ಕಚ್ಚಾ ರಸ್ತೆಯಲ್ಲಿ ಸಾಗುವ ‘ಗೌಡರ ಸೈಕರ್’!
ಇಡೀ ಚಿತ್ರ ಒಂದು ಸೈಕಲ್‌ನ ಸುತ್ತವೇ ಸುತ್ತುತ್ತದೆ. ಅದು ಗೌಡರ ಸೈಕಲ್. ಇದು ಅಣ್ಣ ತಮ್ಮಂದಿರ ನಡುವೆ ದ್ವೇಷ ಹುಟ್ಟುವಂತೆ ಮಾಡುತ್ತದೆ. ಕಡೆಗೆ ಇದೇ ಸೈಕಲ್ ಎಲ್ಲರೂ ಒಂದಾಗುವಂತೆ ಮಾಡುತ್ತದೆ. ಇದೆಲ್ಲಾ ಹೇಗೆ, ಏನು, ಎತ್ತ ಎಂದು ತಿಳಿಯಬೇಕಾದರೆ ನೀವು ಚಿತ್ರವನ್ನೇ ನೋಡಬೇಕು.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಒಂದೂರಿಗೆ ಭೀಕರ ಬರಗಾಲ ಬರುತ್ತದೆ. ಕುಡಿಯಲೂ ನೀರಿಲ್ಲದೇ ಜನರು ಪರಿತಪಿಸುವ ಸ್ಥಿತಿ ಅದು. ಒಂದು ದಿನ ಇಡೀ ಗ್ರಾಮಸ್ಥರು ರೊಚ್ಚಿಗೆದ್ದು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಆಗ ಅಧಿಕಾರಿಗಳು ಒಂದು ಪಂದ್ಯವಿಡುತ್ತಾರೆ. ಅದು ಸೈಕಲ್ ರೇಸ್. ಬ್ರಿಟಿಷ್ ಪ್ರತಿನಿಧಿಯನ್ನು ಯಾರಾದರೂ ಗ್ರಾಮಸ್ಥರು ಸೋಲಿಸಿದರೆ ಇಡೀ ಗ್ರಾಮಕ್ಕೆ ಕುಡಿಯುವ ನೀರಿನ ಜೊತೆಗೆ ವ್ಯವಸಾಯಕ್ಕೂ ನೀರನ್ನು ಒದಗಿಸಿಕೊಡುವ ಭರವಸೆ ಸಿಕ್ಕುತ್ತದೆ. ಆಗ ಊರಿನ ಬಲಶಾಲಿ ಗೌಡ ಮುಂದೆ ಬಂದು ಸೈಕಲ್ ರೇಸ್‌ಗಿಳಿಯುತ್ತಾನೆ. ಬ್ರಿಟಿಷ್ ಪ್ರತಿನಿಧಿ ವಿರುದ್ಧ ಗೆಲ್ಲುತ್ತಾನೆ. ಇಡೀ ಊರಿಗೇ ನೀರು ತರುತ್ತಾನೆ.
ಇದೇ ನೆನಪಿಗೆ ಬ್ರಿಟಿಷ್ ಅಧಿಕಾರಿಗಳು ವಿಶೇಷವಾಗಿ ವಿನ್ಯಾಸ ಮಾಡಿದ್ದ ಸೈಕಲ್‌ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಇದು ಗೌಡರ ಮನೆತನಕ್ಕೆ ದೊರೆತ ಗೌರವ. ಹಾಗಾಗಿ ಸೈಕಲ್‌ನ ಬಗ್ಗೆ ಅವರ ಮಕ್ಕಳು ಮೊಮ್ಮಕ್ಕಳಿಗೆ ಅಪಾರ ಪ್ರೀತಿ, ಅಭಿಮಾನ.
ನಾಯಕನಾಗಿ ಕಾಣಿಸಿಕೊಂಡಿರುವ ಗೌಡರ ಮಗ ಶಶಿಕಾಂತ್ ಊರಿನಲ್ಲಿ ಆರಾಮವಾಗಿ ತಿರುಗಾಡಿಕೊಂಡು, ಬಿಂದಾಸ್ ಆಗಿ ಬದುಕು ಸಾಗಿಸುತ್ತಿರುವ ಹುಡುಗ. ಇವನಿಗೆ ಜೊತೆಯಾಗುವುದು ಬಿಂಬಶ್ರೀ. ಇವರಿಬ್ಬರ ಪ್ರೀತಿ-ಪ್ರಣಯಗಳು ಅನಾಯಾಸವಾಗಿ ಸಾಗುತ್ತಿರಬೇಕಾದರೆ ವಿಲನ್ ಎಂಟ್ರಿಯಾಗುತ್ತದೆ. ಅದೇ ವೇಳೆಗೆ ಸೈಕಲ್ ಕೂಡ ಕಳುವಾಗುತ್ತದೆ. ಜವಾಬ್ದಾರಿಯೇ ಇಲ್ಲದ ನಾಯಕನಿಗೆ ಕುಟುಂಬದ ಅಭಿ ಮಾನದ ಸಂಕೇತವಾಗಿದ್ದ ಸೈಕಲ್ ಅನ್ನು ಹುಡುಕಿಕೊಂಡು ಬರುವ ಹೊಣೆ ಬೀಳುತ್ತದೆ. ಇದನ್ನು ಅವನು ಯಶಸ್ವಿಯಾಗಿ ನಿಭಾಯಿಸುತ್ತಾನೆ ಕೂಡ. ಮೊದಲೇ ಹೇಳಿದ ಹಾಗೆ ಇಡೀ ಚಿತ್ರದ ಕೇಂದ್ರಬಿಂದು ಸೈಕಲ್. ಇದರ ಸುತ್ತವೇ ಗಿರಕಿ ಹೊಡೆಯುವ ಚಿತ್ರವನ್ನು ನೋಡಿ ಮುಗಿಸಬೇಕಾದರೆ ಅಲ್ಲಲ್ಲಿ ಸೈಕಲ್ ಹೊಡೆದೇ ಮುಂದೆ ಸಾಗಬೇಕು. ನಿರ್ದೇಶಕ ಪ್ರಶಾಂತ್ ಎಲ್ಲಂಪಳ್ಳಿ ಚಿತ್ರಕತೆ ಕುರಿತು ಮತ್ತಷ್ಟು ಕೆಲಸ ಮಾಡಿದ್ದರೆ ಚೆಂದವಿತ್ತು. ಪಾತ್ರಗಳೆಲ್ಲವೂ ಉತ್ತಮವೂ ಅಲ್ಲದ, ಕಳಪೆಯೂ ಅಲ್ಲದ ಸಾಧಾರಣ ನಟನೆ ಮಾಡಿ ಮುಗಿಸಿದ್ದಾರೆ. ನಗಲು ಬೇಕಾದ ಕಾಮಿಡಿ ಇದೆ. ಅದೇ ವೇಳೆಗೆ ಬೇಸರ ಹುಟ್ಟಿಸುವ ಅದದೇ ಹಳೆಯ ಡೈಲಾಗ್‌ಗಳೂ ಇಲ್ಲಿ ತುಂಬಿವೆ.