ಚಿತ್ರ: ಮಾಸ್ತಿ ಗುಡಿ
ನಿರ್ದೇಶಕ: ನಾಗಶೇಖರ್‌
ತಾರಾಗಣ: ವಿಜಯ್‌, ಅಮೂಲ್ಯ, ಕೃತಿ ಕರಬಂದ, ಬಿ ಜಯಶ್ರೀ, ಸುಹಾಸಿನಿ, ಸಾಧುಕೋಕಿಲಾ, ತಬಲಾ ನಾಣಿ, ದೇವರಾಜ್‌, ಅನಿಲ್‌, ಉದಯ್‌, ಶ್ರೀನಿವಾಸಮೂರ್ತಿ
ನಿರ್ಮಾಣ: ಸುಂದರ್‌ ಪಿ ಗೌಡ
ಛಾಯಾಗ್ರಹಣ: ಸತ್ಯಹೆಗಡೆ
ಸಂಗೀತ: ಸಾಧು ಕೋಕಿಲ

ರೇಟಿಂಗ್‌: ***

ಭರಣಿ ಕಂಬೈನ್ಸ್‌ ಲಾಂಛನದಲ್ಲಿ ಎಂಪಿ ಶಂಕರ್‌ ನಿರ್ಮಿಸುತ್ತಿದ್ದ ಚಿತ್ರಗಳು ನಿಮಗೆ ನೆನಪಿರಬಹುದು. ಕಾಡಿನ ರಾಜ, ಕಾಡಿನ ರಹಸ್ಯ, ಮೃಗಾಲಯ, ರಾಮಲಕ್ಷ್ಮಣ ಮುಂತಾದ ಚಿತ್ರಗಳನ್ನು ನೀವು ನೋಡಿರಬಹುದು. ಈ ಚಿತ್ರಗಳಲ್ಲಿ ಸಾಕಷ್ಟು ಪ್ರಾಣಿಗಳೂ, ದಟ್ಟವಾದ ಕಾಡೂ, ಒಬ್ಬ ನಿಯತ್ತಿನ ಅರಣ್ಯಾಧಿಕಾರಿಯೂ, ಅಸಂಖ್ಯಾತ ಕಾಡುಗಳ್ಳರೂ ಇರುತ್ತಾರೆ. ಕಾಡನ್ನು ರಕ್ಷಿಸಲಿಕ್ಕೋಸ್ಕರ ನಾಯಕ ಹೋರಾಡುತ್ತಾನೆ. 

ಮಾಸ್ತಿಗುಡಿ ಕೂಡ ಅದೇ ಶೈಲಿಯ ಚಿತ್ರ. ಅದೇ ಕಾಲ​ಘಟ್ಟದಲ್ಲಿದೆ, ಅದೇ ಥರದ ನಿರೂಪಣೆ, ಅದೇ ರೋಚ​ಕತೆ, ಅದೇ ಸಾಹಸಪ್ರಿಯತೆ, ಅದೇ ಧೀಮಂತಿಕೆ, ಅದೇ ಹುಂಬತನದೊಂದಿಗೆ ನಮ್ಮ ಮನಸ್ಸನ್ನು ಎಂಬ​ತ್ತು ತೊಂಬತ್ತರ ದಶಕಕ್ಕೆ ಕರೆದೊಯ್ಯುತ್ತದೆ. ನಾವು ಹಿಂದಕ್ಕೆ ಹೋದಷ್ಟೂಹೆಚ್ಚು ಹೆಚ್ಚು ರಂಜಿಸುತ್ತದೆ. ಹೀಗಾಗಿ ಇದು ಮನಸ್ಸನ್ನು ಹಿಂದಕ್ಕೆ ಒಯ್ದು, ಆ ಕಾಲದ ಎಳಸುತನದ ಜೊತೆಗೇ ನೋಡಬೇಕಾದಂಥ ಸಿನಿಮಾ.

ನಿರ್ದೇಶಕ ನಾಗಶೇಖರ್‌ ಈ ಕತೆಯನ್ನು ಮಹಾನ್‌ ಧಾರಾಳಿಯಂತೆ ಬರೆದಿದ್ದಾರೆ. ತರ್ಕವನ್ನು ಹೂತು​ಹಾಕಿದ್ದಾರೆ. ರೋಮಾಂಚವನ್ನು ಕುಣಿಯುವುದಕ್ಕೆ ಬಿಟ್ಟಿದ್ದಾರೆ. ಹೀಗಾಗಿ ಚಿತ್ರದ ತುಂಬ ಏನೇನೋ ನಡೆಯ​ತ್ತಿ​ರುತ್ತದೆ. ಧೂಳು ಓಡಾಡುತ್ತದೆ, ಗಾಳಿ ಸಂಚರಿಸುತ್ತದೆ, ದೆವ್ವ ಕಾಣಿಸಿಕೊಳ್ಳುತ್ತದೆ. ಮಾಸ್ತಮ್ಮನಿಗೆ ಕಟ್ಟುಹಾಕ​ಲಾಗುತ್ತದೆ. ಒಳ್ಳೆಯವರು ಕೆಟ್ಟವರಾ​ಗುತ್ತಾರೆ. ದೆವ್ವಗಳು ಕೊಲೆ ಮಾಡುತ್ತವೆ. ಅಧಿಕಾರಿಗಳು ಭ್ರಷ್ಟರಾಗುತ್ತಾರೆ. ಹಳೆಯ ಪ್ರೇಮ, ಹೊಸ ಗೆಳತಿ, ಫ್ಲಾಷ್‌'ಬ್ಯಾಕು, ಕೊಲೆ, ಕೋಲಾಹಲಗಳೆಲ್ಲ ಚಿತ್ರವನ್ನು ಕಿಕ್ಕಿರಿದು ಆವರಿಸಿಕೊಂಡಿವೆ. ಕಣ್ಣುಮಿಟುಕಿಸಲೂ ಪುರುಸೊತ್ತು ಕೊಡದಂತೆ ನಾಗಶೇಖರ್‌ ಏನೋ ಒಂದು ಕತೆಯನ್ನು ಹೇಳುತ್ತಾ ಹೋಗುತ್ತಾರೆ. ಸನ್ನಿವೇಶಗಳ ನಡುವಿನ ಕೊಂಡಿಯನ್ನು ಅವರು ಬೇಕಂತಲೇ ಕಿತ್ತುಹಾಕಿದಂತೆ ಕಾಣುತ್ತದೆ.

ಇಂಥ ಕತೆಯನ್ನು ಮುನ್ನಡೆಸಿಕೊಂಡು ಹೋಗು​ವವರು ದುನಿಯಾ ವಿಜಯ್‌. ಪ್ರತಿಯೊಂದು ದೃಶ್ಯ​ವನ್ನೂ ಆವರಿಸಿಕೊಳ್ಳುವ ವಿಜಯ್‌ ತಾನೆಂಥ ಧ್ಯಾನಸ್ಥ ನಟ ಅನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಗೆಳತಿಯನ್ನು ಕಳಕೊಂಡ ನೋವು, ಹೊಸ ಗೆಳತಿಯನ್ನು ನಿರಾಕರಿಸುವ ದೃಢತೆ, ಕಾಡುಮೃಗವೊಂದರ ಸಾವಿಗೆ ಆರ್ದ್ರವಾಗುವ ಮನಸ್ಸು, ರೋಷಾವೇಷದ ಕ್ಷಣ, ಪ್ರೇಮದ ಗುಂಗು, ಮಗು ಸತ್ತಾಗಿನ ಸಂಕಟ ಎಲ್ಲವನ್ನೂ ವಿಜಿ ಅವಾಹಿಸಿಕೊಳ್ಳುವ ರೀತಿ ದುರ್ಬಲ ಗಳಿಗೆಗಳನ್ನು ಕೊಂಚ ಮಟ್ಟಿಗಾದರೂ ಬಿಗಿಗೊಳಿಸುತ್ತದೆ.

