ಮಾನ್ವಿತಾ ಹರೀಶ್ ಮುಂಬೈ ನಂಟಿನ ರಹಸ್ಯ ಬಯಲು
ಮರಾಠಿ ಚಿತ್ರರಂಗಕ್ಕೆ ಮಾನ್ವಿತಾ ಹರೀಶ್ | ರಾಜಸ್ಥಾನ ಡೈರೀಸ್ ಸಿನಿಮಾದಲ್ಲಿ ಮಾನ್ವಿತಾ ಬ್ಯುಸಿ | ರಾಜ್ ಠಾಕ್ರೆ ಸಂಬಂಧಿ ಜೀತೇಂದ್ರ ಠಾಕ್ರೆ ನಿರ್ಮಾಣದ ಸಿನಿಮಾ
ಬೆಂಗಳೂರು (ಫೆ.20): ಮಾನ್ವಿತಾ ಹರೀಶ್ ಅವರ ಮುಂಬೈ ನಂಟಿನ ರಹಸ್ಯ ಈಗ ಬಯಲಾಗಿದೆ. ಅವರೀಗ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದಾರೆ.
ಮರಾಠಿ ಜತೆಗೆ ಕನ್ನಡದಲ್ಲೂ ನಿರ್ಮಾಣವಾಗುತ್ತಿರುವ ‘ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ಚೆಲುವೆ ಮಾನ್ವಿತಾ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಇಡೀ ಚಿತ್ರೀಕರಣ ರಾಜಸ್ಥಾನದ ಜೈಪುರ್, ಜೋಧಪುರ್ ಹಾಗೂ ಜೈಸಲ್ಮೇರ್ ಸುತ್ತಮುತ್ತ ನಡೆಯಲಿದೆ.
‘ಇದು ಮುಂಬೈ ಮೂಲದ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರ. ಆದರೂ, ಅದಕ್ಕೆ ಕನ್ನಡದ ನಂಟು ಹೆಚ್ಚಿದೆ. ಯಾಕಂದ್ರೆ, ಇದರ ನಿರ್ದೇಶಕರು ಮೂಲತಃ ಕನ್ನಡದವರು. ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ. ಮರಾಠಿ ಜತೆಗೆ ಕನ್ನಡದಲ್ಲೂ ತಾವೊಂದು ಸಿನಿಮಾ ಮಾಡ್ಬೇಕು ಅಂದಾಗ ನಾನೇ ಅವರಿಗೆ ಇಷ್ಟವಾಗಿದ್ದನ್ನು ಅವರು ನಮ್ಮ ಮುಖಾಮುಖಿ ಭೇಟಿಯ ಸಂದರ್ಭದಲ್ಲಿ ಹೇಳಿಕೊಂಡರು.
ಒಮ್ಮೆ ಫೋನ್ ಮಾಡಿ ಸಿನಿಮಾದ ಆಫರ್ ಹೇಳಿದರು. ಮುಂಬೈಗೆ ಹೋಗಿ ಕತೆ ಕೇಳಿದೆ. ಇಂಟರೆಸ್ಟಿಂಗ್ ಆಗಿತ್ತು. ಹಾಗೆಯೇ ಪ್ರೊಡಕ್ಷನ್ ಹೌಸ್ ಬಗ್ಗೆಯೂ ಹೇಳಿದರು. ಒಳ್ಳೆಯ ಸಂಸ್ಥೆಗಳು ಎಂದೆನಿಸಿತು. ಹಾಗಾಗಿ ಅಭಿನಯಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ ಟಗರು ಖ್ಯಾತಿಯ ನಟಿ ಮಾನ್ವಿತಾ.
ಚಿತ್ರದಲ್ಲಿ ಮಾನ್ವಿತಾ ಜತೆಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ನವ ಪ್ರತಿಭೆ ಸುಮುಖ್. ಸುಮುಖ್ ಕೂಡ ಕನ್ನಡದವರೇ. ಹುಟ್ಟಿ , ಬೆಳೆದಿದ್ದು ಮಾತ್ರ ಮುಂಬೈ. ಚಿತ್ರದ ನಿರ್ದೇಶಕಿ ನಂದಿತಾ ಯಾದವ್ ಪುತ್ರ. ಕನ್ನಡ ಕಿರುತೆರೆಯಲ್ಲಿ ನಂದಿತಾ ಯಾದವ್ ಪರಿಚಿತ ಹೆಸರು. ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅವರದ್ದು.
ಮುಂಬೈ ಮೂಲದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದೆ. ಆ ಸಂಸ್ಥೆಯ ರೂವಾರಿ ಜಿತೇಂದ್ರ ಠಾಕ್ರೆ. ಇವರು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆಯವರ ದೂರದ ಸಂಬಂಧಿ. ನಿರ್ಮಾಣದಲ್ಲಿ ಅವರೊಂದಿಗೆ ನಿರ್ದೇಶಕ ನಂದಿತಾ ಯಾದವ್ ಕೂಡ ಸಾಥ್ ನೀಡಿದ್ದಾರೆ.
ಮಾರ್ಚ್ ನಿಂದ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಪೋಷಕ ಪಾತ್ರಗಳಿಗೆ ಆಯಾ ಭಾಷಗಳಲ್ಲಿನ ಜನಪ್ರಿಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ.