ಕನ್ನಡ ಸಿನಿಮಾ ರಂಗದ ದಿಗ್ಗಜರಾದ ಅಂಬರೀಶ್, ರವಿಚಂದ್ರನ್, ಬಿ. ಸರೋಜಾದೇವಿ, ಜಯಂತಿ, ಹಂಸಲೇಖ, ಸುಧಾರಾಣಿ, ಜಗ್ಗೇಶ್, ರಾಕ್'ಲೈನ್ ವೆಂಕಟೇಶ್, ದೇವರಾಜ್ ಸೇರಿದಂತೆ ಹಲವು ಕಲಾವಿದರು,ತಂತ್ರಜ್ಞರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೊಂಡ ಸಚಿವ ಸಂಪುಟ ಸದಸ್ಯರು, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾರ್ವತಮ್ಮವನರ ಅಂತಿಮ ದರ್ಶನ ಪಡೆದರು.

ಬೆಂಗಳೂರು(ಮೇ.31): ದಿ. ನಟ ಡಾ. ರಾಜ್ ಕುಮಾರ್ ಅವರ ಬಾಳಿಗೆ ಜೀವನ ಜ್ಯೋತಿಯಾಗಿ, ಮಕ್ಕಳಾದ ಶಿವರಾಜ್, ರಾಘವೇಂದ್ರ ಹಾಗೂ ಪುನೀತ್ ಅವರ ಸಿನಿಮಾ ಬದುಕಿಗೆ ಆಧಾರ ಸ್ತಂಭವಾಗಿ ಕನ್ನಡ ಚಿತ್ರರಂಗಕ್ಕೆ ಆದರ್ಶ ಮಹಿಳೆಯಾಗಿ ಹಲವರ ಬಾಳಿಗೆ ಬೆಳಕಾಗಿ ಮೂರು ದಶಕಗಳ ಕಾಲ 70ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದ ಪಾರ್ವತಮ್ಮ ರಾಜ್'ಕುಮಾರ್(78) ಅವರು ತಮ್ಮ ಜೀವನದ ಅಂತಿಮ ಯಾತ್ರೆ ಮುಗಿಸಿದ್ದಾರೆ.

ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾರ್ವತಮ್ಮ'ನವರು ಇಂದು ಮುಂಜಾನೆ 4.30ಕ್ಕೆ ಬಹು ಅಂಗಾಗ ವೈಫಲ್ಯದಿಂದ ಕೊನೆಯುಸಿರೆಳೆದರು. ಬೆಳ್ಳಿ ತೆರೆಗೆ ಅಪಾರ ಸೇವೆ ಸಲ್ಲಿಸಿದ್ದ ದಿಟ್ಟ ಮಹಿಳೆಗೆ ಸದಾಶಿವ ನಗರದ ಸ್ವಗೃಹದಲ್ಲಿ ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಅಂತಿಮ ದರ್ಶನದ ವ್ಯಸಸ್ಥೆ ಮಾಡಲಾಗಿತ್ತು.

ಕನ್ನಡ ಸಿನಿಮಾ ರಂಗದ ದಿಗ್ಗಜರಾದ ಅಂಬರೀಶ್, ರವಿಚಂದ್ರನ್, ಬಿ. ಸರೋಜಾದೇವಿ, ಜಯಂತಿ, ಹಂಸಲೇಖ, ಸುಧಾರಾಣಿ, ಜಗ್ಗೇಶ್, ರಾಕ್'ಲೈನ್ ವೆಂಕಟೇಶ್, ದೇವರಾಜ್ ಸೇರಿದಂತೆ ಹಲವು ಕಲಾವಿದರು,ತಂತ್ರಜ್ಞರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೊಂಡ ಸಚಿವ ಸಂಪುಟ ಸದಸ್ಯರು, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾರ್ವತಮ್ಮವನರ ಅಂತಿಮ ದರ್ಶನ ಪಡೆದರು.

ಪತಿಯ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ

ಪತಿ ಹಾಗೂ ಕನ್ನಡ ಚಿತ್ರರಂಗವನ್ನು 5 ದಶಕಗಳ ಕಾಲ ಆಳಿದ ಮೇರು ಪರ್ವತ ದಿ. ಡಾ.ರಾಜ್'ಕುಮಾರ್ ಅವರ ಸಮಾಧಿಯಿರುವ ಕಂಠೀರವ ಸ್ಟುಡಿಯೋ ಪಕ್ಕದಲ್ಲಿಯೇ ಪಾರ್ವತಮ್ಮ'ನವರನ್ನು ಈಡಿಗ ಪದ್ಧತಿಯ ದಾಸ ಸಂಪ್ರದಾಯದಂತೆ ಸಂಜೆ. 5.30 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವ ಸೂಚಿಸಲಾಯಿತು. ಕಿರಿಯ ಪುತ್ರ ನಟ ಪುನೀತ್ ರಾಜ್ ಕುಮಾರ್ ತಮ್ಮ ತಾಯಿಯ ಅಂತಿಮ ಯಾತ್ರೆಯ ವಿಧಿ ವಿಧಾನಗಳನ್ನು ಪೂರೈಸಿದರು.

ಪಾರ್ವತಮ್ಮನವರ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್'ಕುಮಾರ್, ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ, ಅಳಿಯಂದಿರು, ಸೊಸೆಯರು, ವಿವಿಧ ರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಕೊನೆಯ ಯಾತ್ರೆಗೆ ಸಾಕ್ಷಿಯಾದರು.

ಹಲವು ಕಲಾವಿದೆಯರನ್ನು ಪರಿಚಯಿಸಿದ್ದ ಆದರ್ಶ ಮಹಿಳೆ

ಕನ್ನಡ ಚಿತ್ರರಂಗಕ್ಕೆ ಕಾಲಿಡುವ ನಟ, ನಿರ್ದೇಶಕ, ನಿರ್ಮಾಪಕರಿಗೆ ಆದರ್ಶ ಮಹಿಳೆಯಾಗಿದ್ದ ಪಾರ್ವತಮ್ಮ ರಾಜ್'ಕುಮಾರ್ ನಟಿಯರಾದ ದಿ. ಮಂಜುಳಾ, ಜಯಮಾಲಾ, ಸುಧಾರಾಣಿ, ಮಾಲಾಶ್ರೀ, ರಕ್ಷಿತಾ, ಪ್ರೇಮಾ, ರಮ್ಯಾ ಮುಂತಾದ ಸ್ಟಾರ್ ಕಲಾವಿದೆಯರನ್ನು ಪರಿಚಯಿಸಿದ್ದರು.