ಮಾಸ್ತಮ್ಮನ ಸುಪರ್ದಿಯಲ್ಲಿರುವ ಕಾಡಿಗೆ ಅನೂಹ್ಯ ಸಂಕಟ ಬರುತ್ತದೆಂದು ಮಾಸ್ತಮ್ಮನ ಭಕ್ತೆ ಘೋಷಿಸುತ್ತಾಳೆ. ಅವಳು ಹಾಕಿದ ಅಂಜನ ಅವಳ ಕಣ್ಣಿಗೇ ಬಡಿಯುತ್ತದೆ. ನಾಶ ಎಲ್ಲಾ ನಾಶವಾಗುತ್ತೆ ಎಂದು ಮಾಸ್ತವ್ವ ಸೂಚನೆ ಕೊಡುತ್ತಾಳೆ. ಬರಲಿರುವ ವಿಪತ್ತು ತಡೆಯಲು ಮುಂದಾಗುವ ಅನಾಥ ಮಾಸ್ತಿಯ ಕತೆಯೊಂದಿಗೆ ಆತನ ಪ್ರೇಮ ಪ್ರಕರಣ ಅನಾವರಣಗೊಳ್ಳುತ್ತದೆ. ಈ ಮಧ್ಯೆ ಆತನನ್ನು ಅರಣ್ಯಾಧಿಕಾರಿಯ ಮಗಳು ಪ್ರೀತಿಸುತ್ತಾಳೆ. ನಂತರ ವಿಚಿತ್ರ ಘಟನೆಗಳು ನಡೆಯುತ್ತಾ ಕಾಡಿನ ಬೆಂಕಿಯಂತೆ ಕತೆ ಎಲ್ಲೆಲ್ಲಿಗೋ ಹಬ್ಬಿಕೊಳ್ಳುತ್ತದೆ.
ರಂಗಾಯಣ ರಘು ಪಾತ್ರ ಧೀಮಂತವಾಗಿದೆ. ದತ್ತಣ್ಣ ಪಾತ್ರಕ್ಕೆ ಘನತೆಯಿದೆ, ಬಿ ಜಯಶ್ರೀ, ಸುಹಾ​ಸಿನಿ, ಸಾಧುಕೋಕಿಲಾ, ತಬಲಾ ನಾಣಿ, ದೇವ​Ü​ರಾಜ್‌, ಶ್ರೀನಿವಾಸಮೂರ್ತಿ, ಶೋಭರಾಜ್‌- ಹೀಗೆ ಪಾತ್ರಗಳ ಮೇಲೆ ಪಾತ್ರಗಳು ಕಾಡು ನೋಡಲು ಬಂದು​​ಹೋಗುವ ಪ್ರವಾಸಿಗರಂತೆ ಬಂದು ಬಂದು ಹೋಗು​ತ್ತವೆ. ಯಾವ ಪಾತ್ರವೂ ಮನಸ್ಸಲ್ಲಿ ನಿಲ್ಲುವು​ದಿಲ್ಲ. ರವಿಶಂಕರ ಗೌಡ, ಟೈಗರ್‌ ಸುಷ್ಮಾ ನಡುವಣ ದೃಶ್ಯಗಳ ತೀವ್ರತೆಯನ್ನು ಇಡೀ ಚಿತ್ರಕ್ಕೆ ವಿಸ್ತರಿಸಲು ಸಾಧ್ಯ​ವಾಗಿದ್ದರೆ, ಮಾಸ್ತಿಗುಡಿ ಮತ್ತೊಂದು ಮೆಟ್ಟಲು ಏರುತ್ತಿತ್ತು.

ಅಮೂಲ್ಯ ಮುಗ್ಧ ಪ್ರೇಮಿಯಾಗಿ ಎಂದಿನಂತೆ ಮುದ್ದುಮುದ್ದು. ಕೃತಿ ಕರಬಂಧ ಕಾಡಿಗೆ ಚೈತ್ರ ಬಂದಂತೆ ನಳನಳಿಸುತ್ತಾರೆ. ಸಂಗೀತ ಮತ್ತು ಛಾಯಾಗ್ರಹಣ ಎರಡೂ ಮನಸ್ಸಲ್ಲಿ ಉಳಿಯುತ್ತವೆ. ತಾಂತ್ರಿಕವಾಗಿ ಚಿತ್ರವನ್ನು ಕಟ್ಟಿಕೊಟ್ಟಿರುವ ಕ್ರಮ, ಹೊಡೆದಾಟದ ದೃಶ್ಯಗಳು, ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರವನ್ನು ಎತ್ತರಕ್ಕೆ ಕರೆದೊಯ್ಯಲು ಹವಣಿಸುತ್ತಿರುವಂತೆ, ಚಿತ್ರಕತೆಯ ಲಂಗರು ಸಿನಿಮಾ ಎಂಬ ಹಡಗು ಚಲಿಸದಂತೆ ಮಾಡಿಬಿಟ್ಟಿದೆ.

