ಬೆಂಗಳೂರು[ಫೆ.08]: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರ ಸಾಮಾಜಿಕ ಜಾಲತಾಣ ಯೂಟ್ಯೂನ್‌ಲ್ಲಿ ಬಿಡುಗಡೆಯಾಗಿರುವ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಸಕಿಯೂ ಆಗಿರುವ ಚೆನ್ನಾಂಬಿಕ ಫಿಲಂನ ಒಡತಿ ಅನಿತಾ ಕುಮಾರಸ್ವಾಮಿ ಅವರು ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಟಿ.ಎಸ್‌.ಶಶಿಧರ್‌ ಹಾಗೂ ಮತ್ತೊಬ್ಬ ಆರೋಪಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ.

ಅನಿತಾ ಕುಮಾರಸ್ವಾಮಿ ಅವರ ಮಾಲೀಕತ್ವದ ಚನ್ನಾಂಬಿಕ ಫಿಲಂ ಬ್ಯಾನರ್‌ ಅಡಿಯಲ್ಲಿ ಕಳೆದ ಜ.25 ರಂದು ರಾಜ್ಯಾದ್ಯಂತ ‘ಸೀತಾರಾಮ ಕಲ್ಯಾಣ’ ಚಿತ್ರ ತೆರೆ ಕಂಡಿತ್ತು. ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದು, ನಿಖಿಲ್‌ ಹಾಗೂ ರಚಿತಾರಾಮ್‌ ಅಭಿನಯಿಸಿದ್ದರು.

ಯಾರೋ ಕಿಡಿಗೇಡಿಗಳು ಚಿತ್ರವನ್ನು ಮೊಬೈಲ್‌ ಅಥವಾ ಕ್ಯಾಮೆರಾಗಳಲ್ಲಿ ಥೀಯೇಟರ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಚಿತ್ರದ ನಿಮಾರ್ಪಕರಿಗೆ ನಷ್ಟಉಂಟಾಗಿದ್ದು, ಅಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಅದರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಬ್ಬನ್‌ಪಾರ್ಕ್ ಪೊಲೀಸರು ಮಾಹಿತಿ ನೀಡಿದರು.