Published : Dec 31 2016, 06:02 AM IST| Updated : Apr 11 2018, 12:41 PM IST
Share this Article
FB
TW
Linkdin
Whatsapp
Kirik Party review
ನಾಯಕ ಪ್ರಧಾನವಾದ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟನೆಯೂ ಗಮನ ಸೆಳೆಯುತ್ತದೆ. ಕಾಲೇಜಿನ ಆ್ಯಂಗ್ರಿ ಯಂಗ್‌ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಕ್ಷಿತ್‌ ಶೆಟ್ಟಿಎಂತಹ ಪಾತ್ರವನ್ನೂ ನಿಭಾಯಿಸಬಲ್ಲರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಭಾಷೆ: ಕನ್ನಡ
ನಿರ್ದೇಶನ: ರಿಷಬ್ ಶೆಟ್ಟಿ
ಪಾತ್ರವರ್ಗ: ರಕ್ಷಿತ್ ಶೆಟ್ಟಿ, ರಷ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ
ನಿರ್ಮಾಣ: ಜಿಎಸ್ ಗುಪ್ತ, ರಕ್ಷಿತ್ ಶೆಟ್ಟಿ
ಸಂಗೀತ: ಅಜನೀಶ್ ಲೋಕನಾಥ್
ಛಾಯಾಗ್ರಹಣ: ಕರಮ್ ಚಾವ್ಲಾ
-ಗಣೇಶ್ ಪ್ರಸಾದ್ ಕುಂಬ್ಳೆ ಕಾಲೇಜು ಹುಡುಗಾಟ, ತುಂಟಾಟ, ಗಲಾಟೆ, ಗದ್ದಲ, ಪ್ರೀತಿ ಪ್ರೇಮಗಳ ಪರಿಕಲ್ಪನೆಗಳೊಂದಿಗೆ ಬಂದು ಹೋಗಿರುವ ಬಹಳಷ್ಟುಸಿನಿಮಾಗಳ ಮಧ್ಯೆ ಕಿರಿಕ್ ಪಾರ್ಟಿ ಕೊಂಚ ಡಿಫರೆಂಟ್ ಆಗಿ ನಿಲ್ಲುತ್ತದೆ. ತೆಲುಗಿನ ಹ್ಯಾಪಿ ಡೇಸ್, ಮಲಯಾಳಂನ ಪ್ರೇಮಂ ಜೊತೆಗೆ ನಿಲ್ಲಬಲ್ಲ ತಾಕತ್ತಿರುವ ಸಿನಿಮಾವಿದು. ಬಹಳಷ್ಟುಕೋನಗಳಲ್ಲಿ ಪ್ರೇಮಂ ಅನ್ನು ಹೋಲುತ್ತದೆಯಾದರೂ ಅದರ ನಕಲಲ್ಲ.
ನಾಯಕ ಪ್ರಧಾನವಾದ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟನೆಯೂ ಗಮನ ಸೆಳೆಯುತ್ತದೆ. ಕಾಲೇಜಿನ ಆ್ಯಂಗ್ರಿ ಯಂಗ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಕ್ಷಿತ್ ಶೆಟ್ಟಿಎಂತಹ ಪಾತ್ರವನ್ನೂ ನಿಭಾಯಿಸಬಲ್ಲರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಕಥೆಯು ಅರೆಮಲೆನಾಡಾದ ಹಾಸನದಲ್ಲಿ ಸಾಗುವುದರಿಂದ ಮೈಸೂರು ಪ್ರಾಂತದ ಭಾಷೆಯ ಲಯವೇ ಸಿನಿಮಾದಲ್ಲಿ ಹೆಚ್ಚಿದ್ದು, ಅಲ್ಲಲ್ಲಿ ಕರಾವಳಿ ಕನ್ನಡವೂ ಇಣುಕುತ್ತದೆ. ಅಪರೂಪಕ್ಕೆ ಬೆಂಗಳೂರು ಕನ್ನಡವೂ ಕಾಣಿಸಿಕೊಂಡಿದೆ. ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ಗೆ ಅಗತ್ಯವಿರುವ ಇಂಗ್ಲಿಷ್ ಕೂಡ ಧಾರಾಳವಾಗಿಯೇ ಇದೆ. ಒಂದೆರಡು ಕಡೆ ಡಬ್ಬಲ್ ಮೀನಿಂಗ್ (ಅರ್ಥವಾಗುವವರಿಗೆ ಮಾತ್ರ) ಪಂಚ್ಗಳನ್ನು ಹೊರತುಪಡಿಸಿದರೆ ಸಂಭಾಷಣೆ ಎಲ್ಲೂ ಸಭ್ಯತೆಯ ಎಲ್ಲೆ ಮೀರಿಲ್ಲ.
ರಕ್ಷಿತ್ ಶೆಟ್ಟಿತಂಡ ಬರೆದಿರುವ ಕಥೆಯಲ್ಲಿ ಹೊಸತಿಲ್ಲವಾದರೂ ಎಲ್ಲೂ ಬೋರ್ ಹಿಡಿಸುವುದಿಲ್ಲ. ಕಾಲೇಜಿನ ಪ್ರಾರಂಭದ ವರ್ಷದಲ್ಲಿ ಗೆಳೆಯರಾಗಿದ್ದವರು ಕೊನೆಯ ವರ್ಷ ತಲುಪುವಾಗ ಬದ್ಧವೈರಿಗಳಾಗುತ್ತಾರೆ. ಎಲ್ಲಾ ಕಾಲೇಜುಕಥಾ ಕೇಂದ್ರಿತ ಸಿನಿಮಾಗಳಂತೆಯೇ ಕೊನೆಗೊಂದು ಸಂದೇಶ.
