ಅವುಗಳು ಸ್ಪರ್ಧೆಗೇ ಬರುವುದಿಲ್ಲ. ಅಂಥ ಚಿತ್ರಗಳನ್ನು ಎತ್ತಿಹಿಡಿಯಲು ನಮಗೇ ಸಂಕೋಚವಾಗುತ್ತದೆ ಎಂಬಂಥ ಮಾತುಗಳು ಕೇಳಿಬರುತ್ತವೆ. ವರ್ಷಕ್ಕೆ ಇನ್ನೂರು ಸಿನಿಮಾಗಳನ್ನು ಕೊಡುವ ಕನ್ನಡ ಗುಣಮಟ್ಟದಲ್ಲಿ ಸೋಲುತ್ತಿದೆಯೇ? ರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಹಿಂದೆ ಬಿದ್ದಿದೆಯೇ? ಈ ಪ್ರಶ್ನೆ ಗಳನ್ನು ಕೇಳಿದರೆ ಚಿತ್ರರಂಗದ ಮಂದಿ ನೇರವಾಗಿ ಜ್ಯೂರಿಗಳ ಮೇಲೆ ಹರಿಹಾಯುತ್ತಾರೆ. ಚಿತ್ರ ಚೆನ್ನಾಗಿರಲಿಲ್ಲವೋ ತೀರ್ಪುಗಾರರು ಸರಿಯಿಲ್ಲವೋ ನೀವೇ ನಿರ್ಧರಿಸಿ.

ಪನೋರಮಾ ಜ್ಯೂರಿಗಳಿಗೆ ಬುದ್ಧಿ ಇಲ್ಲವೇ

ಪನೋರಮಗೆ ಆಯ್ಕೆ ಮಾಡದಿರುವಷ್ಟು ನನ್ನ ಸಿನಿಮಾ ಕಳಪೆಯಾಗಿಲ್ಲ. ಇಷ್ಟು ವರ್ಷ ಚಿತ್ರರಂಗದಲ್ಲಿದ್ದು, ಸಿನಿಮಾ ಮಾಡಿದವನಿಗೆ ಸಿನಿಮಾ ಏನು ಅಂತ ಗೊತ್ತಿದೆ. ಆದರೂ ‘ಕಾನೂರಾಯಣ’ ಮುಖ್ಯ ಅನಿಸಿಲ್ಲ ಅಂದರೆ ಅದು ಅವರ ತಿಳುವಳಿಕೆಯ ಮಟ್ಟವನ್ನು ಹೇಳುತ್ತದೆ. ಕನ್ನಡದ ಯಾವ ಚಿತ್ರಗಳು ಆಯ್ಕೆ ಆಗಿಲ್ಲ ಅನ್ನೋದು ದೊಡ್ಡ ಶಾಕ್. ಪನೋರಮಾ ಛೇರ್‌ಮನ್ ಹಾಗೂ ಜ್ಯೂರಿಗೆ ಬುದ್ಧಿ ಇಲ್ಲವೇ? ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಗಳು ಪನೋರಮಾದಿಂದ ರಿಜೆಕ್ಟ್ ಆಗಿರುವುದು. ಇದು ಕನ್ನಡ ಸಿನಿಮಾಗಳಿಗೆ ಆಗಿರುವ ಅವಮಾನ. ಇವರು ಆಯ್ಕೆ ಮಾಡಿರುವ ಸಿನಿಮಾಗಳು ಕನ್ನಡ ಚಿತ್ರಗಳಿಗಿಂತ ಮೇಲ್ಮಟ್ಟದಲ್ಲಿದ್ದವೇ ಎಂಬುದನ್ನು ಈಗ ಪ್ರಶ್ನೆ ಮಾಡಬೇಕಿದೆ. 

