ನಾನಿಷ್ಟಪಡೋದು ಹೆಚ್ಚು ಇನ್‌ಸ್ಟಾಗ್ರಾಂ: ಹರ್ಷಿಕಾ ಪೂಣಚ್ಚ

ಫ್ಯಾನ್ಸ್ ಜೊತೆ ಟಚ್‌ನಲ್ಲಿ ಇರೋದಕ್ಕೆ ನನಗೆ ಇಷ್ಟ. ಅದಕ್ಕಾಗಿ ನಾನು ಹೆಚ್ಚು ಇನ್‌ಸ್ಟಾಗ್ರಾಂ ಬಳಸುತ್ತೇನೆ. ನನಗೆ ಮೊದಲಿನಿಂದಲೂ ಫೋಟೋಸ್ ಎಂದರೆ ಇಷ್ಟ. ಇಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ. ಹಾಗಾಗಿ ನಾನು ಮೊಬೈಲ್ ತೆಗೆದರೆ ಮೊದಲು ನೋಡುವುದು ಇನ್‌ಸ್ಟಾಗ್ರಾಂ. ಹಾಕಿದ ಫೋಟೋಗೆ ಏನು ಕಮೆಂಟ್ ಬಂದಿದೆ, ಎಷ್ಟು ಲೈಕ್ಸ್ ಆಗಿದೆ  ಎನ್ನುವುದನ್ನು ಆಗಾಗ ಚೆಕ್ ಮಾಡಿಕೊಳ್ಳುತ್ತಿರುವೆ.

ಟ್ವಿಟ್ಟರ್ ಕೂಡ ನನಗೆ ಇಷ್ಟವೇ. ಆದರೆ ಅಲ್ಲಿ ಪದಗಳ ಮಿತಿ ಇದೆ. ಹೆಚ್ಚು ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. ಇನ್ ಸ್ಟಾದಲ್ಲಿ ಸ್ಟೋರಿ ಮೂಲಕ ವಿಡಿಯೋಗಳನ್ನೂ ಶೇರ್ ಮಾಡುವ ಅವಕಾಶ ಇದೆ. ನಾನು ಈಗಷ್ಟೇ ನನ್ನ ಮಲೆಯಾಳಂನ ‘ಚಾರ್‌ಮಿನಾರ್’ ಸಿನಿಮಾದ ಹಾಡೊಂದರ ವಿಡಿಯೋ ಶೇರ್ ಮಾಡಿದೆ. ಅದಕ್ಕೆ ಸಾಕಷ್ಟು ಕಮೆಂಟ್‌ಗಳು ಬಂದಿವೆ. ಒಂದಷ್ಟು ಟ್ರೋಲ್‌ಗಳಾಗಿವೆ. ಜನಕ್ಕೆ ಇಷ್ಟವಾದರೆ ಮಾತ್ರ ಟ್ರೋಲ್ ಮಾಡುತ್ತಾರೆ. ನಾನು ಎಲ್ಲಿಯೇ ಇದ್ದರೂ ಫ್ಯಾನ್ಸ್ ಜೊತೆ ಕನೆಕ್ಟ್ ಆಗಿ ಇರಬೇಕು ಎಂದು ಬಯಸುತ್ತೇನೆ. ಅದಕ್ಕೆ ಆನ್‌ಲೈನ್ ಒಳ್ಳೆಯ ಮಾಧ್ಯಮ. ಅದರಲ್ಲಿ ನಾನು ಹೆಚ್ಚು ಬಳಸುವುದು ಇನ್‌ಸ್ಟಾಗ್ರಾಂ.

ತಿಳಿಯೋಕೆ ಟ್ವಿಟ್ಟರ್ ಮತ್ತು ಯೂಟ್ಯೂಬ್: ಸೋನು ಗೌಡ

ನಾನು ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮೂರು ಆ್ಯಪ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತೇನೆ. ಮೂರು ಕೂಡ ಒಂದೊಂದು ಉದ್ದೇಶಕ್ಕೆ. ಟ್ವಿಟ್ಟರ್ ಬಳಕೆ ಮಾಡೋದು ನನಗೆ ಬೇಕಾದ ಎಲ್ಲಾ ರೀತಿಯ ಸುದ್ದಿಗಳೂ ಅತೀ ಕಡಿಮೆ ಸಮಯದಲ್ಲಿ ಎಲ್ಲಕ್ಕಿಂತ ಮೊದಲೇ ತಿಳಿಯುತ್ತೆ ಎನ್ನುವ ಕಾರಣಕ್ಕೆ. ಹಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್, ಬೇರೆ ಬೇರೆ ಭಾಷೆಗಳ ಇಂಡಸ್ಟ್ರಿಯಲ್ಲಿ ಏನೆಲ್ಲಾ ಆಗುತ್ತಿದೆ ಎನ್ನುವುದು ನನಗೆ ಬೇಗನೇ ಟ್ವಿಟ್ಟರ್‌ನಲ್ಲಿ ಗೊತ್ತಾಗುತ್ತದೆ. ಅದಕ್ಕಾಗಿ ಒಂದಷ್ಟು ಮಂದಿಯನ್ನು ನಿರಂತರವಾಗಿ ಫಾಲೋ ಮಾಡುತ್ತಿದ್ದೇನೆ.

