ಕನ್ನಡದ ಜನಪ್ರಿಯ ಸಸ್ಪೆನ್ಸ್-ಥ್ರಿಲ್ಲರ್ ವೆಬ್ ಸರಣಿ 'ಅಯ್ಯನ ಮನೆ 2' ZEE5 ಓಟಿಟಿಯಲ್ಲಿ ಬಿಡುಗಡೆಯಾಗಿ ದಾಖಲೆ ನಿರ್ಮಿಸಿದೆ. ಕುಟುಂಬದ ನಿಗೂಢ ಸಾವುಗಳು ಮತ್ತು ರಹಸ್ಯಗಳ ಸುತ್ತ ಹೆಣೆದ ಈ ಸರಣಿಯು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿದೆ. 225 ಮಿಲಿಯನ್​ ಪ್ಲಸ್​ ನಿಮಿಷಗಳ ವೀಕ್ಷಣೆ ಕಂಡ ಇದರ ಸ್ಟೋರಿ ಏನು?

ಬೆಂಗಳೂರು: ಕನ್ನಡದ ಜನಪ್ರಿಯ ಸಸ್ಪೆನ್ಸ್-ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ’ (Ayyana Mane) ಪಾರ್ಟ್​ 1 ಸಕತ್​ ಹಲ್​ಚಲ್ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಪಾರ್ಟ್​-2 ಕೂಡ ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆದುಕೊಳ್ಳುತ್ತಿದೆ. ‘ಅಯ್ಯನ ಮನೆ 2’ ಅಕ್ಟೋಬರ್ 23ರಿಂದ ZEE5 ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು, ಪಾರ್ಟ್​-1 ಆರಂಭವಾಗಿ ಒಂದು ವರ್ಷದ ಬಳಿಕ, ಇದು ಆರಂಭಗೊಂಡಿದೆ. ರಮೇಶ್ ಇಂದಿರಾ ಈ ಸರಣಿ ಬರೆದು ನಿರ್ದೇಶಿಸಿದ್ದು, ಶ್ರುತಿ ನಾಯ್ಡು ನಿರ್ಮಿಸಿದ್ದಾರೆ. ‘ಕನ್ನಡದಲ್ಲೂ ಗುಣಮಟ್ಟದ ಸ್ವಂತಿಕೆಯ ಕಂಟೆಂಟ್ ಮೂಡಿಬರಬಹುದು ಎಂಬುದನ್ನು ‘ಅಯ್ಯನ ಮನೆ’ ಸಾಬೀತುಪಡಿಸಿದೆ. ಮೊದಲ ಸೀಸನ್‌ಗೆ ಸಿಕ್ಕ ಅಪಾರ ಪ್ರೀತಿ ಹಾಗೂ ಜನಮೆಚ್ಚುಗೆಯೇ ನಮಗೆ ಎರಡನೇ ಸೀಸನ್ ಅನ್ನು ಇನ್ನಷ್ಟು ರೋಚಕವಾಗಿ ಮತ್ತು ಉನ್ನತ ಗುಣಮಟ್ಟದಲ್ಲಿ ರೂಪಿಸಲು ದೊಡ್ಡ ಸ್ಪೂರ್ತಿಯಾಗಿದೆ’ ಎಂದು ನಿರ್ಮಾಪಕಿ ಶ್ರುತಿ ನಾಯ್ಡು ಹೇಳಿದ್ದಾರೆ.

ಅಂದಹಾಗೆ, ಇದೀಗ ಪಾರ್ಟ್​-2 ದಾಖಲೆ ನಿರ್ಮಿಸಿದೆ. ಒಂದು ತಿಂಗಳಿನಲ್ಲಿಯೇ ಈ ಸಿರೀಸ್​ ಅನ್ನು 225 ಮಿಲಿಯನ್​ ನಿಮಿಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಕನ್ನಡದ ವೆಬ್​ಸಿರೀಸ್​ ಇತಿಹಾಸದಲ್ಲಿ ಇದೊಂದು ದಾಖಲೆ ಎನ್ನಲಾಗಿದೆ. ಖುಷಿ ರವಿ, ಮಾನಸಿ ಸುಧೀರ್, ಅಕ್ಷಯ್ ನಾಯಕ್, ಹಿತಾ ಚಂದ್ರಶೇಖರ್, ಅನಿರುದ್ಧ್ ಆಚಾರ್ಯ ಮತ್ತು ರೂಪೇಶ್ ಶೆಟ್ಟಿ (ಸೀಸನ್ 2) ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾಂಪ್ರದಾಯಿಕ ತೊಟ್ಟಿ ಮನೆಯ ಹಿನ್ನೆಲೆ ಮತ್ತು ಸ್ಥಳೀಯ ದೈವ (ಕೊಂಡಯ್ಯ) ನಂಬಿಕೆಗಳ ಸುತ್ತ ಹೆಣೆದ ನಿಗೂಢ ಕಥೆಯಾಗಿದೆ. ಪ್ರತಿ ಸೀಸನ್ ತಲಾ 6 ಸಂಚಿಕೆಗಳನ್ನು ಹೊಂದಿದೆ. ಮೊದಲ ಸೀಸನ್ 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ದಾಟಿ ಗಮನ ಸೆಳೆದಿತ್ತು. ಇದೀಗ ಪಾರ್ಟ್​-2 ಇದನ್ನೂ ಮೀರಿಸಿ ಮುನ್ನುಗ್ಗುತ್ತಿದೆ.

