ಚಿತ್ರದುರ್ಗ (ಜು. 18): ಲಾರಿ ಹಾಗೂ ಇನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಐವರು ಮೃತಟ್ಟಿರುವ ಘಟನೆ ಚಿತ್ರದುರ್ಗ ಹೊರವಲಯ ಕುಂಚಿಗನಹಾಳು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬುಧವಾರ ನಡೆದಿದೆ.  ಈ ಅಪಘಾತದಲ್ಲಿ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಮಂಗಳತ್ತೆ (ಶೋಭಾ) ಮೃತಪಟ್ಟಿದ್ದಾರೆ. 

ಬೆಂಗಳೂರಿನ ಕೆ.ಆರ್‌ ಪುರಂ ನಿವಾಸಿಗಳಾಗಿದ್ದ ಮಂಜುಳಾ, ಶೋಭಾ (ಮಗಳು ಜಾನಕಿ ಮಂಗಳತ್ತೆ), ಸುಕನ್ಯಾ, ಶ್ಯಾಮಲಮ್ಮ ಹಾಗೂ ಚಾಲಕ ಅಶೋಕ್‌ ಮೃತರಾಗಿದ್ದಾರೆ. ಪರ್ವಿತಾ, 4 ವರ್ಷದ ಹೆಣ್ಣು ಮಗು ಶ್ರೇಷ್ಠ ಮತ್ತು ಒಂದೂವರೆ ವರ್ಷದ ಮಗುವಿಗೆ ಗಾಯವಾಗಿದ್ದು, ಇವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ. 

ಬೆಂಗಳೂರಿನಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಇನೋವಾ ಕಾರು ಚಿತ್ರದುರ್ಗದ ಬಳಿ ಬಂದಾಗ ಟೈರ್‌ ಸಿಡಿದು ಲಾರಿಗೆ ಡಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಹಾಗೂ ಎಸ್ಪಿ ಡಾ.ಅರುಣ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳತ್ತೆ ಸಾವಿಗೆ ನಿರ್ದೇಶಕ ಟಿಎನ್ ಸೀತಾರಾಮ್ ಸೇರಿದಂತೆ ಇಡೀ ತಂಡ ಸಂತಾಪ ಸೂಚಿಸಿದೆ.