ಕಿರುತೆರೆಯ ಕುತೂಹಲದ ರಿಯಾಲಿಟಿ ಶೋ ಬಿಗ್‌ಬಾಸ್ ಸೀಜನ್ 4 ಕ್ಕೆ ತೆರೆ ಬಿದ್ದಿದೆ. ‘ಒಳ್ಳೆ ಹುಡುಗ’ ಪ್ರಥಮ್ ಬಿಗ್‌'ಬಾಸ್ ವಿನ್ನರ್ ಎನಿಸಿಕೊಂಡಿದ್ದಾರೆ. ಬಿಗ್‌'ಬಾಸ್ ಮನೆಯೊಳಗೆ ಬಾಯಿ ಬಡುಕ, ಜಗಳಗಂಟ, ಚಾಣಾಕ್ಷ ಅಂತೆಲ್ಲ ಅಲ್ಲಿದ್ದವರ ಆಕ್ರೋಶಕ್ಕೆ ಗುರಿಯಾಗಿದ್ದರೂ, ಹೊರಗಡೆ ವೀಕ್ಷಕರ ಕಡೆಯಿಂದ ಸಿಕ್ಕ ಬೆಂಬಲ ಅವರನ್ನು ಗೆಲುವಿನ ರೂವಾರಿ ಆಗುವಂತೆ ಮಾಡಿದೆ. ಕೆಲವರಲ್ಲಿ ಅವರ ಗೆಲವು ಆಚ್ಚರಿಯೂ ಹುಟ್ಟಿಸಿದೆ. ಈ ಸಂದರ್ಭದಲ್ಲಿ ಪ್ರಥಮ್ ತಮ್ಮ ಗೆಲುವು ಮತ್ತು ನಿಲುವನ್ನು ಸಮರ್ಥಿಸಿಕೊಂಡಿದ್ದು ಹೀಗೆ.

ಕಿರುತೆರೆಯ ಕುತೂಹಲದ ರಿಯಾಲಿಟಿ ಶೋ ಬಿಗ್‌ಬಾಸ್ ಸೀಜನ್ 4 ಕ್ಕೆ ತೆರೆ ಬಿದ್ದಿದೆ. ‘ಒಳ್ಳೆ ಹುಡುಗ’ ಪ್ರಥಮ್ ಬಿಗ್‌'ಬಾಸ್ ವಿನ್ನರ್ ಎನಿಸಿಕೊಂಡಿದ್ದಾರೆ. ಬಿಗ್‌'ಬಾಸ್ ಮನೆಯೊಳಗೆ ಬಾಯಿ ಬಡುಕ, ಜಗಳಗಂಟ, ಚಾಣಾಕ್ಷ ಅಂತೆಲ್ಲ ಅಲ್ಲಿದ್ದವರ ಆಕ್ರೋಶಕ್ಕೆ ಗುರಿಯಾಗಿದ್ದರೂ, ಹೊರಗಡೆ ವೀಕ್ಷಕರ ಕಡೆಯಿಂದ ಸಿಕ್ಕ ಬೆಂಬಲ ಅವರನ್ನು ಗೆಲುವಿನ ರೂವಾರಿ ಆಗುವಂತೆ ಮಾಡಿದೆ. ಕೆಲವರಲ್ಲಿ ಅವರ ಗೆಲವು ಆಚ್ಚರಿಯೂ ಹುಟ್ಟಿಸಿದೆ. ಈ ಸಂದರ್ಭದಲ್ಲಿ ಪ್ರಥಮ್ ತಮ್ಮ ಗೆಲುವು ಮತ್ತು ನಿಲುವನ್ನು ಸಮರ್ಥಿಸಿಕೊಂಡಿದ್ದು ಹೀಗೆ.

1) ಬಿಗ್‌ಬಾಸ್ ಸೀಜನ್ 4ರಲ್ಲಿ ಗೆದ್ದ ಸಂಭ್ರಮ ಹೇಗಿದೆ?