ಈ ಚಿತ್ರಕ್ಕಾಗಿ ಜೀವ ಕೊಟ್ಟ ಉದಯ್‌ ಮತ್ತು ಅನಿಲ್‌- ಇಬ್ಬರನ್ನೂ ಗಮನಾರ್ಹ ಪಾತ್ರಗಳಲ್ಲೇನೂ ಬಳಸಿಕೊಂಡಿಲ್ಲ. ಮಧ್ಯಂತರದ ನಂತರ ಹಾಜರಾಗುವ ಈ ಎರಡೂ ಪಾತ್ರಗಳಿಗೆ ಸಿಗಬೇಕಾದ ಮಹತ್ವ ಸಿಕ್ಕಂತಿಲ್ಲ. ಬಂದಷ್ಟೇ ವೇಗವಾಗಿ ಮರೆಯಾಗಿ ಹೋಗುವ ಈ ಎರಡು ಪಾತ್ರಗಳ ದುರಂತದ ದೃಶ್ಯ ತೆರೆಯ ಮೇಲೆ ಬಂದಾಗ, ಇನ್ನೇನು ಅವರು ನಿಜವಾಗಿ​ಯೂ ಪ್ರಾಣ ಕಳೆದುಕೊಳ್ಳುತ್ತಾರಲ್ಲ ಅನ್ನಿ​ಸುತ್ತದೆ. ನಾಗಶೇಖರ್‌ ಅನಿಲ್‌ ಮತ್ತು ಉದಯ್‌ ಪಾತ್ರಗಳಿಗೆ ನ್ಯಾಯ ಸಲ್ಲಿಸದೇ ಇರುವುದು ಸ್ಪಷ್ಟವಾಗಿಯೇ ಗೊತ್ತಾಗುತ್ತದೆ. ಅವರಿಬ್ಬರು ದುರಂತಕ್ಕೆ ಬಲಿಯಾದ ಸನ್ನಿವೇಶ ಕೂಡ ಚಿತ್ರಕ್ಕೆ ತೀರಾ ಅವಶ್ಯಕವೇನೂ ಆಗಿರಲಿಲ್ಲ. ಹೀಗಾಗಿ ಅನಗತ್ಯವಾಗಿ ಬಲಿದಾನ ಮಾಡಿದವರಂತೆ ಅವರಿಬ್ಬರೂ ನಮಗೆ ಕಾಣಿಸುತ್ತಾರೆ. ಚಿತ್ರದ ಮನ ಮಿಡಿಯುವ ಕ್ಷಣ ಇದೇ.

ನಾಗಶೇಖರ್‌ ಕೊಂಚ ಶ್ರದ್ಧೆಯಿಂದ ಇದೇ ಸಿನಿಮಾವನ್ನು ಮಾಡಿದ್ದರೆ, ಮತ್ತೆ ಕಾಡಿನ ಚಿತ್ರಗಳ ಯುಗ ಶುರುವಾಗುತ್ತಿತ್ತೋ ಏನೋ? ಹುಲಿ ಉಳಿಸಿ ಎಂಬ ಘೋಷಣೆ, ಕಾಡು ಉಳಿಸುವ ಅನಿವಾರ್ಯತೆಯ ಕುರಿತ ಭಾಷಣ, ಅರಣ್ಯ ರಕ್ಷಕರೇ ಭಕ್ಷಕರೂ ಆಗುವ ಭ್ರಷ್ಟಜಗತ್ತು- ಇವುಗಳೆಲ್ಲ ಈ ಚಿತ್ರದ ಆಶಯಗಳು. ಆದರೆ ಆಶಯಗಳಷ್ಟೇ ಸಿನಿಮಾ ಆಗಲಾರದು ಅನ್ನುವುದಕ್ಕೆ ಮಾಸ್ತಿಗುಡಿ ಸಾಕ್ಷಿ.

ವಿಮರ್ಶಕರು: ಜೋಗಿ, ಕನ್ನಡಪ್ರಭ
epaper.kannadaprabha.in