ಜಯಂತ್‌ ಕಾಯ್ಕಿಣಿ, ಯೋಗರಾಜ್‌ ಭಟ್‌ ಹಾಗೂ ಹೃದಯ ಶಿವ ಈ ಮೂವರ ಒಟ್ಟಿಗೆ ಒಂದೇ ಚಿತ್ರಕ್ಕೆ ಪೆನ್ನು ಹಿಡಿದಿದ್ದಾರೆ. ಹಾಗೆ ನೋಡಿದರೆ ಭಟ್ಟರು ಮತ್ತು ಕಾಯ್ಕಿಣಿ ಅವರು ಆಗಾಗ ಸೇರಿದರೂ ಅದು ಮಳೆ ತಂಡ ಅನಿಸಿಕೊಂಡಿಲ್ಲ. ಆದರೆ, ಈ ಮೂವರು ‘ಮುಂಗಾರು ಮಳೆ’ ಚಿತ್ರದಲ್ಲಿ ಕೊಟ್ಟಹಾಡುಗಳ ಬಗ್ಗೆ ಹೇಳಬೇಕಿಲ್ಲ. ಅದೇ ದಾಟಿಯ ಹಾಡುಗಳನ್ನು ಕೊಟ್ಟಿರುವುದು ‘ಅಂದವಾದ’ ಎನ್ನುವ ಚಿತ್ರಕ್ಕೆ. ಈ ಚಿತ್ರದಲ್ಲೂ ಮಳೆ, ಮಂಜು ಮತ್ತು ಹಸಿರಿನ ಪರಿಸರವೇ ಕತೆಯ ಮುಖ್ಯ ವಸ್ತುಗಳು. ಹೀಗಾಗಿ ಈ ಚಿತ್ರದ ನಿರ್ದೇಶಕ ವಿ ಚಲ ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ ಅವರ ಕೈಯಲ್ಲೇ ಹಾಡುಗಳನ್ನು ಬರೆಸಿದ್ದಾರೆ. ‘ಈ ಮೂವರಿಂದಲೇ ನಾನು ಹಾಡುಗಳನ್ನು ಬರೆಸುವುದಕ್ಕೆ ಕಾರಣ ಮುಂಗಾರು ಮಳೆ ಚಿತ್ರದ ಯಶಸ್ಸಿನ ಸೆಂಟಿಮೆಂಟು. ನಮ್ಮ ಚಿತ್ರದ್ದು ಮಾನ್ಸೂನ್‌ನಲ್ಲಿ ನಡೆಯುವ ಬೆಚ್ಚಗಿನ ಪ್ರೇಮಕತೆ. ಇಡೀ ಸಿನಿಮಾವನ್ನು ಮಳೆಗಾಲದಲ್ಲೇ ಚಿತ್ರೀಕರಣ ಮಾಡಲಾಗಿದೆ. ಮುಂಗಾರು ಮಳೆ ಕೂಡ ಇದೇ ರೀತಿ ಮಳೆಯಲ್ಲಿ ಅರಳುವ ಪ್ರೇಮ ಕತೆ. ಆ ಕಾರಣಕ್ಕೆ ಜಯಂತ್‌ ಕಾಯ್ಕಿಣಿ, ಹೃದಯ ಶಿವ ಅವರಿಂದಲೇ ಹಾಡುಗಳನ್ನು ಬರೆಸಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ವಿಚಲ.

ಜೈ ಹಾಗೂ ಅನುಷಾ ರಂಗನಾಥ್‌ ಅವರು ‘ಅಂದವಾದ’ ಚಿತ್ರ ಜೋಡಿ. ಇದೊಂದು ಮ್ಯೂಸಿಕಲ್‌ ಲವ್‌ಸ್ಟೋರಿ. ನಗುತ್ತಾ ನಗುತ್ತಾ ಅಳಿಸುವ ಕತೆ. ವಿಕ್ರಮ್‌ ವರ್ಮನ್‌ ಚಿತ್ರಕ್ಕೆ ಸಂಗೀತ ನೀಡಿದ್ದು, ಮತ್ತೊಬ್ಬ ದಿಗ್ಗಜ ಗುರು ಕಿರಣ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ 7 ಹಾಡುಗಳು ಚಿತ್ರದಲ್ಲಿದ್ದು, ಎರಡು ಯೋಗರಾಜ್‌ ಭಟ್‌, ಇನ್ನೆರಡನ್ನು ಜಯಂತ್‌ ಕಾಯ್ಕಿಣಿ ಹಾಗೂ ಮೂರು ಹಾಡುಗಳಿಗೆ ಹೃದಯ ಶಿವ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಸದ್ಯದಲ್ಲೇ ಆಡಿಯೋ ಬಿಡುಗಡೆ ನಡೆಯಲಿದೆ. ಸಕಲೇಶಪುರ, ಬಿಸಿಲೆ ಘಾಟ್‌, ಚಿಕ್ಕಮಗಳೂರು ಹಾಗೂ ಅಂಡಮಾನ್‌ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಡಿ ಆರ್‌ ಮಧು ಜಿ ರಾಜ್‌ ಹಾಗೂ ಹೆಚ್‌ ಸಿ ವಿಜಯ ಕುಮಾರ್‌ ಚಿತ್ರದ ನಿರ್ಮಾಪಕರು.