ನವದೆಹಲಿ[ಜ.19]: ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಅಭಿನಯದ ‘ಮಣಿಕರ್ಣಿಕಾ: ದ ಕ್ವೀನ್ಸ್‌ ಆಫ್‌ ಜಾನ್ಸಿ’ ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಕರ್ಣಿ ಸೇನಾದಿಂದ ಆಗುತ್ತಿರುವ ತೊಂದರೆಗೆ ನಟಿ, ನಿರ್ದೇಶಕಿ ಕಂಗನಾ ರಾಣಾವತ್‌ ಕೆಂಡಾಮಂಡಲರಾಗಿದ್ದಾರೆ.‘ನಾನೂ ರಜಪೂತೆ, ನಿಮ್ಮೆಲ್ಲರನ್ನು ನಾಶಮಾಡಿ ಬಿಡುತ್ತೇನೆ’ ಎಂದು ಕರ್ಣಿ ಸೇನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬ್ರಿಟಿಷ್‌ ರಾಜ್‌ ವ್ಯವಸ್ಥೆಯ ವಿರುದ್ಧ ದಿಟ್ಟಹೋರಾಟ ನಡೆಸಿದ ಝಾನ್ಸಿ ರಾಣಿ ಲಕ್ಷ್ಮೇ ಬಾಯಿ ಅವರ ಸಾಹಸ ಕತೆಯಾಧಾರಿತ ಚಿತ್ರ ಇದಾಗಿದೆ. ನಾಲ್ವರು ಇತಿಹಾಸ ತಜ್ಞರು ಮಣಿಕರ್ಣಿಕಾ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ. ಸೆನ್ಸಾರ್‌ ಮಂಡಳಿಯಿಂದಲೂ ಸರ್ಟಿಫಿಕೇಟ್‌ ಪಡೆದುಕೊಂಡಿದ್ದೇವೆ. ಇದನ್ನು ಕರ್ಣಿ ಸೇನೆಗೂ ತಿಳಿಸಿದ್ದೇವೆ. ಆದರೆ, ಕರ್ಣಿ ಸೇನೆ ಇದಾವುದನ್ನು ಅರಿತುಕೊಳ್ಳದೇ ಕಿರುಕುಳ ನೀಡುತ್ತಿದೆ. ಕರ್ಣಿ ಸೇನೆ ಇದನ್ನೆಲ್ಲ ತಿಳಿದುಕೊಂಡು ನಿಲ್ಲಿಸಿದರೆ ಒಳಿತು. ಇಲ್ಲದಿದ್ದರೆ, ನಾನೂ ಕೂಡ ರಜಪೂತ ಸಮುದಾಯದಿಂದಲೇ ಬಂದವಳು. ಈಗ ವಿನಾಕಾರಣ ವಿರೋಧಿಸುತ್ತಿರುವವರನ್ನು ನಾಶಮಾಡಿ ಬಿಡುತ್ತೇನೆ ಎಂದು ಗುಡುಗಿದ್ದಾರೆ.

ಆಕ್ಷೇಪ ಏಕೆ?: ಚಿತ್ರದಲ್ಲಿ ರಾಣಿ ಲಕ್ಷ್ಮೇ ಬಾಯಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಚಿತ್ರದಲ್ಲಿ ತೋರಿಸಲಾಗಿದೆ. ಲಕ್ಷ್ಮೇಬಾಯಿ ಅವರ ಮೂಲ ಹೆಸರು ಮಣಿಕರ್ಣಿಕಾ ಆಗಿದ್ದು, ಚಿತ್ರದಲ್ಲಿ ಇತಿಹಾಸ ತಿರುಚುವ ಕೆಲಸವಾಗಿದ್ದರೆ ಅಥವಾ ಝಾನ್ಸಿ ರಾಣಿ ಲಕ್ಷ್ಮೇ ಬಾಯಿಗೆ ಧಕ್ಕೆ ತರುವ ರೀತಿಯಲ್ಲಿ ಚಿತ್ರ ನಿರ್ಮಾಣವಾಗಿದ್ದರೆ ತೀವ್ರತರವಾದ ಸವಾಲು ಎದುರಿಸಬೇಕಾಗುತ್ತದೆ ಎಂಬುದು ಕರ್ಣಿ ಸೇನೆಯ ಎಚ್ಚರಿಕೆ.