ಸೂರಪ್ಪ ಬಾಬು ಚುರುಕಾಗಿದ್ದಾರೆ. ಅಂದುಕೊಂಡ ಸಮಯಕ್ಕೆ ಸಿನಿಮಾ ಮುಗಿಸಬೇಕು. ಹೇಳಿದ ದಿನವೇ ಸಿನಿಮಾ ರಿಲೀಸ್ ಮಾಡ ಬೇಕು ಅನ್ನುವ ಕಾರಣಕ್ಕೇ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಆರಂಭಿಸಿ, ಮೊದಲ ಷೆಡ್ಯೂಲ್ ಮುಗಿಸಿದ್ದಾರೆ. ಸುದೀಪ್ ಅವರ ಸನ್ನಿವೇಶಗಳು ಇಲ್ಲದ ದೃಶ್ಯಗಳನ್ನೆಲ್ಲ ಚಿತ್ರೀಕರಿಸಿ, ಅದರ ಸಂಕಲನ ಕಾರ್ಯವನ್ನೂ ಮುಗಿಸಲು ಪಣ ತೊಟ್ಟಿರುವ  ಸೂರಪ್ಪ ಬಾಬು ಬಗ್ಗೆ ಸುದೀಪ್ ಕೂಡ ಮೆಚ್ಚುಗೆಯ ಮಾತಾಡುತ್ತಾರೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.

ಕೋಟಿಗೊಬ್ಬ-3 ಒಂದು ಮೆಗಾ ಪ್ರಾಜೆಕ್ಟ್. ಅದನ್ನು ನಿರ್ದೇಶಿಸುತ್ತಿರುವುದು ಹೊಸ ಹುಡುಗ ಕಾರ್ತಿಕ್. ಆ ಹುಡುಗನಿಗೆ ಕತೆ ಹೇಳಿದವರು ಸುದೀಪ್. ಬಹುಕೋಟಿ ಪ್ರಾಜೆಕ್ಟ್ ಒಂದನ್ನು ಹೊಸ ಹುಡುಗನ ಕೈಯಲ್ಲಿಡಲು ಎಂಥವರಿಗಾದರೂ ಎಂಟೆದೆ ಬೇಕು. ಆ ಧೈರ್ಯ ತೋರಿದವರು ಎಂಬಿ ಬಾಬು.

ಆ ಕುರಿತು ಸುದೀಪ್ ಹೇಳುವುದು ಹೀಗೆ: 

ಸೂರಪ್ಪ ಬಾಬು ಕತೆ ಹೇಳೋದಕ್ಕೆ ಒಬ್ಬ ಹುಡುಗನನ್ನು ಕರೆದುಕೊಂಡು ಬಂದರು. ಅವನೊಂದು ಕತೆ ಹೇಳಿದ. ನನಗೆ ಅಷ್ಟೇನೂ ಇಷ್ಟವಾಗಲಿಲ್ಲ. ಆದರೆ ಆ ಹುಡುಗ ಉತ್ಸಾಹ ಮೆಚ್ಚುಗೆಯಾಯಿತು. ಅವನಿಗೆ ಕತೆ ಹೇಳುವುದು ಗೊತ್ತಿತ್ತು. ಹುಡುಗ ತುಂಬ ಪ್ಯಾಷನೇಟ್ ಅನ್ನಿಸಿತು. ನನ್ನ ಬಳಿ ಒಂದು ಕತೆ ಇದೆ, ಅದನ್ನೇ ನಿರ್ದೇಶನ ಮಾಡ್ತೀಯಾ ಅಂತ ಕೇಳಿದೆ. ಒಂದೆಳೆ ಕತೆ ಹೇಳಿದೆ. ಅದನ್ನು ಚೆನ್ನಾಗಿಯೇ ಡೆವಲಪ್ ಮಾಡಿಕೊಂಡು ಬಂದ. ಒಳ್ಳೇ ಚಿತ್ರಕತೆಯನ್ನೂ ಮಾಡಿಕೊಂಡು ಬಂದ. ತುಂಬಾ ಸಾಮರ್ಥ್ಯ ಇರುವ ಹುಡುಗ. ಹೊಸ ಹುಡುಗನನ್ನು ನಂಬಿ ಅವನ ಕೈಗೆ ಸಿನಿಮಾ ಕೊಟ್ಟ ಕ್ರೆಡಿಟ್ ನಿರ್ಮಾಪಕ ಬಾಬು ಅವರಿಗೂ ಸಲ್ಲಬೇಕು. ಇದೀಗ ಮೊದಲ ಷೆಡ್ಯೂಲ್ ಮುಗಿಸಿದ ಬಾಬು ಸಂತೋಷವಾಗಿದ್ದಾರೆ. ಕಾರ್ತಿಕ್ ಕೆಲಸ ಮೆಚ್ಚಿಕೊಂಡಿದ್ದಾರೆ.

ಚಿತ್ರೀಕರಣ

ನಾಯಕಿ ಮತ್ತು ಮತ್ತೊಂದು ಪ್ರಮುಖ ಪಾತ್ರದ ಆಯ್ಕೆ ಮುಗಿಯುತ್ತಿದ್ದಂತೆ ಚಿತ್ರತಂಡ ಸುದೀಪ್ ಅವರ ಜೊತೆ ವಿದೇಶ ಪ್ರಯಾಣ ಹೊರಡಲಿದೆ. ಬಹುತೇಕ ದೃಶ್ಯಗಳು  ವಿದೇಶದಲ್ಲಿ ಚಿತ್ರೀಕರಣಗೊಳ್ಳಲಿವೆ. ದಿ ವಿಲನ್ ಚಿತ್ರೀಕರಣ ತಡವಾಗಿದ್ದರಿಂದ ಇನ್ನು ಮುಂದೆ ಸುದೀಪ್ ಏಕಕಾಲಕ್ಕೆ ಎರಡು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಪೈಲ್ವಾನ್ ಮತ್ತು ಕೋಟಿಗೊಬ್ಬ-3 ಜೊತೆ ಜೊತೆಗೇ ಚಿತ್ರೀಕರಣಗೊಳಲಿವೆ. ಈ ಎರಡು ಚಿತ್ರಗಳ ಪೈಕಿ ಯಾವುದು ಮೊದಲು ಬಿಡುಗಡೆ ಆಗುತ್ತದೆ ಅನ್ನುವುದು ಸದ್ಯಕ್ಕೆ ಸಸ್ಪೆನ್ಸು. ಯಾವುದು ಮೊದಲು ಚಿತ್ರೀಕರಣ ಮುಗಿಸುತ್ತದೋ ಅದು ಮೊದಲು ಬಿಡುಗಡೆ ಆಗಲಿದೆ ಅನ್ನುವುದಷ್ಟೇ ಸತ್ಯ. ಈ ಆರೋಗ್ಯಕರ ಸ್ಪರ್ಧೆಯಿಂದ ಎರಡೂ ಸಿನಿಮಾಗಳಿಗೆ ಒಳ್ಳೆಯದಾಗಲಿದೆ ಅನ್ನುವುದಂತೂ ಸತ್ಯ.