ಜಿಎಸ್'ಟಿ ಜೊತೆಗೆ ಹೆಚ್ಚುವರಿಯಾಗಿ ತಮಿಳುನಾಡು ಸರಕಾರ ವಿಧಿಸಿರುವ 30% ಎಂಟರ್'ಟೈನ್ಮೆಂಟ್ ಟ್ಯಾಕ್ಸ್ ಅನ್ನು ಕೈಬಿಡುವಂತೆ ಕೋರಿಕೆ ಸಲ್ಲಿಸಲು ಮುಖ್ಯಮಂತ್ರಿ ಪಳನಿಸ್ವಾಮಿ ಭೇಟಿಗೆ ಚಿತ್ರ ನಿರ್ಮಾಪಕರ ಮಂಡಳಿ ಅಧ್ಯಕ್ಷ ವಿಶಾಲ್ ಕೃಷ್ಣ ನೇತೃತ್ವದಲ್ಲಿ ತಂಡವೊಂದು ಸಜ್ಜಾಗಿದೆ.
ಚೆನ್ನೈ(ಜುಲೈ 03): ತಮಿಳುನಾಡಿನಲ್ಲಿ ಸಿನಿಮಾ ಟಿಕೆಟ್'ಗಳ ಮೇಲೆ ವಿಪರೀತ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ತಮಿಳುನಾಡಿನ ಚಲನಚಿತ್ರ ವಾಣಿಜ್ಯ ಮಂಡಳಿ ಕರೆ ನೀಡಿದ ಅನಿರ್ದಿಷ್ಟಾವಧಿ ಮುಷ್ಕರದಿಂದ ಕಾಲಿವುಡ್ ಚಿತ್ರ ನಿರ್ಮಾಪಕರು ಕಂಗಾಲಾಗಿದ್ದಾರೆ. ಮುಷ್ಕರ ಕೈಬಿಡುವಂತೆ ಚಿತ್ರಮಂದಿರಗಳ ಮಾಲೀಕರನ್ನು ಬೇಡಿಕೊಳ್ಳುತ್ತಿದ್ದಾರೆ. ಜಿಎಸ್'ಟಿ ಜೊತೆಗೆ ಹೆಚ್ಚುವರಿಯಾಗಿ ತಮಿಳುನಾಡು ಸರಕಾರ ವಿಧಿಸಿರುವ 30% ಎಂಟರ್'ಟೈನ್ಮೆಂಟ್ ಟ್ಯಾಕ್ಸ್ ಅನ್ನು ಕೈಬಿಡುವಂತೆ ಕೋರಿಕೆ ಸಲ್ಲಿಸಲು ಮುಖ್ಯಮಂತ್ರಿ ಪಳನಿಸ್ವಾಮಿ ಭೇಟಿಗೆ ಚಿತ್ರ ನಿರ್ಮಾಪಕರ ಮಂಡಳಿ ಅಧ್ಯಕ್ಷ ವಿಶಾಲ್ ಕೃಷ್ಣ ನೇತೃತ್ವದಲ್ಲಿ ತಂಡವೊಂದು ಸಜ್ಜಾಗಿದೆ. ಕಷ್ಟಪಟ್ಟು ಚಿತ್ರ ನಿರ್ಮಿಸಿ ಥಿಯೇಟರ್'ಗಳಲ್ಲಿ ಬಿಡುಗಡೆ ಮಾಡಿದ ಸಿನಿಮಾಗಳ ಗತಿ ಏನು ಎಂಬುದು ಕಾಲಿವುಡ್ ನಿರ್ಮಾಪಕರ ಪ್ರಶ್ನೆಯಾಗಿದೆ.
ಎಷ್ಟು ತೆರಿಗೆ?
100 ರೂಪಾಯಿ ಮೇಲ್ಪಟ್ಟ ದರದ ಟಿಕೆಟ್'ಗಳಿಗೆ 28% ಜಿಎಸ್'ಟಿ
100 ರೂ ಒಳಗಿನ ದರದ ಟಿಕೆಟ್'ಗಳಿಗೆ 18% ಜಿಎಸ್'ಟಿ
ಎಲ್ಲಾ ಟಿಕೆಟ್'ಗಳಿಗೆ ತಮಿಳುನಾಡು ಸರಕಾರದಿಂದ 30% ಮನರಂಜನಾ ಟ್ಯಾಕ್ಸ್
ನಿರ್ಮಾಪಕರು, ವಿತರಕರು ಮತ್ತು ಥಿಯೇಟರ್ ಮಾಲೀಕರಿಗೆ ಹೆಚ್ಚುವರಿ 6% ತೆರಿಗೆ
ಒಟ್ಟಾರೆ, ತಮಿಳುನಾಡಿನಲ್ಲಿ ಫಿಲಂ ಟಿಕೆಟ್'ಗಳಿಗೆ ಶೇ.54-64ರಷ್ಟು ತೆರಿಗೆ ನಿಗದಿಯಾಗಿದೆ. ಅಂದರೆ, 120 ರೂ ಮೂಲ ದರವಿದ್ದ ಟಿಕೆಟ್'ಗಳ ಬೆಲೆ 197 ರೂಪಾಯಿಗೆ ಏರಲಿದೆ. 100 ರೂ ಟಿಕೆಟ್ ದರವು 154 ರೂಗೆ ಏರಿಕೆಯಾಗಲಿದೆ.
ಇನ್ನು, ಕರ್ನಾಟಕದಲ್ಲಿ ಸಿನಿಮಾ ಟಿಕೆಟ್'ಗಳ ಮೇಲೆ ತಮಿಳುನಾಡಿನಂತೆ ಹೆಚ್ಚುವರಿ ಟ್ಯಾಕ್ಸ್ ಹಾಕಲಾಗಿಲ್ಲ. ಜಿಎಸ್'ಟಿ ತೆರಿಗೆ ಮಾತ್ರ ಇಲ್ಲಿ ಅನ್ವಯವಾಗುತ್ತಿದೆ. ಆದರೆ, ಕಳೆದ 21 ವರ್ಷಗಳಿಂದ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ. ಈಗ ಎಲ್ಲಾ ಭಾಷೆಯ ಚಿತ್ರಗಳಂತೆ ಕನ್ನಡ ಸಿನಿಮಾಗಳಿಗೂ ಜಿಎಸ್'ಟಿ ತೆರಿಗೆ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಗಾಂಧಿನಗರದ ಕನ್ನಡ ನಿರ್ಮಾಪಕರು ಜಿಎಸ್'ಟಿ ತೆರಿಗೆಯನ್ನು ವಿರೋಧಿಸುತ್ತಿದ್ದಾರೆ.
