ಆಗ್ರಾ(ಜೂ.1): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಥಳಿಸಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ‘ಹಿಂದೂ ಹೀ ಆಗೇ’ ಸಂಘಟನೆ ಘೋಷಣೆ ಮಾಡಿದೆ. ಈ ಸಂಘಟನೆಯನ್ನು ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಸಂಘಟಿಸಿದ್ದಾರೆ.

ಸಲ್ಮಾನ್ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆ ಡಿಯಲ್ಲಿ ಲವ್‌ರಾತ್ರಿ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು,  ಚಿತ್ರ ನವರಾತ್ರಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಈ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಅವರಿಗೆ ಸಾರ್ವಜನಿಕವಾಗಿ ಥಳಿಸಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಹಿಂದೂ ಹೀ ಆಗೇ ಸಂಘಟನೆಯ ಆಗ್ರಾ ಘಟಕದ ಮುಖ್ಯಸ್ಥ ಗೋವಿಂದ ಪರಾಶರ್ ಘೋಷಿಸಿದ್ದಾರೆ. 

ಚಿತ್ರಕ್ಕೆ ಲವ್‌ರಾತ್ರಿ ಎಂದು ಹೆಸರಿಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದು, ಚಿತ್ರಕ್ಕೆ ನಿಷೇಧ ಹೇರಬೇಕೆಂದು ಸಂಘಟನೆ ಆಗ್ರಹಿಸಿದೆ. ಸಂಘಟನೆಯ ಕಾರ್ಯಕರ್ತರು ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿತ್ರದ ಸೆಟ್ ಧ್ವಂಸಗೊಳಿಸಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಪರಾಶರ್ ಹೇಳಿದ್ದಾರೆ.
 
ಒಂದುವೇಳೆ ಯಾವುದಾದರೂ ಚಿತ್ರಮಂದಿರ ಸಲ್ಮಾನ್ ಅವರ ಲವ್ ರಾತ್ರಿ ಚಿತ್ರ ಪ್ರದರ್ಶನ ಮಾಡಿದರೆ ಅದಕ್ಕೆ ಬೆಂಕಿ ಹಚ್ಚುವುದಾಗಿಯೂ ಸಂಘಟನೆ ಬೆದರಿಕೆ ಹಾಕಿದೆ. ಅಲ್ಲದೇ ಮುಂದಾಗುವ ಅನಾಹುತಕ್ಕೆ ಚಿತ್ರಮಂದಿರದ ಮಾಲೀಕರೇ ಹೊಣೆಗಾರರು ಎಂದು ಎಚ್ಚರಿಕೆ ನೀಡಲಾಗಿದೆ.