ಬೆಂಗಳೂರು (ಡಿ. 13): ಲೂಸ್ ಮಾದ ಯೋಗಿ ಲಂಬೋದರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲೋಸ್ ಮಾದ ಹ್ಯಾಂಗೋವರ್‌ನಿಂದ ಹೊರ ಬಂದಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಯೋಗೀಶ್ ಕನ್ನಡ ಪ್ರಭದ ಜೊತೆ ಮಾತನಾಡಿದ್ದಾರೆ. 

ಯಾಕೆ ತುಂಬಾ ಗ್ಯಾಪ್ ಆಗಿದ್ದು? ಒಂದು ರೀತಿಯಲ್ಲಿ ತೆರೆಗೆ ಅಪರೂಪವಾಗಿದ್ದೀರಲ್ಲ?

ಒಂದಿಷ್ಟು ಗ್ಯಾಪ್ ತೆಗೆದುಕೊಂಡಿದ್ದು ನಿಜ. ಅವಕಾಶಗಳು ಇಲ್ಲ ಅಂತಲ್ಲ. ಕೋಲಾರ, ಮಾಸ್ ಲೀಡರ್, ಯೋಗಿ ದುನಿಯಾ, ಜಾನ್ ಜಾನಿ ಜನಾರ್ದನ್ ಚಿತ್ರಗಳು ಬಂದಿವೆ. ಆದರೆ, ಇವುಗಳ ನಂತರ ಒಪ್ಪಿಕೊಂಡ ಸಿನಿಮಾಗಳ ಕತೆಗಳು ಒಂದೇ ರೀತಿಯಾಗಿದ್ದವು. ಅದೇ ದುನಿಯಾ ಲುಸ್ ಮಾದನ ಕ್ಯಾರೆಕ್ಟರ್. ನಾನೇ ಬದಲಾಗಬೇಕಿತ್ತು. ಆ ಕಾರಣಕ್ಕೆ ಬಿಡುವು ತೆಗೆದುಕೊಂಡೆ.

ನಿಮಗೆ ಯಾಕೆ ಬದಲಾಗಬೇಕು ಅನಿಸಿದ್ದು?

ಒಂದೇ ರೀತಿಯ ಪಾತ್ರ ಮಾಡಿಕೊಂಡು ಹೋದರೆ, ವರ್ಷಕ್ಕೆ ಏಳೆಂಟು ಸಿನಿಮಾಗಳಲ್ಲಿ ನಾಯಕನಾಗಬಹುದು. ಒಬ್ಬ ನಟನಾದವನು ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರಬೇಕು. ಆಗಲೇ ತಾನೇನು ಅಂತ ಪ್ರೇಕ್ಷಕರಿಗೆ ಗೊತ್ತಾಗುವುದು. ಆದರೆ, ನಾನು ಏನೇ ಪಾತ್ರ ಮಾಡಿದರೂ ಲೂಸ್‌ಮಾದನಾಗಿಯೇ ನೋಡುತ್ತಿದ್ದರು.

ಹಾಗಾದರೆ ಈಗ ಒಪ್ಪಿಕೊಂಡಿರುವ ಲಂಬೋದರ ನಿಮಗೆ ಹೇಗೆ ಸ್ಪೆಷಲ್?

ನಾನು ನಿರೀಕ್ಷೆ ಮಾಡಿದ ಕತೆ ಇಲ್ಲಿದೆ. ಜತೆಗೆ ನಾನು ಬದಲಾಗಬೇಕು ಅಂದುಕೊಂಡಿದ್ದೀನೋ ಅದಕ್ಕೆ ತಕ್ಕಂತೆ ಸಿನಿಮಾ ಇದಾಗಲಿದೆ ಎನ್ನುವ ನಂಬಿಕೆ. ನನ್ನ ಸಂಪೂರ್ಣವಾಗಿ ಲೂಸ್ ಮಾದನ ಇಮೇಜ್‌ನಿಂದ ಹೊರ ತರುವ ಸಿನಿಮಾ ಇದಾಗಲಿದೆ. ಭಿನ್ನ ಕಥೆ ಹಾಗೂ ತನ್ನ ಪಾತ್ರದ ವೈವಿಧ್ಯತೆ ಚಮತ್ಕಾರ ಚಿತ್ರದಲ್ಲಿದೆ.

ಯಾವ ರೀತಿಯ ಪಾತ್ರ ಮಾಡಿದ್ದೀರಿ?

ತುಂಬಾ ಎಂಟರ್‌ಟೈನ್‌ಮೆಂಟ್ ಇದೆ. ಗಂಭೀರವಾಗಿರಲ್ಲ. ನಾಲ್ಕು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನೀವು ಸಿದ್ಲಿಂಗು ಚಿತ್ರ ನೋಡಿರುತ್ತೀರಿ. ನಟನೆಗೆ ಹೆಚ್ಚು ಸ್ಕೋಪ್ ಇತ್ತು. ಅದೇ ರೀತಿ ನಟನೆ ಜತೆಗೆ ಹಾಸ್ಯಕ್ಕೆ ಮಹತ್ವ  ಇರುವಂತಹ ಪಾತ್ರ ಇಲ್ಲಿದೆ.

ಯಾವ ಕಾರಣಕ್ಕೆ ಈ ಸಿನಿಮಾ ನಿಮಗೆ ಭರವಸೆ ಕೊಡುತ್ತಿದೆ?

ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ನಿರ್ಮಿಸಿರುವ ಈ ಚಿತ್ರಕ್ಕೆ ಕೃಷ್ಣರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರೇ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಚಿತ್ರದ ಎಲ್ಲ ಹಾಡುಗಳನ್ನೂ ಮುಂದಿನ ವಾರ ಅನಾವರಣ ಮಾಡಲಿದ್ದೇವೆ. ಹಾಡುಗಳು ಹಿಟ್ ಆದರೆ, ಸಿನಿಮಾ ಯಶಸ್ಸು ಕಾಣುತ್ತದೆ. ಎರಡುಹಾಡು ಸಕ್ಸಸ್ ಆಗಿವೆ. ಅದೇ ನಮಗೆ ಇರುವ ಭರವಸೆ. ಒಂದು ರೀತಿಯಲ್ಲಿ ‘ಲಂಬೋದರ’ ಸಿನಿಮಾ ನನ್ನ ರೀ ಎಂಟ್ರಿ.

- ಆರ್. ಕೇಶವಮೂರ್ತಿ