ಕುಟುಂಬದಲ್ಲಿ ನಡೆಯುತ್ತಿರುವುದೇನು?

ಮದುವೆಯಾಗಿ ಆ ಮನೆಗೆ ಕಾಲಿಡುವ ಪ್ರತಿಯೊಬ್ಬ ಸೊಸೆಗೂ ಅನಿರೀಕ್ಷಿತ ದುರಂತ ಎದುರಾಗುತ್ತದೆ. ಹಾಗಾದರೆ ಆ ಕುಟುಂಬದಲ್ಲಿ ನಡೆಯುತ್ತಿರುವುದೇನು? ಎಂಬ ಪ್ರಶ್ನೆ ಈ ಸಿರೀಸ್​ನ ಕಥಾವಸ್ತುವಾಗಿದೆ. ಸಾಮಾನ್ಯ ದೆವ್ವದ ಕಥೆಗಳಿಗಿಂತ ವಿಭಿನ್ನವಾಗಿ ಕುಟುಂಬದ ಸಂಬಂಧಗಳು, ಅನುಮಾನಾಸ್ಪದ ಸಾವುಗಳು ಹಾಗೂ ಮನೆಯೊಳಗೆ ಅಡಗಿರುವ ರಹಸ್ಯಗಳನ್ನು ಒಟ್ಟುಗೂಡಿಸಿ ಈ ಸಿರೀಸ್‌ ಅನ್ನು ರೂಪಿಸಲಾಗಿದೆ. ಅದರಲ್ಲೂ ಪ್ರತಿಯೊಂದು ಎಪಿಸೋಡ್ ಕೂಡ ಕಡಿಮೆ ಅವಧಿಯಲ್ಲಿ ಇರುವುದರಿಂದ ಕಥೆ ಎಲ್ಲಿಯೂ ಎಳೆಯಲಾಗಿದೆ ಎನ್ನಿಸುವುದಿಲ್ಲ. ಆರಂಭದಿಂದ ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಳ್ಳುವ ರೀತಿಯಲ್ಲಿ ಸ್ಕ್ರೀನ್‌ಪ್ಲೇ ಸಾಗುತ್ತದೆ.

ಕಥೆಯ ವಿಚಾರಕ್ಕೆ ಬಂದರೆ, ಜಾಜಿ ಎಂಬ ಯುವತಿಗೆ ದುಷ್ಯಂತ್ ಜೊತೆ ಮದುವೆಯಾಗುತ್ತದೆ. ಮದುವೆಯ ಬಳಿಕ ಆಕೆ ತನ್ನ ಪತಿಯೊಂದಿಗೆ ಆತನ ಹಳೆಯ ಬಂಗಲೆ ‘ಅಯ್ಯನ ಮನೆ’ಗೆ ಬರುತ್ತಾಳೆ. ಆದರೆ ಮನೆಗೆ ಕಾಲಿಟ್ಟ ಕೆಲವೇ ಸಮಯದಲ್ಲಿ ಅಲ್ಲಿ ಅನಿರೀಕ್ಷಿತ ದುರಂತವೊಂದು ಸಂಭವಿಸುತ್ತದೆ. ಜಾಜಿ ಅತ್ತೆಮನೆಗೆ ಬಂದ ತಕ್ಷಣವೇ ಆಕೆಯ ಮಾವ ಮೃತಪಟ್ಟಿರುತ್ತಾರೆ. ಈ ಘಟನೆ ಜಾಜಿಗೆ ಆ ಮನೆಯ ವಾತಾವರಣದ ಬಗ್ಗೆ ಅನುಮಾನ ಮೂಡಿಸುತ್ತದೆ. ಮನೆಯಲ್ಲಿರುವ ಕುಟುಂಬ ಸದಸ್ಯರ ವರ್ತನೆಯೂ ಆಕೆಗೆ ವಿಚಿತ್ರವಾಗಿ ಕಾಣಿಸುತ್ತದೆ. ಪ್ರತಿಯೊಬ್ಬರ ವರ್ತನೆಯ ಹಿಂದೆಯೂ ಯಾವುದೋ ರಹಸ್ಯ ಅಡಗಿದೆ ಎಂಬ ಅನುಮಾನ ಜಾಜಿಗೆ ಕಾಡಲು ಆರಂಭಿಸುತ್ತದೆ.