ನಿಜಕ್ಕೂ ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು. ಹಾಗಾಗಿಯೇ ವೈಯಕ್ತಿಕವಾಗಿ ಈ ಸಂಭ್ರಮವನ್ನು ಮನಸ್ಸು ಪೂರ್ತಿ ಅನುಭವಿಸುತ್ತಿದ್ದೇನೆ. ಗೆಳೆಯರು, ಹಿತೈಷಿಗಳು, ಮುಖ್ಯವಾಗಿ ಅಪ್ಪ, ಅಮ್ಮ ಸೇರಿದಂತೆ ಬಂಧುಗಳು, ಜತೆಗೆ ನನ್ನನ್ನು ಇಲ್ಲಿ ತನಕ ತಂದು ನಿಲ್ಲಿಸಿದ ವ್ಯಕ್ತಿಗಳಿಗೆ ಕೃತಜ್ಞತೆ ಹೇಳುತ್ತಿದ್ದೇನೆ. ಪ್ರಾಮಾಣಿಕವಾಗಿ ಜನರು ಕೊಟ್ಟ ಈ ಗೆಲುವನ್ನು ಹೀಗೆ ಸಂಭ್ರಮಿಸುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ.

2) ಈ ಗೆಲುವನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ ಅಥವಾ ಸಮರ್ಥಿಸಿಕೊಳ್ಳುತ್ತೀರಿ?

ನೋಡಿ ಸರ್, ಯಾರು ಏನೇ ಹೇಳಿದರೂ ಇದು ಅಷ್ಟು ಸುಲಭವಾಗಿ ಸಿಕ್ಕಿದ್ದಲ್ಲ. ಯಾಕಂದ್ರೆ, ಬಿಗ್‌ಬಾಸ್ ಮನೆಯೊಳಗಡೆ ನಾನು ಒಂದು ವಾರ ಕೂಡ ಪೂರೈಸುವುದಿಲ್ಲ ಎಂದು ಭಾವಿಸಿಕೊಂಡವರೇ ಹೆಚ್ಚಿದ್ದರು. ಅಂತಹ ವ್ಯಕ್ತಿ ಬಿಗ್‌ಬಾಸ್ ಮನೆಯಲ್ಲಿ ಕೊನೆ ತನಕ ಉಳಿದುಕೊಂಡಿದ್ದೇ ಜನರ ಆಶೀರ್ವಾದದಿಂದ. ಅಂತಿಮವಾಗಿ ಗೆಲುವಿಗೂ ಅವರೇ ಕಾರಣ. ಅವರ ಜನಾದೇಶಕ್ಕೆ ಎಲ್ಲರ ಸಮ್ಮತಿ ಇದೆ ಎನ್ನುವುದು ನನ್ನ ನಂಬಿಕೆ.

3) ನಿಜಕ್ಕೂ, ನೀವು ಈ ಗೆಲುವನ್ನು ನಿರೀಕ್ಷೆ ಮಾಡಿದ್ರಾ?

ಖಂಡಿತವಾಗಿಯೂ ಇಲ್ಲ. ಯಾಕಂದ್ರೆ, ನಾನೊಬ್ಬ ಸಾಮಾನ್ಯ ಹುಡುಗ. ಬಿಗ್‌ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕಿದ್ದೇ ದೊಡ್ಡದು ಎಂದು ಭಾವಿಸಿಕೊಂಡಿದ್ದೆ. ಅಂತಹದರಲ್ಲಿ ನಾನು ಗೆದ್ದು ಬಿಡಬಲ್ಲೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳುವುದಾದರೂ ಹೇಗೆ? ಸೋಲು, ಗೆಲುವು ನಿರ್ಧಾರ ಆಗುವುದು ಅಲ್ಲಿಗೆ ಹೋದ ನಂತರವೇ ಎನ್ನುವುದು ಎಲ್ಲರಿಗೂ ಗೊತ್ತಿರುವಾಗ ಗೆದ್ದೆ ಬಿಡುತ್ತೇನೆ ಅಂತ ಹೋಗುವುದರಲ್ಲಿ ಅರ್ಥವೇ ಇರಲಿಲ್ಲ.

4) ನಿಮ್ಮ ಪ್ರಕಾರ ಈ ಗೆಲುವಿನ ಹಿಂದಿನ ಪ್ರಮುಖ ಶಕ್ತಿ ಯಾವುದು?

ಈಗಾಗಲೇ ನಾನು ಹೇಳಿದಂತೆ ಮೊದಲು ಕನ್ನಡಿಗರು. ಯಾಕಂದ್ರೆ ಅವರ ಶ್ರೀರಕ್ಷೆಯೇ ನನ್ನ ಪಾಲಿನ ಭಿಕ್ಷೆ. ಆನಂತರ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಗುರುಗಳಾದ ನಿರ್ಮಾಪಕ ಕೆ ಪಿ ಶ್ರೀಕಾಂತ. ತದನಂತರ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್. ಗೆಳೆಯ ವಿವೇಕ್. ಅವರೊಂದಿಗೆ ಅಪ್ಪ, ಅಮ್ಮ ಹಾಗೂ ಬಿಗ್‌ಬಾಸ್ ಮನೆಗೆ ನನ್ನನ್ನು ಕಳುಹಿಸಿದ ಕಲರ್ಸ್ ಕನ್ನಡದ ಸಿಬ್ಬಂದಿ. ಇವರೆಲ್ಲರೂ ಇಲ್ಲದೆ ಹೋಗಿದ್ದರೆ ನಾನು ಬಿಗ್‌ಬಾಸ್‌ಗೆ ಹೋಗುವುದಕ್ಕಾಗಲಿ, ಈ ಗೆಲುವು ಕಾಣವುದಕ್ಕಾಗಲಿ ಆಗುತ್ತಿರಲಿಲ್ಲ.

5) ಬಿಗ್‌ಬಾಸ್ ಮನೆಯಿಂದ ಹೊರ ಬಂದ ತಕ್ಷಣ ನಿಮಗೆ ಬೇಕೆನಿಸಿದ್ದೇನು?

ಹೊಟ್ಟೆ ತುಂಬ ಊಟ. ಅದರ ಜತೆಗೆ ಜ್ಯೂಸ್. ಯಾಕಂದ್ರೆ, ಅಲ್ಲಿದ್ದಾಗ ತೃಪ್ತಿ ಆಗುವಷ್ಟು ಅನ್ನ-ಸಾಂಬಾರು ತಿನ್ನೋದಿಕ್ಕೆ ಆಗಿರಲಿಲ್ಲ. ಆಟದಲ್ಲಿ ತೊಡಗಿಸಿಕೊಂಡಾಗ ಊಟಕ್ಕಿಂತ ಮುಖ್ಯವಾಗಿ ಗೆಲುವಿನ ಕಡೆ ನಮ್ಮ ಗಮನ ಇರುತ್ತದೆ. ಅದು ನನ್ನ ಹಸಿವಿಗೆ ಕಾರಣವಾಗಿತ್ತು. ಆದ್ದರಿಂದ ಹೊರಬಂದ ತಕ್ಷಣ ನನಗೆ ಊಟ ಬೇಕಿನಿಸಿತು. ಜತೆಗೆ ಫೋನ್ ಕೊಡಿ ಅಂತಲೂ ಕೇಳಿಕೊಂಡೆ.

6) ಬಿಗ್‌ಬಾಸ್ ಮನೆಯಲ್ಲಿ ಪ್ರಥಮ್ ಗಳಿಸಿದ್ದೇನು? ಕಲಿತಿದ್ದೇನು?

ನಾನಿವತ್ತು ಸ್ಟಾರ್ ಅಂತ ಜನರಿಗೆ ಕಾಣುತ್ತಿರುವುದು ಬಿಗ್‌ಬಾಸ್ ಮೂಲಕ. ಬಿಗ್‌ಬಾಸ್ ಮೂಲಕ ಮೊದಲು ನಾನು ಗಳಿಸಿದ್ದು ಅದೇ. ಅದರ ಜತೆಗೆ ಎಲ್ಲರನ್ನು ನಿಸ್ಸಂದೇಹವಾಗಿ ಪ್ರೀತಿಸುವುದನ್ನು ಕಲಿತಿದ್ದೇನೆ. ಬಿಗ್‌ಬಾಸ್ ಅಂಥದೊಂದು ಶಕ್ತಿ ಕೊಟ್ಟಿದೆ.

7) ಬಿಗ್‌ಬಾಸ್ ಮನೆಯೊಳಗಡೆ ನೀವು ಮನಸ್ಸಿನಿಂದ ಇಷ್ಟಪಟ್ಟ ವ್ಯಕ್ತಿಗಳು ಯಾರು?