ಕನ್ನಡ ಸಿನಿಮಾ ಬೇಕಿಲ್ಲ ಅಂದರೆ ಹೇಳಿಬಿಡಲಿ

ಭರವಸೆ ಇಟ್ಟುಕೊಂಡು ನಮ್ಮ ಚಿತ್ರವನ್ನು ಪನೋರಮಾಗೆ ಕಳುಹಿಸಿಕೊಟ್ಟಿದ್ದೆವು. ಆದರೆ, ಆಯ್ಕೆ ಆಗಿಲ್ಲ ಎನ್ನುವ ವಿಚಾರ ತಿಳಿದು ಬೇಸರ ಆಯಿತು. ವೈದೇಹಿ ಅವರೇ ಯಾಕೆ ನಮ್ಮ ಸಿನಿಮಾ ಕಳಪೆ ಆಗಿತ್ತಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಈಗಷ್ಟೆ ಸಿನಿಮಾ ತೆರೆಗೆ ಬಂದಿದೆ. ಅಪರೂಪದ ಸಿನಿಮಾ ಎನ್ನುತ್ತಿದ್ದಾರೆ. ಆದರೂ ನಮ್ಮ ಚಿತ್ರಕ್ಕೆ ಪನೋರಮಾ ಅರ್ಹತೆ ಇಲ್ಲ ಎಂದರೆ ಏನು ಹೇಳೋದು? ಅಲ್ಲಿನ ರಾಜಕೀಯ ನಮಗೆ ಗೊತ್ತಿಲ್ಲ. ಗೊತ್ತಿರುವುದು ಸಿನಿಮಾ ಮಾಡುವುದಷ್ಟೇ. ಅದನ್ನು ಮಾಡಿದ್ದೇವೆ. ಈಗ ಪ್ರೇಕ್ಷಕರು ನಮ್ಮ ಜತೆ ನಿಲ್ಲಬೇಕು. ಪನೋರಮಾದವರಿಗೆ ಕನ್ನಡ ಸಿನಿಮಾ ಬೇಕಿಲ್ಲ ಅಂದರೆ ನೇರವಾಗಿ ಹೇಳಿಬಿಡಲಿ. ಖುಷಿ ವಿಚಾರ ಎಂದರೆ ತುಳು ಭಾಷೆಯ ‘ಪಡ್ಡಾಯಿ’ ಆಯ್ಕೆ ಆಗಿರುವುದು. 

ಕನ್ನಡದ ಜ್ಯೂರಿಗಳು ಏನು ಮಾಡುತ್ತಿದ್ದರು?

ರಾಷ್ಟ್ರ ಮಟ್ಟದಲ್ಲಿ ನನ್ನದು ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಎನ್ನುವ ಪ್ರಶಸ್ತಿ ಪಡೆದುಕೊಂಡಿತು. ಅದೇ ಸಿನಿಮಾ ಪನೋರಮದಿಂದ ರಿಜೆಕ್ಟ್ ಆಗುತ್ತದೆ ಎಂದರೆ ಅಚ್ಚರಿ ಆಗುತ್ತದೆ. ಕನ್ನಡದಿಂದ ಹೋದ ಚಿತ್ರಗಳು ಯಾರಿಗೂ ಸ್ಪರ್ಧೆಯೇ ಇಲ್ಲ. ಆದರೂ ಯಾಕೆ ಬಿಟ್ಟಿದ್ದಾರೆ? ನಾವು ಅಷ್ಟು ಕನಿಷ್ಠ ಮಟ್ಟಕ್ಕಿಳಿದಿದ್ದೇವೆಯೇ? ನಾವು ಇದನ್ನು ಒಪ್ಪಕ್ಕೆ ಸಾಧ್ಯವೇ ಇಲ್ಲ. ಕನ್ನಡದಿಂದ ಜ್ಯೂರಿ ಆಗಿ ಯಾಕೆ ಹೋಗುತ್ತಾರೆ. ಯಾರು ಹೋಗುತ್ತಾರೆ? ಭಾಷೆ ಬಗ್ಗೆ ಫೈಟ್ ಮಾಡದಿದ್ದರೆ ಏನಕ್ಕೆ ಜ್ಯೂರಿಯಾಗಿ ಹೋಗಬೇಕು? ಅವರು ಕೊಡುವ ಸ್ಟಾರ್ ಹೋಟೆಲ್ ಸೌಲಭ್ಯಕ್ಕಾಗಿ ಜ್ಯೂರಿಯಾಗಿ ಹೋಗುತ್ತಾರೆ ಅನಿಸುತ್ತದೆ. ಇಂಥವರು ಕನ್ನಡ ಸಿನಿಮಾಗಳ ಬಗ್ಗೆ ಹೇಗೆ ಮಾತನಾಡಲು ಸಾಧ್ಯ ಹೇಳಿ. ಇವರಿಗೆ ಕನಿಷ್ಠ ಜ್ಞಾನ ಇಲ್ಲ. 

