ರೀಕರಣ  ನಡೆಯುತ್ತಿದೆ. 

ಪುನೀತ್ ಹಾಗೂ ಸರೋಜದೇವಿ ಅವರಿಗೆ ಈ ಚಿತ್ರದಲ್ಲಿ ಯಾವ ರೀತಿಯ ನಂಟು?

ದಕ್ಷಿಣ ಭಾರತದ ಪ್ರಸಿದ್ಧ ನಟಿ ಬಿ ಸರೋಜದೇವಿಯಾಗಿಯೇ ಅವರು ತಮ್ಮ ಪಾತ್ರವನ್ನು ತೆರೆ ಮೇಲೆ ನಿರ್ವಹಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಈ ನಟಿಗೆ ಸರ್ಕಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿರುತ್ತದೆ. ಅಂಥ ಸಂದರ್ಭದಲ್ಲಿ ಈ ಹಿರಿಯ ನಟಿಯನ್ನು ಹುಡುಕಿಕೊಂಡು ಹೋಗಿ ಸಂದರ್ಶನ ಮಾಡುವ ಪಾತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್  ಅವರದ್ದು ಪತ್ರಕರ್ತನ ಪಾತ್ರ. ಹಾಗೆ ಇಬ್ಬರ ನಡುವೆ ನಡೆಯುವ ಸಂದರ್ಶನದ ದೃಶ್ಯಗಳ ಚಿತ್ರೀಕರಣ  ನಡೆಯುತ್ತಿದೆ.

ಈ ಪಾತ್ರಕ್ಕೆ ಬಿ ಸರೋಜದೇವಿ ಅವರೇ ಯಾಕೆ?
ಪಂಚಭಾಷಾ ತಾರೆ. ಡಾ ರಾಜ್‌ಕುಮಾರ್, ಎಂಜಿಆರ್, ಎನ್ ಟಿಆರ್, ಶಿವಾಜಿ ಗಣೇಶನ್ ಹೀಗೆ ದಿಗ್ಗಜ ತಾರೆಗಳ ಜತೆ ಕಾಣಿಸಿಕೊಂಡವರು. ನಮ್ಮ ಚಿತ್ರದಲ್ಲೂ ಒಬ್ಬ ಸೂಪರ್‌ಸ್ಟಾರ್ ನಟಿಯ ಪಾತ್ರ ಇದೆ. ಅಂಥ ಪಾತ್ರಕ್ಕೆ ನಮಗೆ ಸರೋಜದೇವಿ ಬಿಟ್ಟರೆ ಬೇರೆಯವರು ನೆನಪಾಗಲಿಲ್ಲ. ಜತೆಗೆ ಅಪ್ಪು ಹಾಗೂ ಸರೋಜದೇವಿ ಅವರು ‘ಯಾರಿವನು’ ಚಿತ್ರದ ನಂತರ ಮತ್ತೆ  ನಟಿಸಲೇ ಇಲ್ಲ. 34 ವರ್ಷಗಳ ನಂತರ ಈ ಕಾಂಬಿನೇಷನ್ ಮತ್ತೆ ತೆರೆ ಮೇಲೆ ಬರಬೇಕು ಎನ್ನುವ ಉದ್ದೇಶ ಕೂಡ ಇತ್ತು.

ಇನ್ನೂ ಎಷ್ಟು ದಿನ ಚಿತ್ರೀಕರಣ ನಡೆಯಲಿದೆ?

20 ದಿನ ಚಿತ್ರೀಕರಣ ಮಾಡಿದ್ದೇವೆ. ಇನ್ನೂ ೬೦ ದಿನ ಬಾಕಿ ಉಳಿದುಕೊಂಡಿದೆ. ಮೊದಲ ಹಂತದಲ್ಲಿ ಕೇವಲ ಮಾತಿನ ಭಾಗದ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದೇವೆ. ಸರೋಜದೇವಿ ಪಾತ್ರದ ಚಿತ್ರೀಕರಣ ಮುಗಿದ ಮೇಲೆ ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಬಳ್ಳಾರಿ, ಕೋಲ್ಕತ್ತಾದಲ್ಲಿ ಚಿತ್ರೀಕರಣ ನಡೆಯಲಿದೆ.

ಚಿತ್ರದಲ್ಲಿ ಅಪ್ಪು ಪಾತ್ರ ಹೇಗಿದೆ?
ಕನ್ನಡದಲ್ಲಿ ಸ್ಟಾರ್ ನಟರು ಪತ್ರಕರ್ತರ ಪಾತ್ರ ಮಾಡಿರುವುದು ತುಂಬಾ ಅಪರೂಪ. ಹಳೆಯ ಸಿನಿಮಾಗಳಲ್ಲಿ ಪತ್ರಕರ್ತರ ಪಾತ್ರಗಳು ಕಾಣಿಸಿಕೊಳ್ಳುತ್ತಿತ್ತು. ಮೊದಲ ಬಾರಿಗೆ ಅಪ್ಪು  ಪತ್ರಕರ್ತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್, ಕ್ಲಾಸ್ ಎರಡೂ ನೆರಳಿನ ಪಾತ್ರ ಇಲ್ಲಿದೆ.

ಮೇಕಿಂಗ್ ಹೇಗಿದೆ? ಯಾರೆಲ್ಲ ಚಿತ್ರದಲ್ಲಿದ್ದಾರೆ?
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಯಾವುದಕ್ಕೂ ಕೊರತೆ ಮಾಡಿಲ್ಲ. ಅದ್ದೂರಿಯಾಗಿ ಮೇಕಿಂಗ್ ಮೂಡಿ ಬರುತ್ತಿದೆ. ವೈದಿ ಕ್ಯಾಮೆರಾ, ಇಮಾನ್ ಸಂಗೀತ ಇದೆ. ಸಾಧು ಕೋಕಿಲಾ, ಚಿಕ್ಕಣ್ಣ, ಬಾಹುಬಲಿ ಪ್ರಭಾಕರ್, ರವಿಶಂಕರ್, ಅವಿನಾಶ್, ಅಚ್ಯುತ್ ಕುಮಾರ್, ಶ್ರೀನಿವಾಸಮೂರ್ತಿ ನಟಿಸುತ್ತಿದ್ದಾರೆ.