ಬಿಗ್‌ಬಾಸ್ ಎನ್ನುವುದು ಒಂದು ಟಾಸ್ಕ್‌ನ ಮನೆ. ಅದನ್ನು ನಿಭಾಯಿಸುವುದಕ್ಕೆ ಎಲ್ಲರೂ ಅವರವರ ರೀತಿಯೊಂದಿಗೆ ಅಲ್ಲಿರುತ್ತಾರೆ ಎನ್ನುವುದನ್ನು ಮಾತ್ರ ಹೇಳಬಹುದು ಅಷ್ಟೇ. ಅಲ್ಲಿನ ಯಾವುದೋ ಒಂದು ಘಟನೆ ನೆನಪಿಸಿಕೊಂಡು ಯಾರೋ ಇಷ್ಟವಾದರೂ, ಇನ್ಯಾರೋ ಶತ್ರುಗಳಂತಾದರೂ ಎನ್ನುವುದು ಸರಿಯಲ್ಲ. ಹಾಗೆ ನೋಡಿದರೆ ನನಗೆ ಶತ್ರು ಯಾರೂ ಅಂತ ಇರಲಿಲ್ಲ. ಹುಚ್ಚ ವೆಂಕಟ್ ಹಲ್ಲೆ ಮಾಡಿದ ಘಟನೆಯೇ ನನ್ನಿಂದ ಮರೆತುಹೋಗಿದೆ. ಸ್ನೇಹ, ವಿಶ್ವಾಸ ಬದುಕು ಎನ್ನುವುದು ನನ್ನ ನಂಬಿಕೆ.

8) ಇಷ್ಟೆಲ್ಲ ಎಚ್ಚರದಲ್ಲಿ ಮಾತನಾಡುವ ಪ್ರಥಮ್, ಬಿಗ್‌ಬಾಸ್ ಮನೆಯೊಳಗಡೆ ಎಲ್ಲವೂ ಗೊತ್ತಿದ್ದೂ ನಾಟಕವಾಡಿದ್ರಾ?

ಅದು ನಾಟಕ ಎನ್ನುವುದಕ್ಕೆ ಆಗುವುದಿಲ್ಲ. ಕೆಲವರು ನನ್ನ ಮೇಲೆ ತಿರುಗಿ ಬಿದ್ದಾಗ, ನನ್ನನ್ನು ಟಾರ್ಗೆಟ್ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ನನ್ನದೇ ರೀತಿಯಲ್ಲಿ ಕಂಡುಕೊಂಡ ದಾರಿಗಳು ಕೆಲವರಿಗೆ ನಾಟಕೀಯ ಎಂದೆನಿಸಿರಬಹುದು. ಅದು ಕೇವಲ ಆ ಸಂದರ್ಭದ ತಂತ್ರ. ಉಳಿದಂತೆ ನಾನು ಅಲ್ಲಿ ಕಂಡಿದ್ದು ನನ್ನದೇ ನೇರ ಮತ್ತು ದಿಟ್ಟತನದಿಂದ. ಯಾವತ್ತಿಗೂ ನಾನು ಮುಖವಾಡ ಹಾಕಿಕೊಂಡಿರಲಿಲ್ಲ ಎನ್ನುವುದನ್ನು ಜನರೇ ಹೇಳಿದ್ದಾರೆ.

9) ಬಿಗ್‌ಬಾಸ್ ಬಗ್ಗೆ ನಕಲಿ,ಸ್ಕ್ರಿಪ್ಟ್‌ಟೆಡ್ ಅಂತೆಲ್ಲ ಟೀಕೆಗಳಿರುವಾಗ ನೀವು ಅದನ್ನು ಹೇಗೆ ನೋಡುತ್ತೀರಿ?

ನನ್ನ ಪ್ರಕಾರ ಈ ರೀತಿಯ ಟೀಕೆ ಮಾಡುವವರು ಒಮ್ಮೆ ಅಲ್ಲಿಗೆ ಹೋಗಿ ಬರಬೇಕು. ಆ ನಂತರವೇ ಅದರ ವಾಸ್ತವ ಗೊತ್ತಾಗುತ್ತದೆ. ಊಟ, ತಿಂಡಿ ಬಿಡಿ, ಫೋನ್ ಬಿಟ್ಟು ಬದುಕಿರಲಾರದ ಈ ದಿನಗಳಲ್ಲಿ ಹೊರ ಪ್ರಪಂಚದ ಸಂಪರ್ಕವೇ ಇಲ್ಲದೆ ಅಲ್ಲಿ ಮೂರು ತಿಂಗಳಷ್ಟು ಕಾಲ ಬದುಕುವುದು ಸವಾಲಿನ ಕೆಲಸ. ಗೊತ್ತಿಲ್ಲದೆ ಟೀಕೆ ಮಾಡಿದರೆ, ನನ್ನ ಗೆಲುವಿಗೆ ಜನರೇ ಕೊಟ್ಟ ತೀರ್ಪುನ್ನು ಸರಿಯಿಲ್ಲ ಎಂದ ಹಾಗೆ.

