ಎರಡು ಭಾಷೆಗೂ ಇದೇ ಮೊದಲು ಎಂಟ್ರಿ. ಮೋಸ್ಟ್ ಕಾಂಟ್ರವರ್ಷಿಯಲ್ ಡೈರೆಕ್ಟರ್ ಆರ್‌ಜಿವಿ ಸಿನಿಮಾದೊಂದಿಗೆ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿರುವ ನಾಯಕಿ ಇರಾ, ಈಗಾಗಲೇ ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳ ಮೂಲಕವೂ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿನ ಪಾತ್ರ, ಚಿತ್ರೀಕರಣದ ಅನುಭವ, ಇತ್ಯಾದಿ ಕುರಿತು ಅವರೊಂದಿಗೆ ಮಾತುಕತೆ.

ನಿಮ್ದು ಯಾವೂರಾಯ್ತು, ನಟನೆಯ ಹಿನ್ನೆಲೆ ಏನು?
ಮುಂಬೈ ಹುಡುಗಿ ನಾನು. ರಂಗಭೂಮಿ ನನ್ನ ನಟನಾ ಶಾಲೆ.ಅಲ್ಲಿನ ಅನೇಕ ರಂಗ ತಂಡಗಳ ಸಂಪರ್ಕದೊಂದಿಗೆ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಆದ್ರೆ ಸಿನಿಮಾ ಅಂತ ಬಣ್ಣ ಹಚ್ಚಿ, ಕ್ಯಾಮರಾ ಎದುರಿಸಿದ್ದು ಇದೇ ಮೊದಲು. ಅದಕ್ಕೆ ವೇದಿಕೆ ಒದಗಿಸಿದ್ದು ರಾಮ್ ಗೋಪಾಲ್ ವರ್ಮ. 

ಅದು ಸರಿ, ವರ್ಮ ಕಣ್ಣಿಗೆ ನೀವು ಬಿದ್ದಿದ್ದು ಹೇಗೆ?
ಆರ್‌ಜಿವಿ ನನ್ನ ನೆಚ್ಚಿನ ಡೈರೆಕ್ಟರ್. ಸಹಜವಾಗಿ ಅವರ ಸಿನಿಮಾ ಆ್ಯಕ್ಟಿವಿಟಿ ಗಮನಿಸುತ್ತಾ ಬರುತ್ತಿದ್ದೇನೆ. ಈ ಸಿನಿಮಾದ ಆಡಿಷನ್ ವಿಷಯ ಗೊತ್ತಾಯಿತು. ಅಲ್ಲಿಗೆ ಹೋಗಿ ಬಂದೆ. ಅಲ್ಲಿ ನನ್ನ ನಟನೆಯ ಬಗ್ಗೆ ವರ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಣ್ಣದೊಂದು ವಿಶ್ವಾಸ ಹುಟ್ಟಿಸಿತ್ತು. ಮುಂದೆ ಅದು ನಿಜವೂ ಆಯಿತು.

ಚಿತ್ರದಲ್ಲಿನ ಪಾತ್ರದ ಬಗ್ಗೆ ಹೇಳಿ?
ನಾನಿಲ್ಲಿ ಒಬ್ಬ ಭೂಮಾಲೀಕನ ಮಗಳು. ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಇದ್ದ ಮೊದಲ ಕಾರಣವೇ ಆ ಪಾತ್ರ. ತುಂಬಾ ಸ್ಟ್ರಾಂಗ್ ಆ್ಯಂಡ್ ಇಂಡಿಪೆಂಡೆಂಟ್ ಹುಡುಗಿ.ಏನೇ ಸವಾಲು ಬಂದರೂ ಎದುರಿಸುತ್ತೇನೆ ಎನ್ನುವ ಗಟ್ಟಿಗಿತ್ತಿ. ನನ್ನ ನಿಜ ಜೀವನಕ್ಕೆ ತುಂಬಾ ಕನೆಕ್ಟ್ ಆಗುವಂತಹ ಪಾತ್ರ. 

ಸಿನಿಮಾ ಒಪ್ಪಿಕೊಳ್ಳುವಾಗ ನಿಮಗೆ ನಿರ್ದೇಶಕ ವರ್ಮ ಚಿತ್ರದ ಕತೆ ಹೇಳಿದ್ರಾ?
ಖಂಡಿತಾ ಇಲ್ಲ. ಪಾತ್ರದ ಬಗ್ಗೆ ಹೇಳುವಾಗ ಒನ್ ಲೈನ್ ಸ್ಟೋರಿ ಮಾತ್ರ ಗೊತ್ತಾಗಿತ್ತು. ಇಡೀ ಕತೆ ತಿಳಿದುಕೊಳ್ಳುವ ಕುತೂಹಲ ನನಗೂ ಇರಲಿಲ್ಲ. ಆರ್‌ಜಿವಿ ಸಿನಿಮಾ ಎನ್ನುವುದು ಮಾತ್ರ ತಲೆಯಲ್ಲಿತ್ತು. ಶೂಟಿಂಗ್ ಶುರುವಾದ ನಂತರ ಒಂದಷ್ಟು ಕತೆ ರಿವೀಲ್ ಆಗುತ್ತಾ ಹೋಯಿತು. ಆಗಲೇ ನನಗೆ ಗೊತ್ತಾಗಿದ್ದು ಇದೊಂದು ಅದ್ಭುತ ಕತೆ ಅಂತ.