ಇನ್ನು ಇನ್‌ಸ್ಟಾಗ್ರಾಂಗೆ ಬಂದರೆ ನಾನು ಫೋಟೋ ಪ್ರಿಯೆ. ನನಗೆ ಚೆನ್ನಾಗಿ ಕಾಣಿಸುತ್ತಿದ್ದೇನೆ ಎನ್ನುವ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತೇನೆ. ಒಮ್ಮೆ ಅಪ್‌ಲೋಡ್ ಮಾಡಿದರೆ ಮುಗಿಯಿತು, ಮತ್ತೆ ಅದರತ್ತ ತಿರುಗಿ ಲೈಕ್ಸ್ ಎಷ್ಟು ಬಂತು, ಕಮೆಂಟ್ ಎಷ್ಟಾಯಿತು ಎಂದು ನೋಡುವುದಿಲ್ಲ. ನನ್ನ ಗೆಳತಿಯರ ಫೋಟೋಗಳನ್ನು ಅವರು ಏನೇನು ಮಾಡುತ್ತಿದ್ದಾರೆ, ಎಲ್ಲೆಲ್ಲಿದ್ದಾರೆ ಎನ್ನುವುದನ್ನು ಇಲ್ಲಿಯೇ ತಿಳಿದುಕೊಳ್ಳುತ್ತೇನೆ. ಇನ್ನು ನನಗೆ ಮೊದಲಿನಿಂದಲೂ ಹೆಚ್ಚು ಇಷ್ಟವಾದ ಆ್ಯಪ್ ಯೂಟ್ಯೂಬ್. ಹೊಸ ಹೊಸ ಸಿನಿಮಾಗಳ ಟ್ರೇಲರ್, ಸಿನಿಮಾಗಳು ಎಲ್ಲದ್ದಕ್ಕಾಗಿಯೂ ನಾನು ಇದನ್ನೇ ಬಳಕೆ ಮಾಡುತ್ತೇನೆ. ಆದರೆ ಈಗೀಗ ಫೇಕ್ ನ್ಯೂಸ್‌ಗಳು ಹೆಚ್ಚಾಗಿವೆ. ಇದರಿಂದ ಕೊಂಚ ಬೇಸರವಾಗುತ್ತೆ ಅಷ್ಟೇ.

ಮೊಬೈಲ್ ಇಲ್ಲದೆಯೇ ಇರಬಲ್ಲೆ, ಇನ್ನು ಆ್ಯಪ್‌ನ ಮಾತೇಕೆ: ಮಯೂರಿ

ನಾನು ಮೊಬೈಲ್ ಇಲ್ಲದೆಯೇ ಇರಬಲ್ಲೆಯಾ ಎಂದು ಯಾರಾದರೂ ಕೇಳಿದರೆ ಓಹ್ ಯಸ್ ಎಂದು ಹೇಳುವೆ. ಯಾಕೆಂದರೆ ನನಗೆ ಮೊಬೈಲ್ ಅಷ್ಟೇನು ಅನಿವಾರ್ಯವಲ್ಲ. ನನಗೆ ಸಂಗೀತ ಕೇಳುವುದು ತುಂಬಾ ಇಷ್ಟವಾದ್ದರಿಂದ ಸಾಂಗ್ ಕೇಳಲು ಮೊಬೈಲ್ ಬಳಸುತ್ತೇನೆ. ಇದಕ್ಕಿಂತ ಹೆಚ್ಚಾಗಿ ಈಗೀಗ ಆನ್‌ಲೈನ್ ಶಾಪಿಂಗ್ ಮಾಡಲು ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರ ಮೊದಲಾದ ಆ್ಯಪ್ ಗಳ ಬಳಕೆ ಹೆಚ್ಚಿದೆ.