10) ಬಿಗ್‌ಬಾಸ್ ಮನೆಯೊಳಗಡೆ ಪ್ರಥಮ್‌ಗೆ ಯಾವುದೇ ಕಹಿ ಘಟನೆ ಅಂತ ಆಗಿಲ್ಲವೇ?

ನೆಗೆಟಿವ್ ಅಂಶಗಳಿಗಿಂತ ಎಲ್ಲವನ್ನು ನಾನು ಪಾಸಿಟಿವ್ ಆಗಿಯೇ ನೋಡಿದ್ದು ಹೆಚ್ಚು. ಹೀಗಾಗಿ ನೋವು ಪಟ್ಟಿದ್ದು ತುಂಬಾ ಕಮ್ಮಿ. ನಿಜ ಹೇಳಬೇಕಂದ್ರೆ ಕೊನೆ ದಿನ ಸಾಕಷ್ಟು ಕಣ್ಣೀರು ಹಾಕಿದ್ದೇನೆ. ಅದಕ್ಕೆ ಬಿಗ್‌ಬಾಸ್ ಮನೆಯೊಂದಿಗೆ ಬೆಸೆದುಕೊಂಡಿದ್ದ ನಂಟು. ಬಿಗ್‌ಬಾಸ್ ಮುಗಿದರೂ ಎರಡು ದಿನ ನನಗಿರಲು ಅವಕಾಶ ಕೊಡಬೇಕು ಅಂತ ಕೇಳಿಕೊಂಡಿದ್ದು ಅದೇ ಕಾರಣದಿಂದ.

11) ಕನ್ನಡ ಕನ್ನಡ ಅಂತಲೇ ಗೆದ್ದ ನೀವು, ಕನ್ನಡವನ್ನು ಎಷ್ಟು ಪ್ರೀತಿಸುತ್ತೀರಿ?

ನನ್ನ ದೃಷ್ಟಿಯಲ್ಲಿ ಹೆತ್ತ ತಾಯಿ, ಮಾತೃಭಾಷೆ ಎರಡು ಒಂದೇ. ಯಾವತ್ತಿಗೂ ಮಾತೃಭಾಷೆಯನ್ನು ಮರೆಯಬಾರದು ಎಂದೇ ಹೇಳುತ್ತಾ ಬಂದಿದ್ದೇನೆ. ನನ್ನ ಉಸಿರು ಇರುವವರೆಗೂ ಅದನ್ನೇ ಹೇಳುತ್ತೇನೆ. ಅದಕ್ಕಾಗಿ ಪ್ರಾಮಾಣಿಕವಾಗಿ ನನ್ನ ಕೈಯಲ್ಲಾದ ಸೇವೆ ಮಾಡುತ್ತೇನೆ. ಹಾಗೆ, ಹೀಗೆ ಅಂತೆಲ್ಲ ಹೇಳಿದರೆ ತಮಾಷೆ ಎನಿಸುತ್ತದೆ.

12) ಗೆಲುವಿನ ಮೂಲಕ ಬಂದ ಹಣವನ್ನು ಸಾರ್ವಜನಿಕ ಕೆಲಸಗಳಿಗೆ ಮೀಸಲಿಟ್ಟಿದ್ದೀರಿ, ಅದು ಕಾರ್ಯರೂಪಕ್ಕೆ ಬರುವುದು ಯಾವಾಗ?

ಗೆಲುವಿನ ಮೊತ್ತ ಕೈಗೆ ಸಿಕ್ಕ ಒಂದು ಕ್ಷಣವೂ ನಾನದನ್ನು ಇಟ್ಟುಕೊಳ್ಳುವುದಿಲ್ಲ. ಕೊಟ್ಟ ಮಾತಿನಂತೆ ಭರವಸೆ ನೀಡಿದವರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ. ಕೊಟ್ಟ ವಿವರವೆಲ್ಲ ಫೇಸ್‌ಬುಕ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತೇನೆ. ಆ ಬಗ್ಗೆ ಅನುಮಾನವೇ ಬೇಡ. ನುಡಿದಂತೆ ನಡೆಯುವುದು ಪ್ರಥಮ್ ಜಾಯಮಾನ.