ಚಿತ್ರ: ಮಾದ ಮತ್ತು ಮಾನಸಿ
ಭಾಷೆ: ಕನ್ನಡ
ತಾರಾಗಣ: ಪ್ರಜ್ವಲ್‌ ದೇವರಾಜ್‌, ಶ್ರುತಿ ಹರಿಹರನ್‌, ಶೋಭರಾಜ್‌, ರಂಗಾಯಣ ರಘು, ಮೈಕೋ ನಾಗರಾಜ್‌, ಯತಿರಾಜ್‌, ಬುಲೆಟ್‌ ಪ್ರಕಾಶ್‌, ಪವನ್‌
ನಿರ್ದೇಶನ: ಸತೀಶ್‌ ಪ್ರಧಾನ್‌
ನಿರ್ಮಾಣ: ಮನೋಮೂರ್ತಿ
ಛಾಯಾಗ್ರಹಣ: ಚಂದ್ರಶೇಖರ್‌
ಸಂಗೀತ: ಮನೋಮೂರ್ತಿ

ರೇಟಿಂಗ್: **

- ಆರ್‌. ಕೇಶವಮೂರ್ತಿ, ಕನ್ನಡಪ್ರಭ

ಆಕಸ್ಮಿಕವಾಗಿ ಕಾಣುವ ಹುಡುಗಿ. ಕಂಡ ಹುಡುಗಿಯನ್ನು ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನುವಂತೆ ಪ್ರೀತಿಸುವ ಹುಡುಗ. ಆಕೆಗೆ ಅವನು ತನ್ನ ಪ್ರೀತಿ ಹೇಳಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಅವಳಿಗೆ ಮತ್ತೊಬ್ಬನ ಮೇಲೆ ಮನಸ್ಸಾಗಿರುವ ವಿಷಯ ಗೊತ್ತಾಗುತ್ತದೆ. ಒನ್‌ವೇ ಲವ್‌ ಮಾಡುತ್ತಿರುವವನು ತನ್ನ ಮನದನ್ನೆಯ ಆಸೆ ಪೂರೈಸಲು, ಆಕೆ ಪ್ರೀತಿಸುತ್ತಿರುವ ಹುಡುಗನ ಜತೆ ಅವಳನ್ನು ಸೇರಿಸುವ ಮನಸ್ಸು ಮಾಡುತ್ತಾನೆ. 

ಹುಡುಗ ತ್ಯಾಗರಾಜನಾಗುವ ಹೊತ್ತಿಗೆ ಹುಡುಗಿಯ ಅಪ್ಪ ನಿರೀಕ್ಷೆಯಂತೆಯೇ ವಿಲನ್‌ ಆಗುತ್ತಾನೆ. ಈಗ ಹುಡುಗ ಆಕೆ ಮೆಚ್ಚಿದ ಮತ್ತೊಬ್ಬನ ಜತೆ ಸೇರಿಸುತ್ತಾನೆಯೇ? ಎಂಬುದು ಟ್ವಿಸ್ಟ್‌. ಇಲ್ಲಿ ಆಕಸ್ಮಿಕವಾಗಿ ಪ್ರೀತಿಸುವ ಹುಡುಗ ನಾಯಕ. ಆಕೆ ಮೊದಲ ಪ್ರಿಯಕರ ತನ್ನ ಕ್ಲಾಸ್‌ಮೇಟ್‌. ಇದನ್ನೇ ತ್ರಿಕೋನ ಪ್ರೇಮಕತೆ ಎನ್ನುತ್ತೇವೆ. ಇಂಥ ಟ್ರಯಾಂಗಲ್‌ ಪ್ರೇಮಕತೆಗಳಿಗೆ ಬರ್ಮುಡಾ ಟ್ರಯಾಂಗಲ್‌ನಷ್ಟೇ ಇತಿಹಾಸವಿದೆ. ಆದರೂ ಅದರ ನಿಗೂಢತೆ ಇನ್ನೂ ಪತ್ತೆಯಾಗದಂತೆ ಇಲ್ಲೂ ಟ್ರಯಾಂಗಲ್‌ ಲವ್‌ಸ್ಟೋರಿಗಳ ಕಹಾನಿಗಳ ಕೊನೆ ಮಾತ್ರ ಸದ್ಯಕ್ಕೆ ಪತ್ತೆಯಾಗುವ ಲಕ್ಷಣಗಳಿಲ್ಲ.

