ಬೆಂಗಳೂರು (ಜ.19): ಹೆಣ್ಣು-ಗಂಡು ಪ್ರೀತಿ ಮಾಡಿ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವಂತಹ ಸಾವಿರಾರು ಪ್ರೇಮ ಕತೆಗಳು ಈಗಾಗಲೇ ಸಿನಿಮಾಗಳಾಗಿವೆ. ಆದರೆ, ಹೆಣ್ಣನ್ನು ಹೆಣ್ಣೇ ಪ್ರೀತಿಸುವುದು, ಗಂಡಿಗೆ- ಗಂಡೇ ಆಕರ್ಷಣೆಯಾಗುವಂತಹ ಕತೆಗಳು ಸಿನಿಮಾಗಳಾಗಿರುವುದು ಅಪರೂಪ.

ಸಲಿಂಗ ಕಾಮ- ಪ್ರೇಮ- ಸಂಸಾರ ಇಂಥವುಗಳನ್ನು ಹಾಲಿವುಡ್ ಸಿನಿ ಜಗತ್ತು ತೆರೆ ಮೇಲಿಟ್ಟಿದೆ. ಬಾಲಿವುಡ್‌'ನಲ್ಲಿ ಒಂದಷ್ಟು ಸಿನಿಮಾಗಳು ಬಂದಿವೆ. (ಗರ್ಲ್ ಫ್ರೆಂಡ್, ಫೈರ್) ಆದರೆ ಕನ್ನಡ ಸಿನಿಮಾ ಪರದೆ ಇಂಥ ಕತೆಗಳನ್ನು ದೂರವಿಟ್ಟೇ ನೋಡುತ್ತಿದೆ. ಕೆಲವು ತಿಂಗಳುಗಳ ಹಿಂದೆ ‘೧೪೩’ ಎನ್ನುವ ಸಿನಿಮಾ ಇಂಥದ್ದೇ ಕತೆಯನ್ನು ಹೇಳಿಕೊಂಡು ಗಾಂಧಿನಗರದಲ್ಲಿ ಬಂದಿತ್ತು. ಈಗ ಇದರ ಸಾಲಿಗೆ ‘ಬೆಸ್ಟ್ ಫ್ರೆಂಡ್ಸ್’  ಸಿನಿಮಾ ಸೇರುತ್ತಿದೆ.

ಇದು ಹೆಣ್ಣು ಹೆಣ್ಣನ್ನೇ ಪ್ರೀತಿಸುವ ಕತೆ. ಒಂದು ಕಡೆ ಇದಕ್ಕೆ ಕಾನೂನಿನ ಮಾನ್ಯತೆ ಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಟೇಶಿ ವೆಂಕಟೇಶ್ ಅವರು ಒಂದು ನೈಜ ಘಟನೆಯನ್ನು ಮುಂದಿಟ್ಟುಕೊಂಡು ‘ಬೆಸ್ಟ್ ಫ್ರೆಂಡ್ಸ್’ ಎನ್ನುವ ಸಿನಿಮಾ ಮಾಡಿದ್ದಾರೆ.  ಶ್ರುತಿ ಮತ್ತು ರಶ್ಮಿ ಇಬ್ಬರು ಗೆಳತಿಯರು. ಆದರೆ, ಇವರ ಪ್ರೀತಿಯಲ್ಲಿ ಮನಸ್ತಾಪ ಬಂದು ಒಬ್ಬಾಕೆ ತಮಗೆ ಸಿಗದ ಗೆಳತಿ ಬೇರೆಯವರಿಗೂ ಸಿಗಬಾರದು ಎಂದುಕೊಂಡು ತನ್ನ ಗೆಳತಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಜೈಲಿಗೆ ಸೇರಿದರು. ಇದು ಕಳೆದ 2012 ನವೆಂಬರ್ ತಿಂಗಳಲ್ಲಿ ನಡೆದ ಘಟನೆ. ಇದನ್ನೇ ಸಿನಿಮಾ ಮಾಡಿದ್ದಾರೆ ಟೇ ಶಿ ವೆಂಕಟೇಶ್.

ಈ ಘಟನೆಯ ಸುತ್ತ ಒಂದಿಷ್ಟು ಸಂಶೋಧನೆ ಮಾಡಿಕೊಂಡು ನೈಜತೆ ಮತ್ತು ಕಾಲ್ಪನಿಕತೆಯನ್ನು  ಬೆರೆಸಿಕೊಂಡು ಈ ಸಿನಿಮಾ ಮಾಡಿದ್ದು, ಈಗಷ್ಟೇ ಚಿತ್ರಕ್ಕೆ ಸೆನ್ಸಾರ್ ಮುಗಿದು ‘ಯು/ಎ’ ಸರ್ಟಿಫಿಕೇಟ್ ಸಿಕ್ಕಿದೆ. ಇದನ್ನು ಹೇಳಿಕೊಳ್ಳುವುದಕ್ಕಾಗಿಯೇ ಟೇ ಶಿ ವೆಂಕಟೇಶ್ ಆ್ಯಂಡ್ ಟೀಮ್ ಮಾಧ್ಯಮಗಳ ಮುಂದೆ ಬಂತು. ಘರ್ಷಣೆ ನಡುವೆ ಕಾನೂನು ಮತ್ತು ಮಾನವ ಹಕ್ಕುಗಳು, ಇದು ತೀರ್ಪು ನೀಡಲಾಗದ ಪ್ರೇಮಕತೆ ಎಂದು ಚಿತ್ರದ ಪೋಸ್ಟರ್'ನಲ್ಲಿ ಹಾಕಲಾಗಿದ್ದು,  ಇದೇ ಸಿನಿಮಾದ ಹೈಲೈಟ್ ಎಂಬುದು ನಿರ್ದೇಶಕರು ಕೊಡುವ ವಿವರಣೆ. ಚಿತ್ರದ ಪೋಸ್ಟರ್‌ನಲ್ಲಿ ಹೇಳಿಕೊಂಡಂತೆ ಭಾವನೆಗಳು ತುಂಬಿದ ಪ್ರೇಮಕತೆಯಲ್ಲಿ ಸಾಮಾಜಿಕ

ಕಳಕಳಿಯನ್ನು ತೋರುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ಮೇಘನಾ, ಚಿಕ್ಕಮಗಳೂರಿನ ದ್ರಾವ್ಯ ಶೆಟ್ಟಿ, ಆಶಾ, ಸುಮತಿ ಪಾಟೀಲ್ ನಟಿಸಿದ್ದಾರೆ. ಲಯನ್ ಎಸ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ.