ಚಿತ್ರ ವಿಮರ್ಶೆ: ಆದಿ ಲಕ್ಷ್ಮಿ ಪುರಾಣ
ಡ್ರಗ್ಸ್ ಮಾಫಿಯಾವನ್ನು ಭೇದಿಸಲು ಹೊರಟ ನಾಯಕ. ಬಾಯ್ತೆರೆದರೆ ಸುಳ್ಳು ಹೇಳುವ ಸುಂದರಿ ಸುಳ್ಳುಗಾತಿ ನಾಯಕಿ. ಮಗನಿಗೆ ಮದುವೆ ಮಾಡಬೇಕೆಂದು ಪರದಾಡುವ ತಂದೆ-ತಾಯಿ. ಮತ್ತೊಂದೆಡೆ ರೇವಾ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಿ, ಹಣ ಮಾಡುವ ಮಾಫಿಯಾದ ಮಂದಿ. ಅವರ ಸುತ್ತಲ ಕಮರ್ಷಿಯಲ್ ಪುರಾಣವೇ ‘ಆದಿ ಲಕ್ಷ್ಮಿ ಪುರಾಣ’.
ದೇಶಾದ್ರಿ ಹೊಸ್ಮನೆ
‘ರಾಜರಥ’ಚಿತ್ರದ ಒಂದಷ್ಟುಗ್ಯಾಪ್ ನಂತರ ನಿರೂಪ್ ಭಂಡಾರಿ ಆಯ್ಕೆ ಮಾಡಿಕೊಂಡ ಕತೆ. ಹಾಗೆಯೇ ರಾಕ್ಲೈನ್ ನಿರ್ಮಾಣದಲ್ಲಿ ಇದೇ ಮೊದಲು ಮಹಿಳಾ ನಿರ್ದೇಶಕಿ ಪ್ರಿಯಾ ಆ್ಯಕ್ಷನ್ ಕಟ್ ಹೇಳಿದ ಚಿತ್ರ. ಇದಿಷ್ಟುಕಾರಣಕ್ಕೆ ಈ ಚಿತ್ರದ ಮೇಲಿದ್ದ ಹೆಚ್ಚಿನ ನಿರೀಕ್ಷೆ ಬಹುಪಾಲು ಹುಸಿಯಾಗಿಲ್ಲ. ಆದರೆ ಕುತೂಹಲ ತರಿಸದ ನಿರೂಪಣೆ ಚಿತ್ರದ ಓಟ ಹಾಗೂ ಪ್ರೇಕ್ಷಕರ ನೋಟ ಎರಡಕ್ಕೂ ಇಲ್ಲಿ ತಣ್ಣೀರು ಎರಚಿದೆ.
ಸುಳ್ಳನ್ನು ಮಜವಾಗಿ ತೋರಿಸಿದ 'ಆದಿಲಕ್ಷ್ಮಿ'!