ಪ್ರಜ್ವಲ್‌ ದೇವರಾಜ್‌ ಹಾಗೂ ಶ್ರುತಿ ಹರಿಹರನ್‌ ಜೋಡಿಯ ‘ಮಾದ ಮತ್ತು ಮಾನಸಿ' ಸಿನಿಮಾ ಈ ಮೇಲಿನ ಅಷ್ಟೂಅಂಶಗಳನ್ನು ಮೇಳೈಸಿಕೊಂಡಿದೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕನ ಪಾಲಿಗೆ ‘ಮಾದ, ಮಾನಸಿ ಮತ್ತು ಯಾತನೆ' ಎನ್ನುವ ಹಾಗೆ ಮೂಡಿಬಂದಿದ್ದು, ಇಲ್ಲಿನ ಪಾತ್ರಗಳು ಹತ್ತಾರು ‘ಮನೋ'ವೇದನೆಗಳಲ್ಲಿ ಟ್ರ್ಯಾಜಿಡಿಯನ್ನೇ ‘ಪ್ರಧಾನ'ವಾಗಿಸಿಕೊಂಡಿವೆ. ಅಲ್ಲಿಗೆ ಚಿತ್ರದ ಮುಕ್ತಾಯ ಹೇಗಿರಬಹುದೆಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ನಡುವೆ ಒಂದೆರಡು ಕುತೂಹಲ ತಿರುವುಗಳಿದ್ದರೂ ನಿರ್ದೇಶಕನ ಅತಿಯಾದ ನಿಧಾನಗತಿಯ ನಿರೂಪಣೆ, ಹೊಸತನವಿಲ್ಲದ ಕತೆಗಳು, ಸುಮ್ಮನೆ ಬಂದು ಹೋಗುವಂತೆ ಕಾಣುವ ಪಾತ್ರಗಳ ಆಟಿಡ್ಯೂಟ್‌ನಿಂದ ‘ಮಾದ ಮತ್ತು ಮಾನಸಿ'ಗೆ ಕ್ಯಾಮೆರಾ ವಿಭಾಗ ಹಾಗೂ ಹಿನ್ನೆಲೆ ಸಂಗೀತ ಬಿಟ್ಟರೆ ಬೇರಾವುದೂ ಸಾಥ್‌ ನೀಡಿಲ್ಲ. ತುಂಬಾ ಪೇಲವವಾಗಿ ಸಾಗುವ ಈ ಕತೆಯಲ್ಲಿ ರಂಗಾಯಣ ರಘು ಪಾತ್ರದ ಹೊರತಾಗಿ ಬೇರೆ ಯಾವುದೇ ಕ್ಯಾರೆಕ್ಟರ್‌ಗೆ ಗಟ್ಟಿಯಾದ ಹಿನ್ನೆಲೆ ಇಲ್ಲ. ಹಾಗೆ ನೋಡಿದರೆ ಈ ಯಂಗ್‌ ಜನರೇಷನ್‌ ಪ್ರೇಮಕತೆಯ ಚಿತ್ರದ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಬರುವ ರಂಗಾಯಣ ರಘು ಅವರ ಆ ದಿನಗಳ ಲವ್‌ಸ್ಟೋರಿಯಲ್ಲಿ ತುಸು ಮಜಾ ಇದೆ. ಊರಿಗೊಬ್ಳೆ ಪದ್ಮಾವತಿಯಂತೆ ಕನ್ನಡದ ಬಹುತೇಕ ನಾಯಕಿಯರಿಗೆ ಒಬ್ಬರೇ ವಾಯ್ಸ್ ಡಬ್‌ ಮಾಡುವುದರಿಂದ ನಾಯಕಿಯರ ಡೈಲಾಗ್‌ ಡೆಲಿವರಿ ಸ್ಟಿರಿಯೋಟೈಪ್‌ ಆಗಿದೆ. ಇದರಿಂದ ಶ್ರುತಿ ಹರಿಹರನ್‌ ಪಾತ್ರವೂ ಹೊರತಾಗಿಲ್ಲ. ಆದರೆ, ವಿರಾಮದ ನಂತರ ಬರುವ ಜಲಪಾತ, ಶಿವಲಿಂಗದ ಮೂರ್ತಿ, ಆ್ಯಕ್ಷನ್‌ ಸನ್ನಿವೇಶಗಳನ್ನು ಸಾಧ್ಯವಾದಷ್ಟು ರೋಚಕವಾಗಿ ತೋರಿಸುವ ಮೂಲಕ ಚಂದ್ರಶೇಖರ್‌ರ ಕ್ಯಾಮೆರಾ, ‘ಮಾದ ಮತ್ತು ಮಾನಸಿ'ಯನ್ನು ಕೈಹಿಡಿಯುವ ಪ್ರಯತ್ನಪಟ್ಟಿದೆ. ಡಾರ್ಕ್ ಬೆಳಕಿನ ಡ್ಯಾನ್ಸ್‌ನಲ್ಲಿ ಮಾನಸಿಯ ಹೆಜ್ಜೆಗಳ ಮೋಡಿಗೆ ಒಳಗಾಗುವ ಮಾದ, ಆಕೆಯನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾನೆ. ಆದರೆ, ತನ್ನ ಮಗಳತ್ತ ಕಣ್ಣೆತ್ತಿ ನೋಡುವವನ ತಲೆ ತೆಗೆಯುವ ಅಪ್ಪನ ಮಗಳು ಮಾನಸಿ. ಆದರೂ ಮಾದನಿಗೆ ಮಾನಸಿ ಪ್ರೀತಿ ಬೇಕು. ಹೀಗಾಗಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುವಾಗ ಮಾನಸಿ ತನಗೆ ಆಗಲೇ ಪ್ರಿಯಕರ ಇದ್ದಾನೆ, ಅವನೊಂದಿಗೆ ನನ್ನ ಸೇರಿಸಿ ಅನ್ನುತ್ತಾಳೆ. ಈಗ ಮಾದ, ಮಾನಸಿಯ ಪ್ರಯಾಣ ಶುರುವಾಗುತ್ತದೆ. ಈ ಪ್ರಯಾಣದಲ್ಲಿ ರಂಗಾಯಣ ರಘು ಎದುರಾಗುತ್ತಾರೆ. ಅವರ ಪ್ರೇಮಕತೆಯೂ ತೆಗೆದುಕೊಳ್ಳುತ್ತದೆ. ಈ ನಡುವೆ ಮಾನಸಿಯ ಮೇಲೆ ಅತ್ಯಾಚಾರವಾಗುತ್ತದೆ. ಈ ರೇಪ್‌ ಪ್ರಕರಣ ನಿಜವೋ ಸುಳ್ಳೋ ಎನ್ನುವುದು ಕೊನೆಗೂ ಗೊತ್ತಾಗದೆ ಮಾನಸಿ ಅದೇ ಮನೋವೇದನೆಯಲ್ಲಿ ಕೊರಗುತ್ತಾಳೆ. ಹೀಗೆ ಸಾಗುವ ಕತೆ ಮುಂದೆ ಎತ್ತ ಸಾಗುತ್ತದೆ ಎಂಬುದು ಚಿತ್ರದ ಮತ್ತೊಂದು ತಿರುವು. ಅದನ್ನು ನೋಡಬೇಕೆಂದರೆ ನೀವು ‘ಮಾದ ಮತ್ತು ಮಾನಸಿ'ಯ ದರ್ಶನ ಮಾಡಿಕೊಳ್ಳಬೇಕು.

ನಟನೆಯಲ್ಲಿ ಪ್ರಜ್ವಲ್‌ ದೇವರಾಜ್‌ ಎಂದಿನಂತೆ ಬಂದು ಹೋಗುತ್ತಾರೆ. ಕ್ಯಾಮೆರಾದ ಜಾದೂವಿನಿಂದ ಹಾಡುಗಳಲ್ಲಿ ಮುದ್ದಾಗಿ ಕಾಣುವ ಶ್ರುತಿ ಹರಿಹರನ್‌, ಬೇರೆ ಸಂದರ್ಭಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥ ಪಾತ್ರ ಅವರದ್ದು. ಮಾತು ಕಡಿಮೆ ಮಾಡಿರುವ ರಂಗಾಯಣ ರಘು, ನೋಡುಗನಿಗೆ ಹತ್ತಿರಾಗುತ್ತಾರೆ. ಶೋಭರಾಜ್‌, ಯತಿರಾಜ್‌, ಬುಲೆಟ್‌ ಪ್ರಕಾಶ್‌, ಮೈಕೋ ನಾಗರಾಜ್‌ ಊಟದ ಜತೆಗೆ ಸಿಗುವ ಪಲ್ಯದಂತೆ.