Asianet Suvarna News Asianet Suvarna News

ವರನಟನನ್ನು ಮೊದಲು ಕಂಡ ಮೂರು ಮಧುರ ನೆನಪುಗಳು

ಕನ್ನಡಿಗರ ಆರಾಧ್ಯದೈವ ಡಾ. ರಾಜ್'ಕುಮಾರ್ ಅವರನ್ನು ಮೊದಲ ಬಾರಿಗೆ ಹತ್ತಿರದಿಂದ ನೋಡಿದಾಗ ಈ ಮೂವರು ಖ್ಯಾತ ಕಲಾವಿದರ ಮನಸ್ಸಿನಲ್ಲಿ ಮೂಡಿದ್ದೇನು..? ಎಸ್. ನಾರಾಯಣ್, ಟಿಎಸ್ ನಾಗಾಭರಣ ಹಾಗೂ ರಾಜ್ ಬಿ ಶೆಟ್ಟಿ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು ಹೀಗೆ...

Kannada 3 Star Artist Share Experience First Meet Dr Rajkumar

ಕನ್ನಡಿಗರ ಆರಾಧ್ಯದೈವ ಡಾ. ರಾಜ್'ಕುಮಾರ್ ಅವರನ್ನು ಮೊದಲ ಬಾರಿಗೆ ಹತ್ತಿರದಿಂದ ನೋಡಿದಾಗ ಈ ಮೂವರು ಖ್ಯಾತ ಕಲಾವಿದರ ಮನಸ್ಸಿನಲ್ಲಿ ಮೂಡಿದ್ದೇನು..? ಎಸ್. ನಾರಾಯಣ್, ಟಿಎಸ್ ನಾಗಾಭರಣ ಹಾಗೂ ರಾಜ್ ಬಿ ಶೆಟ್ಟಿ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು ಹೀಗೆ...

ಬದುಕಿದರೆ ಅಷ್ಟು ನಿರ್ಮಲವಾಗಿ ಜೀವಿಸಬೇಕು

ಡಾ.ರಾಜ್‌'ಕುಮಾರ್ ಅವರನ್ನು ಮೊದಲು ನೋಡಿದ್ದು 1986ರಲ್ಲಿ. ನಾನು ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದೆ. ಗುರುಗಳಾದ ಭಾರ್ಗವ ಅವರು ‘ಕೃಷ್ಣ ನೀ ಬೇಗನೇ ಬಾರೋ’ ಚಿತ್ರ ಮಾಡುತ್ತಿದ್ದರು. ಆ ಚಿತ್ರಕ್ಕೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೆ. ಅದರ ಚಿತ್ರೀಕರಣ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಆಗ ಅದೇ ಸ್ಟುಡಿಯೋದಲ್ಲಿ ನಾಲ್ಕು ಸಿನಿಮಾಗಳಿಗೆ ಶೂಟಿಂಗ್ ನಡೆಯುತ್ತಿತ್ತು. ಆ ಚಿತ್ರಗಳಲ್ಲಿ ಡಾ. ರಾಜ್‌'ಕುಮಾರ್ ಅಭಿನಯದ ‘ಗುರಿ’ ಸಿನಿಮಾ ಕೂಡ ಒಂದು. ಆಗ ‘ಗುರಿ’ ಚಿತ್ರದ ‘ವಸಂತಕಾಲ ಬಂದಾಗ’ ಎನ್ನುವ ಹಾಡಿನ ಚಿತ್ರೀಕರಣ ಇತ್ತು. ಚಿತ್ರೀಕರಣದ ನಡುವೆ ನಮ್ಮ ಫ್ಲೋರ್‌'ಗೆ ಬಂದರು. ಆಗಲೇ ನನಗೆ ಡಾ ರಾಜ್‌'ಕುಮಾರ್ ಅವರ ಮುಖ ದರ್ಶನಾಗಿದ್ದು. ಬಾಲ್ಯದಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವನು. ಒಮ್ಮೆಯಾದರೂ ಅವರನ್ನು ಹತ್ತಿರದಿಂದ ನೋಡುವ ಭಾಗ್ಯಕ್ಕಾಗಿ ಕಾಯುತ್ತಿದ್ದೆ. ಆದರೆ, ಅಷ್ಟು ಹತ್ತಿರದಿಂದ ನೋಡುತ್ತೇನೆಂಬ ಕನಸು ಕೂಡ ನಾನು ಕಂಡಿರಲಿಲ್ಲ. ತೀರಾ ಹತ್ತಿರ ನಿಂತು ನೋಡಿ ಧನ್ಯನಾದೆ. ಎಲ್ಲರನ್ನು ನಗು ನಗುತ್ತ ಮಾತನಾಡಿಸುವ ಅವರ ಸೌಜನ್ಯ. ಬದುಕಿದರೆ ಇಷ್ಟು ನಿರ್ಮಲವಾಗಿ ಜೀವಿಸಬೇಕು ಎನ್ನುವಷ್ಟು ಮೊದಲ ನೋಟದಲ್ಲೇ ಪ್ರಭಾವಿಸಿದ ವ್ಯಕ್ತಿ ಅವರು.