ನಾತಿಚರಾಮಿ ಆಯ್ಕೆಯಾಗದಿರಲು ಮೀಟೂ ಕಾರಣವೇ

ನನ್ನ ನಾತಿಚರಾಮಿ ಚಿತ್ರ ಮಾಮಿ ಚಿತ್ರೋತ್ಸವದಲ್ಲಿ ಪ್ರಶಂಸೆ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದೆ. ಆದರೂ ಪನೋರಮಾಗೆ ನಮ್ಮ ಸಿನಿಮಾ ಯಾಕೆ ಬೇಡ ಅನಿಸಿತೋ ತಿಳಿಯುತ್ತಿಲ್ಲ. ಪನೋರಮಾಗೆ ಮರಾಠಿ, ಬೆಂಗಾಲಿ, ಹಿಂದಿ, ತಮಿಳು, ಮಲಯಾಳಂನಲ್ಲಿ ಬಂದಿದ್ದವು ಮಾತ್ರ ಸಿನಿಮಾಗಳಾ? ಕನ್ನಡದಿಂದ ಹೋಗಿದ್ದವು ಯಾವುವೂ ಚಿತ್ರಗಳಂತೆ ಅವರ ಕಣ್ಣಿಗೆ ಕಾಣಲಿಲ್ಲವೇ? ನಮ್ಮ ಕನ್ನಡ ಸಿನಿಮಾಗಳು ಅಷ್ಟು ಕಳಪೆಯಿಂದ ಕೂಡಿದ್ದವೆ? ಇಷ್ಟಕ್ಕೂ ಜ್ಯೂರಿಗಳ ತಲೆಯಲ್ಲಿ ಏನಿತ್ತು ಎಂಬುದನ್ನು ಈಗ ಕೇಳಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವ ಜ್ಯೂರಿಗಳು ಇಲ್ಲ. ಕನ್ನಡ ಚಿತ್ರಗಳ ಪರವಾಗಿ ಗಟ್ಟಿಯಾಗಿ ದ್ವನಿ ಎತ್ತುವ ಜ್ಯೂರಿಗಳು ಅಗತ್ಯವಿದೆ. ನನ್ನ ಚಿತ್ರ ಆಯ್ಕೆ ಆಗದಿರುವುದಕ್ಕೆ ಶ್ರುತಿ ಹರಿಹರನ್ ಅವರ ಮೀಟೂ ಆರೋಪ ಏನಾದರೂ ಕಾಣವಾಗಿದೆಯೇ ಎಂಬುದು ಗೊತ್ತಾಗುತ್ತಿಲ್ಲ. ನಮ್ಮ ಚಿತ್ರದ ಮುಖ್ಯ ಪಾತ್ರಧಾರಿ ಶ್ರುತಿ ಹರಿಹರನ್. ಅವರ ಮೀಟೂ ಆರೋಪದಿಂದಾಗಿ ಆ ಕಾರಣಕ್ಕೆ ಏನಾದರೂ ನನ್ನ ಚಿತ್ರವನ್ನು ಪನೋರಮದಿಂದ ಹೊರಗಿಟ್ಟಿದ್ದಾರಾ? ಈ ಬಗ್ಗೆ ಜ್ಯೂರಿಗಳೇ ಉತ್ತರಿಸಬೇಕು. ಆದರೆ, ಬೇಸರವಂತೂ ಆಗಿದೆ