ಹಾಗಾದ್ರೆ, ಆ ಒನ್‌ಲೈನ್ ಸ್ಟೋರಿ ಏನು?
ಭೂ ಮಾಲೀಕನೊಬ್ಬನ ದಬ್ಬಾಳಿಕೆ, ಶೋಷಣೆ, ಹಿಂಸೆಯನಡುವೆ ಅರಳು ಒಂದು ಪ್ರೀತಿಯ ಕತೆಯೇ ‘ಭೈರವ ಗೀತ’. ಇಲ್ಲಿ ಆ್ಯಕ್ಷನ್, ಸೆಂಟಿಮೆಂಟ್, ರೊಮಾನ್ಸ್ ಎಲ್ಲವೂ ಇವೆ. ಅದೆಲ್ಲವೂ ಪಕ್ಕಾ ಆರ್‌ಜಿವಿ ಸಿನಿಮಾದ ಶೈಲಿಯಲ್ಲೇ ಮೂಡಿಬಂದಿವೆ. ಚಿತ್ರವೀಡಿ ರಗಡ್ ಲುಕ್‌ನಲ್ಲಿದೆ.

ಚಿತ್ರದ ನಾಯಕ ಡಾಲಿ ಧನಂಜಯ್ ಬಗ್ಗೆ ಏನ್ ಹೇಳ್ತೀರಾ?
ಧನಂಜಯ್ ಒಬ್ಬ ಅತ್ಯಾಸಕ್ತಿಯ ನಟ. ಸೆಟ್‌ನಲ್ಲಿದ್ದಾಗ ಸಿನಿಮಾವೇ ಅವರ ಉಸಿರು. ಅವರ ಆ ಸ್ವಭಾವ ನನಗೆ ತುಂಬಾ ಹಿಡಿಸಿತು. ನಟನೆಗೆ ಆ ರೀತಿಯ ಶ್ರದ್ಧೆ ಬೇಕು, ಪ್ರೀತಿ ಬೇಕು ಎನ್ನುವುದನ್ನು ಕೇಳಿ ತಿಳಿದಿದ್ದ ಒಂದು ರೀತಿ ಅವರು ನನಗೆ ಸ್ಫೂರ್ತಿಯ ನಟನಂತಾದರು.

ಹಾಡಿನ ಸನ್ನಿವೇಶದಲ್ಲಿ ನೀವಿಬ್ಬರು ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದೀರಿ...
ಸಿನಿಮಾಗಳಲ್ಲಿ ಇದೆಲ್ಲವು ಘಟಿಸುವುದು ಕತೆಯ ಅಗತ್ಯತೆಗೆ ತಕ್ಕಂತೆ. ಇಲ್ಲೂ ಕೂಡ ಕತೆಗೆ ಆ ಸನ್ನಿವೇಶಗಳು ಬೇಕಿತ್ತು. ಹಾಗಾಗಿಯೇ ನಿರ್ದೇಶಕರು ಅದನ್ನು ತೆರೆಗೆ ತಂದಿದ್ದಾರೆ. ಕತೆಯ ತೀವ್ರತೆಯನ್ನು ಹೇಳುವಾಗ ಇದು ಅನಿವಾರ್ಯ.

ಚಿತ್ರೀಕರಣದ ಅನುಭವ ಹೇಗಿತ್ತು?
ಇದೊಂದು ಯಂಗ್ ಟೀಮ್ ಸಿನಿಮಾ. ನಿರ್ದೇಶಕ ಸಿದ್ಧಾರ್ಥ್ ಸೇರಿ ತಂಡದಲ್ಲಿದ್ದವರು ಸಮಾನ ಮನಸ್ಕ ಮತ್ತು ಅಷ್ಟೇ ವಯಸ್ಸಿನ ಯುವ ಪಡೆ. ಅದು ಚಿತ್ರೀಕರಣಕ್ಕೆ ಸಾಕಷ್ಟು ಸಹಾಯವಾಯಿತು.ಅನೇಕ ಕಡೆ ನಾವು ರಿಮೋಟ್ ಜಾಗಗಳಲ್ಲೂ ಚಿತ್ರೀಕರಣ ಮಾಡಿದೆವು. ಪೋನ್ ಕನೆಕ್ಷನ್ ಕೂಡ ಇರಲಿಲ್ಲ. ಸಿಟಿಯಿಂದಲೂ ದೂರ ಇದ್ದೇವು. ಆದರೂ ಒಂದು ಕ್ಷಣ ಬೇಜಾರು ಎನಿಸಿಲ್ಲ.

ನಿಮ್ಮಿಬ್ಬರ ಕಾಂಬಿನೇಷನ್ ಬಗ್ಗೆ ಹೇಳೋದಾದ್ರೆ..
ಅದೊಂದು ಇಂಟರೆಸ್ಟಿಂಗ್ ಕತೆ.ನಾವಿಬ್ಬರು ಮುಖಾ ಮುಖಿಯಾಗಿದ್ದೇ ಚಿತ್ರೀಕರಣದ ಮೊದಲ ದಿನ. ಅದಕ್ಕೂ ಮುನ್ನ ವಾರದಷ್ಟು ಕಾಲ ರಿಹರ್ಸಲ್ ಆಗಿತ್ತಾದರೂ ಅಲ್ಲೂ ಭೇಟಿ ಆಗಿರಲಿಲ್ಲ. ಬದಲಿಗೆ ಮೊದಲ ದಿನ ಶೂಟಿಂಗ್ ಸೆಟ್‌ನಲ್ಲೇ ಭೇಟಿ ಆಗಿದ್ದು. ಆರಂಭದಲ್ಲಿ ಹೊಂದಿಕೊಳ್ಳುವುದು ಕಷ್ಟವಾದರೂ, ಕ್ರಮೇಣ ಫ್ರೆಂಡ್ಸ್ ತರ ಆದೆವು. ಅದು ಚಿತ್ರದಲ್ಲಿನ ಪಾತ್ರಗಳಿಗೆ ಸಾಕಷ್ಟು ನೈಜತೆ ತಂದುಕೊಟ್ಟಿತು.