ಏನಾದರೂ ಕೊಂಡುಕೊಳ್ಳಬೇಕು ಎಂದರೆ ಆನ್‌ಲೈನ್ ಮಾರ್ಕೆಟ್‌ಗೆ ಒಂದು ವಿಸಿಟ್ ಕೊಟ್ಟೇ ಕೊಡುತ್ತೇನೆ. ಏನಾದರೂ ತಿಳಿದುಕೊಳ್ಳಬೇಕು ಎಂದರೆ ಯಾರನ್ನೂ ಕೇಳದೇ, ಗೂಗಲ್ ಮಾಡುತ್ತೇನೆ. ನ್ಯೂಸ್ ಪೇಪರ್ ಓದುವುದಕ್ಕಾಗಿ ಒಂದು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿದ್ದೇನೆ. ಅದರಲ್ಲಿ ಪ್ರಮುಖವಾದ ಎಲ್ಲಾ ಪೇಪರ್ ಗಳ ಹೆಡ್‌ಲೈನ್ ಇರುತ್ತೆ. ಅದೆಲ್ಲವನ್ನೂ ಓದಿಕೊಳ್ಳುತ್ತೇನೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಾನು ಹೆಚ್ಚಾಗಿ ಬಳಕೆ ಮಾಡುವುದು ಬ್ಯಾಂಕಿಂಗ್ ಆ್ಯಪ್. ನನ್ನ ಎಲ್ಲಾ ಹಣಕಾಸಿನ ವ್ಯವಹಾರಗಳೂ ನಡೆಯುವುದು ಇದರಿಂದಲೇ. ಸೋಷಿಯಲ್ ಮೀಡಿಯಾದಿಂದ ನಾನು ದೂರವೇ ದೂರ.

ಫಿಟ್ನೆಸ್ ಮತ್ತು ರೆಸಿಪಿಗೆ ಯೂಟ್ಯೂಬ್: ಶುಭಾ ಪೂಂಜಾ

ನನ್ನ ಮೊಬೈಲ್‌ನಲ್ಲಿ ಇನ್‌ಬಿಲ್ಟ್ ಆಗಿ ಬಂದಿರುವ ಕೆಲವು ಆ್ಯಪ್‌ಗಳನ್ನು ಬಿಟ್ಟರೆ ನಾನು ಹೆಚ್ಚಾಗಿ ಯಾವ ಆ್ಯಪ್‌ಅನ್ನೂ ಇನ್‌ಸ್ಟಾಲ್ ಮಾಡಿಕೊಂಡಿಲ್ಲ. ನನಗೆ ಅದು ಅಷ್ಟಾಗಿ ಇಷ್ಟವೂ ಇಲ್ಲ. ಹೆಚ್ಚು ಬಳಕೆಯ ಆ್ಯಪ್ ಯಾವುದು ಎಂದು ಕೇಳಿದರೆ ಮೊದಲಿಗೆ ಯೂಟ್ಯೂಬ್ ಆಮೇಲೆ ಅಮೆಜಾನ್ ಪ್ರೈಮ್.

ಯೂಟ್ಯೂಬ್‌ನಲ್ಲಿ ಅಡುಗೆ ಮಾಡುವುದು, ವ್ಯಾಯಾಮ ಮಾಡುವುದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತೇನೆ. ರೆಸಿಪಿಗಳಲ್ಲಿ ಎಲ್ಲಾ ದೇಶದ, ಎಲ್ಲಾ ಬಗೆ ಬಗೆಯ ರೆಸಿಪಿಗಳನ್ನು ನೋಡುವುದು ಇಷ್ಟ. ಕೆಲವು ವೇಳೆ ತುಂಬಾ ಇಷ್ಟವಾದರೆ ನಾನೇ ಮನೆಯಲ್ಲಿ ಟ್ರೈ ಮಾಡುತ್ತೇನೆ. ಟೇಸ್ಟ್ ನೋಡುತ್ತೇನೆ. ಚೆನ್ನಾಗಿದ್ದರೆ ಎಲ್ಲರಿಗೂ ಖುಷಿಯಿಂದ ನಾನೇ ಮಾಡಿದ್ದು ಎಂದು ಹೇಳಿಕೊಳ್ಳುತ್ತೇನೆ. ಇದರ ಜೊತೆಗೆ ಫಿಟ್ನೆಸ್, ಯೋಗಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತೇನೆ. ಅಮೆಜಾನ್ ಪ್ರೈಮ್ ಹೊಸ ಹೊಸ ಸಿನಿಮಾ ನೋಡಲು ಯೂಸ್ ಮಾಡುತ್ತೇನೆ.