ಬೆಚ್ಚಿಬೀಳಿಸೋ ಸತ್ಯ

ಇದರ ನಡುವೆ ಮನೆಯ ಕೆಲಸದಾಕೆ ಜಾಜಿಗೆ ಹೇಳುವ ವಿಚಾರವೊಂದು ಆಕೆಯನ್ನು ಮತ್ತಷ್ಟು ಬೆಚ್ಚಿಬೀಳಿಸುತ್ತದೆ. ದುಷ್ಯಂತ್‌ಗೆ ಇದು ಮೊದಲ ಮದುವೆಯಲ್ಲ ಎಂಬ ಸತ್ಯ ಆಕೆಗೆ ತಿಳಿಯುತ್ತದೆ. ಈ ಹಿಂದೆ ದುಷ್ಯಂತ್‌ರನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು ಎಂಬ ವಿಚಾರವೂ ಜಾಜಿಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಆ ಕುಟುಂಬಕ್ಕೆ ಸೊಸೆಯಾಗಿ ಬಂದ ಮಹಿಳೆಯರು ಒಬ್ಬರ ಹಿಂದೆ ಒಬ್ಬರು ಸಾವನ್ನಪ್ಪಿದ್ದಾರೆ ಎಂಬ ಭಯಾನಕ ಸತ್ಯವೂ ಆಕೆಯ ಮುಂದೆ ತೆರೆದುಕೊಳ್ಳುತ್ತದೆ. ಈ ಹಿಂದೆ ಆ ಮನೆಗೆ ಸೊಸೆಯಾಗಿ ಬಂದಿದ್ದ ಮೂವರು ಮಹಿಳೆಯರೂ ಅನಿರೀಕ್ಷಿತ ರೀತಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಜಾಜಿಗೆ ತಿಳಿಯುತ್ತದೆ.

ಕಥೆ ಮುಂದುವರಿದಂತೆ ಜಾಜಿಗೆ ಮನೆಯಲ್ಲಿರುವ ಪ್ರತಿಯೊಬ್ಬರ ಮೇಲೂ ಅನುಮಾನ ಮೂಡುತ್ತದೆ. ಅದರಲ್ಲೂ ಕುಟುಂಬದ ಹಿರಿಯರ ವರ್ತನೆ ಆಕೆಗೆ ಮತ್ತಷ್ಟು ಗೊಂದಲ ಉಂಟುಮಾಡುತ್ತದೆ. ಹಿಂದೆ ನಡೆದ ಸಾವುಗಳ ಹಿಂದೆ ಯಾರ ಕೈವಾಡವಿದೆ? ಆ ಮನೆಗೆ ಸೊಸೆಯಾಗಿ ಬರುವ ಮಹಿಳೆಯರಿಗೇ ಏಕೆ ಅಪಾಯ ಎದುರಾಗುತ್ತಿದೆ? ಈ ಎಲ್ಲಾ ಘಟನೆಗಳಿಗೂ ಅತ್ತೆಗೂ ಏನಾದರೂ ಸಂಬಂಧವಿದೆಯೇ? ಎಂಬ ಪ್ರಶ್ನೆಗಳು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತವೆ. ಈ ರಹಸ್ಯಕ್ಕೆ ಉತ್ತರ ಕಂಡುಕೊಳ್ಳಲು ಜಾಜಿ ಮುಂದಾಗುತ್ತಾಳೆ. ಆದರೆ ಆಕೆ ಸತ್ಯವನ್ನು ಹುಡುಕಲು ಮಾಡುವ ಪ್ರತಿಯೊಂದು ಪ್ರಯತ್ನದಲ್ಲೂ ಮನೆಯ ಮತ್ತೊಂದು ರಹಸ್ಯ ಬಯಲಾಗುತ್ತಾ ಹೋಗುತ್ತದೆ. ಹೀಗಾಗಿ ಕಥೆ ಮತ್ತಷ್ಟು ರೋಚಕವಾಗುತ್ತದೆ. ಇದರ ಮುಂದುವರೆದ ಭಾಗವೇ ಪಾರ್ಟ್​-2