--

ರಂಗೋತ್ಸವದಲ್ಲಿ ಜೀವನ ಸಾರ್ಥಕವಾದ ಕ್ಷಣ

ಡಾ.ರಾಜ್‌'ಕುಮಾರ್ ಅವರನ್ನು ನಾನು ನೋಡಿದ್ದು ತುಂಬಾ ವಿಶೇಷ ಸಂದರ್ಭದಲ್ಲಿ. 1979. ಆಗ ನಾನು ಬಿವಿ ಕಾರಂತರ ಜತೆ ಕೆಲಸ ಮಾಡುತ್ತಿದ್ದೆ. ಅವರು ಬಯಲು ರಂಗೋತ್ಸವ ಆಯೋಜಿಸುತ್ತಿದ್ದರು. ದೊಡ್ಡ ಮಟ್ಟದ ಸಾಂಸ್ಕೃತಿಕ ರಂಗ ಹಬ್ಬ ಅದು. ಪ್ರತಿ ದಿನ ನಾಟಕ ಪ್ರದರ್ಶನ ಇತ್ತು. ಅಂದು ಮೂರು ನಾಟಕಗಳ ಪ್ರದರ್ಶನ. ಆ ಪೈಕಿ ಒಂದು ನಾಟಕಕ್ಕೆ ನಾನೇ ಸ್ಟೇಜ್ ಮ್ಯಾನೇಜರ್ ಆಗಿದ್ದೆ. ಜತೆಗೆ ಆ ನಾಟಕದಲ್ಲಿ ಪಾತ್ರ ಕೂಡ ಮಾಡಿದ್ದೆ. ಅದರ ಹೆಸರು ‘ಶಿವಕುಮಾರಸ್ವಾಮಿ’ ಎಂಬುದು. ಈ ಬಯಲು ರಂಗೋತ್ಸವ ನೋಡಲು ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಿದ್ದರು. ಹಾಗೆ ಒಂದು ದಿನ ಅದರಲ್ಲೂ ನಾನು ಪಾತ್ರ ಮಾಡುತ್ತಿದ್ದ ಶಿವಕುಮಾರ ಸ್ವಾಮಿ ನಾಟಕ ನೋಡಲು ದಿಢೀರ್ ಅಂತ ಆಗಮಿಸಿದರು ಡಾ. ರಾಜ್‌'ಕುಮಾರ್. ಒಂದು ಕಡೆ ನನ್ನ ನೆಚ್ಚಿನ ಗುರುಗಳಾದ ಬಿವಿ ಕಾರಂತರು, ನಾನು ಬಣ್ಣ ಹಚ್ಚಿಕೊಂಡ ಸಂದರ್ಭ ಇವೆಲ್ಲ ಒಟ್ಟಿಗೆ ಇದ್ದ ಗಳಿಗೆಯಲ್ಲಿ ಡಾ ರಾಜ್‌'ಕುಮಾರ್ ಅವರನ್ನು ಹತ್ತಿರದಿಂದ ಕಂಡೆ. ಅವರು ಕಾರಂತರ ಜತೆ ಮಾತನಾಡುತ್ತಿದ್ದಾಗ ನಾವು ಬೆರಗು ನೋಟದಿಂದ ನೋಡುತ್ತಾ ನಿಂತುಕೊಂಡ್ವಿ. ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ ಅದು.

