ಬೆಂಗಳೂರು[ಫೆ.24]: ಝೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ಗೆ ಶನಿವಾರ ರಾತ್ರಿ ವಿಧ್ಯುಕ್ತವಾಗಿ ತೆರೆಬಿದ್ದಿದೆ. ಕೀರ್ತನ್ ಹೊಳ್ಳ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಅವರಿಗೆ 35 ಲಕ್ಷ ರು. ಮೌಲ್ಯದ ಫ್ಲಾಟ್ ಬಹುಮಾನವಾಗಿ ಸಿಕ್ಕಿದೆ. ಝೀ ವಾಹಿನಿ ಪರವಾಗಿ ಕಾನ್ಫಿಡೆಂಟ್ ಗ್ರೂಪ್ ಈ ಬಹುಮಾನ ನೀಡಿದೆ.

ಹಾವೇರಿ ಜಿಲ್ಲೆಯ ಕುರಿಗಾಹಿ ಹನುಮಂತ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಶೋದುದ್ದಕ್ಕೂ ಶಾಸ್ತ್ರೀಯ ಸಂಗೀತದ ಮೂಲಕ ಕೀರ್ತನ್ ಹೊಳ್ಳ ವೀಕ್ಷಕರ ಗಮನ ಸೆಳೆದಿದ್ದರು. ಮೂರನೇ ಸ್ಥಾನಕ್ಕೆ ಸಾಧ್ವಿನಿ ತೃಪ್ತಿ ಪಟ್ಟುಕೊಂಡಿದ್ದಾರೆ. ಅವರಿಗೆ 2 ಲಕ್ಷ ರು. ಬಹುಮಾನ ಸಿಕ್ಕಿದೆ.

ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ‘ಸರಿಗಮಪ ಸೀಸನ್ 15’ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ವರ್ಣರಂಜಿತವಾಗಿ ನಡೆಯಿತು. ಸೆಮಿಫೈನಲ್‌ನಲ್ಲಿ ಆಯ್ಕೆಯಾದ ಆರು ಫೈನಲಿಸ್ಟ್‌ಗಳು ಗ್ರ್ಯಾಂಡ್ ಫಿನಾಲೆಯಲ್ಲಿದ್ದರು. ಆ ಆರು ಜನ ಗಾಯಕರಲ್ಲಿ ಹಾವೇರಿ ಜಿಲ್ಲೆಯ ಹನುಮಂತ, ಕೀರ್ತನ್ ಹೊಳ್ಳ ಹಾಗೂ ಸಾಧ್ವಿನಿ ಫೈನಲ್ ತಲುಪಿದ್ದರು. ಕಾರ್ಯಕ್ರಮದ ಮಹಾ ಗುರುಗಳಾಗಿ ಹಂಸಲೇಖ ಇದ್ದರು. ಅವರೊಂದಿಗೆ ತೀರ್ಪುಗಾರರಾಗಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಇದ್ದರು. ಕಾರ್ಯಕ್ರಮ ನೇರ ಪ್ರಸಾರದಲ್ಲಿ ಬಿತ್ತರಗೊಂಡಿತು. ಅನುಶ್ರೀ ಕಾರ್ಯಕ್ರಮದ ನಿರೂಪಕರಾಗಿದ್ದರು.