ಬಿಗ್'ಬಾಸ್'ನ ಅನೇಕ ಮಾಜಿ ಕಂಟೆಸ್ಟೆಂಟ್'ಗಳೂ ಕೂಡ ಪ್ರಥಮ್ ಮತ್ತು ರೇಖಾಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದು ಗಮನಾರ್ಹ.

ಬೆಂಗಳೂರು(ಜ. 28): ಈ ಬಾರಿಯ ಬಿಗ್ ಬಾಸ್'ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಪ್ರಥಮ್ ಅವರೇ ಗೆಲುವು ಸಾಧಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಸುವರ್ಣನ್ಯೂಸ್'ಗೆ ಸಿಕ್ಕ ಮಾಹಿತಿ ಪ್ರಕಾರ ಪ್ರಥಮ್ ಬಿಗ್ ಬಾಸ್ ನಾಲ್ಕನೇ ಸೀಸನ್'ನ ವಿನ್ನರ್ ಆಗಿದ್ದಾರೆ. ಫಿನಾಲೆಗೆ ಏರಿದ ಪ್ರಥಮ್, ರೇಖಾ, ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಪೈಕಿ ಪ್ರಥಮ್ ಅತೀ ಹೆಚ್ಚು ವೋಟ್ ಗಳಿಸಿದ ಆಧಾರದ ಮೇಲೆ ಅಗ್ರಸ್ಥಾನ ಪಡೆದಿದ್ದಾರೆನ್ನಲಾಗಿದೆ. ರೇಖಾ ಮೊದಲ ರನ್ನರ್ ಆದರೆ, ಕೀರ್ತಿ ಸೆಕೆಂಡ್ ರನ್ನರ್ ಅಪ್ ಆಗಿರುವ ಸುದ್ದಿಯೂ ಇದೆ. ನಿನ್ನೆಯವರೆಗೂ ನಡೆದ ವೋಟಿಂಗ್'ನಲ್ಲಿ ಪ್ರಥಮ್ ಮುಂದಿದ್ದರು. ಇಂದು ಮಧ್ಯಾಹ್ನ ವೋಟಿಂಗ್ ಸಮಾಪ್ತಿಯಾಗಿದ್ದು, ಪ್ರಥಮ್'ಗೆ ರೇಖಾ ನಿಕಟ ಪೈಪೋಟಿ ನೀಡಿರುವ ಮಾಹಿತಿಯೂ ಕೇಳಿಬಂದಿದೆ. ಕೊನೆ ಕ್ಷಣದಲ್ಲಿ ಫಲಿತಾಂಶ ರೇಖಾ ಪರ ವಾಲುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ನಿನ್ನೆ ಸುವರ್ಣನ್ಯೂಸ್ ನಡೆಸಿದ ಆನ್'ಲೈನ್ ಸಮೀಕ್ಷೆಯಲ್ಲೂ ಪ್ರಥಮ್'ಗೆ ಅತೀ ಹೆಚ್ಚು ಜನರು ಬೆಂಬಲ ವ್ಯಕ್ತಪಡಿಸಿದ್ದರು. ರೇಖಾ ಮತ್ತು ಪ್ರಥಮ್'ಗೆ ಹೆಚ್ಚು ವೋಟ್ ಬಂದಿದ್ದವು. ಬಿಗ್'ಬಾಸ್'ನ ಅನೇಕ ಮಾಜಿ ಕಂಟೆಸ್ಟೆಂಟ್'ಗಳೂ ಕೂಡ ಪ್ರಥಮ್ ಮತ್ತು ರೇಖಾಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದು ಗಮನಾರ್ಹ.

ಪ್ರಥಮ್ ಅವರ ಮಾತುಗಳು ಸಹ ಸ್ಪರ್ಧಿಗಳನೇಕರಿಗೆ ತೀರಾ ಕಿರಿಕಿರಿ ಎನಿಸಿದರೂ ವೀಕ್ಷಕರಿಗೆ ಅವರು ನೇರ ನಡೆನುಡಿಯವರೆನಿಸಿದ್ದಾರೆ. ಇನ್ನು, ರೇಖಾ ಅವರನ್ನು ಸ್ವೀಟ್ ರೇಖಾ ಎಂದೇ ಅಭಿಮಾನಿಗಳು ಸಂಬೋಧಿಸುತ್ತಾರೆ. ಬಹಳ ಪಕ್ವವಾದ ಗೇಮ್ ಆಡಿರುವ ಇವರು ಗೆದ್ದರೆ ಬಿಗ್ ಬಾಸ್ ಶೋಗೆ ಒಂದು ಗೌರವ ಎಂಬ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿವೆ.

ಹಿಂದಿನ ಬಿಗ್'ಬಾಸ್ ವಿನ್ನರ್ಸ್:
ಸೀಸನ್ 1: ವಿಜಯ ರಾಘವೇಂದ್ರ
ಸೀಸನ್ 2: ಅಕುಲ್ ಬಾಲಾಜಿ
ಸೀಸನ್ 3: ಶೃತಿ