ಕಥಾ ನಾಯಕ ಆದಿ (ನಿರೂಪ್ ಭಂಡಾರಿ) ಅಂಡರ್ ಕಾಪ್ ಪೊಲೀಸ್. ಪಬ್ ಆ್ಯಂಡ್ ಬಾರ್ ಸೇರಿದಂತೆ ಕಾಲೇಜು ಹುಡುಗರ ರೇವಾ ಪಾರ್ಟಿಗಳಿಗೆ ನಿಗೂಢವಾಗಿ ಸಪ್ಲೈೕ ಆಗುವ ಡ್ರಗ್ಸ್ ಮಾಫಿಯಾವನ್ನು ಭೇದಿಸಲು ನಿಯೋಜನೆಗೊಂಡ ಸ್ಪೆಷಲ್ ಪೊಲೀಸ್ ಆಫೀಸರ್. ಆತನ ಕಾರ್ಯಚರಣೆಯ ಮೂಲಕ ಕತೆ ತೆರೆದುಕೊಳ್ಳುತ್ತದೆ. ಅಲ್ಲಿ ಆತನಿಗೆ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಹುಡುಗಿ ಲಕ್ಷ್ಮಿ( ರಾಧಿಕಾ ಪಂಡಿತ್). ಮೊದಲ ನೋಟದಲ್ಲೇ ಲಕ್ಷ್ಮಿಯ ಮೋಹಕ ಸೌಂದರ್ಯಕ್ಕೆ ಮನ ಸೋಲುವ ಆದಿಗೆ, ಆಕೆಯೇ ತನ್ನ ಬಾಳಾ ಸಂಗಾತಿಯಾದರೆ ಹೇಗೆ ಎನ್ನುವ ಆಲೋಚನೆ. ಆದರೆ, ಆಕೆ ಮದುವೆ ಆದವಳು. ಹಾಗಂತ ಸುಳ್ಳು ಹೇಳಿದವಳೇ ಸುಳ್ಳುಗಾತಿ ಲಕ್ಷ್ಮಿ. ಆ ಸುಳ್ಳು-ಸಂತೆಗಳ ಪುರಾಣದಲ್ಲಿ ಕಥಾ ನಾಯಕ ಆದಿ, ಒಂದೆಡೆ ತನ್ನ ಕರ್ತವ್ಯದ ಹೋರಾಟ, ಮತ್ತೊಂದೆಡೆ ಪ್ರೀತಿಯ ಪರದಾಟ ಅವರೆಡರಲ್ಲಿ ಹೇಗೆ ಗೆಲ್ಲುತ್ತಾನೆನ್ನುವುದು ಚಿತ್ರದ ಕತೆ.
ರಾಧಿಕಾ ತುಂಬಾ ಟ್ಯಾಲೆಂಟೆಡ್ ನಟಿ: ಯಶ್
ಅಂಡರ್ ಕಾಪ್ ಪೊಲೀಸ್ ಆಗಿ ಆದಿ ಪಾತ್ರದಲ್ಲಿ ನಿರೂಪ್ ಭಂಡಾರಿ ಪಾತ್ರದಲ್ಲಿ ಇನ್ನೊಂದಿಷ್ಟುಲವಲವಿಕೆ ಬೇಕಿತ್ತು. ಎಂದಿನಂತೆ ಮಾಗಿದ ನಟಿಯ ಜತೆಗೆ ಆರಂಭದಿಂದ ಅಂತ್ಯದ ತನಕ ಪ್ರೇಕ್ಷಕರನ್ನು ರಂಜಿಸುವ ರಾಧಿಕಾ ಪಂಡಿತ್, ಮದುವೆಯ ನಂತರವೂ ಫೋಟೋಜಿನಿಕ್ ಫೇಸ್ನಲ್ಲಿ ತೆರೆಯನ್ನು ಮುದ್ದಾಗಿಸಿದ್ದಾರೆ. ಆದಿ ತಂದೆಯಾಗಿ ಸುಚೇಂದ್ರ ಪ್ರಸಾದ್, ತಾಯಿಯಾಗಿ ತಾರಾ ಅಭಿನಯ ಚೆನ್ನಾಗಿದೆ. ಹಾಗೆಯೇ ಭರತ್ ಕುಮಾರ್ ಕೂಡ ಸೊಗಸಾದ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಹಾಡುಗಳಿಗಿಂತ ಸಿನಿಮಾ ಛಾಯಾಗ್ರಹಣದಲ್ಲಿ ಆಕರ್ಷಕವಾಗಿದೆ. ನಿರ್ದೇಶನದಲ್ಲಿ ಇನ್ನೊಂದಿಷ್ಟುಬಿಗಿ ಆಗಿದ್ದರೆ ಇದೊಂದು ಒಳ್ಳೆಯ ಸಿನಿಮಾವಾಗುವ ಅವಕಾಶw ಇತ್ತು. ಆದರೂ ಒಂದು ಸಲ ನೋಡುವುದಕ್ಕೆ ಅಡ್ಡಿಯಿಲ್ಲ ಎನ್ನುವುದೇ ಸಮಾಧಾನ.