‘ರಣ ವಿಕ್ರಮ’ ಚಿತ್ರದಲ್ಲಿ ಪುನೀತ್‌ ಅವರನ್ನು ಪಕ್ಕಾ ಆ್ಯಕ್ಷನ್‌ ಹೀರೋ ಆಗಿ ತೆರೆ ಮೇಲೆ ತಂದಿದ್ದ ಪವನ್‌ ಒಡೆಯರ್‌, ಈಗ ‘ನಟ ಸಾರ್ವಭೌಮ’ದಲ್ಲಿ ಪುನೀತ್‌ ಕೈಗೆ ಕ್ಯಾಮರಾ ಕೊಟ್ಟು ಜರ್ನಲಿಸ್ಟ್‌ ಕತೆಯೊಂದನ್ನು ಹೇಳ ಹೊರಟಿದ್ದಾರೆ. ಸದ್ಯಕ್ಕೆ ಈ ಚಿತ್ರದಲ್ಲಿ ಪುನೀತ್‌ ಅವರದ್ದು ಜರ್ನಲಿಸ್ಟ್‌ ಪಾತ್ರ ಎನ್ನುವುದಷ್ಟೇ ರಿವೀಲ್‌ ಆಗಿದೆ. ಪಾತ್ರದ ಬಗ್ಗೆ ಹೆಚ್ಚು ವಿವರ ನೀಡಲು ನಿರಾಕರಿಸುವ ನಿರ್ದೇಶಕ ಪವನ್‌ ಒಡೆಯರ್‌, ಇದೇ ಮೊದಲು ಪುನೀತ್‌ ಪಾತ್ರದ ಜತೆಗೆ ಕತೆಯ ಒಂದಷ್ಟುಗುಟ್ಟು ರಿವೀಲ್‌ ಮಾಡಿದ್ದು ಇಲ್ಲಿ ವಿಶೇಷ.

ಅಪ್ಪು ತನಿಖಾ ವರದಿಗಾರ

‘ಅಪ್ಪು ಸರ್‌ ಇಲ್ಲಿ ಓರ್ವ ಪ್ರಾಮಾಣಿಕ ಜರ್ನಲಿಸ್ಟ್‌. ಅವರ ಸಿನಿಕರಿಯರ್‌ನಲ್ಲಿ ಇಂತಹ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಇದೇ ಮೊದಲು. ಆತ ಸಮಗ್ರ ತಿಳುವಳಿಕೆ ಹೊಂದಿದ ಚಾಣಾಕ್ಷ, ಚತುರ, ಆದರ್ಶಯುತ ಗುಣಗಳ ಸಾಹಸಿ ಪತ್ರಕರ್ತ. ಸಾಹಸಿ ಅಂದ್ಮೇಲೆ ಆತ ತನಿಖಾ ವರದಿಗಾರಿಕೆಯಲ್ಲಿರುತ್ತಾನೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಾಹಸದಿಂದಲೇ ಆತ ಸಮಾಜದಲ್ಲಿ ಹಲವು ಗಣ್ಯ ವ್ಯಕ್ತಿಗಳ ಹಗರಣ, ಅಪರಾಧ ಬಯಲು ಮಾಡುತ್ತಾನೆ. ಅದಕ್ಕೆಲ್ಲ ಆತ ಹೇಗೆಲ್ಲ ಕಾರ್ಯಚರಣೆ ನಡೆಸುತ್ತಾನೆ, ಏನೆಲ್ಲ ಸವಾಲು ಎದುರಿಸುತ್ತಾನೆ ಎನ್ನುವ ರೋಚಕ ಸಂಗತಿ ಅಲ್ಲಿದೆ. ಆ ಮಟ್ಟಿಗೆ ಕತೆಯ ಕೇಂದ್ರ ಬಿಂದು ಮತ್ತು ಮಹತ್ವ ಹೊಂದಿದ ಪಾತ್ರವದು’ ಎನ್ನುತ್ತಾರೆ ನಿರ್ದೇಶಕ ಪವನ್‌ ಒಡೆಯರ್‌.

ಕನ್ನಡದಲ್ಲಿ ಇದೇ ಮೊದಲು

ಚಿತ್ರದಲ್ಲಿ ಆರು ಆ್ಯಕ್ಷನ್‌ ಸನ್ನಿವೇಶಗಳನ್ನು ತಂದಿದ್ದಾರಂತೆ ನಿರ್ದೇಶಕರು. ‘ಅಪ್ಪು ಸರ್‌ ಸಿನಿಮಾ ಅಂದ್ಮೇಲೆ ಅಲ್ಲಿ ಎಲ್ಲಾ ಕಮರ್ಷಿಯಲ್‌ ಎಲಿಮೆಂಟ್ಸ್‌ ಕೂಡ ಬೇಕೆನ್ನುವುದು ಸಹಜ. ಹಾಗಂತ ಅದನ್ನೇ ತಲೆಯಲ್ಲಿಟ್ಟುಕೊಂಡು ನಾವಿಲ್ಲಿ ಆ್ಯಕ್ಷನ್‌ ಸನ್ನಿವೇಶ ಸೇರಿಸಿಲ್ಲ. ಕತೆಯ ಆ ಪಾತ್ರಕ್ಕೆ ಅದು ಬೇಕಿತ್ತು. ಹಾಗಾಗಿಯೇ ಆರು ಆ್ಯಕ್ಷನ್‌ ಸನ್ನಿವೇಶ ತಂದಿದ್ದೇವೆ. ದೇಶದ ನಂಬರ್‌ ಒನ್‌ ಸ್ಟಂಟ್‌ ಮಾಸ್ಟರ್‌ ಪೀಟರ್‌ ಹೀನ್‌ ನಿರ್ದೇಶನ ಮಾಡಿದರು. ಪ್ರತಿ ಆ್ಯಕ್ಷನ್‌ ಸನ್ನಿವೇಶಕ್ಕೂ ರಿಹರ್ಸಲ್‌ ಮಾಡಿದೆವು. ವಿಮಾನದಲ್ಲೇ ಒಂದು ಆ್ಯಕ್ಷನ್‌ ಸೀನ್‌ ಶೂಟ್‌ ಮಾಡಿದ್ದೇವೆ. ಆ ರೀತಿ ಶೂಟ್‌ ಮಾಡಿದ್ದು ಕನ್ನಡದಲ್ಲಿ ಇದೇ ಮೊದಲು. ಅಂತಹ ಹಲವು ರೋಚಕ ಎಲಿಮೆಂಟ್ಸ್‌ ಚಿತ್ರದಲ್ಲಿವೆ’ ಎನ್ನುತ್ತಾರೆ ಪವನ್‌ ಒಡೆಯರ್‌.