--

ನನಗೆ ಅವರು ಸಿಕ್ಕಿದ್ದು ಒಡಹುಟ್ಟಿದವರು ಚಿತ್ರದಲ್ಲಿ

ನಾನು ರಿಯಲ್ಲಾಗಿ ಡಾ.ರಾಜ್‌'ಕುಮಾರ್ ಅವರನ್ನು ನೋಡಲಿಕ್ಕೆ ಆಗಲಿಲ್ಲ. ಆದರೆ, ರಾಜ್ ಅವರ ಮುಖವನ್ನು ಮೊದಲ ಬಾರಿಗೆ ತೆರೆ ಮೇಲೆ ನೋಡಿದ್ದು ಅಂದ್ರೆ ‘ಒಡಹುಟ್ಟಿದವರು’ ಚಿತ್ರದಲ್ಲಿ. ನನಗೆ ಆ ಸಿನಿಮಾ ತುಂಬಾ ನೆನಪಿನಲ್ಲಿರುವುದಕ್ಕೆ ಕಾರಣ ಆ ಚಿತ್ರದಲ್ಲಿ ಬರುವ ಎತ್ತಿನ ಗಾಡಿ ಸ್ಪರ್ಧೆ. ಒಂದು ಕಡೆ ಚಿತ್ರದ ವಿಲನ್‌'ಗಳು, ಮತ್ತೊಂದು ಕಡೆ ಡಾ ರಾಜ್‌'ಕುಮಾರ್ ತಂಡ ಅಬ್ಬ ಎಂಥ ಸ್ಪರ್ಧೆ ಅನಿಸಿ. ಆ ಸ್ಪರ್ಧೆಯ ಸನ್ನಿವೇಶದಲ್ಲೇ ನನಗೆ ರಾಜ್‌'ಕುಮಾರ್ ಮನಸಿಗೆ ಮತ್ತು ಕಣ್ಣಿಗೆ ಹತ್ತಿರವಾಗಿದ್ದು. ಈ ಚಿತ್ರದ ನಂತರ ನಂತರ ಅಷ್ಟೇ ಕಾಡಿದ್ದು ‘ಬಬ್ರುವಾಹನ’. ‘ಬಬ್ರುವಾಹನ’ ನೋಡಿದಾಗ ಇಬ್ಬರು ರಾಜ್‌'ಕುಮಾರ್‌'ಗಳು ಇದ್ದರು ಎನಿಸಿತ್ತು. ಬಬ್ರುವಾಹನನ ಬಾಡಿ ಲಾಗ್ವೇಜ್, ಅರ್ಜುನನ ವೇಗತ್ವ ಸೂಪರ್. ಈ ಎರಡೂ ನನ್ನ ಬಾಲ್ಯವನ್ನು ರೂಪಿಸಿದ ಚಿತ್ರಗಳು ಕೂಡ ಹೌದು. ಮಂಗಳೂರಿನವನಾಗಿದ್ದ ಕಾರಣ ರಾಜ್‌'ಕುಮಾರ್ ಅವರನ್ನು ಮುಖತಃ ನೋಡಲಾಗಲಿಲ್ಲ. ನಮ್ಮ ತಂದೆ ಶಿವಮೊಗ್ಗದ ಹೋಟೆಲ್‌'ವೊಂದರಲ್ಲಿ ಪುನೀತ್‌'ರಾಜ್‌ಕುಮಾರ್ ಅವರನ್ನು ಎತ್ತಿಕೊಂಡಿದ್ದಾಗ ನೋಡಿದ್ದನ್ನು ನನಗೆ ಸಾಕಷ್ಟು ಬಾರಿ ಹೇಳಿದ್ದರು. ನಾನು ನೋಡಿಲ್ಲ ಅಂದ್ರೂ ನನ್ನ ತಂದೆ ನೋಡಿದ್ದಾರಲ್ಲ ಎನ್ನುವ ಖುಷಿ ಇದೆ.

Follow Us:
Download App:
  • android
  • ios