ತಮಾಷೆಯೊಂದಿಗೆ ಪ್ರಾರಂಭವಾಗುವ ಸಿನಿಮಾ ತಮಾಷೆಯಾಗಿಯೇ ಮುಗಿಯುವ ಸಿನಿಮಾ ಪ್ರಾರಂಭದಿಂದ ಕೊನೆಯವರೆಗೂ ಪ್ರೇಕ್ಷಕನನ್ನು ಹಿಡಿದಿಡುವಲ್ಲಿ ಸಫಲವಾಗುವುದು ಇದರ ಪ್ಲಸ್ ಪಾಯಿಂಟ್. ಹಾಗಾಗಿಯೇ ಉಳಿದ ಕಾಲೇಜು ಚಿತ್ರಕಥಿತ ಚಿತ್ರಗಳಿಂದ ಇದು ಭಿನ್ನ ಎಂದು ಪ್ರಾರಂಭದಲ್ಲೇ ಹೇಳಿದ್ದು. ಹೀರೋಯಿಸಂ ಚಿತ್ರದಲ್ಲಿ ಢಾಳಾಗಿ ಕಾಣಿಸುತ್ತದಾದರೂ ನಿರ್ದೇಶಕ ರಿಷಬ್ ಶೆಟ್ಟಿಉಳಿದ ಪಾತ್ರಗಳ ಅನಾವರಣಕ್ಕೂ ಧಾರಾಳ ಅವಕಾಶ ನೀಡಿದ್ದಾರೆ.
ರಫ್ ಆ್ಯಂಡ್ ಟಫ್ ಹೀರೋನೊಳಗಿರುವ ಮಗುವಿನ ಮನಸ್ಸನ್ನು ಕಾಣುವ ಹಂಬಲ ಇಬ್ಬರೂ ಕಥಾನಾಯಕಿಯರದ್ದು. ಹೀಗಾಗಿಯೇ ಮೊದಲ ಅವಧಿಯಲ್ಲಿ ಬರುವ ಪಾತ್ರವಾದ ಸಾನ್ವಿ ಬಹುಕಾಲ ನೆನಪಿನಲ್ಲುಳಿಯುವುದು ಖಂಡಿತ. ಈ ಪಾತ್ರ ನಿರ್ವಹಿಸಿದ ರಷ್ಮಿಕಾ ಮಂದಣ್ಣ ಪಕ್ಕದಮನೆ ಹುಡುಗಿಯಂತೆ ಗಮನ ಸೆಳೆಯುತ್ತಾಳೆ. ಇಂಟರ್ವೆಲ್ ಬಳಿಕ ಎಂಟರ್ ಆಗುವ ಆರ್ಯಳಿಗೆ ಸಾನ್ವಿಕಾಳ ಪಾತ್ರದಷ್ಟುಸ್ಕೋಪ್ ಇಲ್ಲವಾದರೂ ಚೆಲ್ಲು ಹುಡುಗಿಯ ಪಾತ್ರ ನಿರ್ವಹಿಸಿದ ಸಂಯುಕ್ತಾ ಹೆಗ್ಡೆಯೂ ಕೊಂಚ ಶ್ರಮ ಪಟ್ಟಿದ್ದರೆ ಇನ್ನೂ ಹೆಚ್ಚು ಗಮನ ಸೆಳೆಯಬಹುದಿತ್ತು.
ಪೋಷಕ ಪಾತ್ರಗಳಲ್ಲಿ ಆಗಾಗ ಪ್ರತ್ಯಕ್ಷವಾಗುವ ಅಚ್ಯುತ್ ಕುಮಾರ್ ಮಂಗಳೂರು ಭಾಷೆಗೆ ನ್ಯಾಯ ಒದಗಿಸಿದ್ದಾರೆ. ಪ್ರಿನ್ಸಿಪಾಲ್ ಪಾತ್ರದಲ್ಲಿ ಹನುಮಂತೇಗೌಡರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಥೆಗೆ ಅಗತ್ಯವಿರುವ ಹಿನ್ನೆಲೆ ಸಂಗೀತವನ್ನು ಅಳವಡಿಸಿರುವ ಅಜನೀಶ್ ಲೋಕನಾಥ್ ಅವರ ಥಿಯೇಟರಿನಲ್ಲಿ ಇಷ್ಟವಾಗುತ್ತದೆ. ಹಾಗಂತ ಥಿಯೇಟರಿನಿಂದ ಹೊರಬಂದ ಬಳಿಕ ನೆನಪಲ್ಲುಳಿಯುವುದು ‘ತೂಗುಮಂಚದಲ್ಲಿ ಕೂತು' ಮತ್ತು ‘ಶ್ರೇಯಾ ಘೋಷಾಲ್' ಹಾಡಿರುವ ‘ನೀನಿರೆ ಸನಿಹ' ಮಾತ್ರ. ಚಿತ್ರದುದ್ದಕ್ಕೂ ನಮ್ಮನ್ನು ಹಿಡಿದಿಡುವುದು ಕರಮ್ ಚಾವ್ಲಾ ಅವರ ಕ್ಯಾಮೆರಾ ವರ್ಕ್. ಅದಕ್ಕೆ ತಕ್ಕದಾಗಿದೆ ಸಚಿನ್ ಎಡಿಟಿಂಗ್. ಯುವಕರಿಗೆ ಇಷ್ಟವಾಗುವುದಲ್ಲಿ ಸಂಶಯವಿಲ್ಲ. (ಕನ್ನಡ ಪ